Taliban Government:ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರಕ್ಕೆ ರಷ್ಯಾದಿಂದ ಅಧಿಕೃತ ಮಾನ್ಯತೆ
Officially Recognise Taliban Government: ರಷ್ಯಾದ ವಿದೇಶಾಂಗ ಸಚಿವಾಲಯವು ತಾಲಿಬಾನ್ ಅನ್ನು ನಿಷೇಧಿತ ಸಂಘಟನೆಗಳ ಪಟ್ಟಿಯಿಂದ ತೆಗೆದುಹಾಕಿರುವುದಾಗಿ ಘೋಷಿಸಿದ್ದು ಆಮೂಲಕ ಪೂರ್ಣ ರಾಜತಾಂತ್ರಿಕ ಮಾನ್ಯತೆಗೆ ದಾರಿ ತೆರವು ಮಾಡಿಕೊಟ್ಟಿತು. ಕಾಬೂಲ್‌ನಲ್ಲಿ ತಾಲಿಬಾನ್ ನೇತೃತ್ವದ ಸರ್ಕಾರದಿಂದ ನೇಮಿಸಲ್ಪಟ್ಟ ಅಫ್ಘಾನಿಸ್ತಾನದ ಹೊಸ ರಾಯಭಾರಿ ಗುಲ್ ಹಸನ್ ಹಸನ್ ಅವರ ರುಜುವಾತುಗಳನ್ನು ರಷ್ಯಾ ಔಪಚಾರಿಕವಾಗಿ ಸ್ವೀಕರಿಸಿತು.


ಮಾಸ್ಕೋ: ಜಾಗತಿಕ ಮಟ್ಟದಲ್ಲಿ ಮಹತ್ವದ ರಾಜತಾಂತ್ರಿಕ ಬೆಳವಣಿಗೆಯೊಂದು ನಡೆದಿದೆ. ರಷ್ಯಾ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ(Taliban Government)ವನ್ನು ಅಧಿಕೃತವಾಗಿ ಗುರುತಿಸಿದೆ. ಆಗಸ್ಟ್ 2021 ರಲ್ಲಿ ತಾಲಿಬಾನ್ ಸರ್ಕಾರ ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ನಂತರ ಅದಕ್ಕೆ ಅಧಿಕೃತ ಮಾನ್ಯತೆ ಕೊಟ್ಟ ಮೊದಲ ದೇಶ ರಷ್ಯಾ ಆಗಿದೆ. ರಷ್ಯಾ ಆಫ್ಘಾನ್‌ನ ರಾಯಭಾರಿಯನ್ನೂ ಸ್ವೀಕರಿಸಿದೆ. ಈ ಮಾನ್ಯತೆ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪ್ರಮುಖ ಬದಲಾವಣೆಯನ್ನು ಸೂಚಿಸುತ್ತದೆ ಮತ್ತು ಇತರ ರಾಷ್ಟ್ರಗಳು ಅಫ್ಘಾನಿಸ್ತಾನದೊಂದಿಗೆ ಮುಂದಿನ ದಿನಗಳಲ್ಲಿ ವ್ಯವಹಾರ ಮುಂದುವರಿಸಬಹುದೆಂಬುದರ ಮೇಲೆ ಪ್ರಭಾವ ಬೀರಬಹುದು.
ರಷ್ಯಾ ಸರ್ಕಾರದಿಂದ ಅಧಿಕೃತ ಮಾನ್ಯತೆ
ಇನ್ನು ನಿನ್ನೆ ರಷ್ಯಾದ ವಿದೇಶಾಂಗ ಸಚಿವಾಲಯವು ತಾಲಿಬಾನ್ ಅನ್ನು ನಿಷೇಧಿತ ಸಂಘಟನೆಗಳ ಪಟ್ಟಿಯಿಂದ ತೆಗೆದುಹಾಕಿರುವುದಾಗಿ ಘೋಷಿಸಿದ್ದು ಆಮೂಲಕ ಪೂರ್ಣ ರಾಜತಾಂತ್ರಿಕ ಮಾನ್ಯತೆಗೆ ದಾರಿ ತೆರವು ಮಾಡಿಕೊಟ್ಟಿತು. ಕಾಬೂಲ್‌ನಲ್ಲಿ ತಾಲಿಬಾನ್ ನೇತೃತ್ವದ ಸರ್ಕಾರದಿಂದ ನೇಮಿಸಲ್ಪಟ್ಟ ಅಫ್ಘಾನಿಸ್ತಾನದ ಹೊಸ ರಾಯಭಾರಿ ಗುಲ್ ಹಸನ್ ಹಸನ್ ಅವರ ರುಜುವಾತುಗಳನ್ನು ರಷ್ಯಾ ಔಪಚಾರಿಕವಾಗಿ ಸ್ವೀಕರಿಸಿತು.
ಅಧಿಕೃತ ಹೇಳಿಕೆಯಲ್ಲಿ, ರಷ್ಯಾದ ವಿದೇಶಾಂಗ ಸಚಿವಾಲಯವು ಈ ಕ್ರಮವು ಎರಡು ರಾಷ್ಟ್ರಗಳ ನಡುವೆ ಉತ್ಪಾದಕ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸುತ್ತದೆ ಎಂದು ಹೇಳಿದೆ. ಅಫ್ಘಾನಿಸ್ತಾನದಲ್ಲಿನ ಪ್ರಸ್ತುತ ವಾಸ್ತವತೆಯನ್ನು ಸಂಪೂರ್ಣವಾಗಿ ಅರಿತ ನಂತರವೇ ಈ ಮಾನ್ಯತೆಯನ್ನು ನೀಡಲಾಗಿದೆ ಎಂದು ಅದು ಹೇಳಿದೆ.
ತಾಲಿಬಾನ್ ಹರ್ಷ ವ್ಯಕ್ತ
ಇದಕ್ಕೆ ಪ್ರತಿಕ್ರಿಯೆಯಾಗಿ, ತಾಲಿಬಾನ್ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯವು ಈ ನಿರ್ಧಾರವನ್ನು ಸ್ವಾಗತಿಸಿತು ಮತ್ತು ಇದನ್ನು ಐತಿಹಾಸಿಕ ಹೆಜ್ಜೆ ಎಂದು ಕರೆದಿದೆ. ತಾಲಿಬಾನ್‌ನ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ, ರಷ್ಯಾದ ಈ ಮಹತ್ವದ ನಡೆ ಇತರ ರಾಷ್ಟ್ರಗಳಿಗೂ ಪ್ರೇರಕವಾಗಲಿ ಎಂದು ಹೇಳಿದ್ದಾರೆ. ಇನ್ನಷ್ಟು ರಾಷ್ಟ್ರಗಳು ತಾಲಿಬಾನ್ ಸರ್ಕಾರ ಜೊತೆ ರಾಜತಾಂತ್ರಿಕ ಸಂಬಂಧ ಹೊಂದುವ ಆಶಯ ನಮ್ಮದು.
ಅಮೆರಿಕ ಮತ್ತು ನ್ಯಾಟೋ ಪಡೆಗಳನ್ನು ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಂಡ ನಂತರ ಆಗಸ್ಟ್ 2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿತು. ಅಂದಿನಿಂದ ಈ ಗುಂಪು ದೇಶವನ್ನು ನಿಯಂತ್ರಿಸುತ್ತಿದ್ದರೂ,ಅಲ್ಲಿನ ಮಾನವ ಹಕ್ಕುಗಳು ಉಲ್ಲಂಘನೆ, ಮಹಿಳಾ ಶಿಕ್ಷಣ ಉಪೇಕ್ಷೆ ಮತ್ತು ರಾಜಕೀಯ ವ್ಯವಸ್ಥೆಗಳ ಬಗ್ಗೆ ಹಲವು ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಹೀಗಾಗಿ ಈ ತಾಲಿಬಾನ್ ಸರ್ಕಾರಕ್ಕೆ ಅಧಿಕೃತ ಮಾನ್ಯತೆ ಇನ್ನೂ ಸಿಕ್ಕಿಲ್ಲ.
ಈ ಸುದ್ದಿಯನ್ನೂ ಓದಿ: Suicide Bomb Blast: ಆತ್ಮಾಹುತಿ ಬಾಂಬ್ ಸ್ಫೋಟ- ತಾಲಿಬಾನ್‌ಗಳು ದಾಳಿ ಹೊತ್ತುಕೊಂಡ್ರೂ ಭಾರತದ ಮೇಲೆ ಪಾಕ್ ಬ್ಲೇಮ್ ಗೇಮ್
ರಷ್ಯಾದ ನಡೆ ಏಕೆ ಮುಖ್ಯ?
ರಷ್ಯಾದ ಮಾನ್ಯತೆ ಹೆಚ್ಚಿನ ರಾಜಕೀಯ ತೂಕವನ್ನು ಹೊಂದಿದೆ. ಇದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ಮಾತ್ರವಲ್ಲ, ಮಧ್ಯ ಮತ್ತು ದಕ್ಷಿಣ ಏಷ್ಯಾದಾದ್ಯಂತ ಪ್ರಾದೇಶಿಕ ಭದ್ರತೆ ಮತ್ತು ರಾಜತಾಂತ್ರಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತಾಲಿಬಾನ್ ಸರ್ಕಾರವನ್ನು ಅಧಿಕೃತವಾಗಿ ಗುರುತಿಸುವ ಮೂಲಕ, ತಾಲಿಬಾನ್ ಆಳ್ವಿಕೆಯಲ್ಲಿ ಅಫ್ಘಾನಿಸ್ತಾನದೊಂದಿಗೆ ಪೂರ್ಣ ರಾಜತಾಂತ್ರಿಕ ಸಂಬಂಧಗಳಿಗೆ ಬಾಗಿಲು ತೆರೆದ ಮೊದಲ ಪ್ರಮುಖ ಬಲಿಷ್ಠ ರಾಷ್ಟ್ರ ರಷ್ಯಾವಾಗಿದೆ. ಈ ಕ್ರಮವು ತಾಲಿಬಾನ್ ಜೊತೆ ಸಂಪರ್ಕ ಉಳಿಸಿಕೊಂಡಿದ್ದ ಆದರೆ ಮಾನ್ಯತೆ ನೀಡದ ನೆರೆಯ ರಾಷ್ಟ್ರಗಳಾದ ಚೀನಾ, ಇರಾನ್ ಮತ್ತು ಪಾಕಿಸ್ತಾನದ ಮೇಲೆ ಪ್ರಭಾವ ಬೀರಬಹುದು.