ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Keshava Prasad B Column: ರಕ್ತದೋಕುಳಿಯ ನಡುವೆ ವಿಶ್ವಬ್ಯಾಂಕ್‌ ಸಾಂತ್ವನ !

ಜಾಗತಿಕ ಆರ್ಥಿಕತೆಯ ಅನಿಶ್ಚಿತತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ರೇಡ್ ವಾರ್ ಹೀಗೆ ಅನೇಕ ಕಾರಣಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದಂಥ ಪ್ರಗತಿಶೀಲ ಮಾರುಕಟ್ಟೆಗಳಲ್ಲಿನ ಹೂಡಿಕೆಯನ್ನು ಹಿಂತೆಗೆದು ಕೊಳ್ಳುತ್ತಿದ್ದಾರೆ. ಜತೆಗೆ ಬದಲಾಗುತ್ತಿರುವ ಸನ್ನಿವೇಶಗಳಿಂದ ಕೂಡ ಕಂಪನಿಗಳ ಷೇರುದರಗಳಲ್ಲಿ ಏರುಪೇರು ಉಂಟಾಗುತ್ತದೆ.‌

ರಕ್ತದೋಕುಳಿಯ ನಡುವೆ ವಿಶ್ವಬ್ಯಾಂಕ್‌ ಸಾಂತ್ವನ !

ಹಿರಿಯ ಪತ್ರಕರ್ತ, ಅಂಕಣಕಾರ ಕೇಶವ್‌ ಪ್ರಸಾದ್‌ ಬಿ.

Keshava Prasad B Keshava Prasad B Feb 28, 2025 6:57 AM

ಮನಿ ಮೈಂಡೆಡ್

ಜಾಗತಿಕ ಆರ್ಥಿಕತೆಯ ಅನಿಶ್ಚಿತತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ರೇಡ್ ವಾರ್ ಹೀಗೆ ಅನೇಕ ಕಾರಣಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದಂಥ ಪ್ರಗತಿಶೀಲ ಮಾರುಕಟ್ಟೆಗಳಲ್ಲಿನ ಹೂಡಿಕೆಯನ್ನು ಹಿಂತೆಗೆದು ಕೊಳ್ಳುತ್ತಿದ್ದಾರೆ. ಜತೆಗೆ ಬದಲಾಗುತ್ತಿರುವ ಸನ್ನಿವೇಶಗಳಿಂದ ಕೂಡ ಕಂಪನಿಗಳ ಷೇರುದರಗಳಲ್ಲಿ ಏರುಪೇರು ಉಂಟಾಗುತ್ತದೆ.‌‌ ಭಾರತದ ಸ್ಟಾಕ್ ಮಾರ್ಕೆಟ್‌ನಲ್ಲಿ ಕಳೆದ ಐದು ತಿಂಗಳಿನಿಂದ ನಿರಂತರವಾಗಿ ಸೂಚ್ಯಂಕ ಗಳು ಕುಸಿಯುತ್ತಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಾಲ್ತೆಗೆಯುತ್ತಿದ್ದಾರೆ. ಮತ್ತೊಂದು ಕಡೆ ದೇಶೀಯ ಹೂಡಿಕೆದಾರರು ಡಿಸ್ಕೌಂಟ್ ದರದಲ್ಲಿ ಸಿಗುತ್ತಿರುವ ಷೇರುಗಳನ್ನು ಖರೀದಿಸುತ್ತಿದ್ದಾರೆ.

share market ok

ಟ್ರೇಡಿಂಗ್ ಮಾಡುತ್ತಿರುವವರು ಕಂಗಾಲಾಗಿ ಹೋಗಿದ್ದಾರೆ. ಮ್ಯೂಚುವಲ್ ಫಂಡ್‌ಗಳಲ್ಲಿ ಪ್ರತಿ ತಿಂಗಳೂ ನಿಗದಿತ ಮೊತ್ತವನ್ನು ‘ಸಿಪ್’ (ಸಿಸ್ಟಮ್ಯಾಟಿಕ್ ಇನ್‌ವೆಸ್ಟ್‌ಮೆಂಟ್ ಪ್ಲಾನ್) ಮೂಲಕ ಇನ್ವೆ ಮಾಡುತ್ತಿದ್ದವರಲ್ಲಿ ಹಲವರು ಈಗ ಆತಂಕದಿಂದ ನಿಲ್ಲಿಸಿದ್ದಾರೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಯಾವಾಗ ಚೇತರಿಸಿಕೊಳ್ಳುತ್ತದೆಯೋ ಯಾರಿಗೂ ಗೊತ್ತಿಲ್ಲ. ಜಾಗತಿಕ ಷೇರು ಮಾರುಕಟ್ಟೆಯಲ್ಲೂ ಕಳಾಹೀನ ಸ್ಥಿತಿ. ‌ಇಷ್ಟೆಲ್ಲ ತಲ್ಲಣಗಳ ನಡುವೆ ವಿಶ್ವಬ್ಯಾಂಕ್‌ನ ಕಂಟ್ರಿ ಡೈರೆಕ್ಟರ್ ಆಗಸ್ಟಿ ಟನೊಕೊಮೆ ಅವರು, ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ಆತ್ಮ ವಿಶ್ವಾಸದ, ಭರವಸೆಯ ಮಾತುಗಳ ನ್ನಾಡಿದ್ದಾರೆ.

ಮೊದಲಿಗೆ ಸ್ಟಾಕ್ ಮಾರ್ಕೆಟ್‌ನಲ್ಲಿ ಆಗಿದ್ದೇನು? ಎಂಬುದನ್ನು ನೋಡೋಣ. ನಮ್ಮ ದೇಶದ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮಾಡುವವರಲ್ಲಿ ಸ್ವದೇಶಿಯರೂ ಇzರೆ, ವಿದೇಶಿಯರೂ ಇದ್ದಾರೆ. ವಿದೇಶಿಯರು ವೈಯಕ್ತಿಕವಾಗಿ ನೇರವಾಗಿ ಭಾರತೀಯ ಷೇರುಗಳಲ್ಲಿ ಹೂಡಿಕೆ ಅಥವಾ ಟ್ರೇಡಿಂಗ್ ಮಾಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: Keshava Prasad B Column: 4 ಲಕ್ಷದಿಂದಲೇ ಟ್ಯಾಕ್ಸ್‌ ಸ್ಲ್ಯಾಬ್‌ ಇರುವುದೇತಕ್ಕೆ ?!

ಆದರೆ ಅವರಿಗೆ ಇನ್ನೊಂದು ಆಯ್ಕೆ ಇದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರ ಸಂಸ್ಥೆಗಳ (ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್- ಎಫ್‌ ಐಐ) ಮೂಲಕ, ಅಂದರೆ ವಿದೇಶಿ ಮೂಲದ ಮ್ಯೂಚುವಲ್ ಫಂಡ್, ಬ್ಯಾಂಕ್, ಪಿಂಚಣಿ ಫಂಡ್‌ಗಳ ಮೂಲಕ ಭಾರತೀಯ ಸ್ಟಾಕ್ ಮಾರ್ಕೆಟ್‌ನಲ್ಲಿ ವಿದೇಶಿಯರೂ ಹೂಡಿಕೆ ಮಾಡಬಹುದು. ಉದಾಹರಣೆಗೆ ಬ್ರಿಟನ್ ಮೂಲದ ಮ್ಯೂಚುವಲ್ ಫಂಡ್ ಸಂಸ್ಥೆಯೊಂದು ಭಾರತೀಯ ಸ್ಟಾಕ್ ಎಕ್ಸ್‌ಚೇಂಜ್ ನಲ್ಲಿ ನೋಂದಾಯಿಸಿರುವ ಕಂಪನಿಯ ಷೇರಿನಲ್ಲಿ ಹೂಡಿಕೆ ಮಾಡಲು ಬಯಸಿದರೆ, ಅದಕ್ಕೆ ಅವಕಾಶ ಇದೆ.

ಹೀಗೆ ಬ್ರಿಟನ್ನಿನ ಜನರೂ, ಮ್ಯೂಚುವಲ್ ಫಂಡ್, ಪೆನ್ಷನ್ ಫಂಡ್ ಮೂಲಕ ಭಾರತದ ಕಂಪನಿಗಳ ಷೇರುಗಳಲ್ಲಿ ಇನ್ವೆ ಮಾಡಬಹುದು. ಭಾರತೀಯ ಷೇರು ವಿನಿಮಯ ಕೇಂದ್ರ ದಲ್ಲಿ 1450 ನೋಂದಾಯಿತ ಎಫ್‌ ಐಐಗಳು ಇವೆ. ಹೀಗಾಗಿ ಸ್ಟಾಕ್ ಮಾರ್ಕೆಟ್‌ನ ಬೆಳವ ಣಿಗೆಯಲ್ಲಿ ಎಫ್‌ ಐಐಗಳ ಪಾತ್ರವನ್ನು ನಿರಾಕರಿಸಲು ಸಾಧ್ಯವಿಲ್ಲ.

ಕಳೆದ ಕೆಲವು ವರ್ಷಗಳಿಂದ ಸಿಂಗಾಪುರ ಸರಕಾರ ಕೂಡ ಭಾರತೀಯ ಸ್ಟಾಕ್ ಮಾರ್ಕೆಟ್‌ ನಲ್ಲಿರುವ ಪ್ರಮುಖ ಎಫ್‌ ಐಐ ಆಗಿದೆ. ಯೂರೊ ಪೆಸಿಫಿಕ್ ಗ್ರೋತ್ ಫಂಡ್, ನಾರ್ವೆ ಮೂಲದ ಗವರ್ನಮೆಂಟ್ ಪೆನ್ಷನ್ ಗ್ಲೋಬಲ್ ಫಂಡ್, ಓಪನ್‌ಹೀಮರ್ ಡೆವಲಪಿಂಗ್ ಮಾರ್ಕೆಟ್ಸ್ ಫಂಡ್, ವ್ಯಾನ್‌ಗಾರ್ಡ್ ಫಂಡ್, ಎಲಾರಾ ಇಂಡಿಯಾ ಆಪರ್ಚುನಿಟೀಸ್ ಫಂಡ್, ಸ್ಮಾಲ್ ಕ್ಯಾಪ್ ವರ್ಲ್ಡ್ ಫಂಡ್ ಇತ್ಯಾದಿ ಎಫ್‌ ಐಐಗಳಿವೆ.

ಈ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2025ರಲ್ಲಿ ಇದುವರೆಗೆ 1 ಲಕ್ಷ ಕೋಟಿ ರುಪಾಯಿ ಗೂ ಹೆಚ್ಚು ಹಣವನ್ನು ಷೇರು ಮಾರುಕಟ್ಟೆಯಿಂದ ಹಿಂತೆಗೆದುಕೊಂಡಿದ್ದಾರೆ. ದಿನೇದಿನೆ ಇದು ಹೆಚ್ಚುತ್ತಿದೆ. ಕಳೆದ ವರ್ಷದ ಸೆಪ್ಟೆಂಬರ್ ಬಳಿಕ ಇದುವರೆಗೆ ಒಟ್ಟು 2 ಲಕ್ಷ ಕೋಟಿ ರುಪಾಯಿ ಬಂಡವಾಳವನ್ನು ಹಿಂತೆಗೆದುಕೊಂಡಿದ್ದಾರೆ.

ಸೆನ್ಸೆಕ್ಸ್ ಮತ್ತು ನಿಫ್ಟಿ ಪಲ್ಟಿ ಹೊಡೆಯಲು ಇದುವೇ ಪ್ರಮುಖ ಕಾರಣ. ಅಂದಹಾಗೆ ಈ ಟ್ರೆಂಡ್ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಬ್ರೆಜಿಲ್, ಇಂಡೊನೇಷ್ಯಾ, ಮಲೇಷ್ಯಾ, ಫಿಲಿ ಪ್ಪೀನ್ಸ್ ದಕ್ಷಿಣ ಕೊರಿಯಾ, ತೈವಾನ್, ವಿಯೆಟ್ನಾಂ ಮುಂತಾದ ಪ್ರಗತಿಶೀಲ ದೇಶಗಳ ಮಾರುಕಟ್ಟೆಯಲ್ಲೂ ಇದು ‌ಸಂಭವಿಸಿದೆ.

ಜಾಗತಿಕ ಆರ್ಥಿಕತೆಯ ಅನಿಶ್ಚಿತತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ರೇಡ್ ವಾರ್, ಚೀನಾ ಮಾರುಕಟ್ಟೆಯ ಆಕರ್ಷಣೆ ಹೀಗೆ ಇನ್ನಿತರ ಕಾರಣಗಳಿಂದ ವಿದೇಶಿ ಸಾಂಸ್ಥಿ ಕ ಹೂಡಿಕೆದಾರರು ಭಾರತದಂಥ ಪ್ರಗತಿಶೀಲ ಮಾರುಕಟ್ಟೆಗಳಲ್ಲಿನ ಹೂಡಿಕೆ‌ಯನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ.

ಜತೆಗೆ ಕಾರ್ಪೊರೇಟ್ ವಲಯದ ಕಂಪನಿಗಳು ಎದುರಿಸುತ್ತಿರುವ ಸ್ಪರ್ಧೆ, ಬದಲಾಗುತ್ತಿರುವ ಸನ್ನಿವೇಶಗಳಿಂದ ಕೂಡ ಕಂಪನಿಗಳ ಷೇರುದರಗಳಲ್ಲಿ ಏರುಪೇರು ಉಂಟಾಗುತ್ತದೆ. ಉದಾಹರಣೆಗೆ ಟಾಟಾ ಸಮೂಹದ ಪ್ರತಿಷ್ಠಿತ ಟಾಟಾ ಮೋಟಾರ್ಸ್ ಷೇರು ದರದಲ್ಲಿ ಶೇ. 4ರಷ್ಟು ಕುಸಿತ ಸಂಭವಿಸಿದೆ. ನಿಫ್ಟಿಯ 50 ಸ್ಟಾಕ್‌ಗಳಲ್ಲಿ ಟಾಟಾ ಮೋಟಾರ್ಸ್ ಅತಿ ಹೆಚ್ಚು ನಷ್ಟಕ್ಕೀಡಾಗಿದೆ. ಹಾಗಾದರೆ ಕಂಪನಿಯಲ್ಲಿ ಆಗಿದ್ದೇನು? ವಿವರಗಳನ್ನು ತಿಳಿಯೋಣ. ಟಾಟಾ ಮೋಟಾರ್ಸ್ ಷೇರುದರ 2024ರ ಜುಲೈನಲ್ಲಿ 1179 ರುಪಾಯಿಯಷ್ಟಿತ್ತು.

ಈಗ 660 ರುಪಾಯಿಗೆ ಇಳಿಕೆಯಾಗಿದೆ. ಇದರ ಪರಿಣಾಮ ಕಂಪನಿಯ ಮಾರುಕಟ್ಟೆ ಮೌಲ್ಯ ದಲ್ಲಿ 2 ಲಕ್ಷ ಕೋಟಿ ರುಪಾಯಿ ನಷ್ಟವಾಗಿದೆ. ಬಿಎನ್‌ಪಿ ಪಾರಿಬಾಸ್ ಸಂಸ್ಥೆಯ ಪ್ರಕಾರ, ಟಾಟಾ ಮೋಟಾರ್ಸ್ ಷೇರುದರ 2025ರ ವರ್ಷ ಪೂರ್ತಿ ಮಂದಗತಿಯಲ್ಲಿ ಇರಲಿದೆ. ಟಾಟಾ ಮೋಟಾರ್ಸ್ 2023ರ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ 630-640 ರುಪಾಯಿಗಳ ಮಟ್ಟದಲ್ಲಿತ್ತು.

ಹಾಗಾದರೆ ಟಾಟಾ ಮೋಟಾರ್ಸ್ ಸ್ಟಾಕ್‌ನ ದರದಲ್ಲಿನ ಭಾರಿ ಕುಸಿತಕ್ಕೆ ಕಾರಣವೇನು? ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಇದಕ್ಕೆ ಕಾರಣವಾಗಿವೆ. ಇದಕ್ಕೆ ಮುಖ್ಯವಾದ ಕಾರಣ ಏನೆಂದರೆ, ಚೀನಾ ಮತ್ತು ಬ್ರಿಟನ್‌ನಲ್ಲಿ ಟಾಟಾ ಮೋಟಾ ರ್ಸ್‌ನ ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳಿಗೆ ಬೇಡಿಕೆ ಇಳಿಮುಖ ವಾಗಿರುವುದು. ಜತೆಗೆ ಯುರೋಪಿನಲ್ಲಿ ತಯಾರಾಗುವ ಕಾರುಗಳಿಗೆ ಅಮೆರಿಕ ವಿಧಿಸಲಿರುವ ಉದ್ದೇಶಿತ ತೆರಿಗೆ ಪ್ರಸ್ತಾಪಗಳೂ ನಕಾರಾತ್ಮಕ ಪ್ರಭಾವ ಬೀರಿದೆ. ಹೀಗಿದ್ದರೂ, ಇಕನಾಮಿಕ್ ಟೈಮ್ಸ್ ಪ್ರಕಾರ 930-935 ರುಪಾಯಿಗಳ ಟಾರ್ಗೆಟ್‌ನಲ್ಲಿ ಟಾಟಾ ಮೋಟಾರ್ಸ್ ಷೇರುದರ ಏರಿಕೆ ಯಾಗುವ ನಿರೀಕ್ಷೆ ಇದೆ.‌

ಮಾರುಕಟ್ಟೆಯಲ್ಲಿ ಮೀಡಿಯಂ ಮತ್ತು ಹೆವಿ ಕಮರ್ಷಿಯಲ್ ವೆಹಿಕಲ್ ವಿಭಾಗದಲ್ಲಿ ತೀವ್ರ ಸ್ಪರ್ಧೆ ಉಂಟಾಗಿದೆ. ಹೀಗಾಗಿ ಹೂಡಿಕೆದಾರರ ಸೆಂಟಿಮೆಂಟ್ ಕುಗ್ಗಿದೆ. ಟಾಟಾ ಮೋಟಾರ್ಸ್ ಷೇರುದರ ಇಳಿಯುತ್ತಲೇ ಇರುವುದರಿಂದ ಅದು ಚೇತರಿಸಿಕೊಳ್ಳಲಿದೆಯೇ ಅಥವಾ ಮತ್ತಷ್ಟು ಕುಸಿಯಲಿದೆಯೇ ಎಂಬ ಪ್ರಶ್ನೆ ಹೂಡಿಕೆದಾರರಲ್ಲಿದೆ. ಟೆಸ್ಲಾ ಕಾರು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿದೆ.

ಈ ಬೆಳವಣಿಗೆ ಕೂಡ ದೇಶೀಯ ಆಟೊಮೊಬೈಲ್ ಮಾರುಕಟ್ಟೆಯ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬ ಕಳವಳ ಹೂಡಿಕೆದಾರರಲ್ಲಿದೆ. ಹೀಗಿದ್ದರೂ, ಪ್ರಮುಖ ಬ್ರೋಕ ರೇಜ್ ಕಂಪನಿಗಳ ಪ್ರಕಾರ ಟೆಸ್ಲಾ ಎಂಟ್ರಿಯಿಂದ ಭಾರತೀಯ ಕಾರು ಉತ್ಪಾದಕ ಕಂಪನಿ ಗಳಿಗೆ ಭಾರಿ ಹೊಡೆತ ಉಂಟಾಗುವ ಸಾಧ್ಯತೆ ಇಲ್ಲ. ಇದಕ್ಕೆ ಕಾರಣ ಏನೆಂದರೆ ಟೆಸ್ಲಾದ ಇಲೆಕ್ಟ್ರಿಕ್ ಕಾರುಗಳು ಭಾರತೀಯ ಇಲೆಕ್ಟ್ರಿಕ್ ಕಾರುಗಳಿಗಿಂತಲೂ 4-5 ಲಕ್ಷ ರುಪಾಯಿ ದುಬಾರಿಯಾಗಿ ಇರಲಿವೆ.

ಟೆಸ್ಲಾದ ಬ್ರಾಂಡ್ ಮತ್ತು ಟೆಕ್ನಾಲಜಿ ಒಂದಷ್ಟು ಗ್ರಾಹಕರನ್ನು ಆಕರ್ಷಿಸಬಹುದು. ಆದರೆ ಇಡೀ ಇಂಡಸ್ಟ್ರಿಗೆ ಹೊಡೆತ ನೀಡದು ಎಂಬ ಅಭಿಪ್ರಾಯ ಇದೆ. ಟಾಟಾ ಮೋಟಾರ್ಸ್ ಜಾಗತಿಕ ಮಟ್ಟದ ಪ್ರಮುಖ ಆಟೊಮೊಬೈಲ್ ಕಂಪನಿಗಳಂದಾಗಿದೆ. ಕಾರು, ಎಸ್ ಯುವಿ, ಟ್ರಕ್, ಬಸ್, ಡಿಫೆನ್ಸ್ ವೆಹಿಕಲ್‌ಗಳನ್ನು ಈ ಕಂಪನಿಯು ತಯಾರಿಸುತ್ತಿದೆ. ಭಾರತ ಮಾತ್ರ‌ ವಲ್ಲದೆ, ಬ್ರಿಟನ್, ದಕ್ಷಿಣ ಕೊರಿಯಾ, ಚೀನಾ, ಬ್ರೆಜಿ್, ಆಸ್ಟ್ರಿಯಾ, ಸ್ಲೊವಾಕಿಯಾದಲ್ಲಿ ಕಂಪನಿಯು ಕಾರ್ಯನಿರ್ವಹಿಸುತ್ತಿದೆ. ‌

ಅಧೀನ ಕಂಪನಿಗಳ ಮೂಲಕ ಪ್ರಬಲ ಗ್ಲೋಬಲ್ ನೆಟ್ ವರ್ಕ್ ಅನ್ನು ಒಳಗೊಂಡಿದೆ. ಟಾಟಾ ಮೋಟಾರ್ಸ್ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ 2,47,547 ಕೋಟಿ ರುಪಾಯಿಗಳಾಗಿದೆ. ಪ್ರತಿ ಷೇರಿನ ಈಗಿನ ದರ 662 ರುಪಾಯಿಗಳಾಗಿದೆ. ಸ್ಟಾಕ್‌ನ ಪಿ/ಇ ರೇಶಿ ಯೊ 7.65 ಆಗಿದೆ.

ನೋಡಿ, ಸ್ಕ್ರೀನರ್ ವೆಬ್‌ಸೈಟ್ ಪ್ರಕಾರ, ಟಾಟಾ ಮೋಟಾರ್ಸ್ ತನ್ನ ಸಾಲವನ್ನು ಕಡಿಮೆ ಮಾಡಿದೆ. ಇದು ಒಳ್ಳೆಯದು. ಕಳೆದ 5 ವರ್ಷಗಳಲ್ಲಿ ಕಂಪನಿಯ ಲಾಭದಲ್ಲಿ ಶೇ.93ರಷ್ಟು ಏರಿಕೆಯಾಗಿತ್ತು. ಹೀಗಿದ್ದರೂ, ಕಂಪನಿಯಲ್ಲಿ ಪ್ರಮೋಟರ್ಸ್ ಷೇರು ಪಾಲು ಕಳೆದ ಮೂರು ವರ್ಷಗಳಲ್ಲಿ ಮೈನಸ್ ಶೇ.3.83ಕ್ಕೆ ಇಳಿದಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಟಾಟಾ ಮೋಟಾರ್ಸ್ ಷೇರುಗಳನ್ನು ಈಗಾಗಲೇ ಖರೀದಿಸಿದವರು ನಷ್ಟದಲ್ಲಿ ಮಾರಾಟ ಮಾಡುವು ದರ ಬದಲಿಗೆ ಇಟ್ಟುಕೊಳ್ಳುವುದು ಉತ್ತಮ.

ಭವಿಷ್ಯದ ದಿನಗಳಲ್ಲಿ ಷೇರುದರ ಚೇತರಿಸಲಿದೆ ಎನ್ನುತ್ತಾರೆ ತಜ್ಞರು. ಡಿಸ್ಕೌಂಟ್ ದರದಲ್ಲಿ ಸಿಗುತ್ತಿರುವುದರಿಂದ ಖರೀದಿಸಿ ಇಟ್ಟುಕೊಳ್ಳಬಹುದು. ಲಾಂಗ್ ಟರ್ಮ್ ಹೂಡಿಕೆದಾರರಿಗೆ ಇದು ಒಳ್ಳೆಯ ಎಂಟ್ರಿ ಪಾಯಿಂಟ್ ಎನ್ನುತ್ತಾರೆ ತಜ್ಞರು. ಹೀಗಿದ್ದರೂ, ಈ ಎಲ್ಲ ವಿವರ ಗಳನ್ನು ತಿಳಿಯದೆ ಕಣ್ಣು ಮುಚ್ಚಿಕೊಂಡು ಹೂಡಿಕೆ ಮಾಡಿರುವವರಿಗೆ, ಈಗ ಟಾಟಾ ಮೋಟಾರ್ಸ್ ಷೇರುದರ ಕುಸಿದಿರುವ ರೀತಿಯನ್ನು ನೋಡಿದರೆ, ಕಂಗಾಲಾಗುವುದು ಸಹಜ.

ಹಾಗಾದರೆ ವಿಶ್ವ ಬ್ಯಾಂಕ್‌ನ ಕಂಟ್ರಿ ಡೈರೆಕ್ಟರ್ ಆಗಸ್ಟಿ ಟನೊಕೊಮೆ ಅವರು ಅಸ್ಸಾಂನಲ್ಲಿ ನಡೆದ ಬಿಸಿನೆಸ್ ಶೃಂಗಸಭೆಯಲ್ಲಿ ಹೇಳಿದ್ದೇನು? “ಸ್ಟಾಕ್ ಮಾರ್ಕೆಟ್‌ನಲ್ಲಿ ಇತ್ತೀಚಿನ ಸೂಚ್ಯಂಕ ಕುಸಿತದ ಬಗ್ಗೆ ಹೂಡಿಕೆದಾರರು ಆತಂಕಪಡಬೇಕಾದ ಅಗತ್ಯ ಇಲ್ಲ. ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಚಿಂತೆ ಬೇಡ. ಈಗಲೂ ಭಾರತವೇ ಹೂಡಿಕೆಗೆ ಪ್ರಶಸ್ತ ತಾಣವಾ ಗಿದೆ.

ಹೂಡಿಕೆದಾರರು ಈಗಿನ ಇಳಿತದ ಬಗ್ಗೆ ಚಿಂತೆ ಮಾಡುವುದರ ಬದಲಿಗೆ ದೂರದೃಷ್ಟಿಯ ಆಲೋಚನೆ ಮಾಡುವುದು ಒಳ್ಳೆಯದು. ಭಾರತ ಜಗತ್ತಿನ ಪ್ರಕಾಶಿಸುತ್ತಿರುವ ಉಜ್ವಲ ರಾಷ್ಟ್ರವಾಗಿದೆ" ಎಂದು ಅವರು ಬಣ್ಣಿಸಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್‌ ನ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಕೂಡ, “ಭಾರತವು 2025ರಲ್ಲಿ ಶೇ.6.5ರ ಜಿಡಿಪಿ ಬೆಳವಣಿಗೆ ದಾಖಲಿಸುವ ನಿರೀಕ್ಷೆ ಇದೆ.

ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರದಲ್ಲಿ ತುಸು ಹಿನ್ನಡೆ ಉಂಟಾಗಿದೆ. ಅದೂ ಸರಿ ಯಾಗುವ ಸಾಧ್ಯತೆ ಇದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಸಾಂಪ್ರದಾಯಿಕ ರಿಟೇಲ್ ಹೂಡಿಕೆದಾರರು ಕೂಡ ಸ್ಟಾಕ್ ಮಾರ್ಕೆಟ್, ಮ್ಯೂಚುವಲ್ ಫಂಡ್ ಹೂಡಿಕೆ ವಿಚಾರದಲ್ಲಿ ಆತುರಪಡದೆ, ದೀರ್ಘಾವಧಿಯ ದೃಷ್ಟಿಯನ್ನು ಇಟ್ಟುಕೊಂಡು ಹೂಡಿಕೆ, ‘ಸಿಪ್’ ಅನ್ನು ಮುಂದುವರಿಸುವುದು ಸೂಕ್ತ ಎನ್ನುವ ತಜ್ಞರ ಸಲಹೆಗಳನ್ನು ಪರಿಗಣಿಸ ಬಹುದು.

ಅಮೆರಿಕದ ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ಅವರು ವಾಲ್ಯೂ ಇನ್ವೆಸ್ಟಿಂಗ್ ಬಗ್ಗೆ ಪದೇಪದೆ ಹೇಳುತ್ತಾರೆ. ಅಂದರೆ ಉತ್ತಮ ಮೌಲ್ಯದ ಷೇರುಗಳನ್ನು ಖರೀದಿಸಿ, ದೀರ್ಘಾವಽಗೆ ಹೂಡಿಕೆ ಮಾಡುವುದು. ಇದು ಅವರ ಸಂಪತ್ತಿನ ರಹಸ್ಯ ಕೂಡ ಆಗಿದೆ. ಆದರೆ ವಾರೆನ್ ಬಫೆಟ್ ಅವರಲ್ಲಿ ಇರುವ ಅಧ್ಯಯನಶೀಲತೆ, ಅನ್ವೇಷಣಾ ಮನಸ್ಥಿತಿ ಮತ್ತು ಪ್ರಕಾಂಡ ತಾಳ್ಮೆ ತಮ್ಮಲ್ಲಿ ಇದೆಯೇ? ಹೂಡಿಕೆದಾರರು ತಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ ಇದು.