ನೀರಜ್ ಚೋಪ್ರಾ ಕ್ಲಾಸಿಕ್ ಕೂಟದಿಂದ ಹೊರಬಿದ್ದ ಆಂಡರ್ಸನ್ ಪೀಟರ್ಸ್
Neeraj Chopra Classic: ಚೋಪ್ರಾ ಸೇರಿದಂತೆ ಸಚಿನ್ ದೇವ್, ರೋಹಿತ್ ಯಾದವ್ ಮತ್ತು ಸಾಹಿಲ್ ಸಿಲ್ವಾಲ್ ಭಾರತೀಯ ಸ್ಪರ್ಧಿಗಳಾಗಿದ್ದಾರೆ. ಈ ಸ್ಪರ್ಧೆಯು ಮೇ 24ರಂದು ಆಯೋಜನೆಯಾಗಿತ್ತು ಆದರೆ ಭಾರತ ಮತ್ತು ಪಾಕಿಸ್ತಾನ ಸೇನಾ ಸಂಘರ್ಷದ ಕಾರಣದಿಂದಾಗಿ ಮುಂದೂಡಲಾಗಿತ್ತು.


ಬೆಂಗಳೂರು: ಮಾಜಿ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್(Anderson Peters) ಗಾಯದ ಕಾರಣದಿಂದಾಗಿ ಜುಲೈ 5ರಂದು ಕಂಠೀರವ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ನೀರಜ್ ಚೋಪ್ರಾ ಕ್ಲಾಸಿಕ್ ಅಂತಾರಾಷ್ಟ್ರೀಯ ಜಾವೆಲಿನ್ ಥ್ರೋ(Neeraj Chopra Classic) ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಪೋಲೆಂಡ್‌ನ ಸಿಪ್ರಿಯನ್ ಮ್ರ್ಜಿಗಲ್ಡ್ ಅವರನ್ನು ಬದಲಿಯಾಗಿ ಹೆಸರಿಸಲಾಗಿದೆ. ಭಾರತದ ಕಿಶೋರ್ ಜೇನಾ(Kishore Jena )ಪಾದದ ಗಾಯದಿಂದಾಗಿ ಈವೆಂಟ್‌ನಿಂದ ಹೊರಗುಳಿದ ಒಂದು ದಿನದ ನಂತರ ಆಂಡರ್ಸನ್ ಕೂಡ ಹೊರಬಿದ್ದರು.
ಸ್ಪರ್ಧೆಯಲ್ಲಿ ನೀರಜ್ ಅವರ ಅತಿದೊಡ್ಡ ಪ್ರತಿಸ್ಪರ್ಧಿಯಾಗುವ ನಿರೀಕ್ಷೆಯಿದ್ದ ಪೀಟರ್ಸ್, ಫ್ರಾನ್ಸ್‌ನಲ್ಲಿ ಆಡಿದ ಕೊನೆಯ ಸ್ಪರ್ಧೆಯಲ್ಲಿ ಗಾಯಕ್ಕೆ ತುತ್ತಾಗಿದ್ದರು. ಇನ್ನೂ ಚೇತರಿಕೆ ಕಾಣದ ಕಾರಣದಿಂದ ಅಂತಿಮವಾಗಿ ಅವರು ಈವೆಂಟ್‌ನಿಂದ ಹೊರಗುಳಿಯಲು ನಿರ್ಧರಿಸಿದರು. ಭಾರತದಲ್ಲಿ ಆಯೋಜಿಸಲಾಗುತ್ತಿರುವ ಮೊದಲ ಅಂತಾರಾಷ್ಟ್ರೀಯ ಕಾರ್ಯಕ್ರಮವೂ ಆಗಿದೆ. ಹೀಗಾಗಿ ಅತಿದೊಡ್ಡ ಸ್ಪರ್ಧೆಯಲ್ಲಿ ಪೀಟರ್ಸ್ ಕೂಡ ಪಾಲ್ಗೊಳ್ಳುವ ನಿರೀಕ್ಷೆಯಿತ್ತು.
ಆಂಡರ್ಸನ್ ಪೀಟರ್ಸ್ ಇತ್ತೀಚೆಗೆ ಜೆಕ್ ಗಣರಾಜ್ಯದಲ್ಲಿ ನಡೆದ ಒಸ್ಟ್ರಾವಾ ಗೋಲ್ಡನ್ ಸ್ಪೈಕ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಅವರೊಂದಿಗೆ ಸ್ಪರ್ಧಿಸಿದರು. ಅಲ್ಲಿ ಅವರು ಮೂರನೇ ಸ್ಥಾನ ಪಡೆದಿದ್ದರು. ರಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ, ಜರ್ಮನಿಯ ಥಾಮಸ್ ರೋಹ್ಲರ್, ವಿಶ್ವ ಚಾಂಪಿಯನ್, ಕೆನ್ಯಾದ ಜೂಲಿಯಸ್ ಯೆಗೊ, ಅಮೆರಿಕದ ಕರ್ಟಿಸ್ ಥಾಂಪ್ಸನ್, ಜಪಾನಿನ ಗೆಂಕಿ ಡೀನ್, ಶ್ರೀಲಂಕಾದ ರುಮೇಶ್ ಪಥಿರಾಗೆ, ಬ್ರೆಜಿಲ್‌ನ ಲೂಯಿಸ್ ಮಾರಿಸಿಯೊ ಡಿಸಿಲ್ವಾ ಅವರು ಕಣದಲ್ಲಿರುವ ವಿದೇಶಿ ಅಥ್ಲೀಟ್‌ಗಳಾಗಿದ್ದಾರೆ.
ಇದನ್ನೂ ಓದಿ Neeraj Chopra: ಪ್ರಶಸ್ತಿ ಗೆದ್ದರೂ ಪ್ರದರ್ಶನ ತೃಪ್ತಿ ತಂದಿಲ್ಲ; ನೀರಜ್ ಬೇಸರ
ಚೋಪ್ರಾ ಸೇರಿದಂತೆ ಸಚಿನ್ ದೇವ್, ರೋಹಿತ್ ಯಾದವ್ ಮತ್ತು ಸಾಹಿಲ್ ಸಿಲ್ವಾಲ್ ಭಾರತೀಯ ಸ್ಪರ್ಧಿಗಳಾಗಿದ್ದಾರೆ. ಈ ಸ್ಪರ್ಧೆಯು ಮೇ 24ರಂದು ಆಯೋಜನೆಯಾಗಿತ್ತು ಆದರೆ ಭಾರತ ಮತ್ತು ಪಾಕಿಸ್ತಾನ ಸೇನಾ ಸಂಘರ್ಷದ ಕಾರಣದಿಂದಾಗಿ ಮುಂದೂಡಲಾಗಿತ್ತು.