ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್; ಅತಿ ಕಡಿಮೆ ಬಹುಮಾನ ಮೊತ್ತ ಪಡೆದ ಪಾಕ್
WTC Final 2025: ದ್ವಿತೀಯ ಇನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ಪ್ರದರ್ಶಿಸಿದ ದಕ್ಷಿಣ ಆಫ್ರಿಕಾ 5 ವಿಕೆಟ್‌ಗೆ 282 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದ ಮಾರ್ಕ್ರಮ್ ದ್ವಿತೀಯ ಇನಿಂಗ್ಸ್‌ನಲ್ಲಿ ದಾಖಲೆಯ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನಾಯಕ ಟೆಂಬ ಬವುಮಾ ಎರಡೂ ಇನಿಂಗ್ಸ್‌ನಲ್ಲಿ ನಿರೀಕ್ಷತ ಆಟವಾಡಿ ತಂಡಕ್ಕೆ ಆಸರೆಯಾದರು.


ಲಂಡನ್: ಲಾರ್ಡ್ಸ್‌ನಲ್ಲಿ ಶನಿವಾರ ಮುಕ್ತಾಯ ಕಂಡಿದ್ದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ದಕ್ಷಿಣ ಆಫ್ರಿಕಾ ತಂಡ ಚೊಚ್ಚಲ ಟ್ರೋಫಿ ಗೆದ್ದ ಸಾಧನೆ ಮಾಡಿತ್ತು. ಚಾಂಪಿಯನ್ ಬವುಮಾ ಪಡೆ 31 ಕೋಟಿ ನಗದು ಬಹುಮಾನ ಪಡೆದರೆ, ರನ್ನರ್-ಅಪ್ ಆಸ್ಟ್ರೇಲಿಯಾಕ್ಕೆ 18 ಕೋಟಿ ನಗದು ಬಹುಮಾನ ಲಭಿಸಿತು. ಉಭಯ ತಂಡಗಳಿಗೂ ಮಾತ್ರವಲ್ಲದೆ ಟೂರ್ನಿಯಲ್ಲಿ ಪಾಲ್ಗೊಂಡ ಎಲ್ಲ ತಂಡಗಳಿಗೂ ಅಂಕಪಟ್ಟಿಯಲ್ಲಿ ಅವರು ಪಡೆದ ಸ್ಥಾನದ ಆಧಾರದಲ್ಲಿ ಬಹುಮಾನ ಮೊತ್ತ ನೀಡಲಾಗಿದೆ. ಅದರಂತೆ ಭಾರತ, ಪಾಕಿಸ್ತಾನ ಸೇರಿ ಉಳಿದ ತಂಡಗಳಿಗೆ ಸಿಕ್ಕ ಬಹುಮಾನ ಮೊತ್ತದ ಮಾಹಿತಿ ಇಲ್ಲಿದೆ.
ಕಳೆದ ಎರಡು ಬಾರಿಯ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತ ಈ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಮೂರನೇ ಸ್ಥಾನದ ಭಾರತಕ್ಕೆ 12.31 ಕೋಟಿ ನಗದು ಬಹುಮಾನ ಸಿಕ್ಕಿತು. ನಾಲ್ಕನೇ ಸ್ಥಾನ ಪಡೆದ ನ್ಯೂಜಿಲೆಂಡ್(10.26 ಕೋಟಿ), ಐದನೇ ಸ್ಥಾನ ಪಡೆದ ಇಂಗ್ಲೆಂಡ್(8.20 ಕೋಟಿ), ಆರನೇ ಸ್ಥಾನ ಪಡೆದ ಶ್ರೀಲಂಕಾ(7.18 ಕೋಟಿ ), ಏಳನೇ ಸ್ಥಾನ ಪಡೆದ ಬಾಂಗ್ಲಾದೇಶ (6.15 ಕೋಟಿ) 8ನೇ ಸ್ಥಾನ ಪಡೆದ ವೆಸ್ಟ್ ಇಂಡೀಸ್ (5.13 ಕೋಟಿ) ಒಂಬತ್ತನೆ ಹಾಗೂ ಕೊನೆಯ ಸ್ಥಾನ ಪಡೆದ ಪಾಕಿಸ್ತಾನ 4 ಕೋಟಿ ನಗದು ಬಹುಮಾನ ಪಡೆಯಿತು.
ಅಧಿಕಾರಯುತ ಗೆಲುವು ಸಾಧಿಸಿದ ಹರಿಣ ಪಡೆ
ಮೊದಲ ಇನ್ನಿಂಗ್ಸ್‌ನಲ್ಲಿ 212 ರನ್ ಕಲೆಹಾಕಿದ್ದ ಆಸ್ಟ್ರೇಲಿಯಾ ತಂಡ ಬಳಿಕ ದ.ಆಫ್ರಿಕಾವನ್ನು 138 ರನ್‌ಗೆ ನಿಯಂತ್ರಿಸಿ 74 ರನ್‌ಗಳ ದೊಡ್ಡ ಮುನ್ನಡೆ ಪಡೆದಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಒಂದು ಹಂತದಲ್ಲಿ 73 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದ ಆಸೀಸ್, ಬಾಲಂಗೋಚಿಗಳ ಹೋರಾಟದಿಂದಾಗಿ 207 ರನ್ ಕಲೆಹಾಕಿತ್ತು. ಈ ಮೂಲಕ ದಕ್ಷಿಣ ಆಫ್ರಿಕಾ ಗೆಲುವಿಗೆ ಕಠಿಣ ಗುರಿ ನೀಡಿತ್ತು. ಆದರೆ ದ್ವಿತೀಯ ಇನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ಪ್ರದರ್ಶಿಸಿದ ದಕ್ಷಿಣ ಆಫ್ರಿಕಾ 5 ವಿಕೆಟ್‌ಗೆ 282 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದ ಮಾರ್ಕ್ರಮ್ ದ್ವಿತೀಯ ಇನಿಂಗ್ಸ್‌ನಲ್ಲಿ ದಾಖಲೆಯ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನಾಯಕ ಟೆಂಬ ಬವುಮಾ ಎರಡೂ ಇನಿಂಗ್ಸ್‌ನಲ್ಲಿ ನಿರೀಕ್ಷತ ಆಟವಾಡಿ ತಂಡಕ್ಕೆ ಆಸರೆಯಾದರು.