Stock Market: ಸೆನ್ಸೆಕ್ಸ್, ನಿಫ್ಟಿ ಅಲ್ಪ ಏರಿಕೆ, ಚಿನ್ನದ ದರ ಮತ್ತಷ್ಟು ಏರಿಕೆ ಸಂಭವ
Share Market: ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 70 ಅಂಕ ಏರಿಕೆಯಾಗಿ 80,288ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 8 ಅಂಕ ಏರಿಕೆಯಾಗಿ 24,335ಕ್ಕೆ ಸ್ಥಿರವಾಯಿತು. ಅಕ್ಷಯ ತೃತೀಯವು ಏಪ್ರಿಲ್ 30ಕ್ಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್, ಚಿನ್ನದಲ್ಲಿ ಹೂಡಿಕೆ ಲಾಭದಾಯಕವಾಗಲಿದೆ.

ಸಾಂದರ್ಭಿಕ ಚಿತ್ರ.

ಮುಂಬೈ: ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex) ಮಂಗಳವಾರ 70 ಅಂಕ ಏರಿಕೆಯಾಗಿ 80,288ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತು (Stock Market). ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ (Nifty) 8 ಅಂಕ ಏರಿಕೆಯಾಗಿ 24,335ಕ್ಕೆ ಸ್ಥಿರವಾಯಿತು. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟೆಕ್ ಮಹೀಂದ್ರಾ ಷೇರುಗಳು ತಲಾ 3% ಚೇತರಿಸಿತು. ಈ ನಡುವೆ ಅಕ್ಷಯ ತೃತೀಯವು ಏಪ್ರಿಲ್ 30ಕ್ಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್, ಚಿನ್ನದಲ್ಲಿ ಹೂಡಿಕೆ ಲಾಭದಾಯಕವಾಗಲಿದೆ. ಬಂಗಾರದ ದರ ದೀರ್ಘಾವಧಿಯಲ್ಲಿ 10 ಗ್ರಾಮ್‌ಗೆ 1 ಲಕ್ಷದ 6 ಸಾವಿರ ರುಪಾಯಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಅದಾನಿ ಗ್ರೂಪ್‌ನ ಸಂಸ್ಥೆಯಾಗಿರುವ ಅಂಬುಜಾ ಸಿಮೆಂಟ್ಸ್ ತನ್ನ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ್ದು, 929 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಕಂಪನಿಯ ಆದಾಯ 19% ಏರಿಕೆಯಾಗಿದ್ದು 5,670 ಕೋಟಿ ರುಪಾಯಿಗೆ ವೃದ್ಧಿಸಿದೆ.
ಈ ಸುದ್ದಿಯನ್ನೂ ಓದಿ: ATM Transaction Charges: ಗ್ರಾಹಕರೇ ಅಲರ್ಟ್...ಅಲರ್ಟ್! ಮೇ 1ರಿಂದ ATM ವಿತ್ ಡ್ರಾ ಶುಲ್ಕ ಹೆಚ್ಚಳ
ಬೆಂಗಳೂರು ಮೂಲದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಕ ಅಥೆರ್ ಎನರ್ಜಿಯ ಐಪಿಒದ ಎರಡನೇ ದಿನ ಕೇವಲ ಶೇ. 23ರಷ್ಟು ಸಬ್‌ಸ್ಕೃಪ್ಷನ್ ಆಗಿದೆ. ಏಪ್ರಿಲ್ 30ಕ್ಕೆ ಐಪಿಒ ಮುಕ್ತಾಯವಾಗುತ್ತಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಹೂಡಿಕೆ ಮುಂದುವರಿದಿದೆ. ಕ್ಯಾಪಿಟಲ್ ಗೂಡ್ಸ್, ಕನ್‌ಸ್ಯೂಮರ್ ಗೂಡ್ಸ್, ಐಟಿ, ತೈಲ ಮತ್ತು ಅನಿಲ, ವಿದ್ಯುತ್, ಟೆಲಿಕಾಂ, ಫಾರ್ಮಾ ವಲಯದ ಷೇರುಗಳು ಚೇತರಿಸಿತು. ಭಾರತ್ ಎಲೆಕ್ಟ್ರಾನಿಕ್ಸ್ , ಒಎನ್‌ಜಿಸಿ, ಕೋಲ್ ಇಂಡಿಯಾ, ಅಲ್ಟ್ರಾ ಟೆಕ್ ಷೇರು ದರ ಏರಿಕೆ ದಾಖಲಿಸಿತು.
ಅಮೆರಿಕ ಮತ್ತು ಚೀನಾ ನಡುವೆ ಸುಂಕ ಸಮರಕ್ಕೆ ಸಂಬಂಧಿಸಿ ಮಾತುಕತೆಯಾಗುವ ಸುಳಿವು ಸಿಕ್ಕಿದ್ದು, ಷೇರು ಮಾರುಕಟ್ಟೆ ಚೇತರಿಸುತ್ತಿದೆ. ಸಂಧಾನ ನಡೆದರೆ ಚೀನಾ ವಿರುದ್ಧದ ಪ್ರತಿ ಸುಂಕದಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದು ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಪ್ರಭಾವ ಬೀರಿದೆ. ಜತೆಗೆ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೊಮ್ ಪೊವೆಲ್ ಅವರನ್ನು ವಜಾಗೊಳಿಸುವ ಉದ್ದೇಶವೂ ತಮಗಿಲ್ಲ ಎಂದು ಟ್ರಂಪ್ ಹೇಳಿರುವುದು ಪ್ರಭಾವ ಬೀರಿದೆ. ಎಚ್‌ಸಿಎಲ್ ಟೆಕ್‌ನ ಉತ್ತಮ ತ್ರೈಮಾಸಿಕ ರಿಸಲ್ಟ್ ಕೂಡ ಸಕಾರಾತ್ಮಕವಾಗಿತ್ತು.