ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನುಕುಲದ ಮಾದರಿ ಹೆಣ್ಣು ಸುನೀತಾ !

ಗಗನಯಾನಿ, ಸಾಹಸಿ ಸುನೀತಾ ಅವರು, ಸ್ನಾತಕೋತ್ತರ ವಿಜ್ಞಾನ ಪದವಿ ಪಡೆದ ಬಳಿಕ ನಾಸಾ ಸಂಸ್ಥೆಗೆ ಆಯ್ಕೆಯಾಗಿ ಕೈತುಂಬ ವೇತನ ಪಡೆದು ಹೇಗೋ ಸುಖ ವಾಗಿರಬಹು ದಿತ್ತಲ್ಲವೆ? ಆದರೆ ಮೊದಲಿನಿಂದಲೂ ಸಾಹಸಪ್ರವೃತ್ತಿಯವರಾದ ಅವರು ಬಾಹ್ಯಾಕಾಶಕ್ಕೆ ಗಗನಯಾತ್ರಿಯಾಗಿ ತೆರಳಲು ಹಿಂದೆಮುಂದೆ ಯೋಚಿಸದೆ ನಿರ್ಧಾರ ಕೈಗೊಂಡಾಗ, ನಾಸಾದ ಇತರ ವಿಜ್ಞಾನಿಗಳಿಗೇ ಆಶ್ಚರ್ಯವಾಗಿದ್ದಿರ ಬಹುದು. ಅವರ ಅಚಲ ಧೈರ್ಯ, ಸಾಹಸ, ಸ್ಥಿತಪ್ರಜ್ಞತೆ, ಪ್ರಸಂಗಾವ ಧಾನತೆ ಯಾವ ಗಂಡಸಿಗೂ ಕಮ್ಮಿ ಇಲ್ಲ; ಮಹಿಳಾ ಶಕ್ತಿಗೆ ಸುನೀತಾ ಅವರೊಂದು ರೂಪಕ. ಧೈರ್ಯ ಹೊಂದಿರುವ ಇಂತಹ ಕೆಲವರಿಂದಲೇ ನಾವಿವತ್ತು ಅತ್ಯಂತ ಆಧುನಿಕ ವೈಜ್ಞಾನಿಕ ಯುಗದಲ್ಲಿ ವಾಸಿಸುತ್ತಾ, ತಂತ್ರಜ್ಞಾನದ ಸವಲತ್ತುಗಳ ಫಲಗಳನ್ನು ಅನುಭವಿಸು ತ್ತಿದ್ದೇವೆ.

ಕೊನೆಗೂ ಭೂಮಿಗೆ ಇಳಿದು ಬಂದ್ಯಾ ತಾಯಿ ಸುನೀತಾ?

Profile Ashok Nayak Apr 6, 2025 12:45 PM

ದು.ಗು.ಲಕ್ಷ್ಮಣ

ಪ್ರೀತಿಯ ಸೋದರಿ ಸುನೀತಾ, ಕೊನೆಗೂ ಭೂಮಿಗೆ ಇಳಿದು ಬಂದ್ಯಾ ತಾಯಿ ಸುನೀತಾ? ಇಳಿದು ಬಾ ತಾಯಿ ಇಳಿದು ಬಾ. ಹೇಗಾದರೂ ಬಾಹ್ಯಾಕಾಶ ನಿಲ್ದಾಣದಿಂದ ಇಳಿದಿಳಿದು ಬಾ ಎಂದು ನಾವೆಲ್ಲ ಭಾರತೀಯರು, ಅಷ್ಟೇಕೆ ಇಡೀ ಜಗತ್ತು ಮನದಾಳದಿಂದ ಹಗಲು ರಾತ್ರಿ ಜಪಿಸಿದ್ದು, ಭಜಿಸಿದ್ದು ಕೊನೆಗೂ ನಿಜವಾಯಿತಲ್ಲ, ಕನಸು ನನಸಾಯಿತಲ್ಲ, ಇದಕ್ಕಿಂತ ಖುಷಿಯ ವಿಚಾರ ಸದ್ಯಕ್ಕೆ ನಮಗೆ ಯಾವುದೂ ಇಲ್ಲ.

ನೀನು ಬರುತ್ತೀಯೋ ಇಲ್ಲವೋ, ಬಾಹ್ಯಾಕಾಶ ನಿಲ್ದಾಣದಲ್ಲೇ ಕೊರಗಿ ಕರಗಿ ಹೋಗು ತ್ತೀಯೇನೋ ಎಂಬ ಆತಂಕ ನಮ್ಮೆಲ್ಲರಲ್ಲೂ ಮನೆಮಾಡಿದ್ದು ದೇವರಾಣೆಗೂ ನಿಜ. ಅಮೆರಿಕದ ನಾಸಾ ಬಳಿ ನಿನ್ನನ್ನು ಮರಳಿ ಕರೆತರುವಷ್ಟು ವೈಜ್ಞಾನಿಕ ಸಾಮರ್ಥ್ಯ, ಸಾಹಸವಿದ್ದರೂ ಇದಕ್ಕಾಗಿ ಹಣವಿರಲಿಲ್ಲ ಮತ್ತು ಬೈಡನ್ ಸರ್ಕಾರ ಅಷ್ಟೊಂದು ಹಣ ಖರ್ಚು ಮಾಡಲು ತಯಾರಿರಲಿಲ್ಲ.

ಇದನ್ನೂ ಓದಿ: Hari Paraak Column: ನಾವೇನ್‌ ಗ್ಯಾರಂಟಿ ಕೊಟ್ಟಿದ್ವಾ ಬೆಲೆ ಏರಿಕೆ ಮಾಡಲ್ಲ ಅಂತ ?

ಆದರೆ ಟ್ರಂಪ್ ಅಧ್ಯಕ್ಷರಾಗುತ್ತಿದ್ದಂತೆ ನೀನು ಧರೆಗೆ ಮರಳಿ ಬರುವ ಕನಸಿಗೆ ರೆಕ್ಕೆಪುಕ್ಕ ಮೂಡತೊಡಗಿತು. ಬೈಡನ್ ಆವಾಗಲೇ ಎಲಾನ್ ಮಸ್ಕ್ ಜೊತೆ ಹೊಂದಿಕೊಂಡಿದ್ದರೆ ನೀನು ಯಾವಾಗಲೋ ಮರಳಿ ಧರೆಗಿಳಿದು ಬರುತ್ತಿದ್ದೆ. ಆದರೆ ಅವರಿಬ್ಬರೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದರು.

ಹಾಗಾಗಿ ಬಾಹ್ಯಾಕಾಶದಲ್ಲಿ ಸಿಕ್ಕಿಬಿದ್ದ ಗಗನಯಾತ್ರಿಗಳನ್ನು ಕರೆ ತರಲು ಬೈಡನ್ ಕ್ರಮ ಕೈಗೊಂಡಿರಲಿಲ್ಲ. ಜೊತೆಗೆ ನಾಸಾದ ಬಳಿ ಯಾವುದೇ ಸೂಕ್ತ ನೌಕೆ ಇಲ್ಲದ ಕಾರಣ ಅದು ಪೂರ್ಣವಾಗಿ ಸ್ಪೇಸ್-ಎಕ್ಸ್ ಅನ್ನೇ (ಮಸ್ಕ್ ಒಡೆತನದ ಸಂಸ್ಥೆ) ಅವಲಂಬಿಸಬೇಕಾಗಿತ್ತು.

ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ನಿನ್ನ ಅದೃಷ್ಟ ಖುಲಾಯಿಸಿತು. ನಿನ್ನನ್ನು ಹಾಗೂ ನಿನ್ನ ಜೊತೆಗಿದ್ದ ಬುಜ್ ವಿಲ್ಮೋರ್‌ರನ್ನು ತ್ವರಿತವಾಗಿ ಭೂಮಿಗೆ ತರಲು ಎಲಾನ್ ಮಸ್ಕ್ ಗೆ ಟ್ರಂಪ್ ಮನವಿ ಮಾಡಿದ್ದರು. ಸ್ನೇಹಕ್ಕೆ ಸ್ನೇಹ, ಪ್ರಾಣಕ್ಕೆ ಪ್ರಾಣ ಕೊಡುವ ಆತ್ಮೀಯ ಗೆಳೆಯರಾದ ಟ್ರಂಪ್ - ಮಸ್ಕ್ ಜೊತೆಗೂಡಿದ ಮೇಲೆ ಕೇಳಬೇಕೆ? ಟ್ರಂಪ್ ಮನವಿಯೆಂದರೆ ಮಸ್ಕ್‌ಗೆ ವೇದವಾಕ್ಯವಿದ್ದಂತೆ.

ಕೂಡಲೇ ಅಗತ್ಯ ಸಿದ್ಧತೆ ನಡೆಸಿ ನೀನು ಮತ್ತು ಬಾಹ್ಯಾಕಾಶ ಸಂಗಾತಿ ಬುಚ್ ಮರಳಿ ಭೂಮಿಗೆ ಬರುವಂತೆ ಮಾಡಿದ್ದಾರೆ. ಅವರಿಬ್ಬರಿಗೆ ನಾವೆಲ್ಲ ಥ್ಯಾಂಕ್ಸ್ ಹೇಳಲೇಬೇಕಾಗಿದೆ. ‘ಭರವಸೆ ನೀಡಿದ್ದೆವು. ಭರವಸೆ ಈಡೇರಿಸಿದ್ದೇವೆ’ ಎಂದು ಟ್ರಂಪ್ ಸರ್ಕಾರ ಶ್ವೇತಭವನ ದಿಂದ ಪ್ರಕಟಣೆ ಹೊರಡಿಸಿದಾಗ ಅಮೆರಿಕದ ಜನತೆಗೆಲ್ಲ ಉಂಟಾದ ಖುಷಿ ಅಷ್ಟಿಷ್ಟಲ್ಲ.

ಬೈಡನ್‌ಗೆ ಮಾತ್ರ ಹೇಳತೀರದ ಹೊಟ್ಟೆಯುರಿ. ಎಲ್ಲ ಕ್ರೆಡಿಟ್ ಟ್ರಂಪ್ ಪಾಲಾಯ್ತಲ್ಲ. ನಾನೇ ಈ ಕ್ರೆಡಿಟ್ ಪಡೆಯಬಹುದಿತ್ತು ಎಂದು ಉರಿದುಕೊಂಡದ್ದೇ ಬಂತು. ಬಾಹ್ಯಾಕಾಶದಲ್ಲಿ ಗೊತ್ತುಗುರಿಯಿಲ್ಲದೆ ಅಲೆದಾಡುತ್ತಿದ್ದ, ಅನಿಶ್ಚಿತತೆಯ ತೊಟ್ಟಿಲಲ್ಲಿ ತೂಗಾಡುತ್ತಿದ್ದ ಜೀವಿಗಳಿಬ್ಬರಿಗೆ ಮರುಜನ್ಮ ನೀಡುವ ಸಾಹಸ ಕಾಯವು, ಬಾಯಿಮಾತಿನಲ್ಲಿ ಹೇಳಿದಷ್ಟು ಸುಲಭವೇನೂ ಆಗಿರಲಿಲ್ಲ.

ಈ ಯೋಜನೆಯಲ್ಲಿ ಸಣ್ಣದೊಂದು ವ್ಯತ್ಯಾಸ ಉಂಟಾಗಿದ್ದರೂ ಇಬ್ಬರು ಗಗನಯಾತ್ರಿಗಳ ಜೀವವೇ ಹೋಗುತ್ತಿತ್ತು. ಹೀಗೆ ಹೇಳಿದಾಗ, ಎಲ್ಲರಿಗೂ ಇದೇ ರೀತಿ ಬಾಹ್ಯಾಕಾಶದಿಂದ 2003 ರ ಫೆಬ್ರವರಿ 1ರಂದು ಭೂಮಿಗೆ ಇಳಿದು ಬರುತ್ತಿದ್ದ ಇನ್ನೋರ್ವ ಭಾರತೀಯ ಸಂಜಾತೆ, ಬಾಹ್ಯಾಕಾಶ ವಿಜ್ಞಾನಿ ಕಲ್ಪನಾ ಚಾವ್ಲಾ ಧರೆಗಿಳಿಯುವ ಮುನ್ನವೇ ಆಕೆಯಿದ್ದ ನೌಕೆ ಹೊತ್ತಿ ಉರಿದು ಸೋಟವಾಗಿದ್ದ ಸಂಗತಿ ನೆನಪಾಗಿದ್ದಿರಲು ಸಾಕು.

ಪಾಪ, ಕಲ್ಪನಾ ಎಂಬ ಪ್ರತಿಭಾವಂತ ವಿಜ್ಞಾನಿಗೆ ಮರಳಿ ನೆಲಕ್ಕೆ ಕಾಲೂರುವ ಅದೃಷ್ಟವೇ ಇರಲಿಲ್ಲ. ಮೊನ್ನೆ ಮಾ.20ರ ಬೆಳಿಗ್ಗೆ ಇನ್ನೇನು ಸಮುದ್ರಕ್ಕೆ ಡ್ರ್ಯಾಗನ್ ನೌಕೆ ಅಪ್ಪಳಿಸಲಿದೆ ಎನ್ನುವಾಗ ನಾಸಾದ ವಿಜ್ಞಾನಿಗಳು ಕೂಡ ಉಸಿರು ಬಿಗಿ ಹಿಡಿದು ನೋಡುತ್ತಿದ್ದರು. ಆದರೆ ನೀವೆಲ್ಲ ಯಾವುದೇ ತೊಂದರೆ ಇಲ್ಲದಂತೆ ಬಂದಿಳಿದಾಗ ವಿಜ್ಞಾನಿಗಳು ಸೇರಿದಂತೆ ವಿಶ್ವಾ ದ್ಯಂತ ಕೋಟ್ಯಂತರ ಜನರು ನಿಟ್ಟುಸಿರು ಬಿಟ್ಟಿದ್ದರು.

ಆನಂದಬಾಷ್ಪ ಕಣ್ಣೀರಧಾರೆಯಾಗಿ ಹರಿದಿತ್ತು. ಟಿವಿ ಮೂಲಕ ಧರೆಗಿಳಿಯುತ್ತಿದ್ದ ದೃಶ್ಯ ನೋಡಿ ಅಜ್ಜ ಅಜ್ಜಿಯರೂ ಖುಷಿಯಿಂದ ಚಪ್ಪಾಳೆ ಹೊಡೆದಿದ್ದರು. ನೀನು ನಿಜಕ್ಕೂ ಅದೃಷ್ಟವಂತೆ ಸುನೀತಾ. ಎಂಟು ದಿನದ ಕೆಲಸಕ್ಕೆಂದು ಬಾಹ್ಯಾಕಾಶಕ್ಕೆ ಹೋದವಳು ನೀನು. ಆದರೆ ತಾಂತ್ರಿಕ ತೊಂದರೆಗೆ ಸಿಲುಕಿ 9 ತಿಂಗಳು ಬಾಹ್ಯಾಕಾಶ ಕೇಂದ್ರದಲ್ಲೇ ಕಾಲ ಕಳೆಯಬೇಕಾಯಿತಲ್ಲ.

ನಿನ್ನ ಧೈರ್ಯ, ಸಾಹಸ, ಸ್ಥಿತಪ್ರಜ್ಞತೆ, ಅಪಾರ ತಾಳ್ಮೆಯನ್ನು ಯಾರಾದರೂ ಕೊಂಡಾ ಡಲೇಬೇಕು. ಊರಿನಿಂದ ಹೊರಟು ದೂರದ ಬೆಂಗಳೂರಿಗೋ, ದಿಲ್ಲಿಗೋ ಅಥವಾ ಕುಂಭ ಮೇಳಕ್ಕೋ ಒಂದೆರಡು ದಿನಗಳ ಮಟ್ಟಿಗೆಂದು ಹೋದವರು ನಿಗದಿತ ದಿನ ಬರದಿದ್ದರೆ ಮನೆಮಂದಿಗೆಲ್ಲ ಅದೆಷ್ಟು ಆತಂಕ ಆಗುತ್ತದಲ್ಲವೆ? ಬಂಧುಬಳಗಕ್ಕೆಲ್ಲ ಫೋನ್ ಹಚ್ಚಿ, ಕೊನೆಗೆ ಪೊಲೀಸ್ ಠಾಣೆಗೂ ದೂರು ನೀಡಿ ಹೇಗೋ ಮರಳಿ ಬಂದರೆ ಸಾಕೆಂದು ಹಾರೈಸು ವವರನ್ನು ಪ್ರತಿದಿನವೆಂಬಂತೆ ನೋಡುತ್ತಲೇ ಇರುತ್ತೇವೆ.

ಹಾಗಿರುವಾಗ ಕಾಣದ, ಕೇಳದ, ಬಹುದೂರದ, ಜನಸಂಚಾರವೇ ಇರದ, ಬಾಹ್ಯಾಕಾಶ ಕೇಂದ್ರದಿಂದ ಮರಳಿ ನೀನು ಧರೆಗಿಳಿದು ಬರದಿದ್ದರೆ ನಮಗೆಲ್ಲ ಅದೆಷ್ಟು ಆತಂಕವಾಗ ಬಹುದೆಂದು ವರ್ಣಿಸಲು ಸಾಧ್ಯವೆ? ಟಿವಿ ಮಾಧ್ಯಮಗಳು ಒಂದೆರಡು ತಿಂಗಳ ಹಿಂದೆ ಇನ್ನು ಸುನೀತಾ ಭೂಮಿಗೆ ಬರಲಾರಳು ಎಂಬರ್ಥ ಬರುವಂತೆ ಸ್ಟೋರಿ ಪ್ರಸಾರ ಮಾಡು ತ್ತಿದ್ದರೆ ನನಗೂ ಗಾಬರಿ, ಆತಂಕವಾಗಿದ್ದು ನಿಜ. ‘ಧರೆಗಿಳಿದು ಬರಲಾರೆಯಾ ಸುನೀತಾ?’ ಎಂಬ ಅಂಕಣ ಲೇಖನ ಬರೆಯಲು ಆಗಲೇ ಸಿದ್ಧತೆಯಲ್ಲಿ ತೊಡಗಿದ್ದೆ.

ಆದರೆ ಕೆಲವು ದಿನಗಳ ನಂತರ ನೀನು ಧರೆಗೆ ಮರಳಿ ಬರುವ ಸಾಧ್ಯತೆ ಇದೆಯೆಂದು ಸುದ್ದಿ ಗೊತ್ತಾದಾಗ ಅದೆಷ್ಟು ಸಂತೋಷಪಟ್ಟಿದ್ದೆ, ಗೊತ್ತಾ? ನೀನು ಮತ್ತು ಬುಚ್ ಬರೋಬ್ಬರಿ 286 ದಿನಗಳು ಬಾಹ್ಯಾಕಾಶ ಕೇಂದ್ರದಲ್ಲೇ ಅನಿವಾರ್ಯವಾಗಿ ಕಳೆಯಬೇಕಾಗಿ ಬಂದರೂ, ಭೂಮಿಗೆ 5476 ಬಾರಿ ಸುತ್ತು ಬಂದಿದ್ದಲ್ಲದೆ, 121 ದಶಲಕ್ಷ ಮೈಲಿ (195 ದಶಲಕ್ಷ ಕಿ.ಮೀ.) ಪ್ರಯಾಣ ಮಾಡಿದಿರಲ್ಲ!

62 ಗಂಟೆ ಕಾಲ ಬಾಹ್ಯಾಕಾಶ ನಡಿಗೆಯನ್ನೂ ಮಾಡಿದರಲ್ಲ. ಅತಿಹೆಚ್ಚು ಕಾಲ ಬಾಹ್ಯಾ ಕಾಶ ನಡಿಗೆ ಮಾಡಿದ ಮಹಿಳಾ ಗಗನಯಾತ್ರಿ ಎಂಬ ದಾಖಲೆ ಈಗ ನಿನ್ನ ಹೆಸರಿಗೆ ಸೇರಿದೆ. ಬಾಹ್ಯಾಕಾಶದಲ್ಲಿ ಇದೆಲ್ಲ ಸಾಹಸ ಮಾಡುವುದು ಹೇಳಿದಷ್ಟು ಸುಲಭವಲ್ಲ. ಆಕಾಶದಲ್ಲಿ ಗುರುತ್ವಾಕರ್ಷಣ ಬಲ ಅತ್ಯಂತ ಕಡಿಮೆ ಇರುವ ಜಾಗದಲ್ಲಿ ಹೀಗೆಲ್ಲ ಪ್ರಯೋಗ ಮಾಡುವುದು, ನಡೆಯುವುದು ಇತ್ಯಾದಿ ಮಾಡಲು ಗಟ್ಟಿ ಗುಂಡಿಗೆ ಮತ್ತು ಕಠಿಣ ತರಬೇತಿ ಬೇಕಾಗುತ್ತದೆ.

ಭೂಮಿಯಿಂದ ಸರಿಸುಮಾರು 400 ಕಿ.ಮೀ.ದೂರದಲ್ಲಿ ತೇಲಿ ಬಿಡಲಾಗಿರುವ ಅಂತಾ ರಾಷ್ಟ್ರೀಯ ವ್ಯೋಮ ನಿಲ್ದಾಣ (ಐಎಸ್‌ಎಸ್) ದಿನಕ್ಕೆ 15ಕ್ಕೂ ಹೆಚ್ಚು ಬಾರಿ ಭೂಮಿಯನ್ನು ಸುತ್ತು ಹಾಕುತ್ತದೆ. ಗುರುತ್ವಾಕರ್ಷಣೆ ಇಲ್ಲದ ಆ ಪ್ರದೇಶದಲ್ಲಿ ಅದರಲ್ಲಿರುವವರು ತೂಕ ವಿಲ್ಲದ ಸ್ಥಿತಿಯನ್ನು ಅನುಭವಿಸುತ್ತಾರೆ.

ನಾವು ಕಾರಿನಲ್ಲಿ 140 ಕಿ.ಮೀ. ವೇಗದಲ್ಲಿ ಚಲಿಸಿದರೆ ‘ಅಯ್ಯೋ’ ಎಂದು ಕಿರುಚಿ ಕೊಳ್ಳುತ್ತೇವೆ. ಈ ಐಎಸ್‌ಎಸ್ ಗಂಟೆಗೆ 28 ಸಾವಿರ ಕಿ.ಮೀ.ವೇಗದಲ್ಲಿ ಚಲಿಸಿದಾಗ ಒಳಗಿದ್ದ ನೀನು ಮತ್ತು ಬುಚ್ ಹೇಗಿದ್ದಿರಬಹುದು? ಹೇಗೆ ಬ್ಯಾಲೆನ್ಸ್ ಮಾಡ್ತಿದ್ರಿ? ತೇಲಾಡುತ್ತಾ ಹೇಗೆ ಪ್ರಯೋಗ ಮಾಡ್ತಿದ್ರಿ? ನಿಮ್ಮ ಊಟ, ತಿಂಡಿ, ನಿದ್ರೆ ಕಥೆ? ನಿಜಕ್ಕೂ ಆ ಸ್ಥಿತಿ ಒಂದು ರೀತಿ ಯಲ್ಲಿ ತ್ರಿಶಂಕು ಸ್ಥಿತಿ ಅಲ್ಲವೆ? ನೀನು ಬಾಹ್ಯಾಕಾಶಕ್ಕೆ ಹೋಗಿದ್ದಾದರೂ ಏಕೆ? ಸ್ನಾತ ಕೋತ್ತರ ವಿಜ್ಞಾನ ಪದವಿ ಪಡೆದ ಬಳಿಕ ನಾಸಾ ಸಂಸ್ಥೆಗೆ ಆಯ್ಕೆಯಾಗಿ ಕೈತುಂಬ ವೇತನ ಪಡೆದು ಹೇಗೋ ಸುಖವಾಗಿರಬಹುದಿತ್ತಲ್ಲವೆ?

ಆದರೆ ಮೊದಲಿನಿಂದಲೂ ಸಾಹಸಪ್ರವೃತ್ತಿಯವಳಾದ ನೀನು ಬಾಹ್ಯಾಕಾಶಕ್ಕೆ ಗಗನ ಯಾತ್ರಿಯಾಗಿ ತೆರಳಲು ಹಿಂದೆ ಮುಂದೆ ಯೋಚಿಸದೆ ನಿರ್ಧಾರ ಕೈಗೊಂಡಾಗ, ನಾಸಾದ ಇತರೆ ವಿಜ್ಞಾನಿಗಳಿಗೇ ಆಶ್ಚರ್ಯವಾಗಿದ್ದಿರಬಹುದು. ನಿನ್ನ ಅಚಲ ಧೈರ್ಯ, ಸಾಹಸ, ಸ್ಥಿತಪ್ರಜ್ಞತೆ, ಪ್ರಸಂಗಾವಧಾನತೆ ಯಾವ ಗಂಡಸಿಗೂ ಕಮ್ಮಿ ಇಲ್ಲ; ಮಹಿಳಾ ಶಕ್ತಿಗೆ ನೀನೊಂದು ರೂಪಕ.

ವೈಜ್ಞಾನಿಕ ಅಧ್ಯಯನ ಹಾಗೂ ಪ್ರಯೋಗಗಳನ್ನು ನಡೆಸಲು ಇಂತಹ ರೋಚಕ, ಆದರೆ ಅಪಾಯ ಸಂಭವವಿರುವ ದಾರಿಯನ್ನು ನೀನಾಗಿ ಆಯ್ಕೆ ಮಾಡಿಕೊಂಡೆ. ನಿಮ್ಮಂತಹ ಧೈರ್ಯ ಹೊಂದಿರುವ ಕೆಲವರಿಂದಲೇ ನಾವಿವತ್ತು ಅತ್ಯಂತ ಆಧುನಿಕ ವೈಜ್ಞಾನಿಕ ಯುಗದಲ್ಲಿ ವಾಸಿಸುತ್ತಿದ್ದೇವೆ. ನಾವು ಕೈಯಲ್ಲಿ ಹಿಡಿದಿರುವ ಮೊಬೈಲ್, ಬಳಸುವ ವಾಟ್ಸಾಪ್, ಇನ್ ಸ್ಟಾಗ್ರಾಂ, ಲ್ಯಾಪ್‌ಟಾಪ್ ಎಲ್ಲವೂ ನಿಮ್ಮ ಸಾಧನೆಗಳ ಪರಿಣಾಮ ವಾಗಿಯೇ.

ಮನುಷ್ಯರು ನಾವು ಅತ್ಯಂತ ಬುದ್ಧಿಜೀವಿಗಳೆಂದು ಹೇಳಿಕೊಳ್ಳಲು ಸಾಧ್ಯವಾಗಿರುವುದು ನಿಮ್ಮಂತಹವರಿಂದಲೇ. ಮನುಕುಲದ ಒಳಿತಿಗಾಗಿ ಕೆಲಸ ಮಾಡುವ ಪ್ರತಿ ವಿಜ್ಞಾನಿಯ ಹಿಂದೆಯೂ ಇಂತಹ ಮಹಾನ್ ತ್ಯಾಗದ ಹಿನ್ನೆಲೆ ಇರುತ್ತದೆ. ನಿನ್ನ ಇಂತಹ ತ್ಯಾಗ, ಸಾಹಸ ಗಳೇ ಮನುಕುಲದ ಉಜ್ವಲ ಭವಿಷ್ಯವನ್ನು ಬರೆಯುವ ಹೊನ್ನ ಪೆನ್ನುಗಳು. ಎಷ್ಟೊಂದು ಕಷ್ಟಗಳನ್ನು ಮೈಮೇಲೆ ನೀನಾಗಿ ಎಳೆದುಕೊಂಡೆಯಲ್ಲೆ ತಾಯಿ!

ಇವೆಲ್ಲ ಸಾಧ್ಯವಾಗಿದ್ದು ನೀನು ನಂಬಿದ ಆ ಗಣಪತಿ ಹಾಗೂ ಭಗವದ್ಗೀತೆಯ ಸಂದೇಶ ಗಳಿಂದಲ್ಲವೆ ಸುನೀತಾ? ಹಾಗಂತ ಬಾಹ್ಯಾಕಾಶಕ್ಕೆ ಹೋಗುವ ಮುನ್ನ ನೀನೇ ಹೇಳಿ ಕೊಂಡಿದ್ದೀಯಲ್ಲ ಸೋದರಿ! ಇಂದಿನ ಆಧುನಿಕ ಜಗತ್ತಿನಲ್ಲಿ, ಯಾರ‍್ಯಾರೋ ಕಾಕಪೋಕ, ಕಾಂಜಿಪೀಂಜಿ ಪುಡಾರಿಗಳ, ಪ್ರಚಾರಪ್ರಿಯ ಸೆಲೆಬ್ರಿಟಿಗಳ ಹುಟ್ಟುಹಬ್ಬವನ್ನು ನಾವೇ ದುಡ್ಡು ಖರ್ಚುಮಾಡಿ ಸಂಭ್ರಮದಿಂದ ಆಚರಿಸುತ್ತೇವೆ. ಅಂಥ ಪ್ರಚಾರ ಪ್ರಿಯರಿಂದ ಲೋಕಕ್ಕೆ ಯಾವ ಒಳಿತೂ ಆಗದು. ಆದರೆ ಮನುಕುಲದ ಏಳಿಗೆಗಾಗಿ 9 ತಿಂಗಳು ಬಾಹ್ಯಾ ಕಾಶದಲ್ಲಿದ್ದು ಮರುಹುಟ್ಟು ಪಡೆದು ಬಂದ ನಿನ್ನ ಹುಟ್ಟುಹಬ್ಬ ಆಚರಿಸಬೇಕೆಂದು ಯಾರಿಗೂ ಅನಿಸಲಿಲ್ಲವಲ್ಲ, ಛೆ, ನಾವೆಂತಹ ಕೃತಘ್ನರು!

ಕೊನೆಗೂ ಭೂಮಿಗೆ ಬಂದಿಳಿದು ಈಗ ಪುನಶ್ಚೇತನ ಕೇಂದ್ರದಲ್ಲಿ ಆರೈಕೆ ಪಡೆಯುತ್ತಿರುವ ನೀನು ಬೇಗ ಚೇತರಿಸಿಕೊಳ್ಳುವಂತಾಗಲಿ. ನೀನು ನಂಬಿರುವ ಆ ಗಣಪತಿ ನಿನಗೆ ಮೊದಲಿನ ಬಲ, ಛಲ, ಕಸುವು ನೀಡಲಿ. ನೀನು ಮೊದಲಿನಂತಾದ ಮೇಲೆ ನೀನು ಪ್ರೀತಿಸುವ ಭಾರತಕ್ಕೆ ಒಮ್ಮೆ ಬಂದು ಹೋಗು. ನಮ್ಮ ಪ್ರಧಾನಿ ಕೂಡ ನಿನ್ನನ್ನು ಭಾರತಕ್ಕೆ ಆಮಂತ್ರಿಸಿದ್ದಾರೆ.

ಶುಭವಾಗಲಿ ತಾಯಿ ನಿನಗೆ!