Karnataka State Awards: ಬಸವ ಪುರಸ್ಕಾರ ಪಡೆದ ಡಾ.ಗುಂಜಾಳ, ಚೌಡಯ್ಯ ಪುರಸ್ಕಾರ ಪಡೆದ ಬಸಪ್ಪ ಭಜಂತ್ರಿ ಪರಿಚಯ ಇಲ್ಲಿದೆ
ಬಸವ ರಾಷ್ಟ್ರೀಯ ಪುರಸ್ಕಾರವನ್ನು ಡಾ.ಎಸ್.ಆರ್. ಗುಂಜಾಳ ಅವರು ಹಾಗೂ ಬಸಪ್ಪ ಎಚ್. ಭಜಂತ್ರಿಯವರು ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಗಳು ತಲಾ 10 ಲಕ್ಷ ರೂ. ನಗದು, ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತವೆ. ಇವರಲ್ಲದೆ ʼಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿʼಯನ್ನು ಮುಂಬಯಿಯ ಬೇಗಂ ಪರ್ವೀನ್ ಸುಲ್ತಾನ್ ಪಡೆದುಕೊಂಡಿದ್ದಾರೆ.
![ಯಾರಿವರು ರಾಷ್ಟ್ರೀಯ ಪುರಸ್ಕಾರ ಪಡೆದ ಗುಂಜಾಳ, ಬಸಪ್ಪ ಭಜಂತ್ರಿ?](https://cdn-vishwavani-prod.hindverse.com/media/original_images/awardees.jpg)
ಡಾ.ಎಸ್.ಆರ್ ಗುಂಜಾಳ, ಬೇಗಂ ಪರ್ವಿನ್ ಸುಲ್ತಾನ, ಬಸಪ್ಪ ಭಜಂತ್ರಿ
![ಹರೀಶ್ ಕೇರ](https://cdn-vishwavani-prod.hindverse.com/media/images/Harish_Kerargylr_YyRvY8Q.2e16d0ba.fill-100x100.jpg)
ಬೆಂಗಳೂರು: ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ರಾಜ್ಯ ಸರ್ಕಾರದ (Karnataka Government) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2024-25 ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು (Karnataka State Awards) ಘೋಷಣೆ ಮಾಡಿದೆ. ಇದರಲ್ಲಿ ಬಸವ ರಾಷ್ಟ್ರೀಯ ಪುರಸ್ಕಾರವನ್ನು ಡಾ.ಎಸ್.ಆರ್. ಗುಂಜಾಳ ಅವರು ಹಾಗೂ ಬಸಪ್ಪ ಎಚ್. ಭಜಂತ್ರಿಯವರು ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಗಳು ತಲಾ 10 ಲಕ್ಷ ರೂ. ನಗದು, ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತವೆ. ಇವರಲ್ಲದೆ ʼಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿʼಯನ್ನು ಮುಂಬಯಿಯ ಬೇಗಂ ಪರ್ವೀನ್ ಸುಲ್ತಾನ್ ಪಡೆದುಕೊಂಡಿದ್ದಾರೆ. ಇವರ ಪರಿಚಯ ಇಲ್ಲಿದೆ.
ಡಾ. ಎಸ್. ಆರ್ ಗುಂಜಾಳ
ಪ್ರಾಧ್ಯಾಪಕ, ಸಂಶೋಧಕ, ಲೇಖಕ ಹಾಗೂ ಆಡಳಿತಗಾರರಾಗಿ ಡಾ.ಎಸ್.ಆರ್. ಗುಂಜಾಳ ಅವರದು ಶಿಕ್ಷಣ ಕ್ಷೇತ್ರದಲ್ಲಿ ಬಹುಮುಖಿ ಸಾಧನೆ. ಹೊಸ ತಲೆಮಾರಿಗೆ ಮಾದರಿಯಾದ ವ್ಯಕ್ತಿತ್ವ. ಧಾರವಾಡ ಜಿಲ್ಲೆಯ ಕೋಳಿವಾಡದವರಾದ ಡಾ. ಶಿವಪುತ್ರಪ್ಪ ರಾಯಪ್ಪ ಗುಂಜಾಳ್ ಹುಟ್ಟಿದ್ದು 1932ರ ಜೂನ್ 25ರಂದು. ಅಕ್ಷರದಿಂದ ಅರಳಿದ ಪ್ರತಿಭೆ. ಸ್ನಾತಕೋತ್ತರ ಪದವಿ, ದೆಹಲಿ ವಿ.ವಿ ಯಿಂದ ಎಂ.ಲಿಟ್.ಎಸ್.ಸಿ, ಪಿಎಚ್‌ಡಿ ಪದವೀಧರರು. ಗ್ರಂಥಪಾಲಕ, ಡೆಪ್ಯೂಟಿ ಗ್ರಂಥಪಾಲಕ, ಪ್ರಾಧ್ಯಾಪಕ, ಮುಖ್ಯಸ್ಥರಾಗಿ ದುಡಿದವರು. ಅಧ್ಯಾಪನದ ಜೊತೆಗೆ ಸಂಶೋಧನೆ-ಬರವಣಿಗೆ, ಗ್ರಂಥಾಲಯ ವಿಜ್ಞಾನ ಗ್ರಂಥಗಳೂ ಸೇರಿದಂತೆ 27 ಕೃತಿಗಳು, 150 ಲೇಖನಗಳ ರಚನಕಾರರು. 25 ರಾಷ್ಟ್ರೀಯ-ಪ್ರಾಂತೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ ಹಿರಿಮೆ, 20 ವಿ.ವಿ ಗಳ ಅಭ್ಯಾಸ ಮಂಡಳಿಯ ಸದಸ್ಯರಾಗಿ, ಗುಲ್ಬರ್ಗಾ ವಿ.ವಿ ಸಮಾಜವಿಜ್ಞಾನ ವಿಭಾಗದ ಡೀನ್ ಆಗಿ ಶೈಕ್ಷಣಿಕ ಸೇವೆ. ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಶರಣ ಸಾಹಿತ್ಯ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ ಸೇರಿ ಹತ್ತಾರು ಗೌರವಗಳಿಂದ ಭೂಷಿತ. ಹಲವು ನಿಯತಕಾಲಿಕೆಗಳ ಸಂಪಾದಕರು, ಪಿಎಚ್ ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿಯೂ ಸೇವೆಗೈದಿದ್ದಾರೆ. ವಚನಗಳ ಶುದ್ಧೀಕರಣ, ಬಸವಣ್ಣನವರ ವಚನ ಪದ ಪ್ರಯೋಗ ಕೋಶ, ಬಸವ ಸಾಹಿತ್ಯ ವಾಹಿನಿ, ಇಂಗ್ಲಿಷ್ ಕನ್ನಡ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ ಮೊದಲಾದವು ಇವರ ಕೃತಿಗಳು.
ಬಸಪ್ಪ ಎಚ್. ಭಜಂತ್ರಿ
ಬಸಪ್ಪ ಎಚ್. ಭಜಂತ್ರಿ ಅವರು ಪ್ರಸಿದ್ಧ ಕ್ಲಾರಿಯೋನೆಟ್ ಹಾಗೂ ಶಹನಾಯಿ ವಾದಕರು. ಹಿಂದೂಸ್ತಾನಿ ವಾದ್ಯ ಸಂಗೀತ ಕ್ಷೇತ್ರದಲ್ಲಿ ಕ್ಲಾರಿಯೋನೆಟ್ ಹಾಗೂ ಶಹನಾಯಿಯ ಅಳವಡಿಕೆ ಮಡುವ ಮೂಲಕ ಗಣನೀಯ ಕೊಡುಗೆ ನೀಡಿರುವ ಅಪೂರ್ವ ಸಾಧಕರು. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಅಮರಾವತಿ ಗ್ರಾಮದ ಬಸಪ್ಪ ಎಚ್. ಭಜಂತ್ರಿ ಅವರು ತಮ್ಮ ಎಂಟನೆಯ ವಯಸ್ಸಿನಲ್ಲಿ ಸಂಗೀತಲೋಕಕ್ಕೆ ಪ್ರವೇಶಿಸಿದರು. ಅಜ್ಜ ಫಕೀರಪ್ಪನವರಿಂದ ಕ್ಲಾರಿಯೋನೆಟ್ ಕಲಿಕೆ. ನಂತರ ಪಂಡಿತ ಬಸವರಾಜ ರಾಜಗುರು, ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಅರ್ಜುನ್ ಸಾ ನಾಕೋಡ್, ಚನ್ನಬಸಪ್ಪ ಬನ್ನೂರ ಗವಾಯಿ ಮೊದಲಾದವರಲ್ಲಿ ಸಂಗೀತಾಭ್ಯಾಸ ಹಾಗೂ ಅವರಿಂದ ಮಾರ್ಗದರ್ಶನ. ಕ್ಲಾರಿಯೋನೆಟ್ ಮತ್ತು ಶಹನಾಯಿ ವಾದನದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಶಿಕ್ಷಣ ನೀಡುವ ಮೂಲಕ ಸಂಗೀತ ಕ್ಷೇತ್ರಕ್ಕೆ ನೀಡಿದ ಕಾಣಿಕೆ ಮಹತ್ವಪೂರ್ಣವಾದುದು. ಹಾಡುಗಾರಿಕೆಯಲ್ಲೂ ವಿದ್ವತ್ ಮಾಡಿರುವ ಬಸಪ್ಪ ಎಚ್. ಭಜಂತ್ರಿ ಮೈಸೂರು ದಸರಾ, ಹಂಪಿ, ಪಟ್ಟದಕಲ್ಲು, ನವರಸಪುರ ಮುಂತಾದ ಪ್ರತಿಷ್ಠಿತ ಉತ್ಸವಗಳಲ್ಲಿ ಹಾಗೂ ನಾಡಿನಾದ್ಯಂತ ಹಲವಾರು ಕಾರ್ಯಕ್ರಮಗಳಲ್ಲಿ ಶಹನಾಯಿ ನುಡಿಸಿ ಜನಮನ್ನಣೆ ಗಳಿಸಿದ್ದಾರೆ. ಕರ್ನಾಟಕ ಭೂಷಣ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.
ಬೇಗಂ ಪರ್ವೀನ್ ಸುಲ್ತಾನ್
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರಾದ ಬೇಗಂ ಪರ್ವೀನ್ ಸುಲ್ತಾನ ಅವರು ತಮ್ಮ ವೃತ್ತಿಜೀವನವನ್ನು ಅಸ್ಸಾಮಿ ಚಲನಚಿತ್ರ ಮೊರೊಮ್ ತ್ರಿಷ್ಣಾ ಮೂಲಕ ಪ್ರಾರಂಭಿಸಿದರು. 15ನೇ ವಯಸ್ಸಿನಲ್ಲಿ ಹಿನ್ನೆಲೆ ಗಾಯಕಿಯಾಗಿ ಅವರ ಮೊದಲ ಹಾಡು. ಅವರ ಸಂಗೀತ ಪ್ರತಿಭೆಯನ್ನು ಮೊದಲು ಅವರ ತಾಯಿ ಕಂಡುಹಿಡಿದರು. ಸುಲ್ತಾನ ಅವರ ತಂದೆ ಇಕ್ರಮುಲ್ ಮಜೀದ್ ಅವರಿಂದ 4 ವರ್ಷದವಳಿದ್ದಾಗಿನಿಂದಲೇ ಸಂಗೀತದ ಕಲಿಕೆ. ಪಟಿಯಾಲ ಘರಾನಾದ ಸಂಗೀತಗಾರ ಗುಲ್ ಮೊಹಮ್ಮದ್ ಖಾನ್ ಅವರ ಶಿಷ್ಯರಾದರು. ಬಾಲ್ಯದಿಂದಲೂ ಸುಲ್ತಾನ ಲತಾ ಮಂಗೇಶ್ಕರ್ ಹಾಡುಗಳನ್ನು ಕೇಳುತ್ತಿದ್ದರು. ಸುಲ್ತಾನ ಚಲನಚಿತ್ರಗಳಲ್ಲಿ ಶಾಸ್ತ್ರೀಯ ಹಿನ್ನೆಲೆ ಇರುವ ಹಾಡನ್ನು ಮಾತ್ರ ಹಾಡುತ್ತಾರೆ. ಹಲವು ಚಲನಚಿತ್ರ ಗೀತೆಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. 1976ರಲ್ಲಿ ಪದ್ಮಶ್ರೀ ಪ್ರಶಸ್ತಿ, 2014ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಭಾರತ ಸರ್ಕಾರ ಇವರಿಗೆ ನೀಡಿ ಗೌರವಿಸಿತು.
ಇದನ್ನೂ ಓದಿ: Karnataka State Awards: ಗುಂಜಾಳಗೆ ಬಸವ ಪುರಸ್ಕಾರ, ವಿವೇಕ್ ರೈಗೆ ಪಂಪ ಪ್ರಶಸ್ತಿ; 19 ಪುರಸ್ಕೃತರ ಪಟ್ಟಿ ಪ್ರಕಟ