Shivanna Ganagatte Column: ಭೂಮಿಯನು ರಕ್ಷಿಸಲು ಯೋಗ !
ಈ ವರ್ಷದ ವಿಶ್ವ ಯೋಗ ದಿನದ ಧ್ಯೇಯವಾಕ್ಯವು ಭೂಮಿಯ ಆರೋಗ್ಯವನ್ನು ರಕ್ಷಿಸುವ ಕಾಳಜಿ ಯನ್ನು ಹೊಂದಿದೆ. ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಹಿನ್ನೆಲೆಯಲ್ಲಿ, ಈ ಭೂಮಿಯನ್ನು ಆರೋಗ್ಯಕರವಾಗಿ ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಈ ವರ್ಷದ ವಿಶ್ವ ಯೋಗ ದಿನವು ಒತ್ತಿ ಹೇಳುತ್ತಿದೆ.


ಶಿವಣ್ಣ ಗಾಣಗಟ್ಟೆ
ಯೋಗ ಮಾಡಿ ರೋಗ ದೂರ ತಳ್ಳಿ ಎಂಬ ಮಾತು ಜಗಜನಿತವಾಗಿದ್ದು, ಯೋಗವು ದಿನ ಕಳೆದಂತೆ ತನ್ನ ಮಹತ್ವ ಹಾಗೂ, ಪ್ರಭಾವವನ್ನ ಭಾರತದಿಂದ ಕಡಲಾಚೆಯ ನೂರಾರು ದೇಶಗಳಿಗೆ ಹಬ್ಬಿಸಿದೆ. ಪ್ರತಿವರ್ಷ ಜೂನ್ 21ರಂದು ಜಗತ್ತಿನಾದ್ಯಂತ ಸದೃಢ ಮನಸ್ಸು ಮತ್ತು ಸದೃಢ ಆರೋಗ್ಯಯುತ ದೇಹದ ನಿರ್ಮಾಣಕ್ಕಾಗಿ ವಿಶ್ವ ಯೋಗ ದಿನವನ್ನು ಆಚರಿಸುತ್ತಿದ್ದಾರೆ.
ಜಂಜಾಟಗಳಿಂದ ತುಂಬಿದ, ಸಂಕೀರ್ಣ ಜೀವನ ಶೈಲಿಯನ್ನು ಹೊಂದಿರುವ ಇಂದಿನ ಜನಾಂಗ, ಚಿಕ್ಕ ವಯಸ್ಸಿನಲ್ಲಿಯೇ, ಹೃದಯ ಸ್ತಂಭನ, ಡಯಾಬಿಟಿಸ್ ನಂತಹ ಅಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಜೀವದುಸಿರು ಚೆಲ್ಲುತ್ತಿದ್ದಾರೆ; ಇಂತಹ ಸಂದರ್ಭದಲ್ಲಿ ಪ್ರತಿದಿನ ಮಾಡುವ ಯೋಗ ಆರೋಗ್ಯಯುತ ಜೀವನಕ್ಕೆ ಮದ್ದಾಗಿ ಜಗತ್ತಿಗೆ ಹೊಸ ಭರವಸೆಯಾಗಿ ಪ್ರಾಮುಖ್ಯತೆ ಪಡೆದಿದೆ.
ಅಷ್ಟಾಂಗ ಯೋಗ
ಅಂದ ಹಾಗೆ ಇಡೀ ಜಗತ್ತಿಗೆ ಯೋಗದ ಪರಿಚಯ ಮಾಡಿದ ದೇಶ ನಮ್ಮ ಭಾರತ; ಅಷ್ಟಾಂಗ ಯೋಗ ವನ್ನು ರೂಪಿಸಿದವರು ಪತಂಜಲಿಯವರು. ಅವರು ಬರೆದ ಯೋಗ ಸೂತ್ರಗಳು ಎಂಬ ಕೃತಿ ನಾಲ್ಕು ಅಧ್ಯಾಯಗಳನ್ನು ಹೊಂದಿದ್ದು 195 ಸೂತ್ರಗಳ ಮೂಲಕ ಯೋಗವನ್ನ ವಿವರಿಸುತ್ತದೆ. ಪತಂಜಲಿ ಅವರ ಅಷ್ಟಾಂಗ ಯೋಗವು, ಅದು ಯಮ (ನೈತಿಕ ನಿಯಮಗಳು), ನಿಯಮ (ವೈಯಕ್ತಿಕ ಶಿಸ್ತು), ಆಸನ (ದೇಹದ ನಿಯಂತ್ರಣ), ಪ್ರಾಣಾಯಾಮ , ಪ್ರತ್ಯಾಹಾರ (ಇಂದ್ರಿಯಗಳ ಹಿಮ್ಮೆಟ್ಟಿಸುವಿಕೆ), ಧಾರಣ (ಏಕಾಗ್ರತೆ), ಧ್ಯಾನ ಎಂಬ ಎಂಟು ಹಂತದ ಯೋಗಗಳನ್ನ ಒಳಗೊಂಡಿದೆ.
ಇದನ್ನೂ ಓದಿ: International Yoga Day: 73 ವರ್ಷದ ರಾಜ್ಯಪಾಲ್ಯರ ಫಿಟ್ನೆಸ್ ಕಂಡು ಬೆರಗಾದ ಜನ; 51 ಪುಷ್ ಅಪ್ ಮಾಡಿದ ಗವರ್ನರ್!
ಯೋಗಾಭ್ಯಾಸವು ಇಪ್ಪತ್ತನೆಯ ಶತಮಾನದಲ್ಲೇ ಪಾಶ್ಚಾತ್ಯ ದೇಶಗಳನ್ನು ತಲುಪಿತ್ತು; ಅಲ್ಲಿನ ಜನರು ಯೋಗಾಭ್ಯಾಸವನ್ನು ಅಭ್ಯಾಸ ಮಾಡಿ, ಇದರಿಂದ ಆರೋಗ್ಯ ಉತ್ತಮವಾಗುತ್ತದೆ ಎಂದು ಕಂಡುಕೊಂಡರು. ದೇಹದ ತೂಕ ಇಳಿಸಲು, ದೇಹಕ್ಕೆ ಅಂದ ತುಂಬಲು, ಆರೋಗ್ಯದ ಸಮಸ್ಯೆ ಗಳನ್ನು ದೂರವಿಡಲು ಯೋಗಾಭ್ಯಾಸವನ್ನು ಕಲಿಯುವ ಪ್ರವೃತ್ತಿಯು ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ನಮ್ಮ ದೇಶದ ವಿವಿಧ ನಗರಗಳಲ್ಲಿ, ಪಟ್ಟಣಗಳಲ್ಲಿ ಆರಂಭವಾಯಿತು.
ಬಾಬಾ ರಾಮದೇವ್ ಅವರು ದೂರದರ್ಶನದ ಮೂಲಕ ಸಾಮೂಹಿಕ ಯೋಗಾಭ್ಯಾಸವನ್ನು ಹೇಳಿಕೊಟ್ಟು, ಯೋಗಾಭ್ಯಾಸವು ಹಳ್ಳಿ ಹಳ್ಳಿಗಳನ್ನು ತಲುಪುವಂತೆ ಮಾಡಿದರು.
ವಿಶ್ವ ಯೋಗ ದಿನ
ಯೊಗಾಭ್ಯಾಸದ ಮಹತ್ವವನ್ನು ವಿಶ್ವಕ್ಕೆ ಸಾರಲು, ಭಾರತದ ಪ್ರಧಾನ ಮಂತ್ರಿಗಳು, 2014 ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲು ಪ್ರಸ್ತಾವನೆಯನ್ನು ನೀಡಿದರು. ಈ ಪ್ರಸ್ತಾವನೆಯನ್ನು ಆಧರಿಸಿ ವಿಶ್ವಸಂಸ್ಥೆಯು ಡಿಸೆಂಬರ್ 11 2014ರಂದು ಯುಎನ್ ಸಾಮಾನ್ಯ ಸಭೆಯು 177 ಸದಸ್ಯರೊಂದಿಗೆ ಈ ನಿರ್ಧಾರವನ್ನು ಅಂಗೀ ಕರಿಸಿತು.
ವಿಶ್ವ ಯೋಗದಿನ ಆಚರಣೆಗೆ ಜೂನ್ 21 ನಿಗದಿ ಮಾಡಿದ್ದರ ಹಿನ್ನೆಲೆಯನ್ನ ನೋಡುವುದಾದರೆ, ಅಂದು ಅತಿ ದೀರ್ಘ ಹಗಲನ್ನು ಹೊಂದಿರುವ ದಿನ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಒಪ್ಪಿಗೆಯ ನಂತರ ವಿಶ್ವ ಯೋಗ ದಿನವನ್ನು ಮೊದಲ ಬಾರಿಗೆ 2015 ಜೂನ್ 21ರಂದು ನವದೆಹಲಿಯ ರಾಜ ಪಥದಲ್ಲಿ ಪ್ರಧಾನಮಂತ್ರಿಯ ನೇತೃತ್ವದಲ್ಲಿ ನಡೆಯಿತು. ಭಾರತದ ಅಂದಿನ ರಾಷ್ಟ್ರಪತಿ ಗಳಾದಂತಹ ಪ್ರಣಬ್ ಮುಖರ್ಜಿ ಸೇರಿದಂತೆ ವಿಶ್ವದ ವಿವಿಧ ದೇಶಗಳ 112 ಪ್ರತಿನಿಧಿಗಳು ಸೇರಿದ್ದರು.
39,985 ಜನರು ಒಂದೇ ವೇದಿಕೆಯಲ್ಲಿ ಸಮೂಹ ಯೋಗಾಭ್ಯಾಸ ಮಾಡಿದ್ದರಿಂದ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಯಿತು!
ಸಾಮರಸ್ಯಕ್ಕಾಗಿ ಯೋಗಾಭ್ಯಾಸ
ಪ್ರತಿ ವರ್ಷ ಸಾಮೂಹಿಕವಾಗಿ ವಿಶ್ವದಾದ್ಯಂತ ನಡೆಯುವ ಯೋಗವು ಪ್ರತಿಬಾರಿ ಒಂದೊಂದು ಧ್ಯೇಯ ವಾಕ್ಯದಡಿ ಆಚರಿಸಲಾಗುತ್ತದೆ. ಮೊದಲ ಬಾರಿ 2015ರಲ್ಲಿ ‘ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ’ ಎಂಬ ಧ್ಯೇಯ ವಾಕ್ಯದಡಿ ಆಚರಿಸಲಾಯಿತು. ಅಂದಿನಿಂದಲೂ ಪ್ರತಿವರ್ಷ ಒಂದೊಂದು ಧೇಯವಾಕ್ಯದೊಂದಿಗೆ ವಿಭಿನ್ನ ಸ್ಥಳಗಳಲ್ಲಿ ವಿಶ್ವಯೋಗ ದಿನವನ್ನು ಆಚರಿಸಲಾಗುತ್ತದೆ.
ಯೋಗಾಭ್ಯಾಸದ ಪ್ರಯೋಜನಗಳನ್ನ ಮೂರು ವಿಭಾಗಗಳಾಗಿ ನೋಡಬಹುದು.
1. ಶಾರೀರಿಕ ಪ್ರಯೋಜನಗಳು ಇಲ್ಲಿ ನಮಗೆ ಯೋಗದಿಂದ ದೇಹದ ಲವಲವಿಕೆ ಹೆಚ್ಚಾಗುತ್ತದೆ, ರೋಗ ಪ್ರತಿರೋಧಕ ಶಕ್ತಿ ಬೆಳೆಯುತ್ತದೆ, ರಕ್ತದ ಒತ್ತಡ ಕಡಿಮೆಯಾಗುತ್ತದೆ, ನಿದ್ರಾಹೀನತೆಯನ್ನು ಹೊಡೆದೋಡಿಸುತ್ತದೆ.
2. ಮಾನಸಿಕ ಪ್ರಯೋಜನಗಳು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ, ಏಕಾಗ್ರತೆ ಸುಧಾರಿಸುತ್ತದೆ, ಮಾನಸಿಕ ತುಮಲ ಮತ್ತು ಚಿಂತೆಗಳು ದೂರವಾಗುತ್ತವೆ, ಮಾನಸಿಕ ದೌರ್ಬಲ್ಯಗಳು ಕಡಿಮೆ ಯಾಗುತ್ತವೆ, ಆನಂದ ಮತ್ತು ಉತ್ಸಾಹ ಭರಿತ ಮನಸ್ಸು ನಿರ್ಮಾಣವಾಗುತ್ತದೆ.
3. ಸಾಮಾಜಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳು ಎಲ್ಲರ ಮಾನಸಿಕ ಒಳನೋಟ ಸುಧಾರಣೆ ಯಾಗಿ ಜಾಗತಿಕ ಶಾಂತಿಗೆ ಕಾರಣವಾಗುತ್ತದೆ.
ವರ್ಷದಿಂದ ವರ್ಷಕ್ಕೆ ಯೋಗದ ಮಹತ್ವ ಪ್ರಭಾವ ಹೆಚ್ಚಾಗುತ್ತಾ ಸಾಗುತ್ತಿದೆ, ಪ್ರತಿಯೊಬ್ಬರು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗದತ್ತ ತಮ್ಮ ಮುಖ ಮಾಡುತ್ತಿದ್ದಾರೆ
ಯುದ್ಧ ನಿಲ್ಲಿಸಲು ಯೋಗ!
ಇಂದು ಆಚರಣೆಗೊಳ್ಳುತ್ತಿರುವ ವಿಶ್ವ ಯೋಗ ದಿನದ ಧ್ಯೇಯ ವಾಕ್ಯ ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ (ಯೋಗಾ ಫಾರ್ ಒನ್ ಅರ್ತ್, ಒನ್ ಹೆಲ್ತ್); ಆರೋಗ್ಯದ ಜೊತೆ ಭೂಮಿ ಯ ಸ್ವಾಸ್ಥ್ಯವನ್ನು ರಕ್ಷಿಸುವ ಸುಸ್ಥಿರ ಅಭಿವೃದ್ಧಿಯ ಪ್ರಾಮುಖ್ಯತೆಯನ್ನು ಈ ವರ್ಷದ ಯೋಗ ದಿನ ಎತ್ತಿ ತೋರಿಸಿದೆ. ಜಗತ್ತಿನ ಹಲವು ಭಾಗಗಳಲ್ಲಿ ನಡೆಯುತ್ತಿರುವ ವಿನಾಶಕಾರಿ ಯುದ್ಧದ ಹಿನ್ನೆಲೆಯಲ್ಲಿ ಈ ವರ್ಷದ ಯೋಗ ದಿನದ ಧ್ಯೇಯವಾಕ್ಯವ ಇನ್ನಷ್ಟು ಅರ್ಥವನ್ನು ಪಡೆದುಕೊಂಡಿದೆ.