Share Market: ಬಿಎಸ್‌ಇನಲ್ಲಿ ಸೆನ್ಸೆಕ್ಸ್ 625 ಅಂಕ ಕುಸಿದಿದ್ದೇಕೆ?
Stock Market: ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 625 ಅಂಕ ಕುಸಿತಕ್ಕೀಡಾಗಿ 81,551ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ175 ಅಂಕ ಕಳೆದುಕೊಂಡು 24,826ಕ್ಕೆ ಸ್ಥಿರವಾಯಿತು. ಇದಕ್ಕೇನು ಕಾರಣ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ಕೇಶವ ಪ್ರಸಾದ್ ಬಿ.
ಮುಂಬೈ: ಷೇರು ಮಾರುಕಟ್ಟೆ (Share Market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex) ಮಂಗಳವಾರ 625 ಅಂಕ ಕುಸಿತಕ್ಕೀಡಾಗಿ 81,551ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ (Nifty) 175 ಅಂಕ ಕಳೆದುಕೊಂಡು 24,826ಕ್ಕೆ ಸ್ಥಿರವಾಯಿತು. ಅಮೆರಿಕ ಮತ್ತು ಏಷ್ಯನ್ ಮಾರುಕಟ್ಟೆಗಳಿಂದ ದುರ್ಬಲ ಸಂದೇಶ ರವಾನೆಯಾದ್ದರಿಂದ ಭಾರತೀಯ ಷೇರು ಪೇಟೆಯಲ್ಲಿ ಸೂಚ್ಯಂಕಗಳು ಇಳಿಯಿತು. ಹಣಕಾಸು ಮತ್ತು ಐಟಿ ಸ್ಟಾಕ್ಸ್‌ಗಳು ನಷ್ಟಕ್ಕೀಡಾಯಿತು.
ಸೆಕ್ಟರ್‌ಗಳ ಪೈಕಿ ನಿಫ್ಟಿ ಬ್ಯಾಂಕ್ ಮತ್ತು ಫೈನಾನ್ಷಿಯಲ್ ಸರ್ವೀಸ್, ನಿಫ್ಟಿ ಐಟಿ, ಆಟೊ, ಎಫ್‌ಎಂಸಿಜಿ ಮ್ತು ಆಯಿಲ್ ಮತ್ತು ಗ್ಯಾಸ್ ಸೆಕ್ಟರ್‌ಗಳು ನಷ್ಟಕ್ಕೀಡಾಯಿತು. ಇತ್ತೀಚೆಗೆ ಸ್ಟಾಕ್ ಇಂಡೆಕ್ಸ್‌ಗಳು ಚೇತರಿಸಿದ್ದರಿಂದ ಹಲವಾರು ಮಂದಿ ಪ್ರಾಫಿಟ್ ಬುಕಿಂಗ್ ಮಾಡಿದರು. ಅಮೆರಿಕ-ಯುರೋಪ್ ನಡುವಣ ವ್ಯಾಪಾರ ಸಂಘರ್ಷ ನಕಾರಾತ್ಮಕ ಪ್ರಭಾವ ಬೀರಿತು.
ಈ ಸುದ್ದಿಯನ್ನೂ ಓದಿ: India Economy: ವಿಶ್ವದಲ್ಲೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಐದು ರಾಷ್ಟ್ರಗಳಾವುವು?
ಸೆನ್ಸೆಕ್ಸ್-ನಿಫ್ಟಿ ಕುಸಿತಕ್ಕೆ 5 ಕಾರಣ
- ಪ್ರಾಫಿಟ್ ಬುಕಿಂಗ್
- ನಿಫ್ಟಿ 50 ಇಂಡೆಕ್ಸ್‌ನಲ್ಲಿರುವ ಕಂಪನಿಗಳ ನಾಲ್ಕನೇ ತ್ರೈಮಾಸಿಕ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು.
- ಅಮೆರಿಕದ 10 ವರ್ಷಗಳ ಬಾಂಡ್‌ಗಳ ರಿಟರ್ನ್ 3.86% ನಿಂದ 4.46% ಕ್ಕೆ ಏರಿಕೆಯಾಗಿರುವುದು.
- ಏಷ್ಯಾದ ಸ್ಟಾಕ್ ಮಾರ್ಕೆಟ್‌ನಲ್ಲಿ ಸೂಚ್ಯಂಕಗಳ ಇಳಿಕೆ.
- ಆರ್‌ಬಿಐ ಕೇಂದ್ರ ಸರಕಾರಕ್ಕೆ ನೀಡಿರುವ 2 ಲಕ್ಷದ 69 ಸಾವಿರ ಕೋಟಿ ಡಿವಿಡೆಂಡ್ ನಿರೀಕ್ಷಿತ ಪ್ರಭಾವ ಬೀರದಿರುವುದು.
ಮೊದಲನೆಯದಾಗಿ, ಕಳೆದ ಎರಡು ವಾರಗಳಿಂದ ಭಾರತೀಯ ಸ್ಟಾಕ್ ಮಾರ್ಕೆಟ್‌ಗಳಲ್ಲಿ ಇಂಡೆಕ್ಸ್‌ಗಳು ಏರಿಕೆಯಲ್ಲಿತ್ತು. ಸೆನ್ಸೆಕ್ಸ್ ಮತ್ತು ನಿಫ್ಟಿ 4.1% ಹೆಚ್ಚಳವಾಗಿತ್ತು. ಆಪರೇಷನ್ ಸಿಂದೂರ್ ಕದನ ವಿರಾಮದ ಬಳಿಕ ಸ್ಟಾಕ್ ಮಾರ್ಕೆಟ್ ಅಪ್ ಟ್ರೆಂಡ್ ಕಾಣಿಸಿತ್ತು. ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಬಂಡವಾಳ ಮಾರುಕಟ್ಟೆ ಮೌಲ್ಯದಲ್ಲಿ 28 ಲಕ್ಷ ಕೋಟಿ ರುಪಾಯಿ ಏರಿಕೆಯಾಗಿತ್ತು. ಹೀಗಾಗಿ ಷೇರು ಹೂಡಿಕೆದಾರರು ಇಂದು ಭಾರಿ ಪ್ರಾಫಿಟ್ ಬುಕ್ ಮಾಡಿದರು. ಅಂದರೆ ಷೇರುಗಳನ್ನು ಮಾರಿ ಲಾಭ ಗಳಿಸಿದರು. ಷೇರುಗಳ ಮಾರಾಟದ ಒತ್ತಡ ಸೃಷ್ಟಿಯಾದಂತೆ ಇಂಡೆಕ್ಸ್ ತಗ್ಗುವುದು ಸಹಜ.
ಎರಡನೆಯದಾಗಿ, ಕಳೆದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಕಾರ್ಪೊರೇಟ್ ಕಂಪನಿಗಳ ಫಲಿತಾಂಶವು ಮಾರುಕಟ್ಟೆಯನ್ನು ತೃಪ್ತಿಪಡಿಸಿಲ್ಲ. ನಿರೀಕ್ಷೆಗಳು ಜಾಸ್ತಿ ಇತ್ತು. ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್ ಅಥವಾ ಎನ್‌ಎಸ್‌ಇಯ ಮಾರುಕಟ್ಟೆ ಮೌಲ್ಯವು ಖಾಸಗಿ ಮಾರ್ಕೆಟ್‌ನಲ್ಲಿ ಬರೋಬ್ಬರಿ 60% ಏರಿಕೆಯಾಗಿದೆ. 5 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿದೆ. ಶ್ರೀಮಂತ ಹೂಡಿಕೆದಾರರು ಎನ್‌ಎಸ್‌ಇನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಈ ವರ್ಷ ಎನ್‌ಎಸ್‌ಇನ ಐಪಿಒ ನಡೆಯಬಹುದು ಎಂಬ ವಿಶ್ವಾಸ ಉಂಟಾಗಿರುವುದು ಇದದಕ್ಕೆ ಕಾರಣ. ಪ್ರೈವೇಟ್ ಮಾರ್ಕೆಟ್ ಅಥವಾ ಅನ್ ಲಿಸ್ಟೆಡ್ ಮಾರ್ಕೆಟ್‌ನಲ್ಲಿ ಎನ್‌ಎಸ್‌ಇಯ ಕೋಟ್ಯಂತರ ಷೇರುಗಳಿವೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಧೀನ ಸಂಸ್ಥೆಯಾದ ಎಚ್‌ಡಿಬಿ ಫೈನಾನ್ಷಿಯಲ್ ಸರ್ವೀಸ್ ಲಿಮಿಟೆಡ್‌ನ ಐಪಿಒಗೆ ಸೆಬಿ ಅನುಮೋದನೆ ಲಭಿಸುವ ನಿರೀಕ್ಷೆ ಇದೆ. ಇದು ಒಂದೂವರೆ ಶತಕೋಟಿ ಡಾಲರ್ ಮೌಲ್ಯದ ಐಪಿಒ (ಸುಮಾರು 12.500 ಕೋಟಿ ರುಪಾಯಿ) ಆಗಲಿದ್ದು, ಈ ವರ್ಷದ ಇವುವರೆಗಿನ ದೊಡ್ಡ ಐಪಿಒ ಆಗಲಿದೆ.
ಎಚ್‌ಡಿಬಿ ಫೈನಾನ್ಷಿಯಲ್ ಸರ್ವೀಸ್, ಜನತೆಗೆ ಮತ್ತು ಸಣ್ಣ ಉದ್ದಿಮೆಗಳಿಗೆ ಸಾಲ ಕೊಡುತ್ತದೆ. ಪರ್ಸನಲ್ ಲೋ, ಬಿಸಿನೆಸ್ ಲೋನ್, ಪ್ರಾಪರ್ಟಿ ಅಡಮಾನ ಸಾಲ ಇತ್ಯಾದಿ ನೀಡುತ್ತಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ಜನವರಿ-ಮಾರ್ಚ್ ಅವಧಿಯಲ್ಲಿ ಹಲವಾರು ಸ್ಮಾಲ್ ಕ್ಯಾಪ್ ಸ್ಟಾಕ್ಸ್‌ಗಳಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸಿದ್ದಾರೆ. ಫಾರಿನ್ ಇನ್‌ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಅಥವಾ ಎಫ್‌ಐಐಗಳು ಇತ್ತೀಚೆಗೆ ಹೆಚ್ಚು ಹೂಡಿಕೆ ಮಾಡಿರುವ ಸ್ಮಾಲ್ ಕ್ಯಾಪ್ ಷೇರುಗಳ ವಿವರವನ್ನು ನೋಡೋಣ.
ಅಪ್ಟುಸ್ ವಾಲ್ಯೂ ಹೌಸಿಂಗ್ ಫೈನಾನ್ಸ್, ಸಮ್ಮಾನ್ ಕ್ಯಾಪಿಟಲ್, ಜೆಬಿ ಕೆಮಿಕಲ್ಸ್ & ಫಾರ್ಮಾಸ್ಯುಟಿಕಲ್ಸ್, ಝೀ ಎಂಟರ್‌ಟೇನ್‌ಮೆಂಟ್ ಎಂಟರ್‌ಪ್ರೈಸಸ್, ಚಂಬಲ್ ಫರ್ಟಿಲೈಸರ್ಸ್ ಆಂಡ್ ಕೆಮಿಕಲ್ಸ್, ರೆಡಿಂಗ್ಟನ್, ಗ್ಲಾಂಡ್ ಫಾರ್ಮಾ, ವಿಜಯ ಡಯಾಗ್ನಸ್ಟಿಕ್ಸ್ ಸೆಂಟರ್, ಪೂನಾವಾಲಾ ಗ್ರೂಪ್, ಎಸ್‌ಬಿಎಫ್‌ಸಿ ಫೈನಾನ್ಸ್ ಷೇರುಗಳಲ್ಲಿ ಎಫ್ ಐಐಗಳು ಹೆಚ್ಚಿನ ಹೂಡಿಕೆ ಮಾಡಿದ್ದಾರೆ ಎಂದು ಇಕನಾಮಿಕ್ ಟೈಮ್ಸ್ ವರದಿ ತಿಳಿಸಿದೆ.