ದಾಳಿಯ ಸಮಯ, ಗುರಿ ನೀವೇ ನಿರ್ಧರಿಸಿ; ಭಯೋತ್ಪಾಕರ ಮಟ್ಟ ಹಾಕಲು ಸೇನೆಗೆ ಸಂಪೂರ್ಣ ಅಧಿಕಾರ ನೀಡಿದ ಪ್ರಧಾನಿ ಮೋದಿ
Narendra Modi: ಪಹಲ್ಗಾಮ್ ಉಗ್ರ ದಾಳಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿರುವ ಭಾರತ ಇದೀಗ ಕಾರ್ಯಾಚರಣೆಗೆ ಸಂಬಂಧಿಸಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಆ ಮೂಲಕ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ವ ಸನ್ನದ್ಧವಾಗಿದೆ. ಏ. 29ರಂದು ದಿಲ್ಲಿಯಲ್ಲಿನ ತಮ್ಮ ಅಧಿಕೃತ ನಿವಾಸದಲ್ಲಿ ಪ್ರಮುಖ ಭದ್ರತಾ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.


ಹೊಸದಿಲ್ಲಿ: ಪಹಲ್ಗಾಮ್ ಉಗ್ರ ದಾಳಿಗೆ (Pahalgam Attack) ಸೇಡು ತೀರಿಸಿಕೊಳ್ಳಲು ಸಜ್ಜಾಗಿರುವ ಭಾರತ ಇದೀಗ ಕಾರ್ಯಾಚರಣೆಗೆ ಸಂಬಂಧಿಸಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಆ ಮೂಲಕ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ವ ಸನ್ನದ್ಧವಾಗಿದೆ. ಏ. 29ರಂದು ದಿಲ್ಲಿಯಲ್ಲಿನ ತಮ್ಮ ಅಧಿಕೃತ ನಿವಾಸದಲ್ಲಿ ಪ್ರಮುಖ ಭದ್ರತಾ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತದ ಮಿಲಿಟರಿ ಪ್ರತಿಕ್ರಿಯೆಯ ವಿಧಾನ, ಗುರಿ ಮತ್ತು ಸಮಯವನ್ನು ನಿರ್ಧರಿಸಲು ಅವರು ಸಶಸ್ತ್ರ ಪಡೆಗಳಿಗೆ ‘ಸಂಪೂರ್ಣ ಸ್ವಾತಂತ್ರ್ಯ’ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅವರನ್ನು ಭೇಟಿಯಾದ ನಂತರ ಪ್ರಧಾನಿ ಈ ತೀರ್ಮಾನ ಪ್ರಕಟಿಸಿದರು.
ಭಯೋತ್ಪಾದನೆಗೆ ಹೊಡೆತ ನೀಡುವುದು ನಮ್ಮ ರಾಷ್ಟ್ರೀಯ ಸಂಕಲ್ಪ ಎಂದು ಘೋಷಿಸಿದ ಮೋದಿ ಭಾರತೀಯ ಸೇನೆಯ ಮೇಲೆ ತಮಗೆ ಸಂಪೂರ್ಣ ನಂಬಿಕೆ ಮತ್ತು ವಿಶ್ವಾಸವಿದೆ ಪುನರುಚ್ಚರಿಸಿದರು.
2019ರ ಫೆಬ್ರವರಿಯಲ್ಲಿ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದಿತ್ತು. ಆ ಘಟನೆ ಮಾಸುವ ಮುನ್ನವೇ ಏ. 22ರಂದು ಪಹಲ್ಗಾಮ್ ಭೀಕರ ಹತ್ಯಾಕಾಂಡ ನಡೆದಿದೆ. ಪುಲ್ವಾಮಾ ದಾಳಿಯ ಬಳಿಕ ನಡೆದ ಭೀಕರ ಆಕ್ರಮಣ ಇದಾಗಿದೆ. ಈ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಬಲಿಯಾಗಿದ್ದಾರೆ. ಪ್ರವಾಸಿಗರನ್ನು ಹತ್ಯೆ ಮಾಡಿದ ಭಯೋತ್ಪಾದಕರ ವಿರುದ್ಧ ಮಿಲಿಟರಿ ಕ್ರಮಕ್ಕೆ ಪ್ರಧಾನಿ ಸಂದೇಶವು ಹಸಿರು ನಿಶಾನೆ ತೋರಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
PM's Big "Mode, Targets, Timing" Message To Forces At Key Meet: SourcesThe meeting comes a day before the PM-led Cabinet Committee on Security, the government's highest decision-making body on national security, is to meet for a second time in seven days.#IndoPakBorder #indiaPak pic.twitter.com/YzDg5QrR1i
— vaibhav (@VAIBHAVxTIWARI) April 29, 2025
2019ರ ಪುಲ್ವಾಮಾ ದಾಳಿಯ ನಂತರ ಕಠಿಣ ಕ್ರಮ ಕೈಗೊಂಡ ಭಾರತ ಪಾಕಿಸ್ತಾನಕ್ಕೆ ನುಗ್ಗಿ ಭಯೋತ್ಪಾದಕರನ್ನು ಸದೆಬಡಿದಿತ್ತು. ಈ ಏರ್ ಸ್ಟ್ರೈಕ್ ಮೂಲಕ ಪಾಕಿಸ್ತಾನದ ಬಾಲಕೋಟ್‌ನ ಉಗ್ರ ನೆಲೆಯನ್ನು ಧ್ವಂಸ ಮಾಡಲಾಗಿತ್ತು. ಪಾಕ್ ಸೈನ್ಯದ ನೆರವಿನಿಂದ ಇಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಕಾರ್ಯ ನಿರ್ವಹಿಸುತ್ತಿತ್ತು.
ಪಾಕಿಸ್ತಾನ ಮೂಲದ ಮತ್ತೊಂದು ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆ ಪಹಲ್ಗಾಮ್ ದಾಳಿಯ ಹಿಂದಿದೆ. ಇದು ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎನ್ನುವುದನ್ನು ಸೂಚಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಅಮೆರಿಕ, ರಷ್ಯಾ, ಚೀನಾ, ಜಪಾನ್ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳ ರಾಜತಾಂತ್ರಿಕರಿಗೆ ಭಾರತ ಮಾಹಿತಿ ನೀಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಹಲವು ನಾಯಕರು, ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರು ಭಾಗವಹಿಸಿದರು. ರಾಷ್ಟ್ರೀಯ ಸುರಕ್ಷತೆಯ ಬಗ್ಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಪ್ರಧಾನಿ ನೇತೃತ್ವದ ಭದ್ರತಾ ಕ್ಯಾಬಿನೆಟ್ ಸಮಿತಿ ಏ. 30ರಂದು ಸಭೆ ನಡೆಸಲಿದ್ದು, ಅದಕ್ಕಿಂತ 1 ದಿನ ಮೊದಲು ಈ ಸಮಾಲೋಚನೆ ನಡೆದಿದೆ. ವಿಶೇಷ ಎಂದರೆ ಭದ್ರತಾ ಕ್ಯಾಬಿನೆಟ್ ಸಮಿತಿ ವಾರದೊಳಗೆ ನಡೆಸುವ 2ನೇ ಸಭೆ ಇದಾಗಿರಲಿದೆ.