ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mango Procurement: ಮಾವು ಖರೀದಿಗೆ ರಾಜ್ಯ ಸರ್ಕಾರ ಅನುಮತಿ; ಎಕರೆಗೆ 20 ಕ್ವಿಂಟಲ್‌ ಮಿತಿ

Mango Procurement: ಕೇಂದ್ರ ಸರ್ಕಾರವು ಕರ್ನಾಟಕದ ರೈತರಿಂದ 2.5 ಲಕ್ಷ ಟನ್ ಪ್ರಮಾಣದ ಮಾವು ಖರೀದಿಸಲು ಪ್ರತಿ ಕ್ವಿಂಟಲ್‌ಗೆ MIP (ಮಾರುಕಟ್ಟೆ ಮಧ್ಯಪ್ರವೇಶ ದರ) 1,616 ರೂ. ನಿಗದಿಪಡಿಸಿ ಅನುಮೋದನೆ ನೀಡಿತ್ತು. ಹೀಗಾಗಿ ಯೋಜನೆ ಅನುಷ್ಠಾನ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಸಹಕಾರ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಮಾವು ಖರೀದಿಗೆ ರಾಜ್ಯ ಸರ್ಕಾರ ಅನುಮತಿ; ಎಕರೆಗೆ 20 ಕ್ವಿಂಟಲ್‌ ಮಿತಿ

Profile Prabhakara R Jun 25, 2025 9:58 PM

ಬೆಂಗಳೂರು: 2025-26ನೇ ಸಾಲಿನಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ ಯೋಜನೆಯ (Price Deficiency Payment Scheme-PDPS) ಮಾರ್ಗಸೂಚಿಗಳನ್ವಯ, ಮಾವು ಉತ್ಪನ್ನವನ್ನು (Mango Procurement) ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ವಹಿವಾಟಾದ ಉತ್ಪನ್ನದ ಧಾರಣೆಯ ಆಧಾರದ ಮೇಲೆ ಬೆಲೆ ವ್ಯತ್ಯಾಸದ ಮೊತ್ತವನ್ನು ರೈತರಿಗೆ ಪಾವತಿಸಿ, ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಯಡಿ ಪ್ರತಿ ಎಕರೆಗೆ 20 ಕ್ವಿಂಟಲ್‌ನಂತೆ ಗರಿಷ್ಠ 5 ಎಕರೆಗೆ 100 ಕ್ವಿಂಟಲ್‌ವರೆಗೆ ಮಿತಿಗೊಳಿಸಿ ರೈತರಿಗೆ ಹಣ ಪಾವತಿ ಮಾಡಲು ಸೂಚಿಸಲಾಗಿದೆ.

ರೈತರಿಂದ ಮಾವು ಖರೀದಿಗಾಗಿ ಒಟ್ಟು 101.00 ಕೋಟಿಗಳನ್ನು ಆವರ್ತ ನಿಧಿಯಿಂದ ತೋಟಗಾರಿಕೆ ಇಲಾಖೆಯ ಮಾವು ಅಭಿವೃದ್ಧಿ ಮಂಡಳಿಗೆ ಬಿಡುಗಡೆ ಮಾಡಿ, ತದನಂತರ ಶೇ.50 ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರದಿಂದ ಮರುಪಾವತಿ ಪಡೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

2025-26ನೇ ಸಾಲಿನಲ್ಲಿ (Marketing Season) ರಾಜ್ಯದ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಇತರೆ ಜಿಲ್ಲೆಗಳಲ್ಲಿ ಒಟ್ಟಾರೆ 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 8 ರಿಂದ 10 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆ ಅಂದಾಜಿಸಲಾಗಿದೆ. ರಾಜ್ಯದಲ್ಲಿ ಮಾವು ಬೆಳೆಯು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಪ್ರಸ್ತುತ ಪ್ರಮುಖ ಮಾರುಕಟ್ಟೆಗಳಲ್ಲಿ ಮಾವು ಬೆಳೆಯ ಮಾರುಕಟ್ಟೆ ಧಾರಣೆ ದಿನೇ ದಿನೇ ಕುಸಿಯುತ್ತಿದ್ದು, ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವಂತೆ ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿ ಹಾಗೂ ತೋಟಗಾರಿಕೆ ಇಲಾಖೆಯವರು ಕೋರಿದ್ದರು. ಈ ಹಿನ್ನೆಲೆಯಲ್ಲಿ ಮಾವು ಖರೀದಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು.

Mango  (2)

ಈ ಸುದ್ದಿಯನ್ನೂ ಓದಿ | Mango crop: ರಾಜ್ಯದ ಮಾವು ಬೆಳೆಗಾರರಿಗೆ ಗುಡ್‌ ನ್ಯೂಸ್:‌ 2.5 ಲಕ್ಷ ಮೆ.ಟನ್‌ ಮಾವು ಖರೀದಿಗೆ ಕೇಂದ್ರ ಅನುಮೋದನೆ

ಇನ್ನು ತೋಟಗಾರಿಕೆ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವನ್ನು ರಾಜ್ಯ ಖರೀದಿ ಏಜೆನ್ಸಿಯನ್ನಾಗಿ ನೇಮಿಸಬಹುದಾಗಿದೆ ಎಂದು ರಾಜ್ಯ ಕೃಷಿ ಮಾರಾಟ ಮಂಡಳಿ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ ಕೇಂದ್ರ ಸರ್ಕಾರವು ಜೂನ್ 24ರಂದು 2.5 ಲಕ್ಷ ಟನ್ ಪ್ರಮಾಣದ ಮಾವು ಖರೀದಿಸಲು ಪ್ರತಿ ಕ್ವಿಂಟಲ್‌ಗೆ MIP (ಮಾರುಕಟ್ಟೆ ಮಧ್ಯಪ್ರವೇಶ ದರ) 1,616 ರೂ. ನಿಗದಿಪಡಿಸಿ ಅನುಮೋದನೆ ನೀಡಿತ್ತು. ಹೀಗಾಗಿ ರಾಜ್ಯದಲ್ಲಿ ಮಾವು ಖರೀದಿಸಲು ಅನುಮತಿ ನೀಡಿ, ಅಗತ್ಯ ಕ್ರಮ ಕೈಗೊಳ್ಳಲು ಸಹಕಾರ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.