Viral Video: ಹಾಸ್ಟೆಲ್ ಕಾರಿಡಾರ್ನಲ್ಲಿ ಹರಿದಾಡಿದ ಹಾವು; ಬೆಚ್ಚಿ ಬೀಳಿಸುವ ವಿಡಿಯೊ ಇಲ್ಲಿದೆ
ತೆಲಂಗಾಣದ ಮಹಬೂಬ್ನಗರ ಸರ್ಕಾರಿ ವೈದ್ಯಕೀಯ ಕಾಲೇಜು ಹಾಸ್ಟೆಲ್ನಲ್ಲಿ ಹಾವುಗಳು ಓಡಾಡುವ ದೃಶ್ಯ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದು, ಇದನ್ನು ಕಂಡು ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಿಂದ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರಲ್ಲಿಆತಂಕ ಮೂಡಿದೆ.


ಹೈದರಾಬಾದ್: ತೆಲಂಗಾಣದ ಮಹಬೂಬ್ನಗರ ಸರ್ಕಾರಿ ವೈದ್ಯಕೀಯ ಕಾಲೇಜು ಹಾಸ್ಟೆಲ್ನ ಆವರಣದಲ್ಲಿ ಹಾವುಗಳು (Snakes) ಓಡಾಡುತ್ತಿದ್ದು, ಈ ದೃಶ್ಯ ಹಾಸ್ಟೆಲ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಇದು ಈ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಕಾರಿಡಾರ್ಗಳಲ್ಲಿ ಹಾವುಗಳು ಹರಿದಾಡುತ್ತಿರುವ ದೃಶ್ಯ ಸೆರೆಯಾಗಿದೆ. ವಿದ್ಯಾರ್ಥಿಗಳು ಹಾವುಗಳಿಗೆ ಹೆದರಿ ರಾತ್ರಿಯಲ್ಲಿ ತಮ್ಮ ಕೊಠಡಿಗಳಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಈ ಘಟನೆಯನ್ನು ಕಂಡು ಪೋಷಕರು ಸಹ ಆತಂಕಗೊಂಡಿದ್ದು, ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
సీసీటీవీ ఫుటేజ్.. మహబూబ్నగర్ ప్రభుత్వ మెడికల్ కాలేజ్ హాస్టల్లో పాముల స్వైర విహారం
— Telugu Scribe (@TeluguScribe) June 25, 2025
భయంతో వణికిపోతున్న విద్యార్థులు
విద్యార్థులు ఎన్నిసార్లు ఫిర్యాదులు చేసినా పట్టించుకోని కళాశాల యాజమాన్యం pic.twitter.com/Vi81Ie2TCq
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಹಲವಾರು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಒಬ್ಬರು, "ಇದು ಯಾವ ರೀತಿಯ ಹಾವು? ನಾನು ಹಾವುಗಳನ್ನು ನೋಡಿದ್ದೇನೆ. ಆದರೆ ಎಂದಿಗೂ ಅಷ್ಟು ದೊಡ್ಡ ಹಾವುಗಳನ್ನು ನೋಡಿಲ್ಲ" ಎಂದಿದ್ದಾರೆ. ಮತ್ತೊಬ್ಬರು, "ವಿದ್ಯಾರ್ಥಿಗೆ ಏನಾದರೂ ಅದರಿಂದ ಅಪಾಯವಾದರೆ, ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ?" ಎಂದು ಪ್ರಶ್ನಿಸಿದ್ದಾರೆ.
ತೆಲಂಗಾಣದಲ್ಲಿ ಈ ರೀತಿಯ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಇಲ್ಲಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆರ್ಟ್ಸ್ ಕಾಲೇಜು ಕಟ್ಟಡದಲ್ಲಿ ವಿದ್ಯಾರ್ಥಿಗಳು ಹಾವುಗಳಿಂದ, ವಿಶೇಷವಾಗಿ ನಾಗರಹಾವುಗಳಿಂದ ಭಯಭೀತರಾಗಿದ್ದರು. ಪತ್ರಿಕೋದ್ಯಮ ಮತ್ತು ಮನೋವಿಜ್ಞಾನ ವಿಭಾಗಗಳನ್ನು ಹೊಂದಿರುವ ಐತಿಹಾಸಿಕ ಕಟ್ಟಡದ ನೆಲಮಾಳಿಗೆಗಳಲ್ಲಿ ಯಾವಾಗಲೂ ಹಾವು ಓಡಾಡುವುದು ಕಂಡುಬಂದಿದ್ದು, ಇದರ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.
ವಿದ್ಯಾರ್ಥಿಗಳು ಈ ಬಗ್ಗೆ ಆಡಳಿತ ವರ್ಗಕ್ಕೆ ತಿಳಿಸಿದ್ದರಿಂದ ಕೊನೆಗೆ ಆಡಳಿತವು ಕಿಟಕಿಗಳ ಮೇಲೆ ತಂತಿ ಜಾಲರಿ ಅಳವಡಿಸುವುದು ಮತ್ತು ಗ್ರಿಲ್ ಗೇಟ್ ಅನ್ನು ಮುಚ್ಚುವಂತಹ ಕೆಲವು ಕ್ರಮಗಳನ್ನು ತೆಗೆದುಕೊಂಡಿತ್ತು.
ನೆಲಮಾಳಿಗೆಯಲ್ಲಿ ಕಾಣಿಸಿಕೊಂಡ ರಾಶಿ ರಾಶಿ ಹಾವು
ಉತ್ತರ ಪ್ರದೇಶದ ಮಹಾರಾಜ್ಗಂಜ್ನ ಹಾರ್ದಿದಾಲಿ ಗ್ರಾಮದಲ್ಲಿ ಮನೆಯ ನೆಲ ಮಾಳಿಗೆಯಲ್ಲಿ ಹತ್ತಕ್ಕೂ ಹೆಚ್ಚು ಹಾವುಗಳು ಒಟ್ಟಿಗೆ ಸುರುಳಿಯಾಗಿ ಸುತ್ತಿಕೊಂಡ ದೃಶ್ಯ ಇತ್ತೀಚೆಗೆ ವೈರಲ್ ಆಗಿತ್ತು. ಈ ದೃಶ್ಯ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದರು. ಗ್ರಾಮಸ್ಥರು ತಕ್ಷಣ ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿ ಪರಿಶೀಲನೆ ನಡೆಸುವಂತೆ ಮತ್ತು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದರು. ಒಂದೇ ಸ್ಥಳದಲ್ಲಿ ಇಷ್ಟೊಂದು ಹಾವು ಏಕೆ ಒಟ್ಟು ಸೇರಿದ್ದವು ಎಂಬುದು ಮಾತ್ರ ಇನ್ನೂ ತಿಳಿದುಬಂದಿಲ್ಲ.