Janamejaya Umarji Column: ಮೂಲಭೂತ ವಾದವನ್ನು ಖಂಡಿಸಬೇಕಲ್ಲವೇ ?
ಮೂಲಭೂತವಾದ ಎಂದರೆ, ಕೆಲವು ವ್ಯಕ್ತಿಗಳು ಅಥವಾ ಗುಂಪು, ಮುಖ್ಯವಾಹಿನಿಯ ರೂಢಿ ಗಳನ್ನು ತಿರಸ್ಕರಿಸುವ ತೀವ್ರ ರಾಜಕೀಯ, ಧಾರ್ಮಿಕ ಅಥವಾ ಸೈದ್ಧಾಂತಿಕ ನಂಬಿಕೆ ಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆ. ಪರಿವರ್ತನೆಯನ್ನು ಒಪ್ಪಿಕೊಳ್ಳದಿರುವುದೇ ಮೂಲ ಭೂತ ವಾದ. ಇದು ಭಾರತದ್ದಲ್ಲ. ಸನಾತನವೆಂದರೆ, ನಿತ್ಯನೂತನ, ಸುಧಾರಣೆಗೆ ತೆರೆದುಕೊಂಡಿರು ವಂಥದ್ದು


ಯಕ್ಷ ಪ್ರಶ್ನೆ
ಜನಮೇಜಯ ಉಮರ್ಜಿ
ಮಹಾಪುರುಷರಿಗೆ ಅಪಚಾರ ಆಗುವುದಾದರೆ, ಅದು ಅವರ ಮಿಥ್ಯಾನುಯಾಯಿಗಳಿಂದ ಮಾತ್ರ ಎಂಬ ಮಾತಿದೆ. ಇಂಥ ಅನೇಕ ಸ್ವಘೋಷಿತ ಅನುಯಾಯಿಗಳನ್ನು ನೋಡಿದಾಗ, ಈ ಮಾತು ಸತ್ಯವೆನಿಸುತ್ತದೆ. ಇದು ಒಬ್ಬ ಮಹಾಪುರುಷರ ಮಾತಲ್ಲ, ಎಲ್ಲ ಮಹಾಪುರು ಷರ ಪರಿಸ್ಥಿತಿಯೂ ಇದೇ ಆಗಿದೆ. ಸತ್ಪುರುಷರದು ಸದಾ ಅನ್ವೇಷಣೆಯ ಪಥ, ನಿಷ್ಕ ರ್ಷೆಯ ಚಾಕ್ಷುಷನೋಟ. ಆದರೆ ಅವರ ಬೋಧನೆಗಳ ಭಾವವು ಮಿಥ್ಯಾವಾದಿಗಳ, ‘ಇಸಂ’ ಕೋರರ ಅಪವ್ಯಾಖ್ಯಾನಗಳಿಂದ ಮಸುಕಾಗುತ್ತಿದೆ. ತಮ್ಮದು ಮಾತ್ರ ಸತ್ಯ, ತಾವು ಮಾತ್ರ ಅವರ ಬಗ್ಗೆ ಮಾತನಾಡಲು ಹಕ್ಕುದಾರರು ಎನ್ನುತ್ತಾ ಮಹಾಪುರುಷರನ್ನು ಸೀಮಿತ ಗೊಳಿಸುವ ಕೆಲಸ ನಡೆಯುತ್ತಿದೆ.
ಕೇವಲ ದಬ್ಬಾಳಿಕೆ ಮತ್ತು ವರ್ಗಸಂಘರ್ಷದ ಕಣ್ಣಿನ ಮೂಲಕ ಆಧ್ಯಾತ್ಮಿಕ ಪರಂಪರೆ ಯನ್ನು ಮರುವ್ಯಾಖ್ಯಾನಿಸಿದಾಗ, ಬಸವಣ್ಣ ಮತ್ತು ಅಕ್ಕಮಹಾದೇವಿಯವರಂಥ ಹಾಚೇ ತನಗಳ ಆಳವಾದ ತಾತ್ವಿಕ ವಿಚಾರಗಳು ಕೇವಲ ಮೇಲ್ಪದರದ ಹೋರಾಟದ ವಸ್ತುಗಳಾಗಿ ಬಿಡುವ ಅಪಾಯವಿದೆ.
ಇದನ್ನೂ ಓದಿ: Janamejaya Umarji Column: ಒಟಿಟಿ ಬೆಕ್ಕಿಗೆ ಗಂಟೆ ಕಟ್ಟಬೇಕಾಗಿದೆಯೇ ?
ಮೂಲಭೂತವಾದ ಎಂದರೆ, ಕೆಲವು ವ್ಯಕ್ತಿಗಳು ಅಥವಾ ಗುಂಪು, ಮುಖ್ಯವಾಹಿನಿಯ ರೂಢಿಗಳನ್ನು ತಿರಸ್ಕರಿಸುವ ತೀವ್ರ ರಾಜಕೀಯ, ಧಾರ್ಮಿಕ ಅಥವಾ ಸೈದ್ಧಾಂತಿಕ ನಂಬಿಕೆ ಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆ. ಪರಿವರ್ತನೆಯನ್ನು ಒಪ್ಪಿಕೊಳ್ಳದಿರುವುದೇ ಮೂಲಭೂತವಾದ. ಇದು ಭಾರತದ್ದಲ್ಲ. ಸನಾತನವೆಂದರೆ, ನಿತ್ಯನೂತನ, ಸುಧಾರಣೆಗೆ ತೆರೆದುಕೊಂಡಿರುವಂಥದ್ದು. ನಮ್ಮದು ಸಮನ್ವಯದ ದಾರಿ, ಸಾಮರಸ್ಯದ ದಾರಿ. ನಾವು ಹೇಳಿದ ವ್ಯಾಖ್ಯಾನ ಮಾತ್ರವೇ ಸರಿ, ನಮಗೆ ಒಪ್ಪದ ವಚನಗಳು ಪ್ರಕ್ಷಿಪ್ತ ಎನ್ನುವ ಮೂಲಭೂತ ವಾದವನ್ನು ಟೀಕಿಸಿದ ಪರಮ ಪೂಜ್ಯ ಕನ್ಹೇರಿ ಸ್ವಾಮಿಗಳು ಇಂದು, ಆಯಕಟ್ಟಿನ ಸ್ಥಾನಗಳಲ್ಲಿರುವ ಬೆರಳೆಣಿಕೆಯ ಕೆಲವರಿಂದ ವಿರೋಧ ಎದುರಿಸುತ್ತಿದ್ದಾರೆ.
ಟೀಕೆಗೆ ಯಾರೂ ಹೊರತಾಗಿಲ್ಲ ಎಂಬುದು ಸತ್ಯವಾದರೂ, ಸದ್ವಿನಯದ ವಾರಸುದಾರ ರಾಗಿರಬೇಕಾದವರು ತೋರುತ್ತಿರುವ ಅಸಹಿಷ್ಣುತೆ ಮಾತ್ರ ಅವೈಜ್ಞಾನಿಕ, ಅಸಾಂಸ್ಕೃತಿಕ ವಾಗಿದೆ. ಇದು ದುರದೃಷ್ಟಕರ. ವಿದೇಶಿ ಮತಗಳಿಂದ ಆಮದು ಮಾಡಿಕೊಂಡ ಮೂಲ ಭೂತ ವಾದವಿಂದು, ಜಗದಗಲ ಮುಗಿಲಗಲ ಮಿಗೆಯಗಲ ವ್ಯಾಪ್ತಿ-ವಿಸ್ತಾರ ಹೊಂದಿದ ಉದಾತ್ತ ವಿಚಾರಗಳನ್ನು ಸಂಕುಚಿತಗೊಳಿಸುವ, ಆಪೋಷಣ ತೆಗೆದು ಕೊಳ್ಳುವ ಕೆಲಸ ಮಾಡುತ್ತಿದೆ. ಒಡಕು ಮೂಡಿಸುವ ‘ಮಾರ್ಕ್ಸ್‌ವಾದಿ’ ಮುಖವಾಡಗಳಿಂದಾಗಿ ಈ ಸಮಸ್ಯೆ ಉಲ್ಬಣಗೊಂಡಿದೆ.
ಆಳವಾದ ಆಧ್ಯಾತ್ಮಿಕ ಒಳನೋಟಕ್ಕೆ, ಪ್ರಾಮಾಣಿಕತೆಗೆ, ನೇರವಂತಿಕೆಗೆ, ನಿಷ್ಠುರತನಕ್ಕೆ ಹೆಸರಾದ ಕನ್ಹೇರಿ ಶ್ರೀಗಳು, ಮೂಲಭೂತ ವಾದಿಗಳು ಮತ್ತು ಧರ್ಮವಿಭಜಕ ಮನಸ್ಥಿತಿ ಗಳು ಹೊತ್ತು ತರುವ ಅಪಾಯಗಳ ಕುರಿತು ಸಮಾಜವನ್ನು ಎಚ್ಚರಿಸಿದ್ದಾರೆ. ಆದಾಗ್ಯೂ, ಅವರ ವಾದಗಳನ್ನು ತರ್ಕಬದ್ಧವಾಗಿ ಎದುರಿಸುವ ಬದಲು, ಸಮಾಜದ ಒಂದು ಗುಂಪು ಅವರ ವಿರುದ್ಧ ಅಪಪ್ರಚಾರದ, ಆಕ್ರಮಣಕಾರಿಯಾಗಿರುವ ಅಭಿಯಾನವನ್ನು ಪ್ರಾರಂಭಿ ಸಿದೆ, ಅದರ ಮೂಲಕ ಮೈಲೇಜು ಪಡೆಯಲು ಪ್ರಯತ್ನಿಸುತ್ತಿದೆ. ಈ ಟೀಕೆಯ ಮಾದರಿ ಹೊಸದೇನಲ್ಲ; ಇದು ಈ ಹಿಂದೆ ಅನೇಕರ ಮೇಲೆ ಪ್ರಯೋಗಿಸಿದ ಸಿದ್ಧಮಾದರಿಯೇ ಆಗಿದೆ. ಇಂಥ ಮೂಲಭೂತ ವಾದವನ್ನು ‘ಧೈರ್ಯವಾಗಿ ಪ್ರಶ್ನಿಸುವುದು’ ಅಪರಾಧವೇ?
ಕನ್ಹೇರಿ ಸ್ವಾಮಿಗಳಾದರೋ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ, ರೈತರನ್ನು ಲಕ್ಷಾಧಿಪತಿ ಗಳನ್ನಾಗಿಸಿದ್ದಾರೆ. ಭಾರತೀಯ ಜ್ಞಾನ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡು ತ್ತಿದ್ದಾರೆ. ಕಾಡಸಿದ್ಧೇಶ್ವರ ಕೃಷಿ ಪರಂಪರೆಯನ್ನು, ಕಾಯಕ ಪರಂಪರೆಯನ್ನು ಉಸಿರಾಗಿಸಿ ಕೊಂಡಿದ್ದಾರೆ.
ಬಸವಣ್ಣನವರ ತತ್ವದ ಆಶಯಗಳಾದ ಭಕ್ತಿ, ಕಾಯಕ, ದಾಸೋಹಗಳನ್ನು ಕಾಯಾ-ವಾಚಾ-ಮನಸಾ ಪಾಲಿಸಿದ್ದಾರೆ. ಶುಷ್ಕ ವೈಚಾರಿಕತೆಯಿಂದ ಕಲ್ಯಾಣವಲ್ಲ, ವ್ಯಕ್ತಿಯ ಸಮಗ್ರ ಅಭಿವೃದ್ಧಿ, ಸಮೃದ್ಧಿಯೇ ಕಲ್ಯಾಣ ಎಂದರಿತು, ಆಧ್ಯಾತ್ಮಿಕ, ಆರ್ಥಿಕ, ದೇಶಭಕ್ತಿಯ ಕೂಡಲಸಂಗಮವನ್ನು ಮನೆಮನೆಯಲ್ಲಿ ಮೂಡಿಸಿದ್ದಾರೆ. ಇಂಥವರನ್ನು ಟೀಕಿಸುವವರು ತಮ್ಮ ಸಾಧನೆಯೇನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತಲ್ಲವೇ? ಅಷ್ಟಕ್ಕೂ, ಟೀಕೆಗೆ ಹಳಸಲು ಸರಕು ಒದಗಿಸಿ ಆಡಿಸುವವರಿಗೂ, ಶಿವಭಕ್ತಿಗೂ ಸಂಬಂಧವೇ ಇಲ್ಲ.
ನಮ್ಮ ಬಲವಾದ ಸಾಂಸ್ಕೃತಿಕ ಏಕತೆಯನ್ನು ಮುರಿಯುವುದು ಮತ್ತು ಅವುಗಳನ್ನು ‘ವರ್ಗ-ಸಂಘರ್ಷ’ ಆಧರಿತ ‘ಜಾಗತಿಕ’ ದೃಷ್ಟಿಕೋನಕ್ಕೆ ಬದಲಾಯಿಸುವುದೇ ಈ ಆಟಗಾರರ ಗುರಿ ಇದ್ದಂತಿದೆ.
ಈ ವಿರೋಧವು ‘ಸೆಲೆಕ್ಟಿವ್’ ಜಾಡು ಹಿಡಿದಿದೆ ಮತ್ತು ಪೂರ್ವಗ್ರಹಪೀಡಿತವಾಗಿದೆ ಎಂಬು ದಕ್ಕೆ ಹಲವು ನಿದರ್ಶನಗಳಿವೆ. ಬಸವಣ್ಣನವರ ಮೇಲೆ ಪುರುಷ ಅಹಂಕಾರದ ಆರೋಪ ಹೊರಿಸಿದ್ದ ‘ಪ್ರಗತಿಪರ ಸಾಕ್ಷಿಪ್ರಜ್ಞೆ’ಯ ಒಬ್ಬರನ್ನು ಉದಾಸೀನ ಮಾಡಿ ವ್ಯವಸ್ಥಿತವಾಗಿ ಟೀಕೆಗಳಿಂದ ರಕ್ಷಿಸಲಾಯಿತು.
ಆಹಾರವು ಅವರವರ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಹಕ್ಕು ಕೂಡಾ. ಶರಣತತ್ವವನ್ನು ಉಸಿರಾಡಿಕೊಂಡವರೊಬ್ಬರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಸುಯೋಗ ಬಂದಾ ಗಲೇ, ‘ಬಾಡೂಟವನ್ನು ಸಮ್ಮೇಳನವೇ ಪ್ರಾಯೋಜಿಸಬೇಕು’ ಎಂಬ ಕೂಗೆದ್ದಿತು. ‘ದಯ ಬೇಕು ಸಕಲ ಪ್ರಾಣಿಗಳಲ್ಲಿ’ ಎಂದು ಸಾರಿ, ಶುದ್ಧ ಸಸ್ಯಾಹಾರ ಪ್ರಸಾದವನ್ನು ಬಸವಣ್ಣ ನವರು ಪ್ರತಿಪಾದಿಸಿದ್ದರು ಕೂಡ,
ಈ ಯಾವೊಬ್ಬ ನಿಜಾಚರಣೆದಾರನೂ ಬಾಡೂಟದ ಬಗ್ಗೆ ಚಕಾರ ಎತ್ತಲಿಲ್ಲ. ಭಕ್ತಿ ಭಂಡಾರಿ, ಜಗಜ್ಯೋತಿ ಬಸವಣ್ಣನವರು ನೀಡಿದ್ದು ಉದಾತ್ತವಾದ ಭಕ್ತಿ ಪರಂಪರೆ. ಜಾತಿ, ಲಿಂಗ, ವರ್ಗ, ವರ್ಣಭೇದಗಳಿಲ್ಲದೇ ಎಲ್ಲರಿಗೂ ಶಿವಾನುಭವದ ಬಾಗಿಲು ತೆರೆದಿದೆ. ಇದು ಸಾಮರಸ್ಯ, ಭಕ್ತಿ ಮತ್ತು ಜ್ಞಾನಕ್ಕೆ ಒತ್ತು ನೀಡುವ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸುಧಾ ರಣಾ ಪ್ರವಾಹ.
ಆದರೆ ಮಾರ್ಕ್ಸ್‌ವಾದಿ ಮುಖವಾಡ ಹೊತ್ತ ಕೆಲವರು ಒಂದಷ್ಟು ಸಾಂದರ್ಭಿಕ ಸಾಲು ಗಳನ್ನು ಹಿಡಿದುಕೊಂಡು ವಿಭಜನೆಯನ್ನು ಉತ್ತೇಜಿಸುವ ಮೂಲಕ ಈ ನಿರೂಪಣೆಯನ್ನು ಹೈಜಾಕ್ ಮಾಡಲು ಯತ್ನಿಸುತ್ತಿದ್ದಾರೆ. ಈ ಅರ್ಜಿದಾರರ ಸಣ್ಣ ಗುಂಪು, ಸೈದ್ಧಾಂತಿಕ ಸಾಮರಸ್ಯದ ಹಿಂದೂ ಸಮಾಜದ ಏಕತೆಗೆ ಸವಾಲು ಹಾಕಲು ಪ್ರಯತ್ನಿಸುತ್ತಿದೆ.
ಕುಂಭಮೇಳಕ್ಕೆ ಹೋಗುವ ಸ್ವಾಮಿಗಳನ್ನು ವಿರೋಧಿಸುವ ನಿಲುವು ತೆಗೆದುಕೊಂಡಿದ್ದೂ ಇದೇ ಗುಂಪು. ತಿರುಚಿದ ಇತಿಹಾಸ ಮತ್ತು ಅಸಮಾಧಾನ-ಪ್ರೇರಿತ ಕಥನಗಳ ಮೂಲಕ ಇದು ಹಿಂದೂ ಸಮಾಜದಲ್ಲಿ ಕಂದಕವನ್ನು ಸೃಷ್ಟಿಸುತ್ತಿದೆ, ಸಾಮಾಜಿಕ ಸಾಮರಸ್ಯಕ್ಕೆ ಪೆಟ್ಟು ನೀಡುತ್ತಿದೆ.
ತಮಗಾಗದವರಿಗೆ ‘ಸನಾತನಿ’ ಎಂಬ ಹಣೆಪಟ್ಟಿ ಕಟ್ಟುವುದು ಇವರ ‘ಚಿಂತನ ಚಿಲುಮೆ’ಗಳು ನೀಡಿದ ಸಿದ್ಧಮಾದರಿಯ ಭಾಗ. ವಿಚಿತ್ರವೆಂದರೆ, ವಚನಗಳಲ್ಲಿ ವೇದ-ಉಪನಿಷತ್ತುಗಳಿಂದ ನೇರವಾಗಿ ಎತ್ತಿ ಇಟ್ಟ 800ಕ್ಕೂ ಹೆಚ್ಚು ಸಾಲುಗಳಿವೆ, ಸಾವಿರಾರು ಸಂಸ್ಕೃತೋಕ್ತಿಗಳಿವೆ. ಉರಿಲಿಂಗ ಪೆದ್ದಿಗಳ ವಚನಗಳಂತೂ ಇಂಥವುಗಳಿಗೆ ಕಲಶಪ್ರಾಯ.
ಭಾರತದ ಪ್ರತಿ ವ್ಯಕ್ತಿಗೆ, ಮತಗಳಿಗೆ, ಮಠಗಳಿಗೆ ಸನಾತನ ಬೇರುಗಳು ಇದ್ದೇ ಇವೆ ಎಂಬು ದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ನಿಜವಾದ ತತ್ವಸಾರವನ್ನು ಕಾಪಾಡಿಕೊಳ್ಳಲು ಮತ್ತು ವಿಶಾಲವಾದ ಭಾರತೀಯ ಭಕ್ತಿ ಪರಂಪರೆಯೊಂದಿಗೆ ಗುರುತಿಸಿಕೊಳ್ಳಲು ಇಂಥ ಟೀಕೆಗಳನ್ನು ಎದುರಿಸುವುದು ಅನಿವಾರ್ಯವಾಗಿದೆ.
ಒಂದಿಷ್ಟು ಪ್ರತಿಭಟನೆಗಳಿಗೆ ಹೆದರಿ ಸತ್ಯ ಹೇಳುವವರ ಧ್ವನಿಗಳು ಉಡುಗಿದಾಗ, ಲಾಭ ದಕ್ಕುವುದು ವಿಭಜಕ ಶಕ್ತಿಗಳಿಗೆ ತಾನೇ? ಯಾವುದೇ ರೀತಿಯ ತೀವ್ರಗಾಮಿತನವನ್ನು ವಿರೋಧಿಸುವುದು ಎಲ್ಲರ ಕಾಳಜಿಯಾಗಿರಬೇಕು. ಇಂಥ ವಿರೋಧ ಎದುರಿಸಿದವರಲ್ಲಿ ಕನ್ಹೇರಿ ಶ್ರೀಗಳು ಮೊದಲನೆಯವರೂ ಅಲ್ಲ, ಕೊನೆಯವರೂ ಅಲ್ಲ.
ಇದು ಸಮಯಕ್ಕೆ ಸಿಕ್ಕ ಅವಕಾಶ. ವಿವಾದದ ಎಳೆಗಾಗಿ ಕಾಯುವ, ಅದರಿಂದ ಲಾಭ ಮಾಡಿಕೊಳ್ಳುವ ಒಂದು ಗುಂಪು ತುಂಬಾ ವ್ಯವಸ್ಥಿತವಾಗಿ ಈ ಕೆಲಸ ಮಾಡುತ್ತದೆ. ಇಲ್ಲಿ ಸತರ್ಕದ ಧ್ವನಿಗಳನ್ನು ನಿಗ್ರಹಿಸಲು ಶತಪ್ರಯತ್ನ ಮಾಡಲಾಗುತ್ತದೆ. ‘ಸೆಲೆಕ್ಟಿವ್’ ಆಕ್ರೋ ಶದ ವೆಚ್ಚವನ್ನು ಪುನರ್‌ವಿಮರ್ಶಿಸುವ ಮತ್ತು ತೀವ್ರಗಾಮಿತ್ವದ ವಿರುದ್ಧ ನಿಲ್ಲುವವರನ್ನು ಮೌನಗೊಳಿಸುವ ಅಪಾಯಗಳನ್ನು ಅರಿಯಲು ಇದು ಸುಸಮಯ ಎನಿಸುತ್ತಿದೆ.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)