Viral News: ಭಾರತವನ್ನು ಮೆಚ್ಚಿಕೊಂಡು ವಲಸೆ ಬಂದ ಅಮೆರಿಕನ್ ಮಹಿಳೆ ಹೇಳಿದ್ದೇನು?
ಅಮೆರಿಕದ ಮಹಿಳೆ ಕ್ರಿಸ್ಟನ್ ಫಿಷರ್ ನಾಲ್ಕು ವರ್ಷಗಳ ಹಿಂದೆ ಅಮೆರಿಕಾದಲ್ಲಿನ ಆರಾಮದಾಯಕ ಜೀವನವನ್ನು ತ್ಯಜಿಸಿ ಭಾರತದಲ್ಲಿ ತನ್ನ ಜೀವನವನ್ನು ನಡೆಸುವ ನಿರ್ಧಾರ ಮಾಡಿ ಕುಟುಂಬದೊಂದಿಗೆ ಆಗಮಿಸಿ ಇಲ್ಲೇ ನೆಲೆಸಿದ್ದಾಳೆ. ಈ ಮಹಿಳೆ ತನ್ನ ನಿರ್ಧಾರದ ಬಗ್ಗೆ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಇದು ಈಗ ವೈರಲ್ ಆಗಿದೆ.


ಹೊಸದಿಲ್ಲಿ: ಇತ್ತೀಚೆಗಷ್ಟೇ ಕಂಟೆಂಟ್ ಕ್ರಿಯೇಟರ್ ಕ್ಯಾಲೆಬ್ ಫ್ರೈಸೆನ್ ಕೆನಡಾವನ್ನು ಬಿಟ್ಟು ಭಾರತಕ್ಕೆ ಬಂದಿದ್ದು, ಕಳೆದ ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವುದಾಗಿ ಹೇಳಿಕೊಂಡ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಅಮೆರಿಕದ ಮಹಿಳೆಯೊಬ್ಬಳು ಅಲ್ಲಿನ ಐಷಾರಾಮಿ ಜೀವನವನ್ನು ತ್ಯಜಿಸಿ ಭಾರತದಲ್ಲಿ ಜೀವನ ಸಾಗಿಸಲು ನಿರ್ಧರಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಕುಟುಂಬದೊಂದಿಗೆ ಸ್ಥಳಾಂತರಗೊಂಡ ಕ್ರಿಸ್ಟನ್ ಫಿಷರ್ ಎಂಬ ಮಹಿಳೆ ತಾನು ತೆಗೆದುಕೊಂಡ ಈ ದಿಟ್ಟ ನಿರ್ಧಾರದ ಬಗೆಗಿನ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಇದು ಈಗ ಎಲ್ಲರ ಗಮನ ಸೆಳೆದು ವೈರಲ್ (Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಭಾರತದ ಕುರಿತು ತಮ್ಮ ಅನಿಸಿಕೆಗಳನ್ನು ಅವರು ಹಂಚಿಕೊಂಡಿದ್ದಾರೆ. "ನಾನು ಮತ್ತು ನನ್ನ ಕುಟುಂಬವು 4 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದೇವೆ. ಕಳೆದ 4 ವರ್ಷಗಳಲ್ಲಿ ನಾನು ಕೆಲವು ಅದ್ಭುತ ಜನರನ್ನು ಭೇಟಿ ಮಾಡಿದ್ದೇನೆ, ಕೆಲವು ಅದ್ಭುತ ಸ್ಥಳಗಳನ್ನು ನೋಡಿದ್ದೇನೆ, ಕೆಲವು ಅದ್ಭುತ ಆಹಾರವನ್ನು ಸೇವಿಸಿದ್ದೇನೆ. ಭಾರತ ನನ್ನ ಜೀವನವನ್ನು ಶಾಶ್ವತವಾಗಿ ಬದಲಾಯಿಸಿದೆ” ಎಂದು ಹೇಳಿಕೊಂಡಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಮತ್ತೊಂದು ವಿಡಿಯೊದಲ್ಲಿ, ಫಿಷರ್ ಭಾರತದಲ್ಲಿನ ತಮ್ಮ ವೃತ್ತಿ ಜೀವನದ ಕುರಿತು ಖುಷಿಯಿಂದ ಹೇಳಿಕೊಂಡಿದ್ದಾರೆ. ಅವರು ಮತ್ತು ಪತಿ ವಿದೇಶಿ ಗ್ರಾಹಕರನ್ನು ಗುರಿಯಾಗಿಸಿಕೊಂಡು ವೆಬ್ ಡೆವಲಪ್ಮೆಂಟ್ ಏಜೆನ್ಸಿಯನ್ನು ನಡೆಸುತ್ತಿದ್ದಾರೆ. ಭಾರತದಲ್ಲಿ ಜೀವನ ವೆಚ್ಚವು ಅಮೆರಿಕಕ್ಕಿಂತ ಕಡಿಮೆ ಎಂದು ಫಿಷರ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಇದೆಂಥಾ ಹುಚ್ಚಾಟ! ಮಗುವಿನ ಮೇಲೆ ಹಲ್ಲಿ ಬಿದ್ರೂ ರೀಲ್ಸ್ ಮಾಡ್ತಾ ನಿಂತ ಅಪ್ಪ-ಅಮ್ಮ; ವಿಡಿಯೊ ನೋಡಿ
ಅವರ ಈ ವಿಡಿಯೊವನ್ನು ಸಾವಿರಾರು ಜನರು ಮೆಚ್ಚಿಕೊಂಡು ಕಾಮೆಂಟ್ ಮಾಡಿದ್ದಾರೆ. "ಇದು ತುಂಬಾ ಸ್ಫೂರ್ತಿದಾಯಕವಾಗಿದೆ - ನೀವು ನಿಜವಾಗಿಯೂ ನಿಮ್ಮ ಅತ್ಯುತ್ತಮ ಜೀವನವನ್ನು ನಡೆಸುತ್ತಿದ್ದೀರಿ" ಎಂದು ಒಬ್ಬರು ಬರೆದಿದ್ದಾರೆ. ಇನ್ನೊಬ್ಬರು, "ನೀವು ಭಾರತದ ಬಗ್ಗೆ ಮಾತನಾಡುವ ರೀತಿ ನೋಡಿ ಖುಷಿಯಾಯ್ತು" ಎಂದು ಹೇಳಿದ್ದಾರೆ.