Narendra Modi: ಪ್ರಧಾನಿ ಮೋದಿಗೆ ಸೈಪ್ರಸ್ನ ಅತ್ಯುನ್ನತ ನಾಗರಿಕ ಗೌರವ ಪ್ರದಾನ; ಫೋಟೋಸ್ ನೋಡಿ
ಪ್ರಧಾನಿ ಮೋದಿ ಅವರಿಗೆ ಸೋಮವಾರ ಸೈಪ್ರಸ್ನ ಅತ್ಯುನ್ನತ ನಾಗರಿಕ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III ಅನ್ನು ಪ್ರದಾನ ಮಾಡಲಾಯಿತು. ಸೈಪ್ರಸ್ ಅಧ್ಯಕ್ಷರ ಭವನದಲ್ಲಿ ಗೌರವಾರ್ಥವಾಗಿ ಹಮ್ಮಿಕೊಂಡಿರುವ ಅಧಿಕೃತ ಭೋಜನ ಕೂಟದೊಂದಿಗೆ ಮೋದಿ ಅವರ ಈ ಭೇಟಿ ಮುಕ್ತಾಯವಾಗಲಿದೆ.



ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸೈಪ್ರಸ್ಗೆ ತೆರಳಿದ್ದಾರೆ. ಸೈಪ್ರಸ್ ಅಧ್ಯಕ್ಷ ನಿಕಸ್ ಕ್ರಿಸ್ಟೋಡೌಲೈಡ್ಸ್ ಅವರು ವಿಮಾನ ನಿಲ್ದಾಣಕ್ಕೆ ತೆರಳಿ ಮೋದಿಯನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ(Narendra Modi)ಗೆ ಸೈಪ್ರಸ್ ದೇಶದಿಂದ ಅತ್ಯುನ್ನತ ಗೌರವ ದೊರೆತಿದೆ. ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಆರ್ಡರ್ ಆಫ್ ಮಕರಿಯೋಸ್ III ಸೈಪ್ರಸ್ ನೀಡುವ ನೈಟ್ಹುಡ್ ಗೌರವವಾಗಿದ್ದು, ಇದಕ್ಕೆ ಸೈಪ್ರಸ್ನ ಮೊದಲ ಅಧ್ಯಕ್ಷ ಆರ್ಚ್ಬಿಷಪ್ ಮಕರಿಯೋಸ್ III ಅವರ ಹೆಸರಿಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ಗೌರವಕ್ಕಾಗಿ ಸೈಪ್ರಸ್ ಅಧ್ಯಕ್ಷರು ಮತ್ತು ಅದರ ಸರ್ಕಾರಕ್ಕೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು ಮತ್ತು ಇದು "ವಸುಧೈವ ಕುಟುಂಬಕಂ" ಎಂಬ ಸಿದ್ಧಾಂತಕ್ಕೆ ಸಂದ ಗೌರವವಾಗಿದೆ ಎಂದು ಹೇಳಿದರು.

ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III ಗಾಗಿ, ನಾನು ನಿಮಗೆ, ಸೈಪ್ರಸ್ ಸರ್ಕಾರ ಮತ್ತು ಸೈಪ್ರಸ್ ಜನರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇದು ನರೇಂದ್ರ ಮೋದಿಗೆ ಮಾತ್ರವಲ್ಲ, 140 ಕೋಟಿ ಭಾರತೀಯರಿಗೆ ಸಂದ ಗೌರವ; ಇದು ಅವರ ಸಾಮರ್ಥ್ಯ ಮತ್ತು ಆಕಾಂಕ್ಷೆಗಳಿಗೆ ಸಂದ ಗೌರವ ಎಂದು ಮೋದಿ ಹೇಳಿದ್ದಾರೆ.

ಇಬ್ಬರು ನಾಯಕರು ನಿಕೋಸಿಯಾದಲ್ಲಿ ಶಿಕ್ಷಣ, ಡಿಜಿಟಲ್ ಪಾಲುದಾರಿಕೆ ಹಾಗೂ ಪ್ರಾದೇಶಿಕ ಭದ್ರತೆ ಸೇರಿದಂತೆ ವಿಸ್ತೃತ ಶ್ರೇಣಿಯ ಕ್ಷೇತ್ರಗಳನ್ನೊಳಗೊಂಡ ಔಪಚಾರಿಕ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಭಾರತ-ಯುರೋಪ್ ಪಾಲುದಾರಿಕೆ ಮತ್ತು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ನಂತಹ ಪ್ರಮುಖ ಜಾಗತಿಕ ಬೆಳವಣಿಗೆಗಳ ಬಗ್ಗೆಯೂ ಉಭಯ ನಾಯಕರು ಚರ್ಚಿಸಲಿದ್ದಾರೆ.

ಸೈಪ್ರಸ್ ಅಧ್ಯಕ್ಷರ ಭವನದಲ್ಲಿ ಗೌರವಾರ್ಥವಾಗಿ ಹಮ್ಮಿಕೊಂಡಿರುವ ಅಧಿಕೃತ ಭೋಜನ ಕೂಟದೊಂದಿಗೆ ಮೋದಿ ಅವರ ಈ ಭೇಟಿ ಮುಕ್ತಾಯವಾಗಲಿದೆ. ಇದಾದ ಬಳಿಕ ಮೋದಿ ಅವರು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರ ಆಹ್ವಾನದ ಮೇರೆಗೆ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ಕನನಾಸ್ಕಿಸ್ಗೆ ಪ್ರಯಾಣಿಸುವರು.