Chalavadi Narayanaswamy: ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗುವುದು ಖಚಿತ ಎಂದ ಛಲವಾದಿ ನಾರಾಯಣಸ್ವಾಮಿ
Chalavadi Narayanaswamy: ಮುಖ್ಯಮಂತ್ರಿಗಳು ಮುಡಾ ಮೂಡಿನಲ್ಲೇ ಇದ್ದಾರೆ. ಅವರ ಮೂಡ್ ಇನ್ನೂ ಬದಲಾಗಿಲ್ಲ. ಮುಡಾ ಅವರನ್ನು ಕಾಡುತ್ತಿದೆ. ಮುಡಾ ಇಲ್ಲಿಗೇ ನಿಲ್ಲುವಂಥದ್ದಲ್ಲ. ಮುಡಾ ವಿಚಾರದಲ್ಲಿ ನೀವು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ.

ಬೆಂಗಳೂರು: ಬಿಬಿಎಂಪಿಗೆ (BBMP) ಚುನಾವಣೆ ಮುಂದೂಡುತ್ತ ಹೋಗುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಚ್ಯುತಿ ಬರುವ ಕೆಲಸ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತಿಳಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈಗ ಗ್ರೇಟರ್ ಬೆಂಗಳೂರು ಎನ್ನುತ್ತಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಎನ್ನುತ್ತಿದ್ದವರು ಈಗ ಗ್ರೇಟರ್ ಬೆಂಗಳೂರಿಗೆ ಯಾಕೆ ಹೋದರು? ಬ್ರ್ಯಾಂಡ್ ಬೆಂಗಳೂರು ಮಾಡಲು ಆಗದವರು ಯಾವ ಗ್ರೇಟರ್ ಬೆಂಗಳೂರು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಬೆಂಗಳೂರನ್ನು 7 ಭಾಗ ಮಾಡುವುದು ಸರಿಯಾದ ಕ್ರಮ ಅಲ್ಲ. ಗ್ರೇಟರ್ ಬೆಂಗಳೂರು ಮಾಡಿ ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಛಿದ್ರಗೊಳಿಸಲು ನೀವು ಹೊರಟಿದ್ದೀರಿ. ಇದು ಬೆಂಗಳೂರನ್ನು ಒಗ್ಗಟ್ಟಾಗಿ ಇಟ್ಟು ಉತ್ತಮವಾಗಿ ಬೆಳೆಸಬೇಕೆಂಬ ನೀತಿ ಅಲ್ಲ. ಈಗಾಗಲೇ ವಿಚ್ಛಿದ್ರಕಾರಿ ಜನರು ಬಂದು ಬೆಂಗಳೂರನ್ನು ಹಾಳು ಮಾಡಿದ್ದಾರೆ. ಎಲ್ಲಿ ಬಾಂಬ್ ಹಾಕಬೇಕೋ, ಎಲ್ಲಿ ಏನೇನು ಮಾಡಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ. ಅಂಥವುಗಳನ್ನು ತಡೆದು ಬೆಂಗಳೂರನ್ನು ಇನ್ನಷ್ಟು ಸುಭದ್ರಗೊಳಿಸಬೇಕಿದೆ. ಇದೆಲ್ಲ ಬಿಟ್ಟು ಆರು ಭಾಗ, ಏಳು ಭಾಗ ಮಾಡಿ ಆರೋ ಏಳೋ ಮೇಯರ್ ಮಾಡಲು ಹೊರಟಿದ್ದೀರಿ. ಮೇಯುವವರಿಗೆ ಅವಕಾಶ ಸಿಗುತ್ತದೆಯೇ ಹೊರತು ಬೆಂಗಳೂರನ್ನು ಕಟ್ಟುವವರಿಗೆ ಅವಕಾಶ ಕೊಡಬೇಕಲ್ಲವೇ? ಸರ್ಕಾರ ಅದರಲ್ಲಿ ಎಡವಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಕಾನೂನು- ಸುವ್ಯವಸ್ಥೆ ಕಾಪಾಡಲು ನಿಮ್ಮಿಂದ ಆಗುತ್ತಿಲ್ಲ
ಕನ್ನಡದ ಜನರ ಮೇಲೆ ಇವತ್ತು ಗಡಿಭಾಗದಲ್ಲಿ ದಾಳಿ ನಡೆದಿದೆ. ಪುಂಡಾಟಿಕೆ ನಡೆಯುತ್ತಿದೆ. ನಿಮ್ಮ ಆಡಳಿತ ವ್ಯವಸ್ಥೆ ಕುಸಿದುಬಿದ್ದಿದೆ. ಕಾನೂನು- ಸುವ್ಯವಸ್ಥೆ ಕಾಪಾಡಲು ನಿಮ್ಮಿಂದ ಆಗುತ್ತಿಲ್ಲ. ಒಂದೆಡೆ ಪೊಲೀಸ್ ಠಾಣೆಗಳ ಮೇಲೆ ಕಲ್ಲು ತೂರಾಟ, ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ನನ್ನ ಬ್ರದರ್ ಎಂದು ಸರ್ಟಿಫಿಕೇಟ್ ಕೊಡುತ್ತೀರಲ್ಲವೇ? ಈಗ ನಿಮ್ಮ ಬ್ರದರ್‌ಗಳಿಗೆ ಬುದ್ಧಿ ಹೇಳಿ ಎಂದು ಆಗ್ರಹಿಸಿದರು.
ಕೋರಮಂಗಲದಲ್ಲಿ ನಿನ್ನೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಪೊಲೀಸರು ಈ ಘಟನೆಗೆ ಬೇರೆ ಬೇರೆ ರೀತಿಯ ಆಯಾಮಗಳನ್ನೂ ನೀಡಿದ್ದಾರೆ. ಪುಂಡಾಟಿಕೆ ತಡೆಯಲಾಗದೆ ಬೇರೆ ಬೇರೆ ಆಯಾಮ ಕಲ್ಪಿಸುತ್ತಿದ್ದಾರೆ. ನಿಮ್ಮ ಸರ್ಕಾರದಿಂದ ಜನರು ಉತ್ತಮವಾದುದನ್ನು ಬಯಸುವ ಪರಿಸ್ಥಿತಿ ಇಲ್ಲ ಎಂದು ಅವರು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | Karnataka Weather: ರಾಜ್ಯಕ್ಕೆ ಮಳೆ ಮುನ್ಸೂಚನೆ; ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ!
ಮುಖ್ಯಮಂತ್ರಿಗಳು ಮುಡಾ ಮೂಡಿನಲ್ಲೇ ಇದ್ದಾರೆ
ಮುಖ್ಯಮಂತ್ರಿಗಳು ಮುಡಾ ಮೂಡಿನಲ್ಲೇ ಇದ್ದಾರೆ. ಅವರ ಮೂಡ್ ಇನ್ನೂ ಬದಲಾಗಿಲ್ಲ. ಮುಡಾ ಅವರನ್ನು ಕಾಡುತ್ತಿದೆ. ಮುಡಾ ಇಲ್ಲಿಗೇ ನಿಲ್ಲುವಂಥದ್ದಲ್ಲ. ನೀವು ಯಾರಿಂದ ಏನು ಬೇಕಾದರೂ ಸರ್ಟಿಫಿಕೇಟ್ ತೆಗೆದುಕೊಳ್ಳಿ. ಈ ದೇಶದ ಕಾನೂನು ಸತ್ತಿಲ್ಲ. ಕೋರ್ಟ್‍ಗಳು ಉತ್ತಮವಾಗಿಯೇ ನಡೆಯುತ್ತಿದ್ದು, ನ್ಯಾಯ ಕೊಡುವ ಕೆಲಸ ಮಾಡಿಯೇ ಮಾಡುತ್ತವೆ. ಮುಡಾ ವಿಚಾರದಲ್ಲಿ ನೀವು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ.