Axiom-4 Mission: ಆಕಾಶಕ್ಕೆ ಜಿಗಿದ ಫಾಲ್ಕನ್ ರಾಕೆಟ್ ; ಗಗನಯಾತ್ರಿಗಳ ಹಿನ್ನಲೆ ಏನು? ಭಾರತಕ್ಕೆ ಈ ಮಿಷನ್ ಯಾಕಿಷ್ಟು ಮುಖ್ಯ?
ಬಾಹ್ಯಾಕಾಶ ಕ್ಷೇತದಲ್ಲಿ ಭಾರತ ಮತ್ತೊಂದು ದೊಡ್ಡ ಹೆಜ್ಜೆಯನ್ನಿಡಲು ಮುನ್ನುಡಿ ಸಿಕ್ಕಾಗಿದೆ. ಭಾರತದ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾನಿಗಳು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಹಾರಿದ್ದಾರೆ. ಈ ಗಗನಯಾತ್ರಿಗಳ ಹಿನ್ನೆಲೆಯೇನು? ಈ ಯೋಜನೆಯ ಮಹತ್ವವೇನು?



ಅಮೆರಿಕ, ಭಾರತ, ಪೋಲೆಂಡ್, ಹಂಗೇರಿ, ಸೌದಿ ಅರೇಬಿಯಾ, ಬ್ರೆಜಿಲ್, ನೈಜೀರಿಯಾ, ಯುಎಇ ಸೇರಿ 31 ದೇಶಗಳ 60 ವೈಜ್ಞಾನಿಕ ಅಧ್ಯಯನಗಳನ್ನು ಒಳಗೊಂಡ ಆಕ್ಸಿಯಮ್ -4 ಮಿಷನ್ ಯೋಜನೆ ಇಂದು ಮಧ್ಯಾನ್ಹ 12 ಗಂಟೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾವಣೆಯಾಗಿದೆ. ಈ ಯೋಜನೆಯ ಭಾಗವಾಗಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸಹ ಸೇರಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 14 ದಿನಗಳ ವಾಸ್ತವ್ಯದ ಸಮಯದಲ್ಲಿ, ಇಸ್ರೋ ಹಲವಾರು ರಾಷ್ಟ್ರೀಯ ಸಂಶೋಧನೆ ಹಾಗೂ ಅಭಿವೃದ್ಧಿ ಪ್ರಯೋಗಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಪ್ರಸ್ತಾವಿಸಿದ ಏಳು ಮೈಕ್ರೋಗ್ರಾವಿಟಿ ಸಂಶೋಧನಾ ಪ್ರಯೋಗಗಳನ್ನು ನಡೆಸಲಿದೆ ಎಂದು ಹೇಳಲಾಗಿದೆ.

ಯಾರು ಈ ಶುಭಾಂಶು ಶುಕ್ಲಾ?
ಭಾರತೀಯ ವಾಯುಪಡೆಯ (ಐಎಎಫ್) ಅನುಭವಿ ಪೈಲಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅಕ್ಟೋಬರ್ 10, 1985ರಂದು ಭಾರತದ ಉತ್ತರ ಪ್ರದೇಶದ ಲಕ್ನೊದಲ್ಲಿ ಜನಿಸಿದರು. ಜೂನ್ 2006 ರಲ್ಲಿ ಐಎಎಫ್ ಫೈಟರ್ ವಿಂಗ್ಗೆ ನಿಯೋಜನೆಗೊಂಡರು. ಅವರು Su-30 MKI, MiG-21, MiG-29 ಜಾಗ್ವಾರ್, ಹಾಕ್, ಡಾರ್ನಿಯರ್ ಮತ್ತು An-32 ಸೇರಿದಂತೆ ವಿವಿಧ ವಿಮಾನಗಳಲ್ಲಿ 2,000 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದಾರೆ. ಇದೀಗ ರಾಕೇಶ್ ಶರ್ಮಾ ಅವರ ಬಳಿಕ ಬಾಹ್ಯಾಕಾಶಕ್ಕೆ ತೆರಳುತ್ತಿರುವ ಎರಡನೇ ಭಾರತೀಯ ಎಂದೆನಿಸಿಕೊಂಡಿದ್ದಾರೆ.

ಅಮೆರಿಕದವಾರಾದ ಪೆಗ್ಗಿ ವಿಟ್ಸನ್ ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ಸಮಯ - 675 ದಿನಗಳು - ಕಳೆದ ಅಮೆರಿಕದ ದಾಖಲೆಯನ್ನು ಹೊಂದಿದ್ದಾರೆ. ಈ ಹಿಂದೆ ವಾಣಿಜ್ಯ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಮುನ್ನಡೆಸಿದ್ದ ಅವರು, ಆಕ್ಸ್ -4 ರ ಕಮಾಂಡರ್ ಆಗಿ ಮರಳುತ್ತಾರೆ.

ಪೋಲೆಂಡ್ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA)ಯನ್ನು ಪ್ರತಿನಿಧಿಸುವ ಸ್ಲಾವೋಸ್ಜ್ ಉಜ್ನಾನ್ಸ್ಕಿ ಒಬ್ಬ ಭೌತಶಾಸ್ತ್ರಜ್ಞ ಮತ್ತು CERN ಎಂಜಿನಿಯರ್. 1978 ರಲ್ಲಿ ಮಿರೋಸ್ಲಾವ್ ಹರ್ಮಾಸ್ಜೆವ್ಸ್ಕಿಯ ಹಾರಾಟದ ನಂತರ, ಅವರು ಬಾಹ್ಯಾಕಾಶಕ್ಕೆ ಹೋದ ಎರಡನೇ ಪೊಲೆಂಡ್ ಪ್ರಜೆಯಾಗಿದ್ದಾರೆ.

ಮೆಕ್ಯಾನಿಕಲ್ ಎಂಜಿನಿಯರ್ ಟಿಬೋರ್ ಕಾಪು, ನಾಲ್ಕು ದಶಕಗಳ ನಂತರ ಹಂಗೇರಿಯನ್ನು ಪ್ರತಿನಿಧಿಸಲಿದ್ದಾರೆ. . ಅವರ ಭಾಗವಹಿಸುವಿಕೆಯು ಹಂಗೇರಿಯನ್ ಸರ್ಕಾರದ HUNOR ಕಾರ್ಯಕ್ರಮದ ಭಾಗವಾಗಿದೆ. ISS ನಲ್ಲಿ, ಕಾಪು ದೀರ್ಘಾವಧಿಯ ಬಾಹ್ಯಾಕಾಶ ಪ್ರಯಾಣಕ್ಕೆ ಸಂಬಂಧಿಸಿದ ಆರೋಗ್ಯ ಮತ್ತು ಸಾಮಗ್ರಿಗಳ ಸಂಶೋಧನೆಯನ್ನು ಕೈಗೊಳ್ಳುತ್ತಾರೆ.