ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wild Animal Attacks: ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಶಾಸಕರು ಗಟ್ಟಿ ಧ್ವನಿ ಎತ್ತಬೇಕಿದೆ

Wild Animal Attacks: ಕಾಡು ಪ್ರಾಣಿಗಳ ಹಾವಳಿ ತಡೆಗೆ ಶಾಶ್ವತವಾಗಿ ಪರಿಹಾರ ಕಲ್ಪಿಸುವ ವಿಚಾರದಲ್ಲಿ ಶಾಸಕರು ಸದನದಲ್ಲಿ, ಸರಕಾರದಲ್ಲಿ ಗಟ್ಟಿ ಧ್ವನಿಯಲ್ಲಿ ಮಾತಾಡಬೇಕಿದೆ. ರೈತರು-ಕೃಷಿ ಕಾರ್ಮಿಕರ ಮೇಲೆ ಆನೆಗಳು ಸೇರಿ ಇನ್ನಿತರ ಕಾಡು ಪ್ರಾಣಿಗಳು ದಾಳಿ ಮಾಡದಂತೆ ಸರಕಾರ ಅರಣ್ಯಗಳಿಗೆ ಭದ್ರ ಬೇಲಿ ಮಾಡಿ ಜನರನ್ನು, ಬೆಳೆಯನ್ನು ರಕ್ಷಿಸಲಿ ಎಂದುಬುವುದು ಮಲೆನಾಡು ಜನರ ಒತ್ತಾಯವಾಗಿದೆ.

ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಶಾಸಕರು ಗಟ್ಟಿ ಧ್ವನಿ ಎತ್ತಬೇಕಿದೆ

Profile Prabhakara R Mar 18, 2025 5:19 PM

| ಅರವಿಂದ ಸಿಗದಾಳ್, ಮೇಲುಕೊಪ್ಪ

ಸಂಘರ್ಷ ಎಂದರೆ ಜಗಳ ಎಂದು ಅರ್ಥ. ಇಬ್ಬರು ವ್ಯಕ್ತಿಗಳ ನಡುವೆ, ಎರಡು ಗುಂಪುಗಳ ನಡುವೆ, ಎರಡು ಪಕ್ಷಗಳ ನಡುವೆ, ಪಕ್ಷಗಳಲ್ಲೇ ಎರಡು ಬಣಗಳ ನಡುವೆ ಭಿನ್ನಾಭಿಪ್ರಾಯ ಹೊಂದಿದಾಗ ಸಂಘರ್ಷ ಉಂಟಾಗುತ್ತದೆ. ಆದರೆ, ಈಗ ಮಲೆನಾಡಿನಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ನಡುವೆ ನಡೆಯುತ್ತಿರುವುದು ಸಂಘರ್ಷ ಅಲ್ಲ. ಕಾಡು ಪ್ರಾಣಿಗಳಿಂದ (Wild Animal Attacks) ಆಗುತ್ತಿರುವುದು ಹಾವಳಿ, ದಾಳಿ. ಪ್ರಾಣಿಗಳೊಂದಿಗೆ ಸಂಘರ್ಷ ಅಥವಾ ಜಗಳ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಶಾಸಕರು ಗಟ್ಟಿ ಧ್ವನಿ ಎತ್ತಬೇಕಿದೆ ಎಂಬುವುದು ಮಲೆನಾಡು ಜನರ ಆಗ್ರಹವಾಗಿದೆ.

ಪ್ರಾಣಿಗಳು ದಾಳಿ ಮಾಡುವಾಗ, ಬಂದೂಕು, ವಿಷ, ಶಾಕ್ ಟ್ರೀಟ್‌ಮೆಂಟ್‌ಗಳ ಪ್ರಯೋಗಕ್ಕೂ ಮನುಷ್ಯರಿಗೆ ಅಧಿಕೃತ ಅಧಿಕಾರವಿಲ್ಲ. ಮನುಷ್ಯರ ಮೇಲೆ, ಸಾಕು ಪ್ರಾಣಿಗಳ ಮೇಲೆ, ಕೃಷಿ ಜಮೀನು-ಫಸಲುಗಳ ಮೇಲೆ ಪ್ರಾಣಿಗಳ ಧಾಳಿ ನಿರಂತರವಾದರೆ, ಮನುಷ್ಯರು ಪ್ರಾಣಿಗಳ ಮೇಲೆ ಬಂದೂಕು, ವಿಷ, ಶಾಕ್ ಟ್ರೀಟ್‌ಮೆಂಟ್‌ಗಳ ಪ್ರಯೋಗಕ್ಕೆ ಮುಂದಾದರೂ ಆಶ್ಚರ್ಯ ಇಲ್ಲ. ಶಾಸಕರು, ಸಚಿವರು, ಇಲಾಖೆಗಳು, ಸರಕಾರ ನಿಷ್ಕ್ರಿಯತೆಯಲ್ಲೇ ಇದ್ದರೆ... ಅಧಿಕೃತ ಪರವಾನಗಿ ಇಲ್ಲದೆಯೇ ಮಲೆನಾಡಿನಲ್ಲಿ ಕಾಡು ಪ್ರಾಣಿಗಳ ಶಿಕಾರಿ ಪ್ರಾರಂಭವಾಗಬಹುದು.

ಇನ್ನು ಶಾಶ್ವತವಾಗಿ ಪರಿಹಾರ ವಿಚಾರದಲ್ಲಿ ಶಾಸಕರು ಸದನದಲ್ಲಿ, ಸರಕಾರದಲ್ಲಿ ಗಟ್ಟಿ ಧ್ವನಿಯಲ್ಲಿ ಮಾತಾಡಬೇಕಿದೆ. ಅಡಿಕೆ ಎಲೆ ಚುಕ್ಕಿ ರೋಗಕ್ಕೆ ನೀರಸವಾಗಿ ಸ್ಪಂದಿಸಿದಂತೆ ಸ್ಪಂದಿಸಿ, ಮನವಿ, ಕೋರಿಕೆ, ವಿನಂತಿಗಳ ಪ್ರೇಮ ಪತ್ರ ನೀಡಿ, ವಿಧಾನಸೌಧದಲ್ಲಿ ಹೊಸದಾಗಿ ಹಾಕಿರುವ ಬಾಡಿಗೆ ರಿಕ್ಲೈನರ್ ಚೇರ್ ವ್ಯವಸ್ಥೆಯಲ್ಲಿ ವಿಶ್ರಾಂತಿ ಪಡೆದರೆ, ಸಮಸ್ಯೆ ಬಗೆ ಹರಿಯುವುದಿಲ್ಲ. ಹೀಗಾಗಿ ಪ್ರಾಣಿಗಳ ಹಾವಳಿ ಬಗ್ಗೆ ಮಲೆನಾಡಿನ ಶಾಸಕರು ಗಟ್ಟಿ ಧ್ವನಿ ಎತ್ತಬೇಕಿದೆ.

ಈ ಸುದ್ದಿಯನ್ನೂ ಓದಿ | Vishwavani Editorial: ಮಾದಕ ದ್ರವ್ಯ ಜಾಲಕ್ಕೆ ಅಂಕುಶ ಅಗತ್ಯ

ಶಾಶ್ವತ ಪರಿಹಾರ ಕೊಡಿಸಲಿ

ರೈತರು, ಕೃಷಿ ಕಾರ್ಮಿಕರು 37 °c ಉಷ್ಣತೆಯ ಹವಾ ನಿಯಂತ್ರಣದ ತೋಟದಲ್ಲಿ ಕೆಲಸ ಮಾಡುವಾಗ, ಲಘು ವಿಶ್ರಾಂತಿಗೆ ಶಾಸಕರು ಬಳಸುವ ಬಾಡಿಗೆ ರಿಕ್ಲೈನರ್ ಚೇರ್‌ ನಂತಹ ವ್ಯವಸ್ಥೆ ಬೇಡ! ಕಾಡಿನಿಂದ ಬಂದು, ಕಾಫಿ ಗಿಡದ ಹಿಂಬದಿಯಿಂದ ರೈತರ-ಕೃಷಿ ಕಾರ್ಮಿಕರ ಮೇಲೆ ಆನೆಗಳು ದಾಳಿ ಮಾಡದಂತೆ ಸರಕಾರ ಸರಕಾರದ ಕಾಡಿಗೊಂದು ಭದ್ರ ಬೇಲಿ ಮಾಡಿ ಜನರನ್ನು, ಬೆಳೆಯನ್ನು ರಕ್ಷಿಸಲಿ. ಅದಕ್ಕೆ ಬೇಕಾದ ವ್ಯವಸ್ಥೆಯ ಅನುಷ್ಠಾನಕ್ಕೆ ವಿಧಾನ ಸೌಧದಲ್ಲಿ ಸಭಾಧ್ಯಕ್ಷರಿಗೆ ಕೇಳುವಷ್ಟಾದರೂ ಗಟ್ಟಿ ಧ್ವನಿಯ ಮಾತು ಶಾಸಕರಿಂದ ಬರಲಿ ಎಂಬುವುದು ಮಲೆನಾಡು ಜನರ ಅಳಲಾಗಿದೆ.