NTRNeel: ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಚಿತ್ರಕ್ಕಾಗಿ ಸಿದ್ಧವಾಗುತ್ತಿದೆ ಕಾರ್ಖಾನೆಯ ಬೃಹತ್ ಸೆಟ್
Prashanth Neel: ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಈಗಾಗಲೇ ಕುತೂಹಲ ಮೂಡಿಸಿದೆ. ಸೂಪರ್ ಸ್ಟಾರ್‌ಗಳು ಮೊದಲ ಬಾರಿಗೆ ಒಂದಾಗುತ್ತಿರುವ ಹಿನ್ನೆಲೆಯಲ್ಲಿ ನಿರೀಕ್ಷೆ ತುಸು ಹೆಚ್ಚೇ ಇದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೀಗ ಸಿನಿಮಾತಂಡ ಹೈದರಾಬಾದ್‌ನಲ್ಲಿ ಬೃಹತ್ ಸೆಟ್ ನಿರ್ಮಿಸಲು ಮುಂದಾಗಿದೆ.

ಜೂ.ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್.

ಹೈದರಾಬಾದ್: ಜೂ.ಎನ್‌ಟಿಆರ್ (Jr NTR)-ಪ್ರಶಾಂತ್ ನೀಲ್ (Prashanth Neel) ಕಾಂಬಿನೇಷನ್‌ನ ತೆಲುಗು ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಈಗಾಗಲೇ ಕುತೂಹಲ ಕೆರಳಿಸಿದೆ. ಸದ್ಯ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಚಿತ್ರತಂಡ ʼಎನ್‌ಟಿಆರ್‌ನೀಲ್ʼ ಎಂಬ ತಾತ್ಕಾಲಿಕ ಶೀರ್ಷಿಕೆ ಇಟ್ಟಿದ್ದು, ಇದರಲ್ಲಿ ನಾಯಕಿಯಾಗಿ ಕನ್ನಡತಿ ರುಕ್ಮಿಣಿ ವಸಂತ್ (Rukmini Vasanth) ನಟಿಸುತ್ತಿದ್ದಾರೆ ಎನ್ನಲಾಗಿದೆ. ಚಿತ್ರತಂಡ ಸುಮಾರು 1 ತಿಂಗಳಿಂದ ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬೀಡುಬಿಟ್ಟಿದ್ದು, ಇದೀಗ ಬೃಹತ್ ಕಾರ್ಖಾನೆಯ ಸೆಟ್ ನಿರ್ಮಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಕಬ್ಬಿಣ, ಸ್ಟೀಲ್ ಮತ್ತು ಅಲ್ಯುಮಿನಿಯಂ ಬಳಸಿ ಕಾರ್ಖಾನೆಯ ಸೆಟ್ ನಿರ್ಮಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಿರ್ಮಿಸುತ್ತಿರುವ ಬೃಹತ್ ಸೆಟ್ ಇದಾಗಿದೆ. ಆ ಮೂಲಕ ಪ್ರೇಕ್ಷಕರಿಗೆ ಹೊಸದೊಂದು ಅನುಭವ ಕಟ್ಟಿಕೊಡಲು ಪ್ರಶಾಂತ್ ನೀಲ್ ಮುಂದಾಗಿದ್ದಾರೆ.
ಈ ಸುದ್ದಿಯನ್ನೂ ಓದಿ: Rukmini Vasanth: ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಚಿತ್ರಕ್ಕೆ ನಾಯಕಿಯಾಗಿ ರುಕ್ಮಿಣಿ ವಸಂತ್ ಫಿಕ್ಸ್? ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿದೆ ಹಿಂಟ್
"ಇತ್ತೀಚೆಗೆ ಭಾರತೀಯ ಸಿನಿಮಾಗಳಲ್ಲಿ ನಾವು ನೋಡಿರದಂತಹ ಅತ್ಯಂತ ದೊಡ್ಡ ಸೆಟ್‌ಗಳಲ್ಲಿ ಈ ಫ್ಯಾಕ್ಟರಿ ಸೆಟ್ ಕೂಡ ಒಂದು. ಈ ಬೃಹತ್ ಸೆಟ್ ಚಿತ್ರದ ಪ್ರಮುಖ ಭಾಗವಾಗಲಿದೆ. ಇದು ಆ್ಯಕ್ಷನ್ ಸೀಕ್ವೆನ್ಸ್‌ಗಳಿಗೆ ಅಗತ್ಯವಾದ ಹಿನ್ನೆಲೆಯನ್ನು ಒದಗಿಸಲಿದೆ" ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ.
ವಿಶೇಷ ಎಂದರೆ ಈ ಕಾರ್ಖಾನೆಯ ಸೆಟ್ ಕುಮಟಾದಲ್ಲಿ ಈ ಹಿಂದೆ ನಿರ್ಮಿಸಲಾದ ಸೆಟ್‌ನ ಮುಂದುವರಿದ ಭಾಗವಾಗಿರಲಿದೆ. ಕುಮಟಾದಲ್ಲಿ ಹಾಕಿದ್ದ ಸೆಟ್ ಚಿತ್ರದ ಕೈಗಾರಿಕಾ ಥೀಮ್‌ಗೆ ಪೂರಕವಾಗಿತ್ತು. ಇದೀಗ ಹೈದರಾಬಾದ್‌ನ ಈ ಸೆಟ್ ಗಮನ ಸೆಳೆಯಲಿದೆ. ಆ್ಯಕ್ಷನ್ ಪ್ಯಾಕ್ಡ್ ಚಿತ್ರ ಇದಾಗಿದ್ದು, ಮೊದಲ ಬಾರಿಗೆ ಜೂ.ಎನ್‌ಟಿಆರ್ ಜತೆಗೆ ಪ್ರಶಾಂತ್ ನೀಲ್ ಕೈ ಜೋಡಿಸಿದ್ದಾರೆ. ಇಬ್ಬರೂ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳಾಗಿರುವುದರಿಂದ ನಿರೀಕ್ಷೆ ತುಸು ಹೆಚ್ಚೇ ಇದೆ.
ಕಳೆದ ವರ್ಷ ತೆರೆಕಂಡ ಜೂ.ಎನ್‌ಟಿಆರ್ ಅಭಿನಯದ ʼದೇವರ ಪಾರ್ಟ್ 1ʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಹೀಗಾಗಿ ಈ ಚಿತ್ರದ ಮೂಲಕ ಗೆಲ್ಲಲೇಬೇಕೆಂಬ ಪಣ ತೊಟ್ಟಿದ್ದಾರೆ. ಇದು ಪಕ್ಕಾ ಪ್ರಶಾಂತ್ ನೀಲ್ ಶೈಲಿಯಲ್ಲಿ ಮೂಡಿ ಬರಲಿದ್ದು, ಜೂ.ಎನ್‌ಟಿಆರ್ ಭರ್ಜರಿ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಮುಂದಿನ ವರ್ಷ ಜೂ. 25ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ.
ಪ್ರಶಾಂತ್ ನೀಲ್ ಬಹುಬೇಡಿಕೆಯ ನಿರ್ದೇಶಕ
'ಕೆಜಿಎಫ್' ಸರಣಿ ಚಿತ್ರಗಳ ಮೂಲಕ ಚಿತ್ರರಂಗದ ಗಮನ ಸೆಳೆದ ಪ್ರಶಾಂತ್ ನೀಲ್ ಸದ್ಯ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲಿನ ಸೂಪರ್ ಸ್ಟಾರ್‌ಗಳ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 2023ರಲ್ಲಿ ತೆರೆಕಂಡ ಪ್ರಭಾಸ್ ಚಿತ್ರ 'ಸಲಾರ್' ನಿರ್ದೇಶಿಸಿದ್ದ ಅವರು ಅದರ 2ನೇ ಭಾಗಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜತೆಗೆ ಯಶ್ ಕಾಂಬಿನೇಷನ್‌ನಲ್ಲಿ ʼಕೆಜಿಎಫ್ 3ʼ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಇನ್ನು ಅಲ್ಲು ಅರ್ಜುನ್ ಚಿತ್ರವನ್ನೂ ಕೈಗೆತ್ತಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆ ಮೂಲಕ ದೇಶದ ಬಹು ಬೇಡಿಕೆಯ ನಿರ್ದೇಶಕ ಎನಿಸಿಕೊಂಡಿದ್ದಾರೆ.