ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mud Play: ಮಳೆಗಾಲದಲ್ಲಿ ಕೆಸರಾಟ: ತೊಂದರೆಯೇನಿಲ್ಲ!

ಮಳೆ ನೀರು, ಗದ್ದೆ ಅಥವಾ ಇನ್ನಾವುದೇ ಜಾಗದಲ್ಲಿರುವ ಮಣ್ಣು, ಕೆಸರು ಇಂಥವನ್ನು ನಿಜಕ್ಕೂ ಎರಚಿಕೊಂಡು ಆಡುವ ಬಗ್ಗೆ ಇಲ್ಲಿ ಹೇಳುತ್ತಿರುವುದು. ಇಂದಿನ ದಿನಗಳಲ್ಲಿ ಬಹುತೇಕ ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪವಾಗಿರುವ ಮಣ್ಣಾಟ ಒಳ್ಳೆಯದು ಎನ್ನುತ್ತವೆ ಕೆಲವು ಅಧ್ಯಯನಗಳು...ಯಾಕೆ ಆಡಬೇಕು?

ಮಳೆಗಾಲದಲ್ಲಿ ಕೆಸರಾಟ ಉತ್ತಮವೇ?

ಸಾಂದರ್ಭಿಕ ಚಿತ್ರ.

Profile Pushpa Kumari Jul 1, 2025 6:00 AM

ಬೆಂಗಳೂರು: ನಾವು ಇಲ್ಲಿ ಹೇಳ ಹೊರಟಿರುವುದು ಮಳೆ ನೀರು, ಗದ್ದೆ ಅಥವಾ ಇನ್ನಾವುದೇ ಜಾಗದಲ್ಲಿರುವ ಮಣ್ಣು, ಕೆಸರು ಇಂಥವನ್ನು ಎರಚಿಕೊಂಡು ಆಡುವ ಬಗ್ಗೆ. ಇಂದಿನ ದಿನಗಳಲ್ಲಿ ಬಹುತೇಕ ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪವಾಗಿರುವ ಮಣ್ಣಾಟ ಒಳ್ಳೆಯದು ಎನ್ನುತ್ತವೆ ಕೆಲವು ಅಧ್ಯಯನಗಳು. ಹಿಂದಿನ ಕಾಲದ ತಾಯಂದಿರಿಗೆ ತಮ್ಮ ಮಕ್ಕಳು ಎಂಥಾ ಮಣ್ಣುರಾಡಿಯಲ್ಲಿ ಆಡಿ, ಬಿದ್ದು ಹೊರಳಾಡಿ ಬಂದರೂ ತಕರಾರು ಇರುತ್ತಿರಲಿಲ್ಲ. ಮಕ್ಕಳಿರುವುದೇ ಹೀಗೆ ಎಂದು ನಿರುಮ್ಮಳವಾಗಿರುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಬೀದಿಯಲ್ಲಿ ಆಡುವುದೇ ಕಡಿಮೆಯಾಗಿದೆ. ಹಾದಿ-ಬೀದಿಯಲ್ಲಿ ಸಿಕ್ಕವರೊಟ್ಟಿಗೆ ಸಿಕ್ಕ ರೀತಿಯಲ್ಲಿ ರಸ್ತೆರಾಜ ಅಥವಾ ರಾಣಿಯರಂತೆ ಮಕ್ಕಳು ಆಡುವ ದೃಶ್ಯವೂ ಅದೃಶ್ಯವಾಗಿದೆ. ಹಾಗಾದರೆ ಮಕ್ಕಳನ್ನು ಮಣ್ಣಲ್ಲಿ, ಕೆಸರಲ್ಲಿ, ಕೊಳೆಯಲ್ಲಿ ಆಡಲು ಬಿಡಬೇಕೆ?

ಮೈ-ಮುಸುಡಿಗೆಲ್ಲ ಮಣ್ಣು ಮೆತ್ತಿಕೊಂಡು, ವಸ್ತ್ರಗಳನ್ನೂ ಕೊಳೆ ಮಾಡಿಕೊಂಡು, ಪರ ಮಾನಂದದ ನಗೆಯನ್ನು ಬೀರುವ ಆ ದಿನಗಳಿಗೆ ಮಕ್ಕಳನ್ನು ಮತ್ತೆ ಕರೆದೊಯ್ಯಬೇಕೆ? ಮಣ್ಣ ಲ್ಲಿರುವ ಅಪಾಯಕಾರಿ ಬ್ಯಾಕ್ಟೀರಿಯಾಗಳಿಗೆ ಮಕ್ಕಳನ್ನು ಈ ದಿನಗಳಲ್ಲಿ ಒಡ್ಡಬೇಕೆ? ಎಂಬುದು ಖಂಡಿತಾ ಚರ್ಚಾಸ್ಪದ ವಿಷಯವೇ. ತಂದೆ-ತಾಯಂದಿರು ಬೇಡವೇ ಬೇಡ ಎಂದು ಹೇಳಿದರೂ, ಅಗತ್ಯವಾಗಿ ಬೇಕು ಎಂದು ಹೇಳುತ್ತಾರೆ ತಜ್ಞರು. ಅಂದರೆ ಮಕ್ಕಳನ್ನು ತೀರಾ ಗಟಾರದಲ್ಲಿ ಆಡು ವುದಕ್ಕೆ ಬಿಡಬೇಕು ಎಂಬರ್ಥದಲ್ಲಿ ಅಲ್ಲ. ಆದರೆ ಇಂಟರ್‌ಲಾಕ್‌ ಹಾಕಿದ ಆಟದ ಮೈದಾನದಲ್ಲಿ ಬಿಡುವುದು ಸೂಕ್ತವಲ್ಲ. ಬದಲಿಗೆ ಅವರು ಕಲ್ಲು-ಮಣ್ಣು, ಕೆಸರು, ಮರಳಿನಂಥ ಜಾಗಗಳಲ್ಲಿ ಆಡುವುದು ಸರಿಯಾದದ್ದು.

ಯಾಕೆ ಆಡಬೇಕು?: ಮಣ್ಣಲ್ಲಾಡುವ ಮಕ್ಕಳಿಗೆ ದೈಹಿಕ ಮತ್ತು ಮಾನಸಿಕವಾಗಿ ಲಾಭವಿದೆ ಎನ್ನುತ್ತದೆ ವೈದ್ಯ ವಿಜ್ಞಾನ. ಬಾಲ್ಯದಲ್ಲಿ ಮಣ್ಣಿನಲ್ಲಾಡಿ, ಅದರಲ್ಲಿರುವ ಸೌಮ್ಯ ರೋಗಾಣುಗಳಿಗೆ ತೆರೆದುಕೊಳ್ಳದಿದ್ದವರಲ್ಲಿ (ಮಣ್ಣಲ್ಲಿ ಇರುವ ರೋಗಾಣುಗಳೆಲ್ಲ ಸೌಮ್ಯ ಎನ್ನುವುದು ಇದರರ್ಥ ವಲ್ಲ!) ಮುಂದೆಯೂ ರೋಗ ನಿರೋಧಕ ಶಕ್ತಿ ಕ್ಷೀಣವಾಗಿಯೇ ಇರುತ್ತದೆ ಎಂಬುದು ಪರಿಣಿತರ ಅಭಿಪ್ರಾಯ. ಮೊದಲಿಗೆ ಸೌಮ್ಯ ರೋಗಾಣುಗಳಿಗೆ ನಿರೋಧಕತೆ ಬೆಳೆಸಿಕೊಳ್ಳುವ ದೇಹವು ಕ್ರಮೇಣ ಅಪಾಯಕಾರಿ ರೋಗಾಣುಗಳನ್ನು ಎದುರಿಸಲೂ ಸನ್ನದ್ಧವಾಗುತ್ತದೆ ಎಂದು ಅವರ ಸ್ವಚ್ಛತಾ ಸಿದ್ಧಾಂತ ಅಥವಾ ʻಹೈಜೀನ್‌ ಹೈಪಾಥಿಸಿಸ್‌ʼ ಪ್ರತಿಪಾದಿಸುತ್ತದೆ. ಈ ಸಿದ್ಧಾಂತವನ್ನು ವಿಶ್ವದ ಹಲವು ದೇಶಗಳ ಸಂಶೋಧಕರು ಒಪ್ಪುತ್ತಾರೆ.

ಕೆಲವು ಅಧ್ಯಯನಗಳ ಪ್ರಕಾರ, ಆಸ್ತಮಾ, ಉರಿಯೂತ ಮತ್ತು ಅಲರ್ಜಿಯಂಥ ತೊಂದರೆಗಳು ಇರುವ ಮಕ್ಕಳನ್ನೂ ಮಣ್ಣಿನಿಂದ ದೂರ ಇಡುವ ಅಗತ್ಯವಿಲ್ಲ. ಮೊದಲಿಗೆ ಧೂಳು, ಮಣ್ಣಿನಿಂದಲೇ ಎಲ್ಲ ರೀತಿಯ ಉರಿಯೂತ ಮತ್ತು ಅಲರ್ಜಿಗಳು ಹೆಚ್ಚಾಗುವಂತೆ ಭಾಸವಾದರೂ, ಕ್ರಮೇಣ ಅದಕ್ಕೆ ಒಗ್ಗಿಕೊಳ್ಳುವುದಕ್ಕೆ ಎಳೆಯ ದೇಹ ಪ್ರಯತ್ನಿಸುತ್ತದೆ. ಇದರಿಂದ ಹೊಟ್ಟೆಯಲ್ಲೂ ಒಂದಿಷ್ಟು ಆರೋಗ್ಯಕರ ಬ್ಯಾಕ್ಟೀರಿಯಾಗಳ ಸಂಖ್ಯೆ ವೃದ್ಧಿಸುತ್ತದಂತೆ. ಸಣ್ಣ-ಪುಟ್ಟ ಕಾರಣ ಗಳಿಗೆಲ್ಲಾ ಮಕ್ಕಳು ಅನಾರೋಗ್ಯಕ್ಕೆ ಈಡಾಗುವುದನ್ನು ಇದು ಕ್ರಮೇಣ ತಡೆಯುತ್ತದೆ.

ಇದನ್ನು ಓದಿ:Health Tips: ಆಕಳಿಕೆ ಅತಿಯಾದರೆ ತೊಂದರೆಯೇ?

ಚಲನೆ ಮತ್ತು ಸಂವೇದನೆ: ಇದಿಷ್ಟೇ ಅಲ್ಲ, ಮಕ್ಕಳ ಆಟಕ್ಕೆ ಯಾವುದೇ ಸಿದ್ಧ ಮಾದರಿ ಇರು ವುದಿಲ್ಲ. ಆ ದಿನದ ಆ ಹೊತ್ತಿಗೆ ಅವರ ಮನಸಿಗೆ ಬಂದಿದ್ದೇ ಆಟ. ಮಣ್ಣಾಟಕ್ಕೂ ಯಾವುದೇ ಚೌಕಟ್ಟಿರುವುದಿಲ್ಲ. ಮೊದಲಿಗೆ ಮಣ್ಣು ಗೋಚುವುದು, ಎರಚುವುದರಿಂದ ಆರಂಭವಾಗುವ ಅವರ ಕೆಲಸಗಳು, ಮಣ್ಣಿನಲ್ಲಿ ಪಾತಿ, ಹಣತೆಯಂಥ ಏನೇನೋ ಮಾಡುವವರೆಗೂ ಮುಂದುವರಿಯುತ್ತದೆ. ಇದರಿಂದ ಅವರ ಸಂವೇದನೆ ಮತ್ತು ಚಲನೆಗಳೆರಡೂ ಚುರುಕುಗೊಳ್ಳುತ್ತವೆ. ಇದನ್ನು ಸೆನ್ಸರಿ ಮೋಟರ್‌ ಡೆವೆಲಪ್‌ಮೆಂಟ್‌ ಎನ್ನಲಾಗುತ್ತದೆ. ಮಾನವನ ದೇಹ ಮತ್ತು ಮೆದುಳಿನ ವಿಕಾಸದಲ್ಲಿ ಇಂಥ ಅಂಶಗಳು ಮಹತ್ವದ ಪಾತ್ರ ವಹಿಸುತ್ತವೆ.

ನಗರಗಳಲ್ಲಿ ಅತ್ಯಂತ ಅಚ್ಚುಕಟ್ಟಾದ ಬಾಲ್ಯವನ್ನು ಕಳೆದವರಿಗೂ, ಹಳ್ಳಿಗಳಲ್ಲಿ ಮಣ್ಣಾಟ ಆಡಿಕೊಂಡು ಬೀಡುಬೀಸಾಗಿ ಬೆಳೆದವರಿಗೂ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯಗಳಲ್ಲಿ ವ್ಯತ್ಯಾಸವಿರುತ್ತದೆ. ನಿಸರ್ಗದೊಂದಿಗೆ ನಂಟು ಹೊಂದುವುದಕ್ಕೂ ಇದು ಯೋಗ್ಯ ಕ್ರಮ. ಹಾಗಾಗಿ ಪುಟ್ಟ ಮಕ್ಕಳನ್ನು ಮಣ್ಣಾಟ ಆಡಲು ಬಿಡಿ ಎನ್ನುತ್ತಾರೆ ತಜ್ಞರು. ಆದರೆ ಅವರು ಮಣ್ಣನ್ನು ನೇರ ವಾಗಿ ಕಣ್ಣು ಅಥವಾ ಬಾಯಿಗೆ ಹಾಕದಂತೆ ಜಾಗ್ರತೆಯನ್ನೂ ವಹಿಸುವುದು ಅಗತ್ಯ. ಕೋಣೆಯ ಕೂಸು ಕೊಳೆಯಿತು, ಬೀದಿ ಕೂಸು ಬೆಳೆಯಿತು ಎಂದು ಹಳೆಯ ಜನ ಗಾದೆ ಮಾಡಿದ್ದು ಸುಮ್ಮನೆ ಅಲ್ಲ!