Keshava Prasad B Column: ಹಲ್ದಿರಾಮ್ಸ್ 90,000 ಕೋಟಿ ಬಿಸಿನೆಸ್ ಆಗಿದ್ದು ಹೇಗೆ ?
ಭಾರತದಲ್ಲಿ ಸ್ನಾಕ್ಸ್ ಮತ್ತು ‘ಈಸಿ ಟು ಈಟ್ ಫುಡ್ಸ್’ ವಲಯದಲ್ಲಿ ಅತಿ ದೊಡ್ಡ ಕಂಪನಿಯಾ ಗಿದೆ. ಇತ್ತೀಚಿನ ವರದಿಗಳ ಪ್ರಕಾರ ಸಿಂಗಾಪುರ ಮೂಲದ ಬಹುರಾಷ್ಟ್ರೀಯ ಹೂಡಿಕೆ ಕಂಪನಿ ಯಾದ ಟೆಮಾಸೆಕ್, ಹಲ್ದಿರಾಮ್ಸನ ಶೇ.10ರಷ್ಟು ಷೇರುಗಳನ್ನು ಖರೀದಿಸಿದೆ. ಇದು ಭಾರತದ ಎಫ್ ಎಂಸಿಜಿ ಸೆಕ್ಟರ್‌ನಲ್ಲಿ ಇತ್ತೀಚಿನ ಅತಿ ದೊಡ್ಡ ಡೀಲ್ ಆಗಿದೆ. ಸುಮಾರು 1 ಶತಕೋಟಿ ಡಾಲರ್‌ಗೆ ಈ ಷೇರು ಖರೀದಿ ನಡೆದಿದೆ.

ಹಿರಿಯ ಪತ್ರಕರ್ತ, ಅಂಕಣಕಾರ ಕೇಶವ್ ಪ್ರಸಾದ್ ಬಿ.

ಮನಿ ಮೈಂಡೆಡ್
ನಾವು ದೊಡ್ಡ ದೊಡ್ಡ ಫುಡ್ ಕಂಪನಿಗಳ ಬಗ್ಗೆ ಆಲೋಚಿಸುವಾಗ ಮೆಕ್ ಡೊನಾಲ್ಡ್, ಡೊಮಿನೋಸ್ ಅಥವಾ ಕೆಎಫ್ ಸಿ ಮುಂತಾದ ಅಂತಾರಾಷ್ಟ್ರೀಯ ಪ್ರಸಿದ್ಧ ಬ್ರ್ಯಾಂಡ್‌ಗಳು ನೆನಪಾಗುತ್ತವೆ. ಆದರೆ ನಮ್ಮದೇ ಇಂಡಿಯನ್ ಫುಡ್ ಬ್ರಾಂಡೊಂದು ಇವೆಲ್ಲವನ್ನೂ ಭಾರತೀಯ ಸ್ನಾಕ್ಸ್‌ಗಳ ವಿಭಾಗದಲ್ಲಿ ಹಿಂದಿಕ್ಕಿದೆ. ಅದುವೇ 87 ವರ್ಷಗಳ ಭವ್ಯ ಇತಿಹಾಸ ವಿರುವ ಹಲ್ದಿರಾಮ್ಸ್! ಇದರ ಕಥೆ ರೋಚಕ ಮತ್ತು ಸೂರ್ತಿದಾಯಕ. ರಾಜಸ್ಥಾನದ ಬಿಕಾನೇರ್‌ನಲ್ಲಿ ಸಣ್ಣ ಅಂಗಡಿ ಯೊಂದರಲ್ಲಿ ಆರಂಭವಾದ ಹಲ್ದಿರಾಮ್ಸ ಇವತ್ತು 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕುರುಕಲು ತಿಂಡಿಗಳ ಬಿಸಿನೆಸ್ ನಡೆಸುತ್ತಿದೆ. ಎರಡು ರುಪಾಯಿಗೆ ಆಲೂ ಮಿಕ್ಸ್‌ಚರ್ ಅನ್ನು ಮಾರುತ್ತಿದ್ದ ಹಲ್ದಿರಾಮ್ಸ ಈಗ 90000 ಕೋಟಿ ರುಪಾಯಿಗಳ ಮಾರುಕಟ್ಟೆ ಮೌಲ್ಯ ಇರುವ ದೊಡ್ಡ ಬಿಸಿನೆಸ್ ಸಾಮ್ರಾಜ್ಯವಾಗಿ ವಿಶ್ವವ್ಯಾಪಿಯಾಗಿದೆ.
ಭಾರತದಲ್ಲಿ ಸ್ನಾಕ್ಸ್ ಮತ್ತು ‘ಈಸಿ ಟು ಈಟ್ ಫುಡ್ಸ್’ ವಲಯದಲ್ಲಿ ಅತಿ ದೊಡ್ಡ ಕಂಪನಿ ಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಸಿಂಗಾಪುರ ಮೂಲದ ಬಹುರಾಷ್ಟ್ರೀಯ ಹೂಡಿಕೆ ಕಂಪನಿಯಾದ ಟೆಮಾಸೆಕ್, ಹಲ್ದಿರಾಮ್ಸನ ಶೇ.10ರಷ್ಟು ಷೇರುಗಳನ್ನು ಖರೀದಿಸಿದೆ. ಇದು ಭಾರತದ ಎಫ್ ಎಂಸಿಜಿ ಸೆಕ್ಟರ್‌ನಲ್ಲಿ ಇತ್ತೀಚಿನ ಅತಿ ದೊಡ್ಡ ಡೀಲ್ ಆಗಿದೆ. ಸುಮಾರು 1 ಶತಕೋಟಿ ಡಾಲರ್‌ಗೆ ಈ ಷೇರು ಖರೀದಿ ನಡೆದಿದೆ.
ಇದನ್ನೂ ಓದಿ: Keshava Prasad B Column: ರಕ್ತದೋಕುಳಿಯ ನಡುವೆ ವಿಶ್ವಬ್ಯಾಂಕ್ ಸಾಂತ್ವನ !
ರುಚಿಕರ ಮತ್ತು ಸಾಂಪ್ರದಾಯಿಕ ಬಿಕಾನೇರಿ ಆಲೂ ಮಿಕ್ಸ್‌ಚರ್ ಬುಜಿಯಾವನ್ನು ಹಲ್ದಿ ರಾಮ್ಸ್ ದೇಶದ ಮನೆ ಮಾತಾಗಿಸಿದೆ. ವಿದೇಶಗಳಲ್ಲೂ ಇದು ಜನಪ್ರಿಯವಾಗಿದೆ. ಹಲ್ದಿ ರಾಮ್ಸ್ ನಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಲು ಕಾರಣವೂ ಇದೇ ಆಗಿದೆ. ಹಲ್ದಿ ರಾಮ್ಸ್ ಕಥೆ ಸಣ್ಣದಾಗಿ 1937ರಲ್ಲಿ ಆರಂಭವಾಯಿತು. ರಾಜಸ್ಥಾನದ ಬಿಕಾನೇರ್‌ನಲ್ಲಿ ಪುಟ್ಟ ಅಂಗಡಿಯೊಂದರಲ್ಲಿ ಶುರುವಾಯಿತು. ಗಂಗಾ ಭೀಷಣ್ ಅಗರ್‌ವಾಲ್ ಎಂಬು ವವರು ಈ ಮಿಕ್ಸ್‌ಚರ್ ಆಂಗಡಿ ತೆರೆದಿದ್ದರು. ಅವರನ್ನು ಸಂಕ್ಷಿಪ್ತವಾಗಿ ಹಲ್ದಿರಾಮ್ ಎಂದು ಜನ ಕರೆಯುತ್ತಿದ್ದರು.
ಮಾರ್ವಾಡಿ ಸಮುದಾಯದ ಜನ ವ್ಯಾಪಾರದಲ್ಲಿ ಪ್ರಚಂಡ ಕುಶಲಿಗಳಾಗಿರುವುದು ಸರ್ವೇ ಸಾಮಾನ್ಯ. ಭಾರತದ ಯಾವುದೇ ಮೂಲೆಯದರೂ ಕೆಲವೇ ವರ್ಷಗಳಲ್ಲಿ ಯಶಸ್ವಿ ಬಿಸಿ ನೆಸ್ ನಡೆಸಬಲ್ಲ ಚಾಕಚಕ್ಯತೆ ಅವರಲ್ಲಿದೆ ಎಂಬುದು ಸಾಬೀತಾಗಿರುವ ಅಂಶ. ಆರಂಭ ದಲ್ಲಿ ಬಿಕಾನೇರ್‌ನ ಮಹಾರಾನ ಹೆಸರಿನಿಂದಲೇ ದಂಗರ್ ಸೇವ್ ಎಂಬ ಮಿಕ್ಸ್ ಚರ್ (ಬುಜಿಯಾ) ಅನ್ನು ಮಾರಾಟ ಮಾಡಲಾಯಿತು.
ಮಿಕ್ಸ್‌ಚರ್‌ನಲ್ಲಿ ಬೇಸನ್ ಜತೆಗೆ ಮಡಿಕೆ ಕಾಳನ್ನೂ ಬಳಸಿ ತಯಾರಿಸಿದ ಗಂಗಾ ಭೀಷಣ್ ಅವರು ಜನರಿಗೆ ಹೊಸ ಟೇಸ್ಟ್ ಕೊಟ್ಟರು. ಹೀಗಾಗಿ ಪ್ರತಿ ವಾರ 200 ಕಿಲೋ ಮಾರಾಟಕ್ಕೆ ಕೊರತೆ ಇರಲಿಲ್ಲ. ಜನ ಇಷ್ಟಪಟ್ಟು ಕೊಳ್ಳುತ್ತಿದ್ದರು. ಕಿಲೋಗೆ 2 ಪೈಸೆಯಿಂದ 25 ಪೈಸೆಗೆ ದರ ಏರಿತು. ಇದಕ್ಕೆ ಕಾರಣ ಅದರ ಜನಪ್ರಿಯತೆ ಮತ್ತು ಬೇಡಿಕೆ. ಉದ್ಯಮಶೀಲತೆಯ ಉತ್ಸಾಹ ಮತ್ತು ನವೀನ ಸಂಶೋಧನೆಯಿಂದ ಹಲ್ದಿರಾಮ್ಸ್ ಬಿಸಿನೆಸ್ ಬೆಳೆಯುತ್ತಾ ಹೋಯಿತು.
ಕೊಲ್ಕೊತಾ, ನಾಗ್ಪುರ, ದಿಲ್ಲಿಯಲ್ಲಿ ಮಳಿಗೆಗಳು ಆರಂಭವಾದವು. ಕಾರ್ಖಾನೆಗಳಲ್ಲಿ ಸ್ನಾಕ್ಸ್ ಉತ್ಪಾದನೆಗೆ ಹಲ್ದಿರಾಮ್ಸ್ ಮುಂದಾಯಿತು. ಕಂಪನಿಯು ಮೊದಲು ಕೊಲ್ಕೊತಾದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಿತು. ಬಳಿಕ 1970ರಲ್ಲಿ ಜೈಪುರದಲ್ಲಿ ದೊಡ್ಡ ಕಾರ್ಖಾನೆ ನಿರ್ಮಿ ಸಲಾಯಿತು. 1990ರಲ್ಲಿ ದಿಲ್ಲಿಯಲ್ಲಿ ಮತ್ತೊಂದು ಬೃಹತ್ ಉತ್ಪಾದನಾ ಘಟಕ ಅಸ್ತಿತ್ವಕ್ಕೆ ಬಂದಿತು. ರೆಸ್ಟೊರೆಂಟ್‌ಗಳನ್ನೂ ತೆರೆಯಲಾಯಿತು.
ದಿಲ್ಲಿಯಲ್ಲಿ ಹಲ್ದಿರಾಮ್ ಸ್ನ್ಯಾಕ್ಸ್ ಎತ್ನಿಕ್ ಫುಡ್ಸ್, ನಾಗ್ಪುರದಲ್ಲಿ ಹಲ್ದಿರಾಮ್ ಫುಡ್ಸ್ ಇಂಟರ್‌ನ್ಯಾಷನ್, ಕೊಲ್ಕೊತಾದಲ್ಲಿ ಹಲ್ದಿರಾಮ್ ಭುಜಿಯವಾಲಾ ಎಂದು ಪ್ರಮುಖ ವಿಭಾಗಗಳು ಈ ಸಾಮ್ರಾಜ್ಯಕ್ಕಿದೆ. ಹಲ್ದಿರಾಮ್ಸ್ ಇವತ್ತು ತನ್ನ ಫುಡ್ ಇಂಡಸ್ಟ್ರಿಯಲ್ಲಿ 500 ಕ್ಕೂ ಹೆಚ್ಚು ಉತ್ಪನ್ನಗಳನ್ನು ಒಳಗೊಂಡಿದೆ. ಕುರುಕಲು ತಿಂಡಿಗಳು, ಸ್ವೀಟ್ಸ್, ರೆಡಿ-ಟು-ಈಟ್ ಮೀಲ್ಸ್ ಇತ್ಯಾದಿ ವಿಭಾಗಗಳಲ್ಲಿ ಉತ್ಪನ್ನಗಳು ಇವೆ.
ಬ್ರಿಟನ್, ಅಮೆರಿಕ, ಜಪಾನ್ ಸೇರಿದಂತೆ ನೂರಾರು ದೇಶಗಳಲ್ಲಿ ಹಲ್ದಿರಾಮ್ಸ್ ಮಳಿಗೆಗಳು ಇವೆ. ಹಲವು ಬ್ರ್ಯಾಂಡ್‌ಗಳನ್ನೂ ಇದು ಹೊಂದಿದೆ. ಮುಖ್ಯವಾಗಿ ಮೈನ್ಯೂಟ್ ಖನ್ನ, ಕಪ್ ಶುಪ್, ಕಕ್ಕಿ ಹೆವೆನ್. ಕೊಕೊಬೇ ಎಂಬ ಚಾಕೊಲೇಟ್ ಬ್ರ್ಯಾಂಡ್ ಕೂಡ ಇದೆ. ಸೂಪರ್ ಮಾರ್ಕೆಟ್ ಮತ್ತು ಆನ್‌ಲೈನ್ ಸ್ಟೋರ್‌ಗಳಲ್ಲಿ ಹಲ್ದಿರಾಮ್ಸ್ ಉತ್ಪನ್ನಗಳನ್ನು ಖರೀದಿಸ ಬಹುದು.
ಹಲ್ದಿರಾಮ್ಸ್ 2024ರಲ್ಲಿ 14500 ಕೋಟಿ ರುಪಾಯಿ ಆದಾಯವನ್ನು ಗಳಿಸಿತ್ತು. 2300-2500 ಕೋಟಿ ರುಪಾಯಿಗಳ ನಿವ್ವಳ ಲಾಭವನ್ನೂ ಗಳಿಸಿತ್ತು. ಕಳೆದ ಐದು ವರ್ಷಗಳಲ್ಲಿ ಇದರ ಬಿಸಿನೆಸ್ ವಾರ್ಷಿಕ ಶೇ.17-18ರ ದರದಲ್ಲಿ ವೃದ್ಧಿಸುತ್ತಿದೆ. 2023ರಲ್ಲಿ ಟಾಟಾ ಸಮೂಹದ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಕಂಪನಿಯು ಹಲ್ದಿರಾಮ್ಸ್‌ನ ಶೇ.51ರಷ್ಟು ಷೇರುಗಳನ್ನು ಖರೀದಿಸುವ ಪ್ರಸ್ತಾಪ ಮುಂದಿಟ್ಟಿತ್ತು ಎಂದೂ ವರದಿಯಾಗಿತ್ತು. ಆದರೆ ಅದು ಕಾರ್ಯಗತ ವಾಗಿರಲಿಲ್ಲ.
ಗಂಗಾ ಭೀಷಣ್ ಅಗರ್‌ವಾಲ್ ಅವರು ಚಿಕ್ಕ ವಯಸ್ಸಿನಲ್ಲಿಯೇ ವ್ಯಾಪಾರಕ್ಕೆ ಇಳಿದರು. ಮಾರ್ವಾಡಿ ಸಮಾಜದಲ್ಲಿ ಇದು ಹೊಸತೇನಲ್ಲ. ಅಲ್ಲಿ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಬಿಸಿನೆಸ್‌ನ ಒಳಗುಟ್ಟುಗಳನ್ನು ಕಲಿಯುವ ಅವಕಾಶ ಸಿಗುತ್ತದೆ. ಪೋಷಕರು ನಡೆಸುವ ವ್ಯಾಪಾರದ ಅಂಗಡಿಗಳಲ್ಲಿ ಮಕ್ಕಳೂ ಓಡಾಡುತ್ತಿರುತ್ತಾರೆ. ಗ್ರಾಹಕರೊಂದಿಗೆ ಮಾತ ನಾಡುತ್ತಾರೆ.
ಗಲ್ಲಾಪೆಟ್ಟಿಗೆಯ ಎದುರು ಕುಳಿತುಕೊಳ್ಳುತ್ತಾರೆ. ವ್ಯಾಪಾರದ ಲೆಕ್ಕಾಚಾರ, ಶಿಸ್ತು, ಸಂವಹನದ ಕೌಶಲವನ್ನು ಕರಗತ ಮಾಡಿಕೊಳ್ಳುತ್ತಾರೆ. ಹಣಕಾಸು ವಿಚಾರದಲ್ಲಿ ಮಿತ ವ್ಯಯ, ಬದ್ಧತೆ, ರಿಸ್ಕ್ ಮ್ಯಾನೇಜ್ಮೆಂಟ್, ದೂರದೃಷ್ಟಿ, ನೆಟ್‌ವರ್ಕಿಂಗ್ ಮತ್ತು ಸಂಬಂಧ ಗಳನ್ನು ಉಳಿಸಿಕೊಳ್ಳುವ ಪ್ರವೃತ್ತಿ ಮಾರ್ವಾಡಿ ಸಮುದಾಯದ ವ್ಯಾಪಾರಿಗಳಲ್ಲಿ ಚಿಕ್ಕಂದಿ ನಿಂದಲೇ ಬಂದಿರುತ್ತದೆ.
ಆಗ ಗಂಗಾ ಭೀಷಣ್ ಅವರ ತಂದೆಯೂ ಸಣ್ಣದಾಗಿ ಖಾರ- ಸ್ವೀಟ್ಸ್ ಬಿಸಿನೆಸ್ ಮಾಡುತ್ತಿದ್ದ ರಂತೆ. ಹೀಗಾಗಿ ಗಂಗಾ ಭೀಷಣ್ ಅಗರ್‌ವಾಲ್ ಅವರಿಗೆ 12ರ ಎಳೆಯ ಹರೆಯದಲ್ಲಿಯೇ ಸ್ನ್ಯಾಕ್ಸ್ ಬಿಸಿನೆಸ್ ನಡೆಸುವುದರಲ್ಲಿ ಆಸಕ್ತಿ ಉಂಟಾಯಿತು. ತಂದೆಯ ಅಂಗಡಿಯಲ್ಲಿ ಗಂಟೆಗಟ್ಟಲೆ ಕಾಲ ತೊಡಗಿಸಿಕೊಳ್ಳುತ್ತಿದ್ದರು, ಜತೆಗೆ ತಮ್ಮದೇ ಆದ ಮಿಕ್ಸ್‌ಚರ್ ತಯಾರಿಸಿದರು.
ಹೊಸ ರುಚಿಯು ಗ್ರಾಹಕರ ಮನ ಗೆದ್ದಿತು. ಗುಣಮಟ್ಟಕ್ಕೂ ರಾಜಿ ಮಾಡಿಕೊಳ್ಳಲಿಲ್ಲ. ಬಳಿಕ ಗಂಗಾ ಭೀಷಣ್ ಅಗರ್‌ವಾಲ್ ಹಿಂತಿರುಗಿ ನೋಡಲಿಲ್ಲ. ಕ್ರಮೇಣ ನಾನಾ ಹಂತ ಗಳಲ್ಲಿ ಸಂಸ್ಥೆ ಬೆಳೆಯಿತು. ಅದನ್ನು ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಹೊಸ ಎತ್ತರಕ್ಕೆ ಕೊಂಡೊಯ್ದರು. ಹೀಗೆ ಹಲ್ದಿರಾಮ್ಸ್ ರಾಷ್ಟ್ರೀಯ ಸ್ನಾಕ್ಸ್ ಬ್ರಾಂಡ್ ಆಗಿ ಹೊರಹೊಮ್ಮಿತು.
ಸಾಂಪ್ರದಾಯಿಕ ಕುರುಕಲು ತಿಂಡಿಗಳನ್ನು ಆಧುನಿಕ ಉತ್ಪಾದನಾ ತಂತ್ರಗಾರಿಕೆಯೊಂದಿಗೆ ತಯಾರಿಸಿ ಮಾರಾಟ ಮಾಡಿದ್ದರಿಂದ ಹಲ್ದಿರಾಮ್ಸ ಬಲು ಬೇಗ ಬೆಳೆಯುವಲ್ಲಿ ಯಶಸ್ವಿ ಯಾಯಿತು. ಕೇವಲ ಬುಜಿಯಾ ಮತ್ತು ಸ್ವೀಟ್‌ಗೆ ಸೀಮಿತರಾಗದೆ, ನಮ್ಕೀನ್, ಪಾಪಡ್, ರೆಡಿ ಟು ಈಟ್ ಎಂದು ವೈವಿಧ್ಯಮಯ ಉತ್ಪನ್ನಗಳಿಗೆ ಲಗ್ಗೆ ಹಾಕಿದ್ದು ಕೂಡ ಗೆಲುವಿಗೆ ರಹದಾರಿಯಾಗಿತ್ತು.
90ರ ದಶಕದಲ್ಲಿಯೇ ಹಲ್ದಿರಾಮ್ಸ್ ದೇಶದಲ್ಲಿ ಗಣನೀಯ ಅಸ್ತಿತ್ವವನ್ನು ಹೊಂದಿತ್ತು. ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರಫ್ತಿಗೂ ಕೈ ಹಾಕಿತು. ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಮತ್ತು ವೇದಿಕೆಯಲ್ಲೂ ವ್ಯಾಪಾರವನ್ನು ವಿಸ್ತರಿಸಿದೆ. ಸಣ್ಣ ಬಿಸಿನೆಸ್ ಅನ್ನು ದೊಡ್ಡ ಬ್ರ್ಯಾಂಡ್ ಮಾಡುವುದು ಹೇಗೆ ಎಂಬ ಪರಿಕಲ್ಪನೆ ಮತ್ತು ಜಾಣ್ಮೆ ಗಂಗಾ ಭೀಷಣ್ ಅಗರ್‌ವಾಲ್ ಗೆ ಸಣ್ಣ ವಯಸ್ಸಿನಲ್ಲೇ ಇತ್ತು. ಆದ್ದರಿಂದಲೇ ತಮ್ಮ ಹೊಸ ಮಿಕ್ಸ್ ಚರ್ ಉತ್ಪನ್ನಕ್ಕೆ ಬಿಕಾನೇರ್‌ನ ಜನಪ್ರಿಯ ದೊರೆಯ ಹೆಸರನ್ನಿಟ್ಟಿದ್ದರು.
ಹಲ್ದಿರಾಮ್ಸ್ ತನ್ನ ಮಿಕ್ಸ್‌ಚರ್‌ಗಳನ್ನು ಅತ್ಯಾಧುನಿಕ ಪ್ಯಾಕೇಜ್ ಸಹಿತ ಮಾರಾಟ ಮಾಡು ವ ಮೂಲಕ ಅದರ ಶೆಲ್ಫ್ ಲೈಫ್ ಅನ್ನೂ ಹೆಚ್ಚಿಸಿತು. ಹೀಗಾಗಿ ದೇಶದ ಮೂಲೆ ಮೂಲೆ ಯಲ್ಲೂ ಉತ್ಪನ್ನಗಳು ತಿಂಗಳುಗಟ್ಟಲೆ ಸುರಕ್ಷಿತವಾಗಿ ಗ್ರಾಹಕರ ಕೈ ಸೇರಿದವು. ಲಕ್ಷಾಂತರ ರಿಟೇಲರ್ ಗಳ ಜಾಲವನ್ನೇ ಕಂಪನಿ ಒಳಗೊಂಡಿದೆ.
ಭಾರತದಲ್ಲೀಗ ಸ್ನ್ಯಾಕ್ಸ್ ಮಾರುಕಟ್ಟೆ ಅಭೂತಪೂರ್ವವಾಗಿ ಬೆಳೆಯುತ್ತಿದೆ. ಉದ್ಯಮ ಶೀಲರಿಗೆ ಉಜ್ವಲ ವ್ಯಾಪಾರ ಮತ್ತು ಲಾಭ ಗಳಿಸುವ ಅವಕಾಶಗಳನ್ನು ಸೃಷ್ಟಿಸಿದೆ. ಇದಕ್ಕಿ ರುವ ಕಾರಣವೂ ಕುತೂಹಲಕರ. ದೇಶದಲ್ಲಿ ನಗರೀಕರಣ ಹೆಚ್ಚುತ್ತಿದೆ. ಮಧ್ಯಮ ವರ್ಗದ ಆದಾಯದ ಜನರ ಸಂಖ್ಯೆಯೂ ಏರುತ್ತಿದೆ. ಜನರ ಆಹಾರ ಸೇವನೆಯ ಶೈಲಿಯೂ ಬದಲಾಗುತ್ತಿದೆ.
ಪೊಟ್ಟಣಗಳಲ್ಲಿ ಸಿಗುವ ಸ್ನ್ಯಾಕ್ಸ್, ಆರೋಗ್ಯಕ್ಕೆ ಪೂರಕವಾಗಿರುವ ಸ್ನ್ಯಾಕ್ಸ್ ಹೀಗೆ ಭಿನ್ನ ಅವತಾರಗಳಲ್ಲಿ ಕುರುಕಲು ತಿಂಡಿಗಳು ಜನರ ಮನ ಸೂರೆಗೈಯುತ್ತಿವೆ. ಇದು ಭಾರಿ ಬಿಸಿನೆಸ್ ಅವಕಾಶಗಳನ್ನೇ ಸೃಷ್ಟಿಸಿದೆ. 2024ರಲ್ಲಿ 5.4 ಶತಕೋಟಿ ಡಾಲರ್‌ನಷ್ಟಿದ್ದ ಭಾರತೀಯ ಸ್ನ್ಯಾಕ್ಸ್ ಮಾರುಕಟ್ಟೆಯು 2033ಕ್ಕೆ ಇಮ್ಮಡಿಯಾಗಲಿದ್ದು, 11 ಶತಕೋಟಿ ಡಾಲರ್‌ಗೆ ಜಿಗಿಯುವ ನಿರೀಕ್ಷೆ ಇದೆ.
ಯುವಜನತೆಗೆ ‘ರೆಡಿ ಟು ಈಟ್’ ಆಹಾರ ಇಷ್ಟ ಮತ್ತು ಅನುಕೂಲಕರ ಎನ್ನಿಸುತ್ತಿದೆ. ನಿಮ್ಮ ಮನೆಯ ಸಮೀಪದ ಸೂಪರ್ ಮಾರ್ಕೆಟ್‌ಗೆ ಹೋಗಿದ್ದಾಗ ನೀವು ಹಲವಾರು ಬ್ರ್ಯಾಂಡ್‌ಗಳ ಸ್ನ್ಯಾಕ್ಸ್‌ಗಳನ್ನು ಕಂಡಿರಬಹುದು. ಅವುಗಳಲ್ಲಿ ದೇಶ-ವಿದೇಶಗಳ ಬ್ರ್ಯಾಂಡ್ ಗಳಿಂದ ಹಿಡಿದು ನಿಮ್ಮೂರಿನ ಲೋಕಲ್ ಬ್ರ್ಯಾಂಡ್ ಕೂಡ ಇದ್ದೇ ಇರುತ್ತದೆ. ನಗರ ಮತ್ತು ಪಟ್ಟಣ ಗಳೆಂಬ ವ್ಯತ್ಯಾಸ ಇಲ್ಲದೆ ಎಲ್ಲ ಕಡೆಗಳಲ್ಲೂ ಕುರುಕಲು ತಿಂಡಿಗಳ ಬಿಸಿನೆಸ್‌ಗೆ ಆಧುನಿ ಕತೆಯ ಪ್ಯಾಕೇಜಿಂಗ್ ಟಚ್ ಸಿಕ್ಕಿರುವುದನ್ನು ಗಮನಿಸಬಹುದು.
ಮಾತ್ರವಲ್ಲದೆ ಉತ್ಪನ್ನಗಳ ವೈವಿಧ್ಯವೂ ಅಸಂಖ್ಯಾತವಾಗಿದೆ. ಎಣ್ಣೆಯಲ್ಲಿ ಚೆನ್ನಾಗಿ ಕರಿದ ಸ್ನ್ಯಾಕ್ಸ್‌ಗಳು ಇದುವರೆಗೆ ಪಾರಮ್ಯ ಮೆರೆಯುತ್ತಿದ್ದರೆ, ಆರೋಗ್ಯ ಕಾಳಜಿಯ ಹಿನ್ನೆಲೆಯಲ್ಲಿ ಹಾಗೂ ಡಯಾಬಿಟಿಸ್ ಹೆಚ್ಚುತ್ತಿರುವ ಕಾರಣ ಇತ್ತೀಚೆಗೆ ಆರೋಗ್ಯಕರ ಮತ್ತು ಪೌಷ್ಟಿ ಕಾಂಶಗಳನ್ನು ಒಳಗೊಂಡಿರುವ ಹೆಲ್ತಿ ಸ್ನ್ಯಾಕ್ಸ್‌ಗಳ ಟ್ರೆಂಡ್ ಶುರುವಾಗಿದೆ.
ಇದು ಎಫ್ ಎಂಸಿಜಿ ವಲಯದ ದೊಡ್ಡ ಅಲೆ ಎಬ್ಬಿಸಲಿದೆ ಎನ್ನುತ್ತವೆ ಮಾರುಕಟ್ಟೆ ಸಂಶೋಧನಾ ವರದಿಗಳು. ಸ್ನ್ಯಾಕ್ಸ್ ಬಿಸಿನೆಸ್‌ನ ವೈಶಿಷ್ಟ್ಯ ಏನೆಂದರೆ ಯಾರು ಬೇಕಾದರೂ, ಮನೆಯಿಂದಲೇ, ಸಣ್ಣ ಮೊತ್ತದಿಂದಲೇ ಆರಂಭಿಸಬಹುದು. ಯಾರಿಗೆ ಗೊತ್ತು? ಭವಿಷ್ಯದ ದಿನಗಳಲ್ಲಿ ನಮ್ಮ ರಾಜ್ಯದ ‘ಕರ್ನಾಟಕದ ಹಲ್ದಿರಾಮ್ಸ್’ ಲೋಕ ವಿಖ್ಯಾತವಾಗಬಹುದು!