ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Janamejaya Umarji Column: ನೋವನ್ನು ನೆನಪಿಸುವ ಗಾಯದ ಕಲೆಗಳು ಇರಬೇಕು

‘ಛಾವಾ’ ಹೆಸರಿನಿಂದ ಚಿತ್ರ ಬಂದಿದ್ದು, ಜನರು ಮುಗಿಬಿದ್ದು ನೋಡಿದ್ದು, ಬಾಕ್ಸ್ ಆಫೀಸಿನ ಆಚೆಗೆ ಜನಜಾಗೃತಿಯಾಗಿದ್ದು ಹೆಗ್ಗಳಿಕೆಯ ಸಂಗತಿಯೇ. ಚಿತ್ರ ಮುಗಿದ ಮೇಲೆ ಜನರು ಹೇಳು ತ್ತಿದ್ದ, ‘ಅಶ್ವಪತಿ ಗಜಪತಿ ಶ್ರೀಮಂತ ಶ್ರೀಮಂತ’ ಎಂಬ ಪರಾಕು ಮೈಜುಮ್ಮೆನ್ನಿಸುವಂತಿತ್ತು. ಚಿತ್ರದ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ, ಅದರ ವಿಷಯದ ಬಗ್ಗೆ ಆಲೋಚಿಸಬೇಕಾಗಿದೆ. ಶೂರ ಸಂಭಾಜಿ ಛತ್ರಪತಿ ಔರಂಗಜೇಬನಿಂದ ಹೇಗೆ ಬಂಧಿಸಲ್ಪಟ್ಟ? ಮತ ಬದಲಿಸುವುದಿಲ್ಲ ಎಂಬ ವ್ರತವನ್ನು ಪಾಲಿಸಲು ಆತ ಎಷ್ಟೆಲ್ಲಾ ಚಿತ್ರಹಿಂಸೆಗೆ ಒಳಗಾದ? ಎಂಬುದನ್ನು ಜನರು ಮತ್ತೊ ಮ್ಮೆ ನೆನಪು ಮಾಡಿಕೊಂಡಿದ್ದಾರೆ.

ನೋವನ್ನು ನೆನಪಿಸುವ ಗಾಯದ ಕಲೆಗಳು ಇರಬೇಕು

ಅಂಕಣಕಾರ ಜನಮೇಜಯ ಉಮರ್ಜಿ

Profile Ashok Nayak Mar 26, 2025 7:10 AM

ಇತಿಹಾಸ ಪ್ರಜ್ಞೆ

ಜನಮೇಜಯ ಉಮರ್ಜಿ

ಭಾಗವತದಲ್ಲಿ ಬರುವ ಒಂದು ಕಥೆಯಿದು. ಭೂಮಿಯ ಮೇಲೆ ವಸ್ತುಗಳಿಗೆ ಇರುವಂತೆ ಸ್ವರ್ಗವಾಸಿಗಳಿಗೆ ‘ಎಕ್ಸ್‌ಪೈರಿ ಡೇಟ್’ ಇದೆಯಂತೆ. ಸ್ವರ್ಗವಾಸಿಗಳ ಪುಣ್ಯ ಮುಗಿಯು ತ್ತಿದ್ದಂತೆ ಮತ್ತೆ ಭೂಮಿಗೆ ಬರುತ್ತಾರಂತೆ. ಜನಾನುರಾಗಿ, ಪರೋಪಕಾರಿ ರಾಜನೊಬ್ಬ ತನ್ನ ಪುಣ್ಯದ ಫಲದಿಂದ ಸ್ವರ್ಗವನ್ನು ದಕ್ಕಿಸಿಕೊಂಡ. ನೂರಾರು ವರ್ಷ ಅಲ್ಲಿದ್ದು ತನ್ನ ಪುಣ್ಯ ದ ಫಲ ತೀರಿದ ಕೂಡಲೇ ಭೂಮಿಗೆ ಬಂದ. “ಅಯ್ಯೋ, ಜೀವನದ ತುಂಬಾ ನಾನು ಪುಣ್ಯ ವನ್ನೇ ಮಾಡಿದ್ದೆ, ಆದರೂ ಮತ್ತೆ ಭೂಮಿಗೆ ಬರುವಂತಾಯಿತಲ್ಲಾ" ಎಂದು ಆತ ಮಮ್ಮಲ ಮರುಗುತ್ತಾ ಅಲೆದಾಡಿದನಂತೆ. ಶೋಕ ತಪ್ತನಾಗಿದ್ದ ಆತ ಒಬ್ಬ ಸತ್ಪುರುಷರನ್ನು ಸಂಧಿಸಿ, “ಇದಕ್ಕೆ ಕಾರಣವೇನು?" ಎಂದು ಕೇಳಿದಾಗ, “ಎಲ್ಲಿಯವರೆಗೆ ಜನರು ನಾವು ಮಾಡಿದ ಒಳ್ಳೆಯ ಕೆಲಸಗಳನ್ನು ನೆನಪಿಸಿ ಕೊಳ್ಳುತ್ತಾರೋ, ಅದು ಸ್ವರ್ಗದ ಮಾನ್ಯತೆಯ ಅವಧಿ; ಎಲ್ಲಿಯವರೆಗೆ ಜನರು ನಮಗೆ ಹಿಡಿಶಾಪ ಹಾಕುತ್ತಾರೋ ಅದು ನರಕದ ಮಾನ್ಯತೆಯ ಅವಧಿ" ಎಂದರಂತೆ.

ಇದನ್ನೂ ಓದಿ: Janamejaya Umarji Column: ಮೂಲಭೂತ ವಾದವನ್ನು ಖಂಡಿಸಬೇಕಲ್ಲವೇ ?

ಆಗ ರಾಜ, ‘ನಾನು ಜೀವನದಲ್ಲಿ ಹೇರಳವಾಗಿ ಧನ-ಕನಕ, ಪಶು, ವಸ್ತ್ರ ಇತ್ಯಾದಿಗಳನ್ನು ದಾನಮಾಡಿದ್ದೇನೆ; ನೆನಪಿಟ್ಟುಕೊಂಡವರು ಯಾರಾದರೂ ಇದ್ದಾರೆಯೇ?’ ಎಂದು ಹುಡುಕ ತೊಡಗಿದ, ಯಾರೂ ಈತನ ಹೆಸರು ಹೇಳಲಿಲ್ಲ. ಕೊನೆಗೆ ತಾನು ಕಟ್ಟಿಸಿದ ಕೆರೆಯ ಮುಂದೆ ನಿಂತು ಅಳಲು ತೋಡಿಕೊಳ್ಳತೊಡಗಿದ; ಈತ ಅಲ್ಲಿಯೂ ಯಾರಿಗೂ ನೆನಪಿಲ್ಲ. ಆದರೆ ಅಲ್ಲಿರುವ ಆಮೆಯೊಂದು ಮುಂದೆ ಬಂದು ಈ ರಾಜನ ಉಪಕಾರವನ್ನು ನೆನೆಯಿತು.

ಆತ ಮತ್ತೆ ಸ್ವರ್ಗಕ್ಕೆ ನೆಗೆದ. ಲಕ್ಷ್ಮೀಧರ ಅಮಾತ್ಯನಿಗೆ ಕನ್ನಡ ತಾಯಿ ಇದರ ಆಧಾರದಲ್ಲಿ ಯೇ ಜೋಗುಳ ಹಾಡುತ್ತಾ ಬೆಳೆಸಿದ್ದಲ್ಲವೇ- “ಕೆರೆಯನ್ನು ಕಟ್ಟಿಸು, ಬಾವಿಯನ್ನು ತೋಡಿ ಸು, ದೇವಾಲಯಗಳನ್ನು ನಿರ್ಮಿಸು, ಬಂಧನಕ್ಕೆ ಸಿಕ್ಕ ಅನಾಥರನ್ನು ಬಿಡಿಸು, ಸ್ನೇಹಿತರಿಗೆ ಸಹಾಯಕನಾಗು, ನಂಬಿದ್ದವರಿಗೆ ಆಶ್ರಯದಾತನಾಗು, ಸತ್ಪುರುಷರನ್ನು ರಕ್ಷಿಸು" ಅಂತ? ಹೀಗೆ, ಸವಿನೆನಪಿನಲ್ಲಿ ಉಳಿಯುವಂಥ ಕೆಲಸ ಮಾಡಿದ ಅಸಂಖ್ಯ ರಾಜರು ನಮ್ಮಲ್ಲಿದ್ದಾರೆ.

ಕನಸಿನಲ್ಲಿಯೂ ಕಾಣಲೇಬಾರದವರೂ ನೆನಪಿನಲ್ಲಿದ್ದಾರೆ. ರಾಮನನ್ನೂ ರಾವಣನನ್ನೂ ಸಮಾಜ ನೆನಪಿಟ್ಟುಕೊಂಡಿದೆ. ವಿದೇಶಿ ಮೊಘಲರಿಂದ ಲೂಟಿಗೆ, ದಾಳಿಗೆ, ದುರಾಡಳಿತಕ್ಕೆ ಒಳಗಾಗುತ್ತಿದ್ದ ಭಾರತವನ್ನು ರಕ್ಷಿಸಲು ಅದೆಷ್ಟು ವೀರಪುತ್ರರು ಈ ತಾಯಿಯ ಗರ್ಭದಲ್ಲಿ ಜನಿಸಿ ಹೋಗಿದ್ದಾರೆ. ಅಂಥವರ ಪೈಕಿ ಹಿಂದವೀ ಸಾಮ್ರಾಜ್ಯ ಸಂಸ್ಥಾಪಕ ಶಿವಾಜಿಯ ದೊಂದು ಯುಗಾವತಾರ.

ಅದನ್ನು ಕನ್ನಡದಲ್ಲಿ ಹೊ.ವೆ.ಶೇಷಾದ್ರಿಯವರಿಂದಲೇ ಕೇಳಬೇಕು. ಮರಾಠಿಯಲ್ಲಾದರೆ ಶಿವಾಜಿ ಸಾವಂತ್ ಅವರ ಐತಿಹಾಸಿಕ ಕಾದಂಬರಿ ‘ಛಾವಾ’ದಿಂದ. ಔರಂಗಜೇಬ್ ಮಾಡಿದ ದೌರ್ಜನ್ಯಗಳನ್ನು, ಈ ದಬ್ಬಾಳಿಕೆಯ ವಿರುದ್ಧ ಛತ್ರಪತಿಗಳು ಮಾಡಿದ ದಿಟ್ಟ ಹೋರಾಟ ಗಳನ್ನು ಇದು ಸ್ಪಷ್ಟವಾಗಿ ಚಿತ್ರಿಸುತ್ತದೆ. ಮೊಘಲರನ್ನು, ಶಾಹಿಗಳನ್ನು ನಿದ್ರೆಗೆಡಿಸಿದ್ದ ಸಿಂಹ ಛತ್ರಪತಿ ಶಿವಾಜಿ ಮಹಾರಾಜನಾದರೆ, ಆ ಸಿಂಹದ ಮರಿಯೇ ಛತ್ರಪತಿ ಸಂಭಾಜಿ ಮಹಾರಾಜ ಯಾನೆ ‘ಛಾವಾ’.

‘ಛಾವಾ’ ಹೆಸರಿನಿಂದ ಚಿತ್ರ ಬಂದಿದ್ದು, ಜನರು ಮುಗಿ ಬಿದ್ದು ನೋಡಿದ್ದು, ಬಾಕ್ಸ್ ಆಫೀಸಿನ ಆಚೆಗೆ ಜನಜಾಗೃತಿಯಾಗಿದ್ದು ಹೆಗ್ಗಳಿಕೆಯ ಸಂಗತಿಯೇ. ಚಿತ್ರ ಮುಗಿದ ಮೇಲೆ ಜನರು ಹೇಳುತ್ತಿದ್ದ, ‘ಅಶ್ವಪತಿ ಗಜಪತಿ ಶ್ರೀಮಂತ ಶ್ರೀಮಂತ’ ಎಂಬ ಪರಾಕು ಮೈಜುಮ್ಮೆನ್ನಿಸು ವಂತಿತ್ತು. ಚಿತ್ರದ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ, ಅದರ ವಿಷಯದ ಬಗ್ಗೆ ಆಲೋಚಿಸ ಬೇಕಾಗಿದೆ.

ಶೂರ ಸಂಭಾಜಿ ಛತ್ರಪತಿಯ ಕಥೆ ಏನು? ಆತ ಔರಂಗಜೇಬನಿಂದ ಹೇಗೆ ಬಂಧಿಸಲ್ಪಟ್ಟ? ಮತ ಬದಲಿಸುವುದಿಲ್ಲ ಮತ್ತು ವಿದೇಶಿ ಆಕ್ರಮಣಕಾರರಿಗೆ ತಲೆಬಾಗುವುದಿಲ್ಲ ಎಂಬ ಎರಡು ವ್ರತವನ್ನು ಪಾಲಿಸಲು ಆತ ಎಷ್ಟೆಲ್ಲಾ ಚಿತ್ರಹಿಂಸೆಗೆ ಒಳಗಾದ? ರಕ್ತವನ್ನು ಕುದಿ ಕುದಿ ಮಾಡಿ ಬೆವರಿನಂತೆ ಬಸಿದ? ಎಂಬುದನ್ನು ಜನರು ಮತ್ತೊಮ್ಮೆ ನೆನಪು ಮಾಡಿ ಕೊಂಡಿದ್ದಾರೆ.

‘ಛಾವಾ’ದಂಥ ಚಿತ್ರ, ನಾಟಕ, ಪುಸ್ತಕಗಳು ಬೇಕು. ಏಕೆಂದರೆ, ಈ ಕಥೆಗಳು ಶಿಕ್ಷಣ ವ್ಯವಸ್ಥೆ ಯ ಪಾಠಗಳಲ್ಲಿ ಕಂಡುಬರುವುದಿಲ್ಲ. ಔರಂಗಜೇಬ ಎಷ್ಟು ದೇವಾಲಯಗಳನ್ನು ಧ್ವಂಸ ಮಾಡಿದ ಎಂಬುದು ಯಾವ ಪಠ್ಯದಲ್ಲಿದೆ? ಘಸ್ನಿಯಿಂದ ದಾಳಿಗೊಳಗಾದ ಸೋಮನಾಥ ಮಂದಿರದ ಬಾಗಿಲುಗಳನ್ನು ಅಫ್ಘಾನಿಸ್ತಾನದಿಂದ ರಾಜಾ ರಣಜಿತ್‌ಸಿಂಗ್ ತಂದಿದ್ದು 800 ವರ್ಷಗಳ ನಂತರ. ಇದನ್ನು ಎಷ್ಟನೇ ತರಗತಿಯ ಪಠ್ಯದಲ್ಲಿ ನಾವು ಕಲಿತೆವು? ಪರಂಪರೆ ಯಲ್ಲಿ ತಾಯಿಯಿಂದ ಮಗುವಿಗೆ ಜೋಗುಳದಲ್ಲಿ ತಿಳಿಸುತ್ತಿದ್ದ ಸೋಮನಾಥ ಮಂದಿರದ ಕಥೆಯನ್ನು ನಮಗೆ ಯಾವ ಶಾಲೆಯಲ್ಲಿ ಹೇಳಿದರು? ಇಂಥ ಎಷ್ಟೋ ನೈಜ ಐತಿಹಾಸಿಕ ಸಂಗತಿಗಳನ್ನು ಶಾಲೆಯ ಹೊರಗೆ ತಿಳಿಯಬೇಕಾದ ಅನಿವಾರ್ಯತೆ ಯಾಕೆ ಸೃಷ್ಟಿ ಯಾಯಿತು? ಎಂಬೆಲ್ಲ ಸಂಗತಿಗಳ ಕುರಿತು ಚರ್ಚೆಯಾಗಬೇಕಿದೆ.

ಅದಾಗಲೇ ಮಾಸಿಹೋಗಿದ್ದ ಔರಂಗಜೇಬನ ಆಳ್ವಿಕೆಯ ರಕ್ತಸಿಕ್ತ ಮತ್ತು ಕರಾಳ ಅಧ್ಯಾ ಯವು ‘ಛಾವಾ’ದಿಂದಾಗಿ ಮತ್ತೆ ಜನರ ಸ್ಮೃತಿಪಟಲಕ್ಕೆ ಬಂದಿದೆ. ಒಂದು ಸಾತ್ವಿಕ ಆಕ್ರೋಶ ವೂ ಹೊರಬಿದ್ದಿದೆ. ಅದೇ ಸಮಯಕ್ಕೆ ಔರಂಗಜೇಬನನ್ನು ಸಮರ್ಥಿಸಿಕೊಳ್ಳಲು ಒಂದು ಗುಂಪು ಪ್ರಯತ್ನಿಸುತ್ತಿದೆ.

ಆತನನ್ನು ಇತಿಹಾಸವು ತಪ್ಪಾಗಿ ದಾಖಲಿಸಿದೆ, ಆತ ತಪ್ಪು ಕಥನಕ್ಕೆ ಎರವಾದ ಆಡಳಿತ ಗಾರ. “ಆತ ಅನೇಕ ದೇವಸ್ಥಾನಗಳಿಗೆ ದಾನ-ದತ್ತಿಯನ್ನು ಕೊಟ್ಟಿದ್ದ, ರಾಜ್ಯವನ್ನು ಸುಭಿಕ್ಷ ವಾಗಿ ಇಟ್ಟಿದ್ದ. ಜಜಿಯಾ ತೆರಿಗೆ ಹೊರೆಯೇ ಅಲ್ಲ" ಹೀಗೆ ಚಿತ್ರಿಸುತ್ತಾ, ವಿಷಯವನ್ನು ನಾಜೂಕಾಗಿ ಹಿನ್ನೆಲೆಗೆ ಸರಿಸಲು ಬುದ್ಧಿಜೀವಿ ಸೋಗಿನ ಗುಂಪು ಪ್ರಯತ್ನಿಸುವುದು ಗುಟ್ಟಾಗಿ ಉಳಿದಿಲ್ಲ.

‘ಛಾವಾ’ ಚಿತ್ರದಲ್ಲಿ ಅತಿಶಯವಾಗಿ ತೋರಿಸಲಾಗಿದೆ ಎಂಬ ಕೂಗು ಇದೆ. ಇತಿಹಾಸವನ್ನು ಕೆದಕಿದಾಗ ಮೊಘಲರ ಆಡಳಿತವು ಕ್ರೂರಾತಿಶಯವಾಗಿತ್ತು ಎಂಬ ಮಾತೂ ಇದೆ. 1658 ರಿಂದ 1707ರವರೆಗೆ ನಡೆದ ಈತನ ದರ್ಬಾರನ್ನು ‘ಆಳ್ವಿಕೆ’ ಎನ್ನುವುದರ ಬದಲು ‘ದಬ್ಬಾ ಳಿಕೆ’ ಎಂಬುದಾಗಿ ಅನೇಕ ದೇಶಿ ಮತ್ತು ವಿದೇಶಿ ಇತಿಹಾಸಕಾರರು ದಾಖಲಿಸಿದ್ದಾರೆ. ಉಕ್ಕಿನ ಮುಷ್ಟಿಯೊಳಗೆ ಸಾವಿರಾರು ದೇಶವಾಸಿಗಳು ತಮ್ಮ ಧರ್ಮ, ಸಂಸ್ಕೃತಿ, ಮಾನ ಮತ್ತು ಪ್ರಾಣವನ್ನು ಕಳೆದುಕೊಂಡಿರುವುದನ್ನು ಅವರು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

“ಆ ಅವಧಿಯಲ್ಲಿ ಅನೇಕ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಲಾಯಿತು ಮತ್ತು ವಿಗ್ರಹಗಳನ್ನು ಭಗ್ನಗೊಳಿಸಲಾಯಿತು. ಭಾರಿ ತೆರಿಗೆಯ ಕಾರಣದಿಂದಾಗಿ ಜನರು ಬಳಲಿ ಬೆಂಡಾಗಿದ್ದರು. ವಿರೋಧಿಸಿದವರಿಗೆ ನಿರ್ದಾಕ್ಷಿಣ್ಯವಾಗಿ ಮರಣದಂಡನೆಯನ್ನು ವಿಧಿಸಲಾ ಗುತ್ತಿತ್ತು" (‘ಟ್ರಾವೆಲ್ಸ್ ಇನ್ ದಿ ಮುಘಲ್ ಎಂಪೈರ್’ ಪುಸ್ತಕದಲ್ಲಿರುವಂಥದ್ದು) ಎಂಬುದಾಗಿ ಆ ಕಾಲದಲ್ಲಿ ಫ್ರಾನ್ಸ್‌ನಿಂದ ಬಂದಿದ್ದ ಪ್ರವಾಸಿಗ ಫ್ರಾಂಕೋಯಿಸ್ ಬರ್ನಿಯರ್ ದಾಖಲಿಸಿ ದ್ದಾನೆ.

ಇತಿಹಾಸಕಾರ ಜದುನಾಥ್ ಸರ್ಕಾರ್ ಹೇಳುವ ಪ್ರಕಾರ, “ತನ್ನ ಮತ ಹರಡುವ ಏಕೈಕ ಉದ್ದೇಶ ಹೊಂದಿದ್ದ ಔರಂಗಜೇಬನ ಆಡಳಿತದಲ್ಲಿ ಯಾವುದೇ ಜೀವಪರ, ಮಾನವೀಯ ಭಾವನೆ ಇರಲಿಲ್ಲ. ಹೀಗಾಗಿ ದೇವಾಲಯಗಳನ್ನು ಎಗ್ಗಿಲ್ಲದೇ ಧ್ವಂಸಗೊಳಿಸಲಾಯಿತು ಮತ್ತು ಹಿಂದೂಗಳ ಮೇಲಿನ ದೌರ್ಜನ್ಯವನ್ನು ಯಾವುದೇ ಪಶ್ಚಾತ್ತಾಪವಿಲ್ಲದೆ ನಡೆಸ ಲಾಯಿತು".

ಗುರು ಗೋವಿಂದ ಸಿಂಗ್‌ರು ‘ಜಫರನಾಮಾ’ದಲ್ಲಿ ನೇರವಾಗಿ ಹೇಳುತ್ತಾರೆ- “ಔರಂಗಜೇಬ್, ನೀನು ನಂಬಿಕೆಯ ಹೆಸರಿನಲ್ಲಿ ದ್ರೋಹ ಮಾಡಿರುವೆ ಮತ್ತು ಅನೇಕ ಹತ್ಯೆ ನಡೆಸಿರುವೆ. ನಿನ್ನನ್ನು ನೀನು ರಾಜ ಎಂದು ಕರೆದುಕೊಳ್ಳುತ್ತೀ, ಆದರೆ ಆ ಸ್ಥಾನದಲ್ಲಿ ನ್ಯಾಯ ದೊರೆ ಯುವ ಭರವಸೆಯಿಲ್ಲ". ಇಂಗ್ಲಿಷ್ ಪ್ರವಾಸಿಗ ಹ್ಯಾಮಿಲ್ಟನ್ ‘ಎ ನ್ಯೂ ಅಕೌಂಟ್ ಆಫ್ ದಿ ಈಸ್ಟ್ ಇಂಡೀಸ್’ ಎಂಬ ಪುಸ್ತಕದಲ್ಲಿ‌ “ಔರಂಗಜೇಬ್ ಹಿಂದೂಸ್ತಾನವನ್ನು ದಬ್ಬಾಳಿಕೆಯ ಭೂಮಿಯಾಗಿ ಪರಿವರ್ತಿಸಿದನು; ಅವನ ಧಾರ್ಮಿಕ ದಬ್ಬಾಳಿಕೆಯು ಎಲ್ಲಾ ಮಿತಿಗಳನ್ನೂ ಮೀರಿದೆ" ಎಂದು ಹೇಳಿದ್ದಾನೆ.

ಸ್ವತಃ ಮೊಘಲ್ ಇತಿಹಾಸಕಾರ ಖಫೀ ಖಾನ್ ತನ್ನ ‘ಮುಂತಖಬ್ -ಉಲ್-ಲುಬಾಬ್’ನಲ್ಲಿ “ಔರಂಗಜೇಬ ಬಾದಶಹನು ತನ್ನ ಸಾಮ್ರಾಜ್ಯದ ಎಲ್ಲಾ ದೇವಾಲಯಗಳನ್ನು ಕೆಡವಿ ಹಾಕು ವಂತೆ ಆದೇಶಿಸಿದನು. ಕಾಶಿ ವಿಶ್ವನಾಥ ಮತ್ತು ಮಥುರಾ ದೇವಾಲಯಗಳ ಧ್ವಂಸವು ಆತನ ನಂಬಿಕೆಗೆ ಮತ್ತು ಅದಕ್ಕೆಅಚಲವಾಗಿ ಬದ್ಧವಾಗಿರುವುದರ ಸಂಕೇತವಾಗಿದೆ" ಎಂದು ಹೇಳು ತ್ತಾನೆ.

ಇಷ್ಟೆಲ್ಲಾ ತಥ್ಯಗಳಿದ್ದರೂ, ಆತನ ಕ್ರೌರ್ಯದ ಬಗ್ಗೆ ಅಗಾಧವಾದ ಐತಿಹಾಸಿಕ ಪುರಾವೆಗಳು ಇರುವುದರ ಹೊರತಾಗಿಯೂ, ಕೆಲ ಉದಾರವಾದಿಗಳು, ಆಯ್ದ ಜಾತ್ಯತೀತವಾದಿಗಳು, ಸ್ವಯಂಘೋಷಿತ ಬುದ್ಧಿಜೀವಿಗಳು, “ಆತನ ಕ್ರಿಯೆ ಕೇವಲ ರಾಜಕೀಯ ಪ್ರೇರಿತ. ಧಾರ್ಮಿಕ ಅಸಹಿಷ್ಣುತೆಗೂ ಅದಕ್ಕೂ ಸಂಬಂಧವಿಲ್ಲ. ಆತ ಹೇರಿದ ಕಾನೂನು ಭಾರತದ ಸಾಂಸ್ಕೃತಿಕ ಪರಂಪರೆಯ ಮೇಲೆ ನಡೆದ ವ್ಯವಸ್ಥಿತ ದಾಳಿಯಲ್ಲ, ಬದಲಾಗಿ ಅದೊಂದು ಆಡಳಿತದ ಕಾರ್ಯತಂತ್ರ" ಎಂದು ವಾದಿಸುತ್ತಾರೆ.

ಲೇಖನದ ಶುರುವಿನಲ್ಲಿ ಹೇಳಿದಂತೆ ಪುಣ್ಯಕಾರ್ಯಕ್ಕಾಗಿ ಪ್ರಾತಃಸ್ಮರಣೀಯರು ಹಲವ ರಿದ್ದರೂ, ಈ ‘ಔರಂಗಜೇಬ ಪ್ರಜ್ಞೆ’ಯ ಜನರಿಗೇನೂ ಕೊರತೆಯಿಲ್ಲ. ಆತನ ಸಮಾಧಿ ತುಂಬಾ ಚಿಕ್ಕದಿದೆ ಎಂದು ಮರುಗಿದ ಕೆಲವು ಮನಸ್ಥಿತಿಗಳು ಈ ಪ್ರಜ್ಞೆಯ ಒಂದು ಉದಾ ಹರಣೆ. ಹಾಗೇ ಸುಪ್ತವಾಗಿದ್ದು ಅವಶ್ಯಕತೆ ಬಂದಾಗ ಧುತ್ತನೆ ಏಳುವ ಈ ಪ್ರಜ್ಞೆಯ ಬಗ್ಗೆ ನೈತಿಕ ಮತ್ತು ಸಾಂವಿಧಾನಿಕ ಚೌಕಟ್ಟಿನಲ್ಲಿ ಚರ್ಚೆ ಆಗಬೇಕಿದೆ.

ಶಿವಾಜಿ, ಸಂಭಾಜಿ, ಔರಂಗಜೇಬರು ಇದ್ದುದು ಐತಿಹಾಸಿಕ ಸತ್ಯವೇ, ಇದನ್ನು ಯಥಾರ್ಥ ವಾಗಿ ಒಪ್ಪಿಕೊಳ್ಳಲೇ ಬೇಕಾಗಿದೆ. ಆ ಸ್ಮಾರಕಗಳನ್ನು ಇಲ್ಲವಾಗಿಸುವ ಹಮ್ಮೀರತನಕ್ಕೆ ಯಾವ ಅರ್ಥಗಳೂ ಇಲ್ಲ. ಅಸ್ಮಿತೆಯನ್ನು ಸಂರಕ್ಷಿಸಲು ಅಂಥ ಸ್ಥಾವರಗಳು ಇರಬೇಕು. ನೋವನ್ನು ನೆನಪಿಸುವ ಗಾಯದ ಕಲೆಗಳೂ ಅತ್ಯವಶ್ಯ.

ಮೊಘಲರ ಆಡಳಿತ ಕೊನೆಗೊಂಡರೂ, ಬ್ರಿಟಿಷರು ದೇಶ ಬಿಟ್ಟು ಹೋದರೂ, ತಮ್ಮ ಪರವಾದ ಕಥನ ಕಟ್ಟುವವರನ್ನು ಇಟ್ಟು ಹೋಗಿದ್ದಾರೆ. ನೈಜ ಇತಿಹಾಸವನ್ನು ಹೇಳಬೇಕಾ ದವರೇ ಸ್ವಾತಂತ್ರ್ಯಾನಂತರವೂ ಇತಿಹಾಸವನ್ನು ತಿರುಚಿದ್ದಾರೆ. ಇಷ್ಟಾಗಿಯೂ ಸತ್ಯ ಉಳಿ ದಿದೆ ಎಂದರೆ, ನಮ್ಮ ತಾಯಂದಿರ ಮೌಖಿಕ ಪರಂಪರೆಯಂಥ, ಅಕಾಡೆಮಿಕ್ ವಲಯದ ಆಚೆಯ ಪ್ರಯತ್ನವೇ ಅದಕ್ಕೆ ಕಾರಣ. ‘ಛಾವಾ’, ‘ಕಾಶ್ಮೀರಿ ಫೈಲ್ಸ್’, ‘ಕೇರಳ ಸ್ಟೋರಿ’ ಮುಂತಾದ ಚಿತ್ರಗಳು, ಇದೇ ಜಾಡಿನ ಹಲವು ಪುಸ್ತಕಗಳು ಯಶಸ್ವಿಯಾಗಲು ಕಾರಣ ವೆಂದರೆ, ಇತಿಹಾಸ ಹೇಳದಿರುವ ನಿಜವನ್ನು ಇವು ಹೇಳಿರುವುದು.

‘ಇತಿಹಾಸದಲ್ಲಿ ಬೇಡ, ಇತಿಹಾಸದೊಂದಿಗೆ ಬದುಕಿ’ ಎಂದು ಸಲಹೆ ಕೊಡುವವರು ಇದ್ದೇ ಇದ್ದಾರೆ. ಆದರೂ ಸತ್ಯಶೋಧನೆಯನ್ನು ನಿಲ್ಲಿಸಬಾರದಲ್ಲವೇ?

(ಲೇಖಕರು ಪ್ರಚಲಿತ ವಿದ್ಯಮಾನ ವಿಶ್ಲೇಷಕರು)