ಉದ್ಯೋಗ ಪಡೆಯಲು ಕೌಶಲ್ಯ ಸಹಿತವಾಗಿ ಸಜ್ಜುಗೊಳಿಸಲು ಪದವಿಯ ಹಂತದಲ್ಲೇ ಕ್ರಮ: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್*
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಳೆದ 2 ವರ್ಷಗಳಲ್ಲಿ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ಕಟ್ಟಡ ನವೀಕರಣ, ಮೂಲಸೌಕರ್ಯ ಅಭಿವೃದ್ಧಿ, ಕಾಂಪೌಂಡ್ ನಿರ್ಮಾಣ, ಸುಣ್ಣಬಣ್ಣ ಬಳಿಯಲು 350 ಕೋಟಿ ರೂಪಾಯಿಗಳ ಅಗತ್ಯವಿದ್ದು, ಈ ಬಾರಿಯ ಬಜೆಟ್ ನಲ್ಲಿ ಅನುದಾನ ದೊರೆಯದ ಕಾರಣ ಮುಖ್ಯಮಂತ್ರಿಗಳಿಗೆ ಪ್ರತ್ಯೇಕವಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ


ಚಿಕ್ಕಬಳ್ಳಾಪುರ: ಯಾವ ಕ್ಷೇತ್ರದಲ್ಲಿ ಉದ್ಯೋಗಗಳಿಗೆ ಹೆಚ್ಚಿನ ಬೇಡಿಕೆ ಇದೆಯೋ ಆ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳನ್ನು ಕೌಶಲ್ಯಸಹಿತವಾಗಿ ಸಜ್ಜುಗೊಳಿಸಲು ಪದವಿ ಹಂತದಲ್ಲೇ ಕ್ರಮ ಕೈಗೊಳ್ಳುವ ಮೂಲಕ ಉನ್ನತ ಶಿಕ್ಷಣ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ತಿಳಿಸಿದರು. ಶಿಡ್ಲಘಟ್ಟ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ತರಗತಿ ಕೊಠಡಿ, ಶೌಚಾಲಯ, ಪ್ರಯೋಗಾಲಯ ಹಾಗೂ ಇತರೆ ನಿರ್ಮಾಣ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ದರು.
ಕಳೆದ ಎರಡು ವರ್ಷಗಳಲ್ಲಿ ಉನ್ನತ ಶಿಕ್ಷಣ ಇಲಾಖೆಯಲ್ಲಿ ಹಲವಾರು ಬದಲಾವಣೆಗಳನ್ನು ತರುವ ಪ್ರಯತ್ನ ಮಾಡಲಾಗಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಸ್ತುತ ಸ್ಪರ್ಧಾತ್ಮಕ ಯುಗ ದಲ್ಲಿ ಹೊಸದಾಗಿ ಹೆಚ್ಚು ಬೇಡಿಕೆ ಇರುವ ಕೋರ್ಸ್ ಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು
2023-24 ನೇ ಸಾಲಿನಲ್ಲಿ 21000 ಹೊಸ ಪ್ರವೇಶಾತಿಗಳಿಗೆ ಅವಕಾಶ ನೀಡಲಾಗಿದೆ. ಕಾಲೇಜು ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಕಾಲೇಜುಗಳಲ್ಲಿನ ಬೋಧಕ ಹುದ್ದೆಗಳ ಕೊರತೆ ನೀಗಿಸಲು ಈಗಾಗಲೇ 2000 ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದ್ದಾರೆ. ನೇಮಕಾತಿ ಪ್ರಕ್ರಿಯೆಗೂ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.
ಇದನ್ನೂ ಓದಿ: Chikkaballapur News: ಗಣಿಗಾರಿಕೆ, ಅಕ್ರಮ ವಿರುದ್ಧ ಹೋರಾಟ ; ಮಂಚೇನಹಳ್ಳಿ ಬಂದ್ ಯಶಸ್ವಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಳೆದ 2 ವರ್ಷಗಳಲ್ಲಿ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲಾ ಕಾಲೇಜು ಗಳ ಕಟ್ಟಡ ನವೀಕರಣ, ಮೂಲಸೌಕರ್ಯ ಅಭಿವೃದ್ಧಿ, ಕಾಂಪೌಂಡ್ ನಿರ್ಮಾಣ, ಸುಣ್ಣಬಣ್ಣ ಬಳಿಯಲು 350 ಕೋಟಿ ರೂಪಾಯಿಗಳ ಅಗತ್ಯವಿದ್ದು, ಈ ಬಾರಿಯ ಬಜೆಟ್ ನಲ್ಲಿ ಅನುದಾನ ದೊರೆಯದ ಕಾರಣ ಮುಖ್ಯಮಂತ್ರಿಗಳಿಗೆ ಪ್ರತ್ಯೇಕವಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ.
ಅಲ್ಲದೆ ಹೊಸ ಕಾಲೇಜುಗಳು ಮಂಜೂರಾದಾಗ ಅದರ ಅಂದಾಜು ವೆಚ್ಚದಲ್ಲೇ ಪ್ರಯೋಗಾಲಯ, ಕಾಂಪೌಂಡ್ ಮತ್ತಿತರ ಖರ್ಚನ್ನು ಆರಂಭದಲ್ಲೇ ಸೇರಿಸಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ 2 ಕೋಟಿ ಅನುದಾನಕ್ಕೆ ಮನವಿ ಸಲ್ಲಿಸಲಾಗಿತ್ತು. ಶೇ.70 ರಷ್ಟು ಬಡವರು,ಹಿಂದುಳಿದ ಸಮುದಾಯಗಳ ಕುಟುಂಬಗಳ ಮಕ್ಕಳ ವ್ಯಾಸಂಗದ ಹಿತ ದೃಷ್ಟಿಯಿಂದ ಉನ್ನತ ಶಿಕ್ಷಣ ಸಚಿವರು 3 ಕೋಟಿ ರೂಪಾಯಿ ನೀಡಿದ್ದಾರೆ.
ಜೊತೆಗೆ ಕ್ಷೇತ್ರದ ಅಭಿವೃದ್ಧಿಗೂ ಸಕಾರಾತ್ಮಕವಾಗಿ ಸ್ಪಂದಿಸಿ ಸಹಕರಿಸುತ್ತಿದ್ದು, ಇಂದು 9 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಶಿಡ್ಲಘಟ್ಟ ಕ್ಷೇತ್ರವೂ ಸೇರಿದಂತೆ ಒಟ್ಟಾರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಾಶ್ವತವಾಗಿ ಉಳಿಯುವ ಕೆಲಸಗಳನ್ನು ಮಾಡುತ್ತಿದ್ದು, ಅವರಿಗೆ ಸಂಪೂರ್ಣ ಸಹಕಾರ ನೀಡಲಾಗು ವುದು. ರಾಜ್ಯ ಸರ್ಕಾರವೂ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಿ ಸಹಕರಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ವೆಂಕಟಸ್ವಾಮಿ,ಗ್ರೇಡ್ 2 ತಹಸಿಲ್ದಾರ್ ಪೂರ್ಣಿಮಾ, ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಣಾಧಿಕಾರಿ ಆರ್ ಹೇಮಾವತಿ, ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು,ಮತ್ತಿತರರು ಹಾಜರಿದ್ದರು.