Stock Market: ನಿಫ್ಟಿ 24,900ಕ್ಕೆ ಇಳಿಕೆ; ಪಿಎಸ್‌ಯು ಬ್ಯಾಂಕ್, ಡಿಫೆನ್ಸ್ ಷೇರು ಏರಿಕೆ
Share Market: ಇರಾನ್ ವಿರುದ್ಧ ಇಸ್ರೇಲ್ ಸಮರ 5ನೇ ದಿನಕ್ಕೆ ಕಾಲಿಟ್ಟಿದೆ. ಅನಿಶ್ಚಿತತೆ ಜಾಗತಿಕ ಷೇರು ಮಾರುಕಟ್ಟೆಯ ಮೇಲೆ ಒತ್ತಡ ಸೃಷ್ಟಿಸಿದೆ. ಮಂಗಳವಾರ ಬೆಳಗ್ಗೆ ಸೆನ್ಸೆಕ್ಸ್ 200 ಅಂಕ ಇಳಿಯಿತು. ನಿಫ್ಟಿ 24,900ಕ್ಕೆ ಇಳಿಯಿತು. ಎಫ್‌ಎಂಸಿಜಿ ವಲಯದ ಷೇರುಗಳು ಇಳಿಯಿತು. ಮಧ್ಯಾಹ್ನ 2.20ರ ವೇಳೆಗೆ ಸೆನ್ಸೆಕ್ಸ್ 237 ಅಂಕ ನಷ್ಟದಲ್ಲಿ 81,558ರಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ 84 ಅಂಕ ನಷ್ಟದಲ್ಲಿ 24,862ರಲ್ಲಿ ವಹಿವಾಟು ನಡೆಸಿತು.

ಸಾಂದರ್ಭಿಕ ಚಿತ್ರ.

ಕೇಶವ ಪ್ರಸಾದ್ ಬಿ.
ಇರಾನ್ ವಿರುದ್ಧ ಇಸ್ರೇಲ್ ಸಮರ 5ನೇ ದಿನಕ್ಕೆ ಕಾಲಿಟ್ಟಿದೆ. ಅನಿಶ್ಚಿತತೆ ಜಾಗತಿಕ ಷೇರು ಮಾರುಕಟ್ಟೆಯ ಮೇಲೆ ಒತ್ತಡ ಸೃಷ್ಟಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ರಾಜಧಾನಿ ತೆಹರಾನ್‌ನಲ್ಲಿರುವ ಪ್ರತಿಯೊಬ್ಬರೂ ನಗರವನ್ನು ಬಿಟ್ಟು ಹೋಗಬೇಕು ಎಂದು ಎಚ್ಚರಿಸಿದ ಬೆನ್ನಲ್ಲೇ ಇಸ್ರೇಲ್ ತನ್ನ ದಾಳಿಯನ್ನು ಹೆಚ್ಚಿಸಿದೆ. ತೆಹರಾನ್ ಇರಾನಿನ ಅತಿ ದೊಡ್ಡ ನಗರ ಮತ್ತು ರಾಜಧಾನಿಯೂ ಆಗಿದೆ. ಅಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ. ಈ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿಯ ಮೇಲೆ ಕೂಡ ಒತ್ತಡ ಉಂಟಾಗಿದ್ದು, ಮಂಗಳವಾರ ಬೆಳಗ್ಗೆ ಸೆನ್ಸೆಕ್ಸ್ 200 ಅಂಕ ಇಳಿಯಿತು. ನಿಫ್ಟಿ 24,900ಕ್ಕೆ ಇಳಿಯಿತು (Stock Market). ಎಫ್‌ಎಂಸಿಜಿ ವಲಯದ ಷೇರುಗಳು ಇಳಿಯಿತು. ಮಧ್ಯಾಹ್ನ 2.20ರ ವೇಳೆಗೆ ಸೆನ್ಸೆಕ್ಸ್ 237 ಅಂಕ ನಷ್ಟದಲ್ಲಿ 81,558ರಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ 84 ಅಂಕ ನಷ್ಟದಲ್ಲಿ 24,862ರಲ್ಲಿ ವಹಿವಾಟು ನಡೆಸುತ್ತಿತ್ತು.
ಟೆಹರಾನ್ ಅನ್ನು ಜನರು ಬಿಟ್ಟು ಹೊರಡಬೇಕು ಎಂದು ಟ್ರಂಪ್ ನೀಡಿರುವ ಎಚ್ಚರಿಕೆಯು ಸ್ಟಾಕ್ ಮಾರ್ಕೆಟ್‌ನಲ್ಲಿ ಒತ್ತಡ ಸೃಷ್ಟಿಸಿದೆ. ಪರಿಸ್ಥಿತಿ ಹೀಗಿದ್ದರೂ, ಈಗ ನಡೆಯುತ್ತಿರುವ ಇಸ್ರೇಲ್-ಇರಾನ್ ಸಮರದ ನಡುವೆಯೂ ಜಾಗತಿಕ ಷೇರು ಮಾರುಕಟ್ಟೆ ಸ್ಥಿರತೆಯಿಂದ ಮುನ್ನಡೆಯಲಿದೆ ಎಂದು ಜಿಯೊಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಚೀಫ್ ಇನ್ವೆಸ್ಟ್‌ಮೆಂಟ್ ಸ್ಟ್ರಾಟಜಿಸ್ಟ್ ಆಗಿರುವ ವಿಕೆ ವಿಜಯ ಕುಮಾರ್ ಹೇಳಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವಣ ಸಂಘರ್ಷ ಐದನೇ ದಿನಕ್ಕೆ ಕಾಲಿಟ್ಟಿರುವ ಈ ಸಂದರ್ಭದಲ್ಲಿ ನಿಫ್ಟಿ ಇಂಡಿಯಾ ಡಿಫೆನ್ಸ್ ಇಂಡೆಕ್ಸ್ ಏರಿಕೆಯಾಗಿದೆ. ಮಝಗಾನ್ ಡೊಕ್ ಶಿಪ್ ಬಿಲ್ಡರ್ಸ್, ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಆಂಡ್ ಎಂಜಿನಿಯರ್ಸ್, ಡೇಟಾ ಪ್ಯಾಟರ್ನ್ಸ್, ಭಾರತ್ ಡೈನಾಮಿಕ್ಸ್, ಕೊಚ್ಚಿನ್ ಶಿಪ್ ಯಾರ್ಡ್, ಬೆಮೆಲ್, ಎಚ್‌ಎಎಲ್ ಕಂಪನಿಯ ಷೇರು ದರ ಏರಿಕೆಯಾಗಿದೆ.
ಸ್ಟಾಕ್ ಮಾರ್ಕೆಟ್ ಟ್ರೇಡ್ ಹೈಲೈಟ್ಸ್
ಇಸ್ರೇಲ್- ಇರಾನ್ ಸಮರದ ಹಿನ್ನೆಲೆಯಲ್ಲಿ ಎಫ್ ಎಂಸಿಜಿ, ಆಟೊ ಷೇರುಗಳ ದರ ಇಳಿಕೆ, ಡಿಫೆನ್ಸ್ ಸ್ಟಾಕ್ಸ್‌ಗಳ ದರ ಏರಿಕೆ
ನಷ್ಟಕ್ಕೀಡಾದ ಷೇರುಗಳು: ಸನ್ ಫಾರ್ಮಾ, ಬಜಾಜ್ ಫೈನಾನ್ಸ್, ಒಎನ್‌ಜಿಸಿ
ಲಾಭ ಗಳಿಸಿದ ಷೇರುಗಳು: ವಿಶಾಲ್ ಮೆಗಾ ಮಾರ್ಟ್ಸ್, ಸ್ಟರ್ಲೈಟ್ ಟೆಕ್ನಾಲಜೀಸ್, ಕೊಚ್ಚಿನ್ ಶಿಪ್ ಯಾರ್ಡ್, ಬಿಎಸ್‌ಇ ಲಿಮಿಟೆಡ್.
- ವಿಶಾಲ್ ಮೆಗಾ ಮಾರ್ಟ್‌ನ ಪ್ರವರ್ತಕರು 10,500 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆ ಇದೆ.
- ಝೀ ಎಂಟರ್‌ಟೈನ್‌ಮೆಂಟ್ ಷೇರು ದರದಲ್ಲಿ 4% ಏರಿಕೆ ಆಗಿದೆ. ಪ್ರವರ್ತಕರು 2,237 ಕೋಟಿ ರುಪಾಯಿ ಫಂಡ್ ಅನ್ನು ಕಂಪನಿಗೆ ಸೇರಿಸಲು ನಿರ್ಧರಿಸಿರುವುದು ಇದಕ್ಕೆ ಕಾರಣ.
- ಇನ್ಫೋಸಿಸ್, ಟಿಸಿಎಸ್, ಟೆಕ್ ಮಹೀಂದ್ರಾ, ಎಲ್‌ಟಿಐ ಮೈಂಡ್ ಟ್ರೀ, ಎಚ್‌ಸಿಎಲ್ ಟೆಕ್ನಾಲಜೀಸ್ ಷೇರು ದರದಲ್ಲಿ ಅಲ್ಪ ಏರಿಕೆ.
- ತ್ರಿಶಕ್ತಿ ಇಂಡಸ್ಟ್ರೀಸ್ ಷೇರು ದರ 5% ಅಪ್ಪರ್ ಸರ್ಕೂಟ್‌ಗೆ ಮುಟ್ಟಿದೆ. ಜಿಂದಾಲ್ ಸ್ಟೈನ್‌ಲೆಸ್‌ನಿಂದ 3 ಕೋಟಿ 70 ಲಕ್ಷ ಕಾಂಟ್ರ್ಯಾಕ್ಟ್ ಸಿಕ್ಕಿರುವುದು ಇದಕ್ಕೆ ಕಾರಣ.
- ಓಸ್ವಾಲ್ ಪಂಪ್ಸ್ ಐಪಿಒದ ಮೂರನೇ ದಿನ ಎರಡು ಪಟ್ಟು ಸಬ್‌ಸ್ಕ್ರೈಬ್ ಆಗಿದೆ. 1,387 ಕೋಟಿ ರುಪಾಯಿಗಳ ಐಪಿಒ ಇದಾಗಿದೆ.
- ಸ್ಟರ್ಲೈಟ್ ಟೆಕ್ ಷೇರಿನ ದರದಲ್ಲಿ ಕಳೆದ 2 ದಿನಗಳಲ್ಲಿ 35% ಏರಿಕೆಯಾಗಿದೆ. ಕಂಪನಿಯು ನೆಕ್ಸ್ ಜನರೇಷನ್ ಎಐ ಡೇಟಾ ಸೆಂಟರ್ ಅಭಿವೃದ್ಧಿಪಡಿಸಿರುವುದು ಇದಕ್ಕೆ ಕಾರಣ.
- ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಆಫ್ ಇಂಡಿಯಾ (MCX) ಷೇರಿನ ದರದಲ್ಲಿ ಏರಿಕೆಯಾಗಿದೆ. ಸಂಸ್ಥೆಯು ಈ ವರ್ಷ ಎಲೆಕ್ಟ್ರಿಸಿಟಿ ಡಿರೈವಟೀಸ್ ವಹಿವಾಟನ್ನು ಅಳವಡಿಸಲು ಉದ್ದೇಶಿಸಿರುವ ಬಗ್ಗೆ ವರದಿಯಾಗಿರುವುದು ಇದಕ್ಕೆ ಕಾರಣ.
- ಟಾಟಾ ಮೋಟಾರ್ಸ್ ಷೇರು ದರ ಕಳೆದ 5 ದಿನಗಳಲ್ಲಿ 7% ಇಳಿಕೆ.
ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಪಂಜಾಬ್ & ಸಿಂಧ್ ಬ್ಯಾಂಕ್ ಮತ್ತು ಇತರ ಪಿಎಸ್‌ಯು ಬ್ಯಾಂಕ್ ಷೇರುಗಳು ಮಂಗಳವಾರ ಏರಿಕೆ ದಾಖಲಿಸಿವೆ. ಈ ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳಲ್ಲಿ ಕೇಂದ್ರ ಸರ್ಕಾರ ತನ್ನ ಬಂಡವಾಳ ಹಿಂತೆಗೆತವನ್ನು ಮಾಡಲಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಪಿಎಸ್‌ಯು ಬ್ಯಾಂಕ್‌ಗಳ ಷೇರುಗಳ ದರಗಳಲ್ಲಿ ಏರಿಕೆ ಕಂಡು ಬಂದಿತು.
ಹಾಗಾದರೆ ಯಾವೆಲ್ಲ ಪಿಎಸ್‌ಯು ಬ್ಯಾಂಕ್‌ಗಳಲ್ಲಿ ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆತ ಮಾಡಲು ಉದ್ದೇಶಿಸಿದೆ ಎಂಬುದರ ವಿವರ ಇಲ್ಲಿದೆ.
ವರದಿಗಳ ಪ್ರಕಾರ, ಯುಕೊ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ & ಸಿಂಧ್ ಬ್ಯಾಂಕ್‌ನಲ್ಲಿ ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆತ ಪ್ರಕ್ರಿಯೆ ಮಾಡುವ ನಿರೀಕ್ಷೆ ಇದೆ. ಮುಂದಿನ 6 ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಐದು ಪಿಎಸ್‌ಯು ಬ್ಯಾಂಕ್‌ಗಳಲ್ಲಿ 20 ಪರ್ಸೆಂಟ್ ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆ ಇದೆ.
ಹಾಗಾದರೆ ಸರ್ಕಾರ ಈ ಬ್ಯಾಂಕ್‌ಗಳಲ್ಲಿರುವ ತನ್ನ ಷೇರುಗಳ ಮಾರಾಟದಿಂದ ಸಿಗುವ ಹಣವನ್ನು ಯಾವುದಕ್ಕೆ ಬಳಸಲಿದೆ? ಇದೇ ಬ್ಯಾಂಕ್ ಗಳ ಬಂಡವಾಳ, ನಿರ್ವಹಣೆಯ ಅಗತ್ಯಗಳಿಗೆ ಉಪಯೋಗಿಸಲಿದೆ.
ಬಂಗಾರದ ದರವು ಈಗಿನ ಮಟ್ಟದಿಂದ 25% ಇಳಿಕೆಯಾಗಲಿದೆಯೇ? ಸಿಟಿ ರಿಸರ್ಚ್ ಸಂಸ್ಥೆಯ ಪ್ರಕಾರ ಬಂಗಾರದ ದರದಲ್ಲಿ ಇಳಿಕೆಯಾಗಲಿದೆ. ಬೆಂಗಳೂರಿನಲ್ಲಿ ಮಂಗಳವಾರ 24 ಕ್ಯಾರಟ್ ಚಿನ್ನದ ದರ ಗ್ರಾಮ್‌ಗೆ 10,037/- ಇತ್ತು. 22 ಕ್ಯಾರಟ್ ಬಂಗಾರದ ದರ 9,200/- ಇತ್ತು. ಬೆಳ್ಳಿಯ ದ ರಕೆ.ಜಿಗೆ 1 ಲಕ್ಷ ದ10 ಸಾವಿರ ರುಪಾಯಿ ಇತ್ತು.
ಸಿಟಿ ಬ್ಯಾಂಕ್ ವರದಿಯ ಪ್ರಕಾರ ಬಂಗಾರದ ದರವು ಮುಂಬರುವ ತಿಂಗಳುಗಳಲ್ಲಿ ಇಳಿಕೆಯಾಗಲಿದೆ. ಪ್ರತಿ ಔನ್ಸಿಗೆ 3,000 ಡಾಲರಿಗಿಂತ ಕೆಳಕ್ಕೆ ಇಳಿಕೆಯಾಗಲಿದೆ. ಹೂಡಿಕೆಗೆ ಸಂಬಂಧಿಸಿ ಚಿನ್ನದ ಬೇಡಿಕೆ ತಗ್ಗಲಿರುವುದು ಇದಕ್ಕೆ ಕಾರಣ ಎಂದು ವರದಿ ತಿಳಿಸಿದೆ. ಕಳೆದ ಏಪ್ರಿಲ್ 22ಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸಿಗೆ 3,500 ಡಾಲರ್‌ಗೆ ಏರಿಕೆಯಾಗಿತ್ತು. ಈಗ 3,400 ಡಾಲರ್ ಆಸುಪಾಸಿನಲ್ಲಿದೆ.
ಈ ವರ್ಷ ಫೆಬ್ರವರಿ 28ಕ್ಕೆ ಬಿಡುಗಡೆಯಾಗಿರುವ ನಿಫ್ಟಿ ಇಂಟರ್ ನೆಟ್ ಇಂಡೆಕ್ಸ್ ಇದುವರೆಗೆ 19% ರಿಟರ್ನ್ ಅನ್ನು ಹೂಡಿಕೆದಾರರಿಗೆ ನೀಡಿದ್ದು, ಗಮನ ಸೆಳೆದಿದೆ. ಈ ನುಫ್ಟಿ ಇಂಟರ್‌ನೆಟ್ ಇಂಡೆಕ್ಸ್, ಭಾರತದ ನ್ಯೂ ಏಜ್ ಸ್ಟಾಕ್ಸ್‌ಗಳ ಪರ್ ಫಾರ್ಮೆನ್ಸ್ ಅನ್ನು ಟ್ರ್ಯಾಕ್ ಮಾಡುತ್ತದೆ. ಇದು ಈಗಾಗಲೇ ನಿಫ್ಟಿ 50 ಯನ್ನು ಹಿಂದಿಕ್ಕಿದೆ.
ತಮಿಳುನಾಡು ಮೂಲದ, ಲಲಿತಾ ಜ್ಯುವೆಲರಿ ಸಂಸ್ಥೆಯು ಷೇರು ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗುತ್ತಿದ್ದು, 1,200 ಕೋಟಿ ರುಪಾಯಿ ಗಾತ್ರದ ಐಪಿಒ ನಡೆಸಲು ಉದ್ದೇಶಿಸಿದೆ. ದಕ್ಷಿಣ ಭಾರತದಲ್ಲಿ 56 ಮಳಿಗೆಗಳನ್ನು ಲಲಿತಾ ಜ್ಯುವೆಲ್ಲರಿ ಹೊಂದಿದೆ. ಈ ಸಂಸ್ಥೆಯು ಜೂನ್ 6ರಂದು ಮಾರುಕಟ್ಟೆ ನಿಯಂತ್ರಕ ಸೆಬಿಗೆ ಪ್ರಿಲಿಮನರಿ ಪೇಪರ್‌ಗಳನ್ನು ಸಲ್ಲಿಸಿದೆ. 1985ರಲ್ಲಿ ಸ್ಥಾಪನೆಯಾಗಿರುವ ಲಲಿತಾ ಜ್ಯುವೆಲ್ಲರಿಯು ಐಪಿಒ ಮೂಲಕ ಸಂಗ್ರಹವಾಗುವ ಹಣದಲ್ಲಿ 1,014 ಕೋಟಿ ರುಪಾಯಿಗಳನ್ನು ಭಾರತದಲ್ಲಿ 12 ಹೊಸ ಸ್ಟೋರ್ ಗಳನ್ನು ತೆರೆಯಲು ಉಪಯೋಗಿಸಲಿದೆ.
ಟಾಟಾ ಮೋಟಾರ್ಸ್ ಷೇರು ದರ ಕಳೆದ 5 ದಿನಗಳಲ್ಲಿ 7% ಇಳಿಕೆಯಾಗಿದೆ. ಇದಕ್ಕೆ ಕಾರಣವೇನು? ಟಾಟಾ ಮೋಟಾರ್ಸ್‌ನ ಬ್ರಿಟನ್ ಮೂಲದ ಅಧೀನ ಸಂಸ್ಥೆಯಾದ ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್‌ನ ಬೆಳವಣಿಗೆಯ ಮುನ್ನೋಟ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಕಳೆದ ಐದು ದಿನಗಳಲ್ಲಿ ಟಾಟಾ ಮೋಟಾರ್ಸ್ ಷೇರಿನ ದರವು 735/-ರಿಂದ 678/-ಕ್ಕೆ ಇಳಿಕೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಷೇರು ಈ ವರ್ಷ ಇದುವರೆಗೆ ಹೂಡಿಕೆದಾರರಿಗೆ ಲಾಭ ನೀಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಈಗಿನ ದರ: 1,431/- ಇದ್ದು, 6 ತಿಂಗಳಿನ ಹಿಂದೆ 1,245/- ಇತ್ತು. ಕಂಫರ್ಟಬಲ್ ವಾಲ್ಯುಯೇಶನ್, ಬೆಳವಣಿಗೆಯ ಮುನ್ನೋಟ, ಹೂಡಿಕೆದಾರರ ಆದ್ಯತೆಯ ಪರಿಣಾಮ ರಿಲಯನ್ಸ್ ಇಂಡಸ್ಟ್ರೀಸ್ ಷೇರು ದರ ಏರಿಕೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಮಾರ್ಕೆಟ್ ಕ್ಯಾಪಿಟಲೈಸೇಶನ್ ದೃಷ್ಟಿಯಿಂದ ಭಾರತದ ಅತಿ ದೊಡ್ಡ ಸ್ಟಾಕ್ ಆಗಿದೆ. ಇದರ ಮಾರುಕಟ್ಟೆ ಬಂಡವಾಳ ಮೌಲ್ಯ 19.5 ಲಕ್ಷ ಕೋಟಿ ರುಪಾಯಿಗಳಾಗಿದೆ.
ಸ್ಟರ್ಲೈಟ್ ಟೆಕ್ನಾಲಜೀಸ್ ಷೇರಿನ ದರ ಕೆಲ ದಿನಗಳಿಂದ ಏರಿಕೆಯ ಹಾದಿಯಲ್ಲಿದೆ. ಇದಕ್ಕೆ ಕಾರಣಗಳ ಬಗ್ಗೆ ಒಂದಷ್ಟು ವಿವರ ಇಲ್ಲಿದೆ. ಮೊದಲನೆಯದಾಗಿ ಸ್ಟರ್ಲೈಟ್ ಟೆಕ್ನಾಲಜೀಸ್ ಹೊಸ ನ್ಯೂ ಜನರೇಷನ್ ಡೇಟಾ ಸೆಂಟರ್ ಅನ್ನು ಘೋಷಿಸಿದೆ. ಇದು ಎಐ ಆಧಾರಿತ ಡೇಟಾ ಸೆಂಟರ್ ಇನ್ ಫ್ರಾಸ್ಟ್ರಕ್ಚರ್ ಆಗಿದೆ. ಎರಡನೆಯದಾಗಿ ಸ್ಟರ್ಲೈಟ್ ಟೆಕ್ನಾಲಜೀಸ್ ಕಂಪನಿಯು ಬಿಎಸ್ಸೆನ್ನೆಲ್ ಜತೆಗೆ ಜೂನ್ 11ರಂದು 2,631 ಕೋಟಿ ರುಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ. ಬಳಿಕ ಷೇರಿನ ದರ ಏರಿಕೆಯಾಗುತ್ತಿದೆ. ಕಳೆದ ಒಂದು ತಿಂಗಳಿನಲ್ಲಿ ಸ್ಟರ್ಲೈಟ್ ಟೆಕ್ನಾಲಜೀಸ್ ಷೇರಿನ ದರದಲ್ಲಿ 40 ಪರ್ಸೆಂಟ್ ಏರಿಕೆಯಾಗಿದೆ. ಷೇರಿನ ದರ 72/- ಗಳಿಂದ 112/-ಕ್ಕೆ ಏರಿಕೆಯಾಗಿದೆ.
ಈ ಸುದ್ದಿಯನ್ನೂ ಓದಿ | Transfer guidelines: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ವರ್ಗಾವಣೆ ಅವಧಿ ಜೂನ್ 30ರವರೆಗೆ ವಿಸ್ತರಣೆ