Stock Market: ಸೆನ್ಸೆಕ್ಸ್, ನಿಫ್ಟಿ ಪತನ; ತೈಲ ಪೂರೈಕೆ ಬಂದ್? ಫೋನ್ ಪೇ ಐಪಿಒ ಸಿದ್ಧತೆ
Share Market: ಮಧ್ಯಪ್ರಾಚ್ಯ ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ ಪತನಕ್ಕೀಡಾಯಿತು. ಸೆನ್ಸೆಕ್ಸ್ 511 ಅಂಕ ಇಳಿಕೆಯಾಗಿ 81,896ಕ್ಕೆ ವಹಿವಾಟು ನಡೆಸಿತು. ನಿಫ್ಟಿ 140 ಅಂಕ ತಗ್ಗಿ 24,971ರಲ್ಲಿ ವಹಿವಾಟು ನಡೆಸಿತು. ಈ ನಡುವೆ ವಾಲ್ ಮಾರ್ಟ್ ಬೆಂಬಲಿತ ಫೋನ್‌ಪೇ 12,900 ಕೋಟಿ ರುಪಾಯಿಗಳ ಮೆಗಾ ಐಪಿಒ ನಡೆಸಲು ಉದ್ದೇಶಿಸಿದೆ.

ಸಾಂದರ್ಭಿಕ ಚಿತ್ರ.

ಕೇಶವ ಪ್ರಸಾದ್ ಬಿ.
ಮುಂಬೈ: ಮಧ್ಯಪ್ರಾಚ್ಯ ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮುಂಬಯಿ ಷೇರು ಮಾರುಕಟ್ಟೆ (Stock Market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ ಪತನಕ್ಕೀಡಾಯಿತು. ಸೆನ್ಸೆಕ್ಸ್ 511 ಅಂಕ ಇಳಿಕೆಯಾಗಿ 81,896ಕ್ಕೆ ವಹಿವಾಟು ನಡೆಸುತ್ತಿತ್ತು. ನಿಫ್ಟಿ 140 ಅಂಕ ತಗ್ಗಿ 24,971ರಲ್ಲಿ ವಹಿವಾಟು ನಡೆಸುತ್ತಿತ್ತು. ಈ ನಡುವೆ ವಾಲ್ ಮಾರ್ಟ್ ಬೆಂಬಲಿತ ಫೋನ್‌ಪೇ, 12,900 ಕೋಟಿ ರುಪಾಯಿಗಳ ಮೆಗಾ ಐಪಿಒ ನಡೆಸಲು ಉದ್ದೇಶಿಸಿದೆ.
ಅಮೆರಿಕವು ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಬಾಂಬ್ ದಾಳಿ ನಡೆಸಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ತೀವ್ರವಾಗಿದೆ. ಪ್ರತೀಕಾರ ತೀರಿಸಲು ಇರಾನ್, ಹರ್ಮುಜ್ ಜಲಸಂಧಿಯನ್ನು ಮುಚ್ಚುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಜಲಸಂಧಿಯ ಮೂಲಕವೇ ಏಷ್ಯಾಕ್ಕೆ 80% ಕಚ್ಚಾ ತೈಲ ಸಾಗಣೆಯಾಗುತ್ತದೆ. ಜಗತ್ತಿನ ಒಟ್ಟು ತೈಲ ಪೂರೈಕೆಯಲ್ಲಿ ಶೇಕಡಾ 20 ಭಾಗವು ಇದೇ ಜಲಸಂಧಿಯ ಮೂಲಕ ಹೋಗುತ್ತದೆ. ಹೀಗಾಗಿ ಒಂದು ವೇಳೆ ಇರಾನ್ ಈ ಹರ್ಮುಜ್ ಜಲಸಂಧಿಯನ್ನು ಮುಚ್ಚಿದರೆ ಚೀನಾ, ಜಪಾನ್, ಭಾರತ, ದಕ್ಷಿಣ ಕೊರಿಯಾಕ್ಕೆ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಪೆಟ್ರೋಲ್-ಡೀಸೆಲ್, ಎಲ್ಪಿಜಿ ಪೂರೈಕೆಯಲ್ಲಿ ಕೂಡ ಕೊರತೆ ಉಂಟಾಗುವ ಕಳವಳ ಈಗ ತಲೆದೋರಿದೆ. ಈಗಾಗಲೇ ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 81 ಡಾಲರ್‌ಗೆ ಏರಿಕೆಯಾಗಿದೆ. ಒಂದು ತಿಂಗಳಿನ ಹಿಂದೆಯಷ್ಟೇ 63 ಡಾಲರ್ ನಷ್ಟಿತ್ತು. ಗೋಲ್ಡ್‌ಮನ್ ಸ್ಯಾಕ್ಸ್ ಪ್ರಕಾರ ಬ್ರೆಂಟ್ ಕಚ್ಚಾ ತೈಲ ದರ ಪ್ರಯಿ ಬ್ಯಾರಲ್‌ಗೆ 110 ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ.
ಕಳೆದ ಶುಕ್ರವಾರ ಸ್ಟಾಕ್ ಮಾರ್ಕೆಟ್ ಗಣನೀಯ ಚೇತರಿಸಿತ್ತು. ಆದರೆ ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಸೋಮವಾರ ಸೂಚ್ಯಂಕಗಳು ಮುಗ್ಗರಿಸಿವೆ.
ಐಟಿ, ಆಟೊಮೊಬೈಲ್ ವಲಯದ ಸ್ಟಾಕ್ಸ್ ಇಂದು ಇಳಿಕೆ ದಾಖಲಿಸಿವೆ. ಅಕ್ಸೆಂಚರ್‌ನ ಜನವರಿ-ಮಾರ್ಚ್ ಅವಧಿಯ ರಿಸಲ್ಟ್ ಪ್ರಕಟವಾದ ಬಳಿಕ ಇನ್ಫೋಸಿಸ್, ವಿಪ್ರೊ, ಎಚ್‌ಸಿಎಲ್ ಟೆಕ್, ಟಿಸಿಎಸ್ ಷೇರುಗಳ ದರ ಇಳಿಯಿತು. ಭವಿಷ್ಯದ ಡಿಮಾಂಡ್ ಮತ್ತು ಒಟ್ಟಾರೆಯಾಗಿ ಸೆಕ್ಟರ್‌ನ ಸೆಂಟಿಮೆಂಟ್ ಪ್ರಭಾವ ಬೀರಿತು. ಅಕ್ಸೆಂಚರ್‌ನ ಮೂರನೇ ತ್ರೈಮಾಸಿಕ ರಿಸಲ್ಟ್ ಹೂಡಿಕೆದಾರರನ್ನು ಆಕರ್ಷಿಸಲಿಲ್ಲ. ಅಕ್ಸೆಂಚರ್ ಒಂದು ರೀತಿಯಲ್ಲಿ ಭಾರತೀಯ ಐಟಿ ಕಂಪನಿಗಳಗೆ ಬೆಂಚ್ ಮಾರ್ಕ್ ಇದ್ದಂತೆ. ಅಕ್ಸೆಂಚರ್ ತನ್ನ ಆದಾಯದ ಮುನ್ನೋಟದಲ್ಲಿ ಕೆಲವೊಂದು ಅಂಶಗಳನ್ನು ಪ್ರಸ್ತಾಪಿಸಿದ್ದು, ಇದು ನಕಾರಾತ್ಮಕ ಪ್ರಭಾವ ಬೀರಿತು. ತನ್ನ ಗ್ರಾಹಕರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಕನಾಮಿಕ್ ವೊಲಟಾಲಿಟಿ, ಜಿಯೊಪಾಲಿಟಿಕ್ಸ್ ಕಾಂಪ್ಲೆಕ್ಸಿಟಿಯ ಪರಿಣಾಮ ಗ್ರಾಹಕರ ವರ್ತನೆಗಳಲ್ಲಿ ಮೇಜರ್ ಶಿಫ್ಟ್ ಆಗಿದೆ ಎಂದು ಅಕ್ಸೆಂಚರ್ ಹೇಳಿದೆ. ಅಂದರೆ ಗ್ರಾಹಕರು ನಿರೀಕ್ಷಿತ ಮಟ್ಟದಲ್ಲಿ ಐಟಿಗೆ ವೆಚ್ಚ ಮಾಡುತ್ತಿಲ್ಲ ಎಂದಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ 6 ತಿಂಗಳುಗಳಲ್ಲಿ 1 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಐಟಿ, ಎಫ್‌ಎಂಸಿಜಿ, ಆಟೊ ಇತ್ಯಾದಿ 6 ಸೆಕ್ಟರ್‌ಗಳಿಂದ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.
ಹೈ ವಾಲ್ಯುಯೇಶನ್ಸ್, ಗ್ಲೋಬಲ್ ಮ್ಯಾಕ್ರೊ ಅನಿಶ್ಚಿತತೆಗಳು, ಈ ವಲಯದ ಕಂಪನಿಗಳ ಆದಾಯದಲ್ಲಿ ಇಳಿಕೆಯಾಗುವ ಸಾಧ್ಯತೆ ಇದಕ್ಕೆ ಕಾರಣವಾಗಿದೆ. ಎಫ್‌ಐಐಗಳು ಐಟಿ ಸೆಕ್ಟರ್‌ನಲ್ಲಿ ಅತಿ ಹೆಚ್ಚು ಷೇರುಗಳನ್ನು ಮಾರಾಟ ಮಾಡಿದ್ದಾರೆ. 33,479 ಕೋಟಿ ರುಪಾಯಿ ಮೌಲ್ಯದ ಸ್ಟಾಕ್ಸ್ ಗಳನ್ನು ಕಳೆದ ಆರು ತಿಂಗಳುಗಳಲ್ಲಿ ಮಾರಿದ್ದಾರೆ.
ಫೋನ್ ಪೇ IPOಗೆ ಸಿದ್ಧತೆ
ಭಾರತದ ಅತಿ ದೊಡ್ಡ ಡಿಜಿಟಲ್ ಪೇಮೆಂಟ್ಸ್ ಪ್ರೊವೈಡರ್ ಆಗಿರುವ ಫೋನ್ ಪೇ ಇಂಡಿಯಾ ಕಂಪನಿಯು ಐಪಿಒ ಮೂಲಕ ಷೇರು ಮಾರುಕಟ್ಟೆ ಪ್ರವೇಶಿಸಲು ಸಿದ್ಧತೆ ನಡೆಸಿದೆ. ಆಗಸ್ಟ್‌ನಲ್ಲಿ ಐಪಿಒ ನಡೆಸುವ ನಿರೀಕ್ಷೆಯನ್ನು ಫೋನ್ ಪೇ ಹೊಂದಿದೆ. 2015ರಲ್ಲಿ ಸ್ಥಾಪನೆಯಾಗಿರುವ ಫೋನ್‌ಪೇ 61 ಕೋಟಿ ರಿಜಿಸ್ಟರ್ಡ್ ಬಳಕೆದಾರರನ್ನು ಒಳಗೊಂಡಿದೆ. ಪ್ರತಿ ನಿತ್ಯ 34 ಕೋಟಿ ರುಪಾಯಿ ಟ್ರಾನ್ಸಕ್ಷನ್‌ಗಳನ್ನು ನಿರ್ವಹಿಸುತ್ತಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಆದ್ಯತಾ ಕ್ಷೇತ್ರದ ಸಾಲ ವಿತರಣೆಗೆ ಸಂಬಂಧಿಸಿದ ನಿಯಮಗಳನ್ನು ಸಡಿಲಗೊಳಿಸಿದ ಬಳಿಕ ಉಜ್ಜೀವನ್, ಉತ್ಕರ್ಷ್, ಸೂರ್ಯೋದಯ ಸೇರಿದಂತೆ ಕಿರು ಹಣಕಾಸು ಸಂಸ್ಥೆಗಳ ಷೇರು ದರದಲ್ಲಿ ಏರಿಕೆ ದಾಖಲಾಯಿತು.
ಕೇಬಲ್ ಮತ್ತು ವೈರ್ ಕಂಪನಿಗಳು ಜನವರಿ-ಮಾರ್ಚ್ ಅವಧಿಯಲ್ಲಿ ಸ್ಟ್ರಾಂಗ್ ಪರ್ಫಾಮೆನ್ಸ್ ದಾಖಲಿಸಿವೆ. ಎಲ್ಲ ಕೆಟಗರಿಗಳಲ್ಲೂ ಭಾರಿ ಬೇಡಿಕೆ ಬಂದಿರುವುದು ಇದಕ್ಕೆ ಕಾರಣವಾಗಿದೆ. ಮೂಲಸೌಕರ್ಯ ವಲಯದಲ್ಲಿ ಚೇತರಿಕೆ ಕಂಡು ಬಂದಿದೆ. ಮೋತಿಲಾಲ್ ಓಸ್ಬಾಲ್ ವರದಿಯ ಪ್ರಕಾರ ಕೇಬಲ್ಸ್ ಮತ್ತು ವೈರ್ಸ್ ಇಂಡಸ್ಟ್ರಿಯು 2024-25ರಿಂದ 2029-30ರ ಅವಧಿಯಲ್ಲಿ 13% CAGR ದಾಖಲಿಸುವ ನಿರೀಕ್ಷೆ ಇದೆ.
ವೇದಾಂತ ಕಂಪನಿಯು 2025-26ರ ಮೊದಲ ಮಧ್ಯಂತರ ಡಿವಿಡೆಂಡ್ ಆಗಿ ಪ್ರತಿ ಷೇರಿಗೆ 7 ರುಪಾಯಿ ಡಿವಿಡೆಂಡ್ ಘೋಷಿಸಿದೆ. ಪಾಲಿಕ್ಯಾಬ್ ಪ್ರತಿ ಷೇರಿಗೆ 35 ರುಪಾಯಿ ಡಿವಿಡೆಂಡ್ ಘೋಷಿಸಿದೆ. ಅರ್ಹ ಷೇರುದಾರರಿಗೆ ಈ ಅಂತಿಮ ಡಿವಿಡೆಂಡ್ ಸಿಗಲಿದ್ದು, ಇದರ ರೆಕಾರ್ಡ್ ಡೇಟ್ ಜೂನ್ 24 ಆಗಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಷೇರು ದರ ಸೋಮವಾರ 2% ಏರಿಕೆ ದಾಖಲಿಸಿತು. ಟ್ರೆಂಟ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಷೇರುಗಳು ಬಿಎಸ್‌ಇ ಸೆನ್ಸೆಕ್ಸ್ 30 ಪ್ಯಾಕ್‌ನಲ್ಲಿ ನೆಸ್ಲೆ ಇಂಡಿಯಾ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಬದಲಿಗೆ ಸ್ಥಾನವನ್ನು ಕಂಡುಕೊಳ್ಳಲಿವೆ.
ಅಮೆಜಾನ್ ಇಂಡಿಯಾ ಕಂಪನಿಯು ಅಮೆಜಾನ್ ಡಯೋಗ್ನಸ್ಟಿಕ್ಸ್ ಸೇವೆಯನ್ನು ಆರಂಭಿಸಿದೆ. ಆರೆಂಜ್ ಹೆಲ್ತ್ ಲ್ಯಾಬ್ಸ್ ಸಹಭಾಗಿತ್ವದಲ್ಲಿ ಅಮೆಜಾನ್ ಕಂಪನಿಯು ಬೆಂಗಳೂರು, ದಿಲ್ಲಿ, ಗುರುಗ್ರಾಮ, ನೋಯ್ಡಾ, ಮುಂಬಯಿ ಮತ್ತು ಹೈದರಾಬಾದ್‌ನಲ್ಲಿ ಈ ಸೇವೆಯನ್ನು ಆರಂಭಿಸಿದೆ. ಅಮೆಜಾನ್ ಮನೆ ಬಾಗಿಲಿನಲ್ಲೇ 800ಕ್ಕೂ ಹೆಚ್ಚು ಡಯಾಗ್ನಸ್ಟಿಕ್ಸ್ ಟೆಸ್ಟ್ ಗಳು ಮತ್ತು ಸ್ಯಾಂಪಲ್ ಕಲೆಕ್ಷನ್ ಸೇವೆಯನ್ನು ಒದಗಿಸಲಿದೆ. ಆಮೆಜಾನ್‌ನ ಹೋಮ್ ಡಯಾಗ್ನೊಸ್ಟಿಕ್ಸ್ ಸೇವೆ ಆರಂಭವಾದ ಬೆನ್ನಲ್ಲೇ ಡಾ ಲಾಲ್ ಪಥ್ ಲ್ಯಾಬ್ಸ್ ಮತ್ತು ಪೆಟ್ರೊಪಾಲಿಸ್ ಷೇರು ದರದಲ್ಲಿ ಇಳಿಕೆ ದಾಖಲಾಯಿತು.
ಮೋತಿಲಾಲ್ ಓಸ್ವಾಲ್ ಸಂಸ್ಥೆಯು ಲಾರ್ಸನ್ ಆಂಡ್ ಟೂಬ್ರೊ ಮತ್ತು ಐಸಿಐಸಿಐ ಲ್ಯಾಂಬೋರ್ಡ್ ಷೇರಿನ ಚಲನವಲನಗಳ ಬಗ್ಗೆ ಪಾಸಿಟಿವ್ ಮಾತುಗಳನ್ನಾಡಿದೆ. ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಸಂಸ್ಥೆಯ ಷೇರುಗಳ ದರದಲ್ಲಿ ಸೋಮವಾರ 6% ಇಳಿಕೆ ಉಂಟಾಯಿತು. ಈ ನಡುವೆ ಓಲಾದ 0.8% ಷೇರುಗಳನ್ನು ಬ್ಲಾಕ್ ಡೀಲ್‌ನಲ್ಲಿ ಮಾರಾಟ ಮಾಡಲಾಯಿತು. ಇದರ ಮಾರಾಟಗಾರರು ಮತ್ತು ಖರೀದಿದಾರರ ವಿವರ ಬಹಿರಂಗವಾಗಿಲ್ಲ. ಬಿಎಸ್‌ಇನಲ್ಲಿ ಓಲಾ ಎಲೆಕ್ಟ್ರಿಕ್ ಷೇರಿನ ದರ 43/- ನಷ್ಟಿತ್ತು. ಇತ್ತೀಚೆಗೆ 731 ಕೋಟಿ ರುಪಾಯಿ ಮೌಲ್ಯದ ಷೇರು ಬ್ಕಾಕ್ ಡೀಲ್‌ನಲ್ಲಿ ಕೈ ಬದಲಾಗಿತ್ತು. ಆಗ ಷೇರಿನ ಸರಾಸರಿ ದರ 51 ರುಪಾಯಿಯಷ್ಟಿತ್ತು. ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಕಳೆದ ಜನವರಿ-ಮಾರ್ಚ್ ಅವಧಿಯಲ್ಲಿ 870 ಕೋಟಿ ರುಪಾಯಿ ನಷ್ಟಕ್ಕೀಡಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನಷ್ಟ ಇಮ್ಮಡಿಯಾಗಿದೆ.
MCX, ನಾರಾಯಣ ಹೃದಯಾಲಯ ಸೇರಿದಂತೆ 5 ಮಿಡ್ ಮತ್ತು ಸ್ಮಾಲ್ ಕ್ಯಾಪ್ ಸ್ಟಾಕ್ಸ್‌ಗಳು 52 ವಾರಗಳ ಎತ್ತರದ ಮಟ್ಟಕ್ಕೆ ಸೋಮವಾರ ಏರಿಕೆಯಾಗಿವೆ.
ನಾರಾಯಣ ಹೃದಯಾಲಯ-Narayana Hrudayalaya
52 week high: 1996/-
1 ವರ್ಷದಲ್ಲಿ ಏರಿಕೆ: 51%
ಎಂಸಿಎಕ್ಸ್ MCX
52 week high : 8,248/-
1 ವರ್ಷದಲ್ಲಿ ಏರಿಕೆ: 31%
ಆದಿತ್ಯ ಬಿರ್ಲಾ ಕ್ಯಾಪಿಟಲ್-Adithya Birla Capital
52 week high : 266/-
1 ವರ್ಷದಲ್ಲಿ ಏರಿಕೆ: 48%
ಮ್ಯಾಕ್ಸ್ ಫೈನಾನ್ಷಿಯಲ್ ಸರ್ವೀಸ್-Max Financial Service
52 week high : 1,619/-
1 ವರ್ಷದಲ್ಲಿ ಏರಿಕೆ: 46%
ಆಟಮ್ ಇನ್ವೆಸ್ಟ್ ಮೆಂಟ್ & ಇನ್‌ಫ್ರಾಸ್ಟ್ರಕ್ಚರ್-Authum Investment & Infrastructure
52 week high: 2,610/-
1 ವರ್ಷದಲ್ಲಿ ಏರಿಕೆ: 38%
ಈ ಸುದ್ದಿಯನ್ನೂ ಓದಿ | SBI Recruitment 2025: ಬರೋಬ್ಬರಿ 2,964 ಹುದ್ದೆಗಳ ಭರ್ತಿಗೆ ಮತ್ತೊಮ್ಮೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ