ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Renuka Swamy Murder Case: ಮೃತ ರೇಣುಕಾ ಸ್ವಾಮಿ ಮಗನಿಗೆ ನಾಮಕರಣ, ಹೆಸರಿಟ್ಟಿದ್ದು ಹೀಗೆ

ರೇಣುಕಾ ಸ್ವಾಮಿ ಕೊಲೆಯಾದಾಗ ಅವರ ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದರು. ನಂತರ ಈ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ (Pavithra Gowda) ಅರೆಸ್ಟ್ ಆಗಿದ್ದರು. ಆನಂತರ ಗಂಡು ಮಗುವಿಗೆ ರೇಣುಕಾಸ್ವಾಮಿ ಪತ್ನಿ ಜನ್ಮ ನೀಡಿದ್ದರು. ಇದೀಗ ಮೃತ ರೇಣುಕಾಸ್ವಾಮಿ ಅವರ ಪುತ್ರನ ನಾಮಕರಣ ಮತ್ತು ತೊಟ್ಟಿಲು ಶಾಸ್ತ್ರ ನಡೆದಿದೆ.

ಮೃತ ರೇಣುಕಾ ಸ್ವಾಮಿ ಮಗನಿಗೆ ನಾಮಕರಣ, ಹೆಸರಿಟ್ಟಿದ್ದು ಹೀಗೆ

ರೇಣುಕಾ ಸ್ವಾಮಿ ಮಗನಿಗೆ ನಾಮಕರಣ

ಹರೀಶ್‌ ಕೇರ ಹರೀಶ್‌ ಕೇರ Feb 23, 2025 6:41 PM

ಚಿತ್ರದುರ್ಗ: ನಟ ದರ್ಶನ್‌ (Actor Darshan) ಅವರನ್ನು ಜೈಲಿಗೆ ಕಳಿಸಲು ಕಾರಣವಾಗಿದ್ದ ಕೊಲೆ ಪ್ರಕರಣದ ಮೃತ ರೇಣುಕಾ ಸ್ವಾಮಿ (Renuka swamy murder case) ಮಗನಿಗೆ ಇಂದು ನಾಮಕರಣ ಮಾಡಲಾಗಿದೆ. ಜಂಗಮ ಸಂಪ್ರದಾಯದಂತೆ ರೇಣುಕಾಸ್ವಾಮಿ ಮಗನಿಗೆ ನಾಮಕರಣ ಶಾಸ್ತ್ರ ಮಾಡಲಾಗಿದೆ. ಕುಟುಂಬ ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಮಗುವಿಗೆ 'ಶಶಿಧರ' ಎಂದು ಹೆಸರಿಡಲಾಗಿದೆ.

ರೇಣುಕಾಸ್ವಾಮಿ ಕೊಲೆಯಾದಾಗ ಅವರ ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದರು. ನಂತರ ಈ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ (Pavithra Gowda) ಅರೆಸ್ಟ್ ಆಗಿದ್ದರು. ಆನಂತರ ಗಂಡು ಮಗುವಿಗೆ ರೇಣುಕಾಸ್ವಾಮಿ ಪತ್ನಿ ಜನ್ಮ ನೀಡಿದ್ದರು. ಇದೀಗ ಮೃತ ರೇಣುಕಾಸ್ವಾಮಿ ಅವರ ಪುತ್ರನ ನಾಮಕರಣ ಮತ್ತು ತೊಟ್ಟಿಲು ಶಾಸ್ತ್ರ ನಡೆದಿದೆ. ಇಂದು ಚಿತ್ರದುರ್ಗದಲ್ಲಿರುವ ಅವರ ಮನೆಯಲ್ಲಿಯೇ ಸರಳವಾಗಿ ಕುಟುಂಬಸ್ಥರ ಮಧ್ಯೆ ನಾಮಕರಣ ಶಾಸ್ತ್ರ ಮತ್ತು ತೊಟ್ಟಿಲು ಶಾಸ್ತ್ರ ನೆರವೇರಿದೆ. ಒಂದು ಕಡೆ ಮೊಮ್ಮಗನನ್ನು ನೋಡಿದ ಖುಷಿ, ಇನ್ನೊಂದು ಕಡೆ ಈ ಸಂತೋಷವನ್ನು ಕಣ್ತುಂಬಿಕೊಳ್ಳಲು ಮಗ ಇಲ್ಲ ಎನ್ನುವ ಕೊರಗು ರೇಣುಕಾಸ್ವಾಮಿ ತಂದೆಗೆ ಕಾಡುತ್ತಿದೆ.

ಮೊಮ್ಮಗನ‌ ನಾಮಕರಣದ ಶಾಸ್ತ್ರದ ನಂತರ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್‌ ಮಾತನಾಡಿದ್ದು, "ಹರಿಹರದಿಂದ ನನ್ನ ಸೊಸೆ ಮತ್ತು ಮಗ ಮನೆಗೆ ಬಂದಿದ್ದಾರೆ. ನಮ್ಮ ಸಂಪ್ರದಾಯದಂತೆ ಮಗುವಿಗೆ ನಾಮಕರಣ ಮಾಡಿದ್ದೇವೆ. ಗುರುಗಳ ಆಶೀರ್ವಾದದಿಂದ ಮೊಮ್ಮಗನಿಗೆ ʻಶಶಿಧರ' ಎಂದು ಹೆಸರಿಟ್ಟಿದ್ದೇವೆ. ಮೊಮ್ಮಗನನ್ನು ನೋಡಿ ಮಗನೇ ಮನೆಗೆ ಬಂದಂತಿದೆ. ಆದರೂ ಹಳೆಯದನ್ನು ಮರೆಯೋದಕ್ಕೆ ಆಗುತ್ತಿಲ್ಲ'' ಎಂದು ಕಣ್ಣೀರಿಟ್ಟಿದ್ದಾರೆ.

“ನನ್ನ ಮೊಮ್ಮಗನ ನಾಮಕರಣ ಶಾಸ್ತ್ರವನ್ನ ನನ್ನ ಮಗಳು, ಮೊಮ್ಮಗನಿಗೆ ಸೋದರತ್ತೆ ಮಾಡಿದ್ದಾರೆ. ಶಾಸ್ತ್ರದಂತೆ ಅವರ ಸೋದರತ್ತೆ ನಾಮಕರಣ ಕಾರ್ಯವನ್ನು ಮಾಡಿದ್ದಾರೆ. ಅವನ ಭವಿಷ್ಯ ರೂಪಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ಸರ್ಕಾರಕ್ಕೆ‌ ಮನವಿ ಮಾಡಿ ನನ್ನ ಸೊಸೆಗೆ ಸರ್ಕಾರಿ ಕೆಲಸ ಕೊಡಲಿ ಎಂದು ವಿನಂತಿ ಮಾಡಿದ್ದೇವೆ. ಸರ್ಕಾರ ದಯಮಾಡಿ ಅದನ್ನು ಪುರಸ್ಕರಿಸಬೇಕು ಎಂದು ನಾವು ಕೇಳಿಕೊಂಡಿದ್ದೀವಿ. ಮೊಮ್ಮಗನನ್ನು ನೋಡಿ ತುಂಬಾ ಸಂತೋಷವಾಯಿತು'' ಎಂದು ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡರ ಹೇಳಿದ್ದಾರೆ.

ಇತ್ತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಡಿ ಗ್ಯಾಂಗ್‌ನ ಎಲ್ಲರೂ ಬೇಲ್ ಮೇಲೆ ಜೈಲಿನಿಂದ ರಿಲೀಸ್ ಆಗಿದ್ದಾರೆ. ಪವಿತ್ರಾ ಗೌಡ ರೆಡ್ ಕಾರ್ಪೆಟ್ ಸ್ಟುಡಿಯೋ ರೀ ಲಾಂಚ್ ಮಾಡುವ ಮೂಲಕ ಬದುಕಿನ ಹೊಸ ಅಧ್ಯಾಯಕ್ಕೆ ಹೆಜ್ಜೆ ಇಟ್ಟಿದ್ದಾರೆ. ನಟ ದರ್ಶನ್ ಆರೋಗ್ಯ ಸಮಸ್ಯೆಯಿಂದ ನಿಧಾನಕ್ಕೆ ಹೊರಬರುತ್ತಿದ್ದು, ಸಿನಿಮಾಗಳ ಶೂಟಿಂಗ್‌ನಲ್ಲಿ ಭಾಗಿಯಾಗಲು ರೆಡಿ ಆಗುತ್ತಿದ್ದಾರೆ.

ಇದನ್ನೂ ಓದಿ: Actor Darshan:‌ ದರ್ಶನ್‌ಗೆ ಮತ್ತೊಂದು ರಿಲೀಫ್‌; ಮೈಸೂರಿಗೆ ತೆರಳಲು ಕೋರ್ಟ್‌ನಿಂದ ಅನುಮತಿ