Janamejaya Umarji Column: ಅನುಭವ ಮಂಟಪ: ಸ್ಥಾವರ ಜಂಗಮವೆಂಬೋ ದಿಗಿಲು ಭುಗಿಲು
ಅನುಭವ ಮಂಟಪ ಎಂಬುದು ಸಾಹಿತ್ಯಿಕ ಮತ್ತು ಐತಿಹಾಸಿಕ ಸತ್ಯವಾದರೂ ಅದನ್ನು ಗಟ್ಟಿಯಾಗಿ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅನುಭವ ಮಂಟಪ ಕೇವಲ ವೈಚಾರಿಕವಲ್ಲ, ಭೌತಿಕವಾಗಿಯೂ ಕಲ್ಯಾಣದಲ್ಲಿ ಇತ್ತು ಎಂಬುದರ ಬಗ್ಗೆ ಯಾರಿಗೂ ಸಂದೇಹ ಗಳಿಲ್ಲ, ಪುರಾತತ್ವ ಆಧಾರಗಳಿಂದ ಅದನ್ನು ಸಾಬೀತುಪಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ.


ಚರ್ಚಾವೇದಿಕೆ
ಜಲಮೇಜಯ ಉಮರ್ಜಿ
ಅನುಭವ ಮಂಟಪ- ಇದು ಐತಿಹಾಸಿಕ ಸತ್ಯ; ಆದರೆ ಅನುಭವ ಮಂಟಪವೆನ್ನುವ ಸ್ಥಾವರ ಇತ್ತು ಎನ್ನಲು ಕೆಲವರಿಗೆ ದಿಗಿಲು. ಮೂಲ ಅನುಭವ ಮಂಟಪ ಇಲ್ಲಿಯೇ ಇತ್ತು ಎಂಬು ದಕ್ಕೆ ಯಾರಲ್ಲೂ ಸ್ಪಷ್ಟ ಉತ್ತರವಿಲ್ಲ. ಗೊತ್ತಿದ್ದರೂ ಹೇಳುತ್ತಿಲ್ಲ ಅಥವಾ ದಾರಿ ತಪ್ಪಿಸು ತ್ತಿದ್ದಾರೆ. ಅನುಭವ ಮಂಟಪ ಎಷ್ಟೆ ಪ್ರಥಮಗಳಿಗೆ ಕಾರಣವಾಗಿತ್ತು ಎನ್ನುವುದಾದರೆ, ಅದನ್ನು ಹುಡುಕಲು, ಮತ್ತೆ ಅಲ್ಲಿಯೇ ಕಟ್ಟಲು ಪ್ರಯತ್ನಗಳೇ ಆಗದಿದ್ದುದಕ್ಕೆ ಯಾವ ಮೋಹ ಮೈತ್ರಿ ಕಾರಣ ಗೊತ್ತಿಲ್ಲ. ಈಗಲಾದರೂ ವೈeನಿಕ ಮತ್ತು ಸಾಂವಿಧಾನಿಕ ಮಾರ್ಗ ಗಳಿಂದ ಅದನ್ನು ಹುಡುಕಿಕೊಳ್ಳಬೇಕಲ್ಲವೇ? ಅನುಭವ ಮಂಟಪದ ಕುರಿತು ಮಾತನಾಡಿದ ಡಾ. ವೀಣಾ ಬನ್ನಂಜೆಯವರ ಭಾಷಣಕ್ಕೆ ಪ್ರತಿಕ್ರಿಯೆ ಕೊಡಲು ಹಲವರು ಜಿದ್ದಿಗೆ ಬಿದ್ದಂತೆ ವಿಡಿಯೋ ಮಾಡಿ ಹರಿಬಿಡುತ್ತಿರುವುದರಿಂದ ಮತ್ತೆ ಅನುಭವ ಮಂಟಪ ಮುನ್ನೆಲೆಗೆ ಬಂದಿದೆ.
ಅನುಭವ ಮಂಟಪ ಎಂಬುದು ಸಾಹಿತ್ಯಿಕ ಮತ್ತು ಐತಿಹಾಸಿಕ ಸತ್ಯವಾದರೂ ಅದನ್ನು ಗಟ್ಟಿಯಾಗಿ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅನುಭವ ಮಂಟಪ ಕೇವಲ ವೈಚಾರಿಕವಲ್ಲ, ಭೌತಿಕವಾಗಿಯೂ ಕಲ್ಯಾಣದಲ್ಲಿ ಇತ್ತು ಎಂಬುದರ ಬಗ್ಗೆ ಯಾರಿಗೂ ಸಂದೇಹಗಳಿಲ್ಲ, ಪುರಾತತ್ವ ಆಧಾರಗಳಿಂದ ಅದನ್ನು ಸಾಬೀತುಪಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ.
ಇದನ್ನೂ ಓದಿ: Janamejaya Umarji Column: ನೋವನ್ನು ನೆನಪಿಸುವ ಗಾಯದ ಕಲೆಗಳು ಇರಬೇಕು
ಅನುಭವ ಮಂಟಪದ ಅಸ್ತಿತ್ವದ ವಿಷಯದಲ್ಲಿ ಜಾಗತಿಕವಾದಿ ಮತ್ತು ಮಾರ್ಕ್ಸ್‌ವಾದಿ ಪಟಾಲಂಗಳಲ್ಲಿ ಕೆಲ ಗೊಂದಲಗಳಿವೆ. ಒಬ್ಬ ಜಾಗತಿಕವಾದಿ ನೇತಾರರು “ಅನುಭವ ಮಂಟಪ ಇತ್ತು, ಆದರೆ ಅದು ಸ್ಥಾವರವಾಗಿರಲಿಲ್ಲ" ಎಂದಿದ್ದಾರೆ. ಆಧಾರಕ್ಕೆ ಅವರು ಮಾತ್ರ, ಇಲ್ಲಿಯವರೆಗೆ ‘ಪುಂಡರ ಗೋಷ್ಠಿ’ ಎಂದು ಹಳಿಯುತ್ತಿದ್ದ ಪುರಾಣಗಳನ್ನು ಬಳಸಿಕೊಂಡಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ ದೀರ್ಘ ವಿಡಿಯೋ ಹರಿಬಿಟ್ಟ ಇನ್ನೊಬ್ಬ ಹಿರಿಯರು, “ಅನುಭವ ಮಂಟಪ ಇದ್ದದ್ದು ಖರೆ, ಆದರೆ ಅದು ಸ್ವಂತ ಕಟ್ಟಡವಾಗಿರಲಿಲ್ಲ. ಮಹಾಮನೆಯ ಭಾಗ ವಾಗಿತ್ತು" ಎಂದಿದ್ದಾರೆ. ಇನ್ನೊಬ್ಬ ಆಸ್ಥಾನ ವಿದ್ವಾನರು “ಶೂನ್ಯ ಸಂಪಾದನೆಗಳ ಸಂಭಾ ಷಣೆಗಳಲ್ಲಿನ ಕೆಲ ದುರ್ಬಲ ಅಂಶಗಳನ್ನು ಎತ್ತಿಕೊಂಡು ಅನುಭವ ಮಂಟಪದ ಮಹತ್ವ ವನ್ನು ಅಳೆಯಲಿಕ್ಕಾಗದು" ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.

ಒಂದೆರಡು ಎಡಪಂಥೀಯ ಸ್ವಾಮಿಗಳ ಅಭಿಪ್ರಾಯದಲ್ಲಿ ಖಂಡನೆ ಬಿಟ್ಟರೆ, ಮಂಡನೆ ಶೂನ್ಯ. ಒಟ್ಟಿನಲ್ಲಿ ಅನುಭವ ಮಂಟಪ ಸ್ಥಾವರವಾಗಿಯೂ ಇತ್ತೋ ಇಲ್ಲವೋ ಎಂಬುದಕ್ಕೆ ‘ಮನೆಯೊಂದು ಮೂರು ಬಾಗಿಲು’ ಎಂಬಂತಾಗಿದೆ.
ಈ ದಿಗಿಲುಗಳ ಹಿಂದೆ ಸ್ವ-ಹಿತಾಸಕ್ತಿಗಳಿವೆ. ಅನುಭವ ಮಂಟಪ ಭೌತಿಕವಾಗಿ ಕಲ್ಯಾಣ ದಲ್ಲಿಯೇ ಇತ್ತು ಎಂದು ಹೇಳಿದರೆ, ಅದು ಎಲ್ಲಿದೆ? ಈಗ ಏನಾಗಿದೆ? ಎಂಬ ಪ್ರಶ್ನೆ ಕಾಡು ತ್ತದೆ. ಒಂದು ನಂಬಿಕೆಯ ಪ್ರಕಾರ ಅನುಭವ ಮಂಟಪ ಈಗ ‘ಪೀರ ಷಹಾ ಬಂಗ್ಲಾ ಅಥವಾ ದರ್ಗಾ’ ಆಗಿದೆ. ಇದನ್ನು ಒಪ್ಪಿದರೆ ಇಲ್ಲಿಯವರೆಗೆ ಸಾಣೆಹಳ್ಳಿ ಮತ್ತು ನಿಜಗುಣಾನಂದರಂಥ ಪೂಜ್ಯ ಸ್ವಾಮಿಗಳು ಯಾವ ಮರಳುಗಾಡಿನ ಮತ ಮತ್ತು ಲಿಂಗಾಯತ ಎರಡನ್ನೂ ಸಮ ತಕ್ಕಡಿಯಲ್ಲಿ ಇಟ್ಟರೋ, ಅವರಿಗೆ ನೋವಾಗುತ್ತದೆ ಅಷ್ಟೇ ಅಲ್ಲ, ಅದನ್ನು ಮರಳಿ
ಪಡೆಯಬೇಕಾಗುತ್ತದೆ.
ಇದೊಂಥರಾ ಬಿಸಿತುಪ್ಪ. ಇನ್ನು 12ನೇ ಶತಮಾನದ ಅನುಭವ ಮಂಟಪದ್ದು ಭೌತಿಕವಾಗಿ ಕಟ್ಟಡ ಇರಲೇ ಇಲ್ಲ ಎಂದರೆ ಇಲ್ಲಿಯವರೆಗೆ ಅದರ ಸುತ್ತಮುತ್ತ ಕಟ್ಟಿಕೊಂಡು ಬಂದ ವರ್ಣ ರಂಜಿತ ಸಂಕಥನಗಳೆಲ್ಲ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆ. ಇದೊಳ್ಳೆ ಇಕ್ಕಟ್ಟು. ಈ ಮೂರೂ ಬಾಗಿಲುಗಳಲ್ಲಿ ಹಲವರ ವಿಡಿಯೋಗಳೂ ಬಂದು ಹೋಗಿವೆ. ಅವು ಎಲ್ಲ ಬಂದು ಸೇರುವುದು ಅಕ್ಕ ನೀಲಮ್ಮನವರ ಒಂದೇ ವಚನಕ್ಕೆ.
“ಚೆನ್ನಬಸವನೆಂಬ ಪ್ರಸಾದಿಯ ಪಡೆದು, ಅನುಭವ ಮಂಟಪವನನುಮಾಡಿ, ಅನುಭವ ಮೂರ್ತಿಯಾದ ನಮ್ಮ ಬಸವಯ್ಯನು"- ಈ ವಚನದ ಸಾಲುಗಳನ್ನೂ ಭಾಗಶಃ ಆಯ್ಕೆ ಮಾಡಿಕೊಳ್ಳುವಲ್ಲಿ ಛದ್ಮವಿದೆ. ಈ ಸಾಲುಗಳ ಹಿಂದೆಯೇ ಇವರು ಮುಚ್ಚಿಡುವ ಇನ್ನೆರಡು ಸಾಲುಗಳಿವೆ. ಅವು “ಪ್ರಣವದ ಬೀಜವ ಬಿತ್ತಿ, ಪಂಚಾಕ್ಷರಿಯ ಬೆಳೆಯ ಬೆಳೆದು, ಪರಮ ಪ್ರಸಾದವನೊಂದು ರೂಪಮಾಡಿ ಮೆರೆದು, ಭಕ್ತಿ-ಲವನುಂಡಾತ ನಮ್ಮ ಬಸವಯ್ಯನು" (ವ.ಸ 830). ಅಕ್ಕ ನಾಗಮ್ಮನವರು, ‘ಓಂ’ಕಾರವೆಂಬ ಬೀಜ ಬಿತ್ತಿ, ‘ನಮಃ ಶಿವಾಯ’ ಎಂಬ ಪಂಚಾಕ್ಷರಿಯ ಬೆಳೆದು, ‘ಭಕ್ತಿ’ ಎಂಬ ಫಲವನುಂಡ ಬಸವಣ್ಣನವರು ಭಕ್ತಿ ಭಂಡಾರಿ ಎಂದು ಹೇಳಿದ್ದಾರೆ.
ಈ ಸಾಲುಗಳನ್ನು ಯಾರೂ ಹೇಳಿಲ್ಲ ಕಾರಣ ಇಲ್ಲಿ ಪ್ರಣವವೆಂಬ ‘ಓಂಕಾರ’ ಮತ್ತು ಪಂಚಾಕ್ಷರಿ ಮಹಾಮಂತ್ರ ‘ನಮಃ ಶಿವಾಯ’ಗಳು ಸನಾತನ. ಮುಗಿಬಿದ್ದ ಮೂರೂ ದಾರಿ ಗಳದು ಒಂದೇ ದೃಷ್ಟಿಕೋನ. ಅದು- “12ನೇ ಶತಮಾನಕ್ಕಿಂತ ಮೊದಲು ಈ ರೀತಿ ವ್ಯವಸ್ಥೆಯೇ ಇರಲಿಲ್ಲ. ಚರ್ಚೆಗಳೇ ನಡೆಯುತ್ತಿರಲಿಲ್ಲ, ವಿವಿಧ ಜಾತಿಯ ಜನರಿಗೆ ಅವಕಾಶವೇ ಇರಲಿಲ್ಲ, ಪ್ರಜಾಪ್ರಭುತ್ವದ ಕಲ್ಪನೆಯೇ ಇರಲಿಲ್ಲ.
12ನೇ ಶತಮಾನದ ಹಿಂದಿನದೆಲ್ಲವನ್ನು ನಿರಾಕರಿಸಬೇಕು" ಎಂಬಂಥದು. ಇದೊಂದು ರೀತಿಯಲ್ಲಿ “ಕ್ರಿ.ಪೂ.4004ರ ಮುಂಚೆ ಏನೂ ಇರಲಿಲ್ಲ, ಸೃಷ್ಟಿಯೇ ಆಗಿರಲಿಲ್ಲ" ಎಂದು ಹೇಳುವ ಪಾಶ್ಚಿಮಾತ್ಯರ ನಕಲು. ಭಗವಾನ್ ಬುದ್ಧನ ಕಾಲದಲ್ಲಿ ಕಪಿಲವಸ್ತು, ಕುಸಿನಾರ ಮುಂತಾದ ಗಣರಾಜ್ಯಗಳ ಉಲ್ಲೇಖವಿದೆ. ಬುದ್ಧನ ಕಾಲದಲ್ಲಿಯೂ ಅನುಭವ ಮಂಟಪ ದಲ್ಲಿ ನಡೆದಿರುವಂಥ ಚರ್ಚೆಗಳು ನಡೆದೇ ಇವೆ. ಇಡೀ ಭಾರತದ ತತ್ವಜ್ಞಾನವೇ ಚರ್ಚೆಗಳ ಮೇಲೆ ನಿಂತಿದೆ.
ಜನಕನ ಆಸ್ಥಾನವೂ, ಸೂತ ಪುರಾಣಿಕ ಮತ್ತು ಶೌನಕಾದಿಗಳ ಸಂವಾದವೂ ಇಲ್ಲಿ ಸೇರು ತ್ತವೆ. ಇನ್ನು ಯಾವ ಯಾವ ಜಾತಿಗೆ ಸೇರಿದ ಋಷಿಗಳಿದ್ದರು ಎಂಬುದನ್ನು ಸ್ವತಃ ಬಸವಣ್ಣ ನವರೇ ಹೇಳಿರುವುದರಿಂದ ಪ್ರಾಚೀನ ಕಾಲದಲ್ಲಿ ಎಲ್ಲರಿಗೂ ಅವಕಾಶ ಇತ್ತು ಎನ್ನುವುದು ನಿರ್ವಿವಾದ. ಕಾಲಕಳೆದಂತೆ ಇದು ಇಲ್ಲವಾಗಿ, 12ನೇ ಶತಮಾನದಲ್ಲಿ ಈ ಅವಕಾಶಗಳಿರ ಲಿಲ್ಲ.
ಅಂದಿನ ಅವಶ್ಯಕತೆಗಳಿಗೆ ತಕ್ಕಂತೆ ಬಸವಣ್ಣನವರು ಸೃಷ್ಟಿಸಿದ ವ್ಯವಸ್ಥೆಯು ಪ್ರಾಚೀನದ ನಕಲು ಅಲ್ಲ ಅಂತ ಇಟ್ಟುಕೊಂಡರೂ, ಈ ಹಿಂದೆ ಕೊಂಚ ಭಿನ್ನವಾಗಿಯಾದರೂ ಇದೇ ರೀತಿ ವ್ಯವಸ್ಥೆಗಳು ಇದ್ದವು ಎನ್ನುವುದನ್ನು ಒಪ್ಪಲು ಪೂರ್ವಗ್ರಹವೇಕೆ? ಪ್ಲೇಟೋನ ಅಕಾಡೆಮಿ ಓಕೆ? ಮ್ಯಾಗ್ನಾಕಾರ್ಟ ಓಕೆ? ಅಕ್ಬರನ ‘ದೀನ್ ಇ ಇಲಾಹಿ’ ಓಕೆ? ಜನಕನ ಆಸ್ಥಾನ ಒಲ್ಲರೇಕೆ? ಜೈನರ ಸಮವಸರಣ ಮಂಟಪವೇಕೆ ಅಲ್ಲ? ಉಪನಿಷತ್ ಕಾಲದ ಗಾರ್ಗಿ, ಯಾಜ್ಞವಲ್ಕ್ಯರ ಸಂವಾದ ಯಾಕೆ ಸಲ್ಲ? ವಚನಗಳು ಮಾತ್ರ ಪ್ರಮಾಣ, ಶಬ್ದಶಃ ಅರ್ಥವೇ ಮುಖ್ಯ ಎಂದು ಹೊರಟರೆ , ‘ಅನುಭವ ಮಂಟಪ’ ಎಂಬ ಶಬ್ದ ಇರುವ ವಚನ ಗಳು ಒಂದು ಅಥವಾ ಎರಡು. ಅದೇನೆ ಇದ್ದರೂ ಅನುಭವ ಮಂಟಪ ಇದ್ದದ್ದು ಸತ್ಯವೇ, ಇದು ಒಪ್ಪಿತ ವಿಷಯ. ಯಾವ ಮೋಹ ಮೈತ್ರಿ ಅದನ್ನು ಹುಡುಕಲು ತಡೆದಿದೆಯೋ ಎಂಬುದು ಸಂಶಯಾಸ್ಪದ.
ಶಿವಶರಣರು ಒಂದೆಡೆ ಸೇರಿದ್ದು ಮತ್ತು ಚರ್ಚೆ ಮಾಡಿದ್ದು ನಿಜವೇ. ಹೀಗೆ ಮಥನದ ನವನೀತವೇ ವಚನಗಳು. ಇವರ‍್ಯಾರೂ ರಸ್ತೆಯಲ್ಲಿ ನಿಂತು ಚರ್ಚೆ ಮಾಡಿರಲಿಕ್ಕೆ ಸಾಧ್ಯ ವಿಲ್ಲ. ಕುಳಿತು ಮಾಡಿದ ಸಂವಾದಗಳು ದಾಖಲಾಗಿವೆ. ಓಲೆಯ ಶಾಂತರಸರ ಕೆಲಸವೇ ದಾಖಲಿಸುವುದಾಗಿತ್ತು. ಹೀಗಾಗಿ ‘ಅನುಭವ ಮಂಟಪ’ವೆಂಬ ಒಂದು ಸ್ಥಾವರ ಕಟ್ಟಡ ಇರಲೇಬೇಕು.
ಭಾರತದ ಪ್ರಾಚೀನ ಪರಂಪರೆಯನ್ನು ಮತ್ತು ಶರಣ ಪರಂಪರೆಯನ್ನು ಒಂದೇ ಸರಪಳಿ ಯಲ್ಲಿ ಹಿಡಿದಿಟ್ಟುಕೊಂಡಿರುವ ಕೊಂಡಿಯೇ ‘ಶಿವ’. ಅದೇ ಶಿವನನ್ನು ಬಸವಣ್ಣನವರು “ಪಶುಪತಿ ಜಗಕ್ಕೆ ಏಕೋದೇವ, ಸ್ವರ್ಗ ಮರ್ತ್ಯ ಪಾತಾಳದೊಳಗೆ, ಒಬ್ಬನೇ ದೇವ ಕೂಡಲಸಂಗಮದೇವ" ಎಂದು ಹೇಳಿದ್ದಾರೆ.
ಅದು ‘ಅನುಭವ ಮಂಟಪ’ ಮಾತ್ರವಲ್ಲ ‘ಶಿವಾನುಭವ ಮಂಟಪ’. ಹೀಗಾಗಿ -.ಗು.ಹಳಕಟ್ಟಿ ಯವರು, ವಿಜಯಪರದ ಶ್ರೀ ಮಲ್ಲಿಕಾರ್ಜುನ ಅಪ್ಪಗಳು, ಧಾರವಾಡ ಮುರುಘಾ ಮಠವೇ ಮೊದಲಾಗಿ, ಅನೇಕ ವಿರಕ್ತ ಮಠಗಳು ಇದೇ ಹೆಸರಿನಿಂದ ಸಂಘ ಸಂಸ್ಥೆ, ಪರೀಕ್ಷೆಗಳನ್ನು ನಡೆಸಿದ್ದು. “ಅನುಭಾವ ಮಂಟಪ ಆಡುಭಾಷೆಯಲ್ಲಿ ಅನುಭವ ಮಂಟಪವಾಗಿರ ಬಹುದು"- ಈ ಮಾತು ಚಂಪಾ ಅವರು ಕಸಾಪ ಅಧ್ಯಕ್ಷರಿದ್ದಾಗ ಬೀದರಿನಲ್ಲಿ ನಡೆದ 73ನೆಯ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ‘ಅನುಭಾವ ಮಂಟಪ ಚಾರಿತ್ರಿಕ ನೆಲೆಗಳು’ ಎಂಬ ಪುಸ್ತಕದಲ್ಲಿದೆ. ಮೂಲ ಶಿವಾನುಭವಮಂಟಪ ಕಲ್ಯಾಣ ದಲ್ಲಿಯೇ ಇರಬೇಕು. ಮುಂದೆ ಶಿವಶರಣರು ಹೋದಲ್ಲ ಅಧ್ಯಾತ್ಮ ವಿಚಾರ ಮಾಡುವ ಜಾಗಗಳಿಗೆ ‘ಅನುಭವ ಮಂಟಪ’ ಎಂಬ ಹೆಸರಿನಿಂದಲೇ ಕರೆದಿರಲಿಕ್ಕೂ ಸಾಕು. ಅದನ್ನು ಅಲ್ಲಿಯೇ ಹುಡುಕಬೇಕಾಗಿದೆ.
ಮೂಲ ಅನುಭವ ಮಂಟಪವೇ ‘ಪೀರ ಷಹಾ ಬಂಗ್ಲಾ ಅಥವಾ ದರ್ಗಾ’ ಆಗಿರಬಹುದು ಅಥವಾ ಅದು ಬೇರೆಡೆಯೂ ಇರಬಹುದು. ವಿಮರ್ಶಾಶೂರರು ಹುಡುಕಲಾಗದೇ ಅದನ್ನು ನೆಲಸಮಗೊಳಿಸಲಾಗಿದೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಕುರುಹುಗಳಾದರೂ ಇರಬೇಕಲ್ಲ. ಹಿತಾಸಕ್ತಿಗೆ ಬೇಕಾದಂತೆ ತಥ್ಯ ತಿರುಚುವುದು ತರವಲ್ಲ. ರೆವೆರೆಂಡರ ಪುಸ್ತಕ ದಲ್ಲಿ ಮುಚ್ಚಿಡದೇ, ಕಲಬುರ್ಗಿ ಛಾಯೆಯ ಸಾಹಿತ್ಯದಾಚೆ, ಪುರಾತತ್ವ ಆಧಾರಗಳಿಂದ ಅನುಭವಮಂಟಪ ಕಟ್ಟಡವನ್ನು ವಿಶ್ವಸನೀಯವಾಗಿ ಸಾಬೀತುಪಡಿಸುವ ಜವಾಬ್ದಾರಿ ಅವರಿಗೆ ಇದೆ ಅಲ್ಲವೇ? ಹಿಂದಿನ ಹರಪ್ಪಾ ಮೊಹೆಂಜೊದಾರೋ, ದ್ವಾರಕಾಗಳೇ ಸಿಕ್ಕಿರು ವಾಗ ಅನುಭವ ಮಂಟಪ ಸಿಗದಿರಲು ಸಾಧ್ಯವೇ ಇಲ್ಲ.
ಸಂದೇಹಗಳನ್ನು ಹಾಗೆ ಇಟ್ಟುಕೊಳ್ಳುವುದರ ಬದಲು ಉತ್ತರ ಕಂಡುಕೊಳ್ಳುವುದು ಒಳಿತ ಲ್ಲವೇ? ಇದನ್ನು ವಚನಾಭಿಮಾನಿಗಳೆಲ್ಲರೂ ಒತ್ತಾಯಿಸಬೇಕು. ಅದನ್ನು ಮತ್ತೆ ಅ ಕಟ್ಟಬೇಕಲ್ಲವೇ? ಅದರ ಬದಲು ಅದು ‘ಅನುಭವ ಮಂಟಪ ಜಂಗಮ’, ‘ಸ್ಥಾವರಕ್ಕಳಿ ವುಂಟು ಜಂಗಮಕ್ಕಳಿವಿಲ್ಲ’ ಎಂದುಬಿಡುವುದು ಉಚಿತವಲ್ಲ ಅಲ್ಲವೇ?
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)