Transfer guidelines: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ವರ್ಗಾವಣೆ ಅವಧಿ ಜೂನ್ 30ರವರೆಗೆ ವಿಸ್ತರಣೆ
Transfer guidelines: ಈ ಮೊದಲು ಷರತ್ತುಗಳಿಗೊಳಪಟ್ಟು ಮೇ 12 ರಿಂದ ಜೂನ್ 14ರವರೆಗೆ ವರ್ಗಾವಣೆ ಕೈಗೊಳ್ಳಲು ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖಾ ಸಚಿವರಿಗೆ ಹಾಗೂ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ ನೌಕರರಿಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ಪ್ರತ್ಯಾಯೋಜಿಸಿ ಆದೇಶಿಸಲಾಗಿತ್ತು. ಇದೀಗ ವರ್ಗಾವಣೆ ಅವಧಿಯನ್ನು ವಿಸ್ತರಿಸಲಾಗಿದೆ.


ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ (government employees) ಸರ್ಕಾರ ಗುಡ್ ನ್ಯೂಸ್ ನೀಡಿದೆ. ನೌಕರರ ವರ್ಗಾವಣೆ (Transfer guidelines) ಕೈಗೊಳ್ಳಲು ನಿಗದಿಪಡಿಸಿದ್ದ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದ್ದು, ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರತಿಭಾ. ಕೆ ಅವರು ಆದೇಶ ಹೊರಡಿಸಿದ್ದಾರೆ.
2025-26ನೇ ಸಾಲಿನಲ್ಲಿ ಸರ್ಕಾರಿ ನೌಕರರ ವರ್ಗಾವಣೆಗಳನ್ನು ನಿಯಂತ್ರಿಸಲು ವರ್ಗಾವಣಾ ಮಾರ್ಗಸೂಚಿಗಳನ್ನು ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿ ಷರತ್ತುಗಳಿಗೊಳಪಟ್ಟು ಮೇ 12 ರಿಂದ ಜೂನ್ 14ರವರೆಗೆ ವರ್ಗಾವಣೆ ಕೈಗೊಳ್ಳಲು ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖಾ ಸಚಿವರಿಗೆ ಹಾಗೂ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ ನೌಕರರಿಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ಪ್ರತ್ಯಾಯೋಜಿಸಿ ಈ ಹಿಂದೆ ಆದೇಶಿಸಲಾಗಿತ್ತು. ಈ ವರ್ಗಾವಣೆ ಅವಧಿಯನ್ನು ವಿಸ್ತರಿಸುವುದು ಅವಶ್ಯಕವೆಂದು ಪರಿಗಣಿಸಿ, ಸರ್ಕಾರವು ಇದೀಗ ಆದೇಶ ಹೊರಡಿಸಿದೆ.
12.05.2025ರ ಸರ್ಕಾರಿ ಆದೇಶದಲ್ಲಿ ವಿವರಿಸಿರುವ ಷರತ್ತಿಗೊಳಪಟ್ಟು 2025-26ನೇ ಸಾಲಿನಲ್ಲಿ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖಾ ಸಚಿವರಿಗೆ ಹಾಗೂ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ ನೌಕರರಿಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದ್ದ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Federal Bank Recruitment 2025: ಫೆಡರಲ್ ಬ್ಯಾಂಕ್ನಲ್ಲಿದೆ ವಿವಿಧ ಹುದ್ದೆ; ಅಪ್ಲೈ ಮಾಡುವ ವಿಧಾನ ಇಲ್ಲಿದೆ
ಮಾರ್ಗಸೂಚಿಯಂತೆ ಸರ್ಕಾರಿ ನೌಕರರ ವರ್ಗಾವಣೆ ನಡೆಯಲಿ
ಬೆಂಗಳೂರು: ಸರ್ಕಾರಿ ನೌಕರರ ವರ್ಗಾವಣೆ (Transfer guidelines) ವೇಳೆ ಯಾವುದೇ ಆಕ್ಷೇಪಣೆಗಳು ಉದ್ಭವಿಸದಂತೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೂಚನೆ ನೀಡಿದ್ದಾರೆ. ಕೆಲವೆಡೆ ವರ್ಗಾವಣೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ.
ಈ ಹಿಂದಿನ ವರ್ಷಗಳ ವರ್ಗಾವಣೆ ಅವಧಿಯಲ್ಲಿ ಗಮನಿಸಿದ ಸನ್ನಿವೇಶಗಳ ಹಿನ್ನೆಲೆಯಲ್ಲಿ, ಸ್ಪಷ್ಟ ವರ್ಗಾವಣೆ ಮಾರ್ಗಸೂಚಿ ಹಾಗೂ ಸೂಚನೆಗಳನ್ನು ಹೊರಡಿಸಿದ್ದರೂ ಕೂಡ, ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವರ್ಗಾವಣೆ ಆದೇಶಗಳನ್ನು ಹೊರಡಿಸಿದ್ದಲ್ಲಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಬಹಳಷ್ಟು ಪ್ರಕರಣಗಳು ದಾಖಲಾಗುವುದನ್ನು ಗಮನಿಸಲಾಗಿದೆ. ಆದ್ದರಿಂದ ಪ್ರತಿಯೊಬ್ಬ ಇಲಾಖಾ ಕಾರ್ಯದರ್ಶಿ/ಮುಖ್ಯಸ್ಥರು ತಮ್ಮ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ಆದೇಶ ಹೊರಡಿಸುವ ಮೊದಲು ಈ ಕೆಳಕಂಡ ಆಕ್ಷೇಪಣೆಗಳು ಉದ್ಭವಿಸದಂತೆ ಕಟ್ಟುನಿಟ್ಟಾಗಿ ಮಾರ್ಗಸೂಚಿಗಳನ್ನು ಅನುಸರಿಸಿ ವರ್ಗಾವಣೆ ಆದೇಶಗಳನ್ನು ಮಾಡಲು ಸೂಚಿಸಿದ್ದಾರೆ.
1) ಕನಿಷ್ಠ ಅವಧಿ ಪೂರ್ಣಗೊಳಿಸದೇ ಇರುವವರನ್ನು ವರ್ಗಾಯಿಸುವುದು.
2) ನಿವೃತ್ತರಾಗಲು 2 ವರ್ಷಕ್ಕಿಂತ ಕಡಿಮೆ ಸೇವಾವಧಿ ಇರುವವರ ವರ್ಗಾವಣೆಯನ್ನು ಸಕಾರಣವಿಲ್ಲದೆ ಮಾಡುವುದು.
3) ಅವಧಿ ಪೂರ್ವ ವರ್ಗಾವಣೆಗಳನ್ನು ಸಕಾರಣಗಳಿಲ್ಲದೆ ಮಾಡುವುದು
4) ವಿಶೇಷ ಚೇತನ ನೌಕರರಿಗೆ ನೀಡಲಾದ ವಿನಾಯಿತಿಗಳನ್ನು ಅನುಸರಿಸದೇ ವರ್ಗಾಯಿಸುವುದು.
5) ವರ್ಗಾವಣೆ ಆದೇಶದಲ್ಲಿ ಹುದ್ದೆಯನ್ನು ತೋರಿಸದಿರುವುದು.
6) ಸಾಮಾನ್ಯ ವರ್ಗಾವಣೆ ಅವಧಿ ಮುಗಿದ ನಂತರ ಮಾನ್ಯ ಮುಖ್ಯಮಂತ್ರಿಗಳ ಅನುಮೋದನೆ ಪಡೆಯದೆ ವರ್ಗಾಯಿಸುವುದು
7) ಸರ್ಕಾರದ ಆದೇಶದಲ್ಲಿ ಸೂಚಿಸಲಾದ ಇನ್ನಿತರೆ ವರ್ಗಾವಣೆ ಮಾರ್ಗಸೂಚಿಗಳನ್ನು ಅನುಸರಿಸದಿರುವುದು.
ವರ್ಗಾವಣೆ ವೇಳೆ ಈ ಮೇಲ್ಕಂಡ ಆಕ್ಷೇಪಣೆಗಳು ಉದ್ಭವಿಸದಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.