Harish Kera Column: ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ !

ಕಾಲ ಹಿಂದಕ್ಕೂ ಚಲಿಸಬಲ್ಲದು ಎಂದು ಯಾರಾದರೂ ಹೇಳಿದರೆ ಅವರನ್ನು ಪೆಕರುಪೆಕರಾಗಿ ದಿಟ್ಟಿಸುತ್ತೇವೆ. ಭೌತಶಾಸ್ತ್ರಜ್ಞರೇ ಹೀಗೆ ಹೇಳಿದರೆ? ಹೌದು, ಕೆಲವು ಸಮಯದಿಂದ ವಿಜ್ಞಾನಿಗಳು ‘ನೆಗೆಟಿವ್ ಕಾಲ’ವೂ ಇದೆ ಎಂದು ಹೇಳುತ್ತ ಬಂದಿದ್ದಾರೆ

harish kera column
Profile Ashok Nayak January 16, 2025

Source : Vishwavani Daily News Paper

ಕಾಡುದಾರಿ

ಹರೀಶ್‌ ಕೇರ

ಕಾರ್ಲೊ ರೊವೆಲ್ಲಿ ಎಂಬ ಭೌತಶಾಸ್ತ್ರಜ್ಞರ ಪ್ರಕಾರ, ಕಾಲವೆಂಬುದು ಮಾನವನ ಸೀಮಿತ ತಿಳಿವಳಿಕೆ, ಕ್ವಾಂಟಂ ಅನಿಶ್ಚಿತತೆಗಳಿಂದಾಗಿ ಸೃಷ್ಟಿಯಾಗಿರುವ ಒಂದು ಪರಿಕಲ್ಪನೆ. ಐನ್‌ಸ್ಟೀನನ ಸಾಪೇಕ್ಷತಾ ನಿಯಮ ಕೂಡ ಈ ಬ್ರಹ್ಮಾಂಡದ ವ್ಯಾಪ್ತಿಗೆ ಹೋಲಿಸಿದರೆ ಅತ್ಯಂತ ಸರಳ, ಸೀಮಿತ. ವಿಶ್ವವನ್ನು ಅಳೆಯುವ ಯಾವ ಗಡಿಯಾರ ವೂ ಸಿಗಲಾರದು.

ನಾವೆಲ್ಲಾ ಗ್ರೆಗೋರಿಯನ್ ಕ್ಯಾಲೆಂಡರ್‌ನ ಹೊಸ ವರ್ಷಕ್ಕೆ ಕಾಲಿಟ್ಟು ಹದಿನೈದು ದಿನಗಳಾ

ದವು. ಮಕರ ಸಂಕ್ರಾಂತಿಯ ಮೂಲಕ ಉತ್ತರಾಯಣಕ್ಕೂ ಕಾಲಿಟ್ಟೆವು. ಈಗ ಒಂಚೂರು ಕಾಲದ ಬಗ್ಗೆ ಮಾತನಾಡೋಣ. ಕಾಲದ ಬಗ್ಗೆ ಬರುತ್ತಿರುವ ಕೆಲವು ಹೊಸ ಥಿಯರಿ ಗಳನ್ನೂ ಹಳೆ ಕತೆಗಳನ್ನೂ ಓದಿ ಪುಳಕಿತರಾಗುವುದಕ್ಕಿದು ಸಕಾಲ. ಕಾಲವೆಂಬುದು ಮುಂದೆ ಚಲಿಸುವ ಒಂದು ಸ್ಥಿತಿ ಎಂದು ನಾವು ತಿಳಿದುಕೊಂಡಿದ್ದೇವೆ. ಭೂತ, ವರ್ತಮಾನ, ಭವಿಷ್ಯ ಹೀಗೆ ನಮ್ಮ ಕಾಲದ ಪರಿಕಲ್ಪನೆ. ಹೆಚ್ಚೆಂದರೆ ಕಾಲಚಕ್ರ ಎಂಬ ನಮ್ಮ ಪುರಾತನ ಪರಿಕಲ್ಪನೆಯನ್ನೂ ನಾವು ಕೇಳಿಬಲ್ಲೆವು.

ಬೌದ್ಧ-ಜೈನರಲ್ಲೂ ಇದು ಇದೆ. ಆದರೆ ಕಾಲ ಹಿಂದಕ್ಕೂ ಚಲಿಸಬಲ್ಲದು ಎಂದು ಯಾರಾದರೂ ಹೇಳಿದರೆ ಅವರನ್ನು ಪೆಕರುಪೆಕರಾಗಿ ದಿಟ್ಟಿಸುತ್ತೇವೆ. ಭೌತಶಾಸ್ತ್ರಜ್ಞರೇ ಹೀಗೆ ಹೇಳಿ ದರೆ? ಹೌದು, ಕೆಲವು ಸಮಯದಿಂದ ವಿಜ್ಞಾನಿಗಳು ‘ನೆಗೆಟಿವ್ ಕಾಲ’ವೂ ಇದೆ ಎಂದು ಹೇಳುತ್ತ ಬಂದಿದ್ದಾರೆ.

ನಮಗೆ ಮುಂದಕ್ಕೊಯ್ಯುವ ಕಾಲದ ಬಗ್ಗೆ ಮಾತ್ರ ಗೊತ್ತಿದೆ. ಆದರೆ ಹಿಂದಕ್ಕೊಯ್ಯುವ ಅಥವಾ ನೆಗೆಟಿವ್ ಕಾಲದ ಪರಿಕಲ್ಪನೆ ಭೌತಶಾಸ್ತ್ರಜ್ಞರ ನಡುವೆ ಅಥವಾ ಲ್ಯಾಬೊರೇಟರಿ ಗಳಲ್ಲಿ ಸದಾ ಜೀವಂತ ಮತ್ತು ಚರ್ಚೆಯ ವಿಷಯ. ಅದಕ್ಕೀಗ ಪ್ರಯೋಗದ ಫಲಿತಾಂಶದ ಸಮರ್ಥನೆಯೂ ಸಿಕ್ಕಿದೆ ಎಂಬ ಸುದ್ದಿ ಬಂದಿದೆ.

ಕ್ವಾಂಟಂ ಫಿಸಿಕ್ಸ್ ಪ್ರಯೋಗವಿದು. ಇದರಲ್ಲಿ ಪ್ರಯೋಗದಷ್ಟೇ ಚಿಂತನೆಯ ಪಾತ್ರವೂ ಬಹಳ ಇದೆ. ಅನೇಕ ಸಲ ಖಗೋಳಶಾಸ್ತ್ರ, ಕಾಲ-ದೇಶಗಳ ಪರಿಕಲ್ಪನೆಯಲ್ಲಿ ಪ್ರಯೋಗಗಳ ಜತೆಜತೆಗೇ ಚಿಂತನೆಯೂ ಸಾಗಿವೆ. ಉದಾಹರಣೆಗೆ ಗುರುತ್ವಾಕರ್ಷಣೆ ಎಂಬುದು ನಿತ್ಯ ನಿರಂತರ ಸತ್ಯ; ಆದರೆ ಅದರ ಪರಿಕಲ್ಪನೆಯನ್ನು ರೂಪಿಸುವಲ್ಲಿ ಚಿಂತನೆಯ ಪಾತ್ರ ಬಹಳ. ‌

ಹಾಗೇ ಇಲ್ಲಿಯೂ. ಇದರ ಪರಿಕಲ್ಪನೆ ಸರಳ. ಪ್ರೋಟಾನ್ ಎಂಬ ಕಣಗಳನ್ನು ರುಬೀಡಿ ಯಂ ಕಣಗಳ ಮೂಲಕ ಹಾಯಿಸಲಾಯಿತು. ಇಲ್ಲಿ ಕಂಡುಬಂದ ವಿಚಿತ್ರ ಎಂದರೆ, ರುಬೀಡಿಯಂನ ಒಳಹೋಗುವ ಮುನ್ನವೇ ಪ್ರೋಟಾನ್‌ಗಳು ಹೊರಬರುವುದನ್ನು ಭೌತ ಶಾಸ್ತ್ರಜ್ಞರು ಕಂಡುಕೊಂಡರು. “ನಾನು ಮನೆಯ ಒಳಹೋಗುವುದಕ್ಕೆ ಮೊದಲೇ ಹೊರ ಬಂದೆ" ಎಂದು ಯಾರಾದರೂ ಹೇಳಿದರೆ ಎಷ್ಟು ವಿಚಿತ್ರ ಅನಿಸುತ್ತದಲ್ಲವೆ? ಈ ಪ್ರಯೋಗ ವನ್ನು ದಾಖಲಿಸಲು ಕ್ವಾಂಟಂ ಗಡಿಯಾರವನ್ನು ಯಾರಾದರೂ ತಯಾರಿಸಿದರೆ, ನೆಗೆಟಿವ್ ಕಾಲ ತೋರಿಸುವ ಗಡಿಯಾರವನ್ನೇ ಸಿದ್ಧಪಡಿಸಬೇಕಾಗುತ್ತದೆ.

ಈ ವಿಚಿತ್ರಕ್ಕೆ ಸದ್ಯ ಪ್ರಯೋಗಕರ್ತರು ನೆಗೆಟಿವ್ ಟೈಮ್ ಎಂದು ಹೆಸರಿಟ್ಟಿದ್ದಾರೆ. ಆದರೆ ಇದು ಕೂಡ ಸರಿಯಾದ ಹೆಸರಲ್ಲ ಮತ್ತು ತುಸು ದಾರಿ ತಪ್ಪಿಸುವಂತೆ ಇದೆ ಎಂದು ಕೆಲವರು ಆಕ್ಷೇಪಿಸಿದ್ದಾರೆ. ನೀವು ಕಾಲದಲ್ಲಿ ಹಿಂದೆ ಹೋಗಬಹುದು ಎಂದು ಈ ಪ್ರಯೋ ಗದ ಅರ್ಥ ಎಂದು ಯಾರಾದರೂ ವ್ಯಾಖ್ಯಾನಿಸಿದರೆ ಅದು ಬಹಳ ದೂರಾನ್ವಯ ಆಗು ತ್ತದೆ. ಭೌತಶಾಸ್ತ್ರದ ಕೆಲವು ನಿಯಮಗಳಿವೆ- ಇವು ಮೂಲಭೂತ ನಿಯಮಗಳು. ಉದಾ ಹರಣೆಗೆ ನ್ಯೂಟನ್ನನ ಚಲನೆಯ ನಿಯಮಗಳು, ಗುರುತ್ವಾಕರ್ಷಣೆ, ಐನ್‌ಸ್ಟೀನನ ಥಿಯರಿ ಆಫ್ ರಿಲೇಟಿವಿಟಿ ಇತ್ಯಾದಿ.

ಕಾ‌ಲದ ಬಗೆಗೆ ಮಾತನಾಡುವಾಗ ನಾವು ಐನ್‌ಸ್ಟೀನನ ಸಾಪೇಕ್ಷತಾ ಪ್ರಮೇಯವನ್ನು ಯಾವತ್ತೂ ಮರೆಯುವಂತಿಲ್ಲ. ಆತನ ಪ್ರಕಾರ ಸ್ಥಳ ಮತ್ತು ಸಮಯಗಳು ಸಾಪೇಕ್ಷ. ಎಲ್ಲಾ

ಚಲನೆಗಳು ನಿಗದಿತ ಮಾನದಂಡಕ್ಕೆ ಅನ್ವಯಿಸಿಯಷ್ಟೇ ಇರುತ್ತವೆ. ಒಂದು ವಸ್ತುವಿನ ವೇಗವನ್ನು ಇನ್ನೊಂದು ವಸ್ತುವಿಗೆ ಸಂಬಂಧಿಸಿ ಮಾತ್ರ ಅಳೆಯಬಹುದು. ಅಂದರೆ ಕಾಲ ವೆಂಬುದು ಕೂಡ ಸಾಪೇಕ್ಷ, ಅದನ್ನು ರೆಫರೆನ್ಸ್ ಇಟ್ಟುಕೊಂಡೇ ಅಳೆಯಬೇಕು.

ಗುರುತ್ವಾಕರ್ಷಣೆಯ ಪ್ರಮಾಣವನ್ನು ಅನುಸರಿಸಿ ಕಾಲದ ಗತಿ ಬದಲಾಗಬಹುದು. ಅದರರ್ಥ, ನೀವು ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಂಡು ಬೆಳಕಿನ ವೇಗದಲ್ಲಿ ಚಲಿಸಿ ದರೆ ನೀವು ಭೂಮಿಯ ಮೇಲಿನ ಕಾಲವನ್ನು ವಂಚಿಸಬಹುದು; ಭೌಗೋಳಿಕ ಕಾಲಮಾನ ನಿಮಗೆ ಅನ್ವಯವಾಗದು. ನೀವು ಹೀಗೆ ಸಾಗುತ್ತಲೇ ಇದ್ದರೆ, ಭೂಮಿಯ ಮೇಲಿರುವ ನಿಮ್ಮ ಸಂಬಂಧಿಕರಿಗೆ ನಿಮಗಿಂತ ಬೇಗನೆ ವಯಸ್ಸಾಗಿಬಿಡುತ್ತದೆ.

ಇನ್ನು ಬ್ರಹ್ಮಾಂಡ ಎಂಬುದು ಬಿಗ್ ಬ್ಯಾಂಗ್‌ನ ಬಳಿಕ ವಿಸ್ತಾರವಾಗುತ್ತಲೇ ಇದೆ. ಬ್ರಹ್ಮಾಂಡ ದ ಕೇಂದ್ರದಿಂದ ಹೊರ ಅಂಚಿಗೆ ಸರಿಯುತ್ತ ಹೋದಂತೆ ವಿಸ್ತರಣೆಯ ವೇಗ ಹೆಚ್ಚಾಗುತ್ತದೆ. ಅಂದರೆ ಈ ಬ್ರಹ್ಮಾಂಡದ ಅತ್ಯಂತ ಹೊರ ಅಂಚುಗಳು ನಮ್ಮ ಊಹೆಗೂ ಮೀರಿದ, ಬೆಳಕಿನ ವೇಗಕ್ಕಿಂತ ಎಷ್ಟೋ ಪಟ್ಟು ವೇಗದಲ್ಲಿ ವಿಸ್ತರಿಸುತ್ತಿವೆ. ಇಲ್ಲಿ ನಮ್ಮ ಕಾಲದ ಪರಿಕಲ್ಪನೆಯ ಹಲವು ನಿಯಮಗಳು ಅನ್ವಯವಾಗುವುದೇ ಇಲ್ಲ!

ಇದು ಸಾಂಪ್ರದಾಯಿಕ ಭೌತಶಾಸ್ತ್ರ ಗೊತ್ತಿರುವ ಎಲ್ಲರಿಗೂ ತಿಳಿದಿರುವ ವಿಷಯವೇ. ಸದ್ಯ ಇದರಲ್ಲಿ ಹೊಸ ಬೆಳವಣಿಗೆ ಎಂದರೆ, “ಕಾಲ ಎಂಬುದೇ ಇಲ್ಲ" ಎಂದು ಕೆಲವು ಥಿಯರಿಟಿ‌ ಕಲ್ ಭೌತಶಾಸ್ತ್ರಜ್ಞರು ವಾದಿಸುತ್ತಿರುವುದು. ಅರೆ, ಇದು ಹೇಗೆ ಸಾಧ್ಯ ಎನ್ನುತ್ತೀರಾ? ನಿಧಾನ ವಾಗಿ ನೋಡೋಣ. ಕಾರ್ಲೊ ರೊವೆಲ್ಲಿ ಎಂಬ ಭೌತಶಾಸ್ತ್ರಜ್ಞರ ಪ್ರಕಾರ, ಕಾಲವೆಂಬುದು ಮಾನವನ ಸೀಮಿತ ತಿಳಿವಳಿಕೆ, ಕ್ವಾಂಟಂ ಅನಿಶ್ಚಿತತೆಗಳಿಂದಾಗಿ ಸೃಷ್ಟಿಯಾಗಿರುವ ಒಂದು ಪರಿಕಲ್ಪನೆ.

ಅವರ ಪ್ರಕಾರ, ಐನ್‌ಸ್ಟೀನನ ಸಾಪೇಕ್ಷತಾ ನಿಯಮ ಕೂಡ ಈ ಬ್ರಹ್ಮಾಂಡದ ವ್ಯಾಪ್ತಿಗೆ ಹೋಲಿಸಿದರೆ ಅತ್ಯಂತ ಸರಳ, ಸೀಮಿತ. ವಿಶ್ವವನ್ನು ಅಳೆಯುವ ಯಾವೊಂದು ಗಡಿಯಾರ ವೂ ಸಿಗಲಾರದು. ವಾಸ್ತವ ಎಂಬುದು ಘಟನೆಗಳ ಮಾಯಾಜಾಲ. ಎರಡು ಘಟನೆಗಳ ನಡುವಿನ ಸಂಬಂಧದಿಂದ ಕಾಲ ಸೃಷ್ಟಿಯಾಗುತ್ತದೆ ಹೊರತು ಅದೊಂದು ವಿಶ್ವಾತ್ಮಕ ಪ್ರವಾಹವಲ್ಲ.

ನಮ್ಮ ಕಾಲದ ಚಿಂತನೆ ‘ಎಂಟ್ರೋಪಿ’ಗೆ ಸಂಬಂಧಿಸಿದ್ದು. ಎಂಟ್ರೋಪಿ ಎಂದರೆ ವಿಶ್ವ ನಿರಂತರವಾಗಿ ಛಿದ್ರಛಿದ್ರವಾಗಿ ಸಿಡಿಯುತ್ತಿದೆ ಎಂದು ಸರಳ ಅರ್ಥ. ಎಂಟ್ರೋಪಿ ಅಥವಾ

ಅಸ್ತವ್ಯಸ್ತತೆ ಹೆಚ್ಚಿದಂತೆ ಭೂತಕಾಲ ಹಾಗೂ ಭವಿಷ್ಯಗಳು ಹೆಚ್ಚಾಗುತ್ತ ಹೋಗುತ್ತವೆ. ಆದರೆ ಭೂತ ಮತ್ತು ಭವಿಷ್ಯಗಳು ಈ ವಿಶ್ವದ ಮೂಲಭೂತ ವ್ಯಾಕರಣಗಳಲ್ಲ ಬದಲಾಗಿ ಅವು ಗಳನ್ನು ನೋಡುವ ನಮ್ಮ ಗಮನಿಸುವಿಕೆಯ ಫಲಿತ. ವಸ್ತು-ದ್ರವ್ಯಗಳ ಮೈಕ್ರೋ ಸ್ಕೋಪಿಕ್ ಮಟ್ಟದಲ್ಲಿ ಈ ಭೂತ-ಭವಿಷ್ಯದ ಅಸ್ತಿತ್ವ ಮಾಯ ವಾಗುತ್ತದೆ. ಅಂದರೆ ಇಲ್ಲಿ ‘ಕಾರಣ’ ಹಾಗೂ ‘ಪರಿಣಾಮ’ಗಳ ವ್ಯತ್ಯಾಸವಿಲ್ಲ. ಇದನ್ನೆಲ್ಲ ವಿವರಿಸುವ ‘ದಿ ಆರ್ಡರ್ ಆಫ್ ಟೈಮ್’ ಎಂಬ ಕೃತಿಯನ್ನೂ ರೊವಲ್ಲಿ ಬರೆದಿದ್ದಾರೆ.

ಕಾಲವೆಂಬುದು ಭೌತಶಾಸ್ತ್ರಜ್ಞರ ಪ್ರಯೋಗದ ಸರಕು ಮಾತ್ರವಲ್ಲ, ತತ್ವಶಾಸ್ತ್ರಜ್ಞರ ಮುಗಿ ಯದ ಕುತೂಹಲಕ್ಕೂ ಆಕರ. ವಿಶ್ವ ಕಂಡ ಜೀನಿಯಸ್ ದಾರ್ಶನಿಕ ಜಿಡ್ಡು ಕೃಷ್ಣಮೂರ್ತಿ ಕಾಲವನ್ನು ಅನುಕ್ರಮದ ಕಾಲ ( chronological) ಮತ್ತು ಮನಸ್ಸಿನ ಕಾಲ ( psychological )ಎಂದು ವಿಂಗಡಿಸುತ್ತಾರೆ. ಅನುಕ್ರಮದ ಕಾಲ ಇರುತ್ತದೆ; ಯಾಕೆಂದರೆ ನಮ್ಮ ಜೀವಕೋಶ ಗಳು ಹುಟ್ಟುತ್ತವೆ, ಸಾಯುತ್ತವೆ, ನಾವೂ ಹುಟ್ಟುತ್ತೇವೆ, ಬೆಳೆಯುತ್ತೇವೆ, ಸಾಯುತ್ತೇವೆ. ಬೆಳಗಾಗುತ್ತದೆ, ಎದ್ದು ಕಚೇರಿಗೆ ಹೋಗುತ್ತೇವೆ, ಸಂಜೆ ಮರಳುತ್ತೇವೆ, ಹೀಗೆ. ಆದರೆ ಸೈಕಾಲ ಜಿಕಲ್ ಕಾಲ ಎಂಬುದು ಇಲ್ಲ, ಅದು ನಾವು ಅನವಶ್ಯಕವಾಗಿ ಹೊತ್ತು ಕೊಂಡಿರುವ ಭಾರ.

ಅಲ್ಲಿ ಕಾರಣ ಮತ್ತು ಪರಿಣಾಮಗಳು, ಭೂತ ಮತ್ತು ಭವಿಷ್ಯಗಳು ಒಂದೇ ಆಗಿರುತ್ತವೆ. ನೆನಪು ಎಂಬುದು ಅನುಕ್ರಮದ ಕಾಲದ ಮೂಲಕ ನಾವು ಗಳಿಸಿಕೊಂಡ ಅನುಭವಗಳ ಫಲಿತ. ಅದು ಮನಸ್ಸು ಅಷ್ಟೇ. ಹೀಗಾಗಿ ಮನಸ್ಸು ಮತ್ತು ಸಮಯ ಬೇರೆಯಲ್ಲ!

ಇವುಗಳನ್ನು ಭಾಗವತದ ಒಂದು ಕತೆಯ ಮೂಲಕ ಮುಗಿಸೋಣ. ಕುಶಸ್ಥಲಿ ಎಂಬ ರಾಜ್ಯ ವನ್ನು ರೈವತ ಎಂಬ ರಾಜ ಆಳುತ್ತಿದ್ದ. ಅವನಿಗೆ ಸುಂದರಿ ಮತ್ತು ಬುದ್ಧಿವಂತೆಯಾದ

ರೇವತಿ ಎಂಬ ಮಗಳು. ಎಲ್ಲ ಅಪ್ಪಂದಿರಂತೆ ರೈವತನಿಗೂ ಮಗಳನ್ನು ಸಾಮಾನ್ಯರಿಗೆ ಕೊಡಲು ಮನಸ್ಸಿರಲಿಲ್ಲ. ಹಾಗಾಗಿ ಅವನು, ಈಕೆಗೆ ಸರಿಯಾದ ವರ ಯಾರು ಅಂತ ಹಣೆ ಬರಹ ಬರೆಯುವ ಬ್ರಹ್ಮನನ್ನೇ ಕೇಳೋಣ ಎಂದು ನಿರ್ಧಾರ ಮಾಡಿ ರೇವತಿಯ ಜತೆ ಬ್ರಹ್ಮ ಲೋಕಕ್ಕೆ ಹೋಗುತ್ತಾನೆ.

ಬ್ರಹ್ಮಲೋಕದಲ್ಲಿ ಗಂಧರ್ವರ ಗಾಯನ, ನೃತ್ಯ ನಡೆಯುತ್ತಾ ಇತ್ತು. ಅದನ್ನು ನೋಡುತ್ತಾ ಅಪ್ಪ, ಮಗಳಿಗೆ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಕೆಲವು ಕ್ಷಣಗಳ ಬಳಿಕ ಬ್ರಹ್ಮ ಇವರನ್ನು ನೋಡಿ “ಯಾಕಪ್ಪಾ ಬಂದಿರಿ?" ಎಂದು ಕೇಳಿದ. ರೈವತ ಇದ್ದ ವಿಷಯ ತಿಳಿಸಿ, ರೇವತಿಗೆ ಸರಿಹೊಂದುವ ವರ ಭೂಲೋಕದಲ್ಲಿ ಯಾರಿದ್ದಾರೆ ಅಂತ ಪ್ರಶ್ನಿಸಿದ. ಬಹ್ಮ ನಕ್ಕು ಹೇಳಿದ- “ನೀವು ಈ ಪ್ರಶ್ನೆ ಕೇಳುತ್ತಿರುವಂತೆಯೇ ಭೂಮಿಯ ಮೇಲೆ ನಾಲ್ಕು ಯುಗ ಗಳು ಸರಿದವು. ತಲೆಮಾರುಗಳೇ ಸಂದುಹೋದವು.

ಯಾಕೆ ಗೊತ್ತೆ? ನಿಮ್ಮ ಭೂಮಿಯ ಕಾಲದ ಲೆಕ್ಕಾಚಾರವೇ ಬೇರೆ, ಬ್ರಹ್ಮಲೋಕದ ಲೆಕ್ಕಾ ಚಾರವೇ ಬೇರೆ. ಇಲ್ಲಿನ ಒಂದು ಕ್ಷಣ ಎಂದರೆ ಭೂಮಿಯ ಮೇಲಿನ ನಾಲ್ಕು ಯುಗಗಳಿಗೆ ಸಮಾನ. ನೀವು ಇಲ್ಲಿದ್ದ ಕೆಲವೇ ಗಳಿಗೆಯಲ್ಲಿ ಭೂಮಿಯಲ್ಲಿ 27 ಚತುರ್ಯುಗಗಳು ಕಳೆದುಹೋಗಿವೆ. ನೀವು ಅಲ್ಲಿಂದ ಹೊರಡುವಾಗ ಇದ್ದ ಯಾರೂ ಈಗ ಭೂಮಿಯ ಮೇಲೆ ಉಳಿದಿಲ್ಲ.

ಆದರೆ ಚಿಂತೆ ಮಾಡಬೇಡ. ಈಗ ನಿನ್ನ ರಾಜ್ಯ ದ್ವಾರಕೆ ಎಂದು ಬದಲಾಗಿದೆ. ಅಲ್ಲಿ ಈಗ ಬಲರಾಮ ಎಂಬುವವನಿದ್ದಾನೆ. ಅವನು ಆದಿಶೇಷನ ಅವತಾರ. ಅವನೊಂದಿಗೆ ನಿನ್ನ ಮಗಳ ಮದುವೆ ಮಾಡು". ಹಾಗೆ ರೈವತ ಮತ್ತು ರೇವತಿ ವಾಪಸ್ ಭೂಲೋಕಕ್ಕೆ ಬಂದರು. ತಮ್ಮ ಕಾಲದ ಜನರು ಇಲ್ಲದ್ದನ್ನು ಮತ್ತು ಎಲ್ಲವೂ ಪೂರ್ತಿ ಬದಲಾದುದನ್ನು ಕಂಡು ಆಶ್ಚರ್ಯಪಟ್ಟರು. ಬ್ರಹ್ಮನ ಮಾತಿನಂತೆ, ಬಲರಾಮ, ಕೃಷ್ಣರನ್ನು ಭೇಟಿಯಾಗಿ, ತಮ್ಮ ಕಥೆ ಹೇಳಿದರು. ಬ್ರಹ್ಮನ ಮಾತು ಎಂಬ ಕಾರಣದಿಂದ ಬಲರಾಮ ಮದುವೆಗೆ ಒಪ್ಪಿದ.

ಈ ಕತೆ ಕೇಳಿದ ಬಳಿಕ ಇದು ಟೈಮ್ ಟ್ರಾವೆಲ್ ನ ಕತೆ ಎಂದು ನಿಮಗೆ ಯಾರಾದರೂ ಹೇಳಿಯೇ ಹೇಳುತ್ತಾರೆ. ಇದಕ್ಕೆ ಒಂದು ಟ್ವಿ ಕೊಡೋಣ. ರೈವತ ಮತ್ತು ರೇವತಿ ಬಹುಶಃ ಬ್ರಹ್ಮಲೋಕದಿಂದ ಹಿಂದಿರುಗುವಾಗ ನೆಗೆಟಿವ್ ಟೈಮ್‌ನಲ್ಲಿ ಹಿಂದಕ್ಕೆ ಪ್ರಯಾಣಿಸಿದ್ದರೆ ತಮ್ಮದೇ ಕಾಲವನ್ನು ತಲುಪಬಹುದಿತ್ತಲ್ಲವೇ? ಥಾಟ್ ಎಕ್ಸ್‌ಪರಿಮೆಂಟ್‌ನ ರೋಮಾಂಚನ ಕ್ಕಾಗಿಯಾದರೂ ಹೌದೆನ್ನಿ. ಸದ್ಯ ಸಮಯವೂ ಬ್ರಹ್ಮಾಂಡದಂತೆಯೇ ಒಡೆಯದ ಒಡಪು. ಅವು ಮುಖತೋರಿಸಿದಾಗ ನಾವು ನೋಡಬೇಕು.

ಕನಕದಾಸರಂತೆ “ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ" ಎಂದು ಈ ಸತ್ಯಗಳೆಲ್ಲ ಯಾವಾಗ ಬಾಗಿಲು ತೆರೆದು ಮುಖದೋರುತ್ತವೆ ಎಂದು ಕಾಯಬೇಕು.

ಇದನ್ನೂ ಓದಿ: ಸ್ಥೂಲಕಾಯ ತರುವ ಸಮಸ್ಯೆಗಳಿಗೆ ಉಪವಾಸವೇ ಪರಿಹಾರ!

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ