Shubhanshu Shukla: ಗಗನಯಾತ್ರಿ ಶುಭಾಂಶು ಶುಕ್ಲಾ ಐಎಸ್‌ಎಸ್‌ಗೆ ಯಶಸ್ವಿ ಯಾತ್ರೆ; ತಂದೆಯಿಂದ ಹೆಮ್ಮೆಯ ಮಾತು
Shubhanshu Shukla Space Mission: ಕ್ಯಾಪ್ಟನ್ ಶುಭಾಂಶು ಶುಕ್ಲಾ, ಆಕ್ಸಿಯಮ್-4 ಕಾರ್ಯಾಚರಣೆಯ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದಾರೆ. ಇದರೊಂದಿಗೆ ಅಪರೂಪದ ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾಧನೆಯ ಬಗ್ಗೆ ಶುಭಾಂಶು ಅವರ ತಂದೆ ಶಂಭು ದಯಾಳ್ ಶುಕ್ಲಾ ಮಾತನಾಡಿದ್ದಾರೆ.

ಶುಭಾಂಶು ಶುಕ್ಲಾ.

ಲಖನೌ: ಗ್ರೂಪ್ ಕ್ಯಾಪ್ಟನ್ (Group Captain) ಶುಭಾಂಶು ಶುಕ್ಲಾ (Shubhanshu Shukla), ಆಕ್ಸಿಯಮ್-4 ಕಾರ್ಯಾಚರಣೆಯ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (International Space Station) ತೆರಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾಧನೆಯ ಬಗ್ಗೆ ಶುಭಾಂಶು ಅವರ ತಂದೆ ಶಂಭು ದಯಾಳ್ ಶುಕ್ಲಾ (Shambhu Dayal Shukla) ಮಾತನಾಡಿದ್ದು, ʼʼನನಗೆ ತುಂಬಾ ಸಂತೋಷವಾಗಿದೆ. ಇದು ನಮಗೆ ಹೆಮ್ಮೆಯ ಕ್ಷಣʼʼ ಎಂದು ಹರ್ಷ ವ್ಯಕ್ತಪಡಿಸಿದರು.
ʼʼನನ್ನ ಮಗ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾನೆʼʼ ಎಂದು ಶಂಭು ಶುಕ್ಲಾ ಹೇಳಿದರು. ಶುಭಾಂಶು ಅವರ ಈ ಯಾತ್ರೆಯನ್ನು ವಿವರಿಸಿದ ಅವರು, ʼʼಕೇವಲ 10% ನಮ್ಮ ಬೆಂಬಲವಾದರೆ, 90% ಶುಭಾಂಶುನ ಕಠಿಣ ಪರಿಶ್ರಮ ಇದರ ಹಿಂದಿದೆʼʼ ಎಂದರು. ʼʼಅವನಿಗೆ ಎಂದೂ ಆತಂಕವಿರಲಿಲ್ಲ. ತನ್ನ ಕೆಲಸವನ್ನು ಆನಂದಿಸಿ, ಗಮನ ಕೇಂದ್ರೀಕರಿಸಿದ್ದʼʼ ಎಂದು ತಂದೆ ತಿಳಿಸಿದರು.
A proud moment for India!
— Yogi Adityanath (@myogiadityanath) June 25, 2025
Heartiest congratulations to Group Captain Shubhanshu Shukla, the Mission Pilot of Axiom Mission 4, on this historic achievement.
Under the visionary leadership of Hon. PM Shri @narendramodi Ji, India’s participation in this international space mission… pic.twitter.com/9AIxvLn4jR
ಈ ಸುದ್ದಿಯನ್ನೂ ಓದಿ: Axiom Space Mission: ಆಕ್ಸಿಯಂ ಮಿಷನ್ ಯಶಸ್ವಿ ಉಡಾವಣೆ; ಶುಭಾಂಶು ಶುಕ್ಲ ಸೇರಿ ನಾಲ್ವರ ಬಾಹ್ಯಾಕಾಶ ಜರ್ನಿ ಸ್ಟಾರ್ಟ್!
ಶುಭಾಂಶು ಅವರ ಆಕಾಂಕ್ಷೆ ಆರಂಭಿಕ ತರಬೇತಿ ದಿನಗಳಿಂದಲೇ ಶುರುವಾಯಿತು. "ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್‌ನ ಎನ್‌ಡಿಎ ಸೇರಿದ ಬಳಿಕ, ಫೈಟರ್ ಪೈಲಟ್ ಆಗಲು ಕಠಿಣ ಶ್ರಮಪಟ್ಟ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆದ" ಎಂದು ಶಂಭು ಶುಕ್ಲಾ ಹೇಳಿದರು. ಈ ಐಎಸ್‌ಎಸ್ ಕಾರ್ಯಾಚರಣೆ, ಭಾರತದ ಮಹತ್ವಾಕಾಂಕ್ಷಿ ಗಗನಯಾನ ಕಾರ್ಯಕ್ರಮಕ್ಕೆ ಪೂರ್ವಸಿದ್ಧತೆಯಾಗಿದೆ. "ನನ್ನ ಮಗ ಗಗನಯಾನಕ್ಕೆ ತಯಾರಿ ನಡೆಸುತ್ತಿದ್ದ. ಈ ಕಾರ್ಯಾಚರಣೆ ಅದಕ್ಕೊಂದು ಹೆಜ್ಜೆ. ಶುಭಾಂಶು ದೈಹಿಕವಾಗಿ ಸದೃಢನಾಗಿದ್ದ, ತನ್ನ ಶಕ್ತಿಯ ಮೇಲೆ ಶ್ರಮಿಸಿದ" ಎಂದು ಅವರು ಹೆಮ್ಮೆಯಿಂದ ಹೇಳಿದರು.
ಯಶಸ್ವಿ ಉಡಾವಣೆಯಾದ ಬಳಿಕ, ಶುಭಾಂಶು ಅವರ ಸುರಕ್ಷಿತ ವಾಪಸಾತಿಗಾಗಿ ಕುಟುಂಬವು ಪ್ರಾರ್ಥಿಸುತ್ತಿದೆ. "ಇದು ಶುಭಾಂಶುಗೆ ದೊಡ್ಡ ಕಾರ್ಯಾಚರಣೆ. ಅವನ ಸುರಕ್ಷಿತ ವಾಪಸಾತಿಗಾಗಿ ಪ್ರಾರ್ಥಿಸುತ್ತೇನೆ. ಕಠಿಣ ಶ್ರಮದಿಂದ ಯಾವ ಕೆಲಸವೂ ಅಸಾಧ್ಯವಿಲ್ಲ" ಎಂದು ಆಶಾವಾದದ ಸಂದೇಶ ನೀಡಿದರು.
ಆಕ್ಸಿಯಮ್-4 ಕಾರ್ಯಾಚರಣೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನದ ಮಧ್ಯಾಹ್ನ 12:01ಕ್ಕೆ ಐಎಸ್‌ಎಸ್‌ಗೆ ಉಡಾವಣೆಯಾಯಿತು. ಲಕ್ನೋದ ಸಿಟಿ ಮಾಂಟೆಸ್ಸರಿ ಶಾಲೆಯಲ್ಲಿ ಶುಕ್ಲಾ ಅವರ ಪೋಷಕರು ಈ ಐತಿಹಾಸಿಕ ಉಡಾವಣೆಯನ್ನು ವೀಕ್ಷಿಸಿದರು. ಲಕ್ನೋದ ಶುಭಾಂಶು, ಮಾಜಿ ನಾಸಾ ಗಗನಯಾತ್ರಿ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಸ್ಲಾವೊಸ್ಜ್ ಉಜ್ನಾನ್ಸ್ಕಿ-ವಿಸ್ನಿವ್ಸ್ಕಿ, ಮತ್ತು ಹಂಗೇರಿಯ ಟಿಬೊರ್ ಕಾಪು ಈ ಕಾರ್ಯಾಚರಣೆಯ ಭಾಗವಾಗಿದ್ದಾರೆ. 1984ರಲ್ಲಿ ರಾಕೇಶ್ ಶರ್ಮಾ ಸಲ್ಯೂಟ್-7ನಲ್ಲಿ 8 ದಿನ ಕಳೆದ 41 ವರ್ಷಗಳ ಬಳಿಕ ಶುಭಾಂಶು ಐಎಸ್‌ಎಸ್‌ಗೆ ತೆರಳಿದ ಮೊದಲ ಭಾರತೀಯ ಗಗನಯಾತ್ರಿ ಎನಿಸಿಕೊಂಡಿದ್ದಾರೆ.