Laxmi Hebbalkar: ಕಾಂಗ್ರೆಸ್ ಯೋಜನೆಯನ್ನು ಕಾಪಿ ಹೊಡೆಯುತ್ತಿದೆ ಬಿಜೆಪಿ: ಲಕ್ಷ್ಮೀ ಹೆಬ್ಬಾಳ್ಕರ್ ವ್ಯಂಗ್ಯ
ರಾಜಕೀಯವಾಗಿ ಇಂದಿರಾಗಾಂಧಿ ಅವರಿಗೆ ಪುನರ್ಜನ್ಮ ನೀಡಿದ್ದು ಚಿಕ್ಕಮಗಳೂರು ಜಿಲ್ಲೆ, ಐವತ್ತು ವರ್ಷಗಳ ಹಿಂದೆ ಅಂಗನವಾಡಿ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ. ಇದೇ ವರ್ಷದ ಅಕ್ಟೋಬರ್‌ನಲ್ಲಿ ಬೆಂಗಳೂರು ಅಥವಾ ಮೈಸೂರಿನಲ್ಲಿ ಅದ್ದೂರಿಯಾಗಿ ಸುವರ್ಣ ಮಹೋತ್ಸವ ಆಚರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.


ಚಿಕ್ಕಮಗಳೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಕ್ತಿ ಕೊಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಮಹಿಳೆಯರು ಹಾಗೂ ಬಡವರ ಮೇಲೆ ಕಾಳಜಿ ಹೊಂದಿರುವ ಪಕ್ಷ ಕಾಂಗ್ರೆಸ್ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಹೇಳಿದರು. ಚಿಕ್ಕಮಗಳೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ವತಿಯಿಂದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆ ಪೂರ್ವ ರಾಜ್ಯದ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದರು.
ಕೊರೋನಾ ಬಂದು ಹೋದ ಮೇಲೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿತು. ರೈತರು ಉಪಯೋಗಿಸುವ ರಸಗೊಬ್ಬರ, ಸಿಲಿಂಡರ್, ದಿನ ಬಳಕೆ ವಸ್ತುಗಳನ್ನು ಕೊಂಡುಕೊಳ್ಳುವುದೇ ದುಸ್ತರವಾಗಿತ್ತು. ಗೃಹಲಕ್ಷ್ಮಿ ಯೋಜನೆಯ ಮೂಲಕ ನೀಡುವ ಎರಡು ಸಾವಿರ ರೂಪಾಯಿ ಎಷ್ಟೋ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯದ ಸಿಎಂ ಹಾಗೂ ಡಿಸಿಎಂ, ಯಜಮಾನಿಯರು ಅಂತ ಹೆಸರಿಟ್ಟರು. ಈಗಾಗಲೇ 19 ತಿಂಗಳ ಹಣ ಫಲಾನುಭವಿಗಳಿಗೆ ತಲುಪಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಜನರಿಗೆ ಆಶ್ರಯ ನೀಡಿದ್ದು, ಆಸ್ಪತ್ರೆ, ಸ್ಕೂಲ್, ಅಂಗನವಾಡಿ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ. ಬಡವರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದೇ ಕಾಂಗ್ರೆಸ್ ಎಂದು ಹೇಳಿದರು.
ರಾಜಕೀಯವಾಗಿ ಇಂದಿರಾಗಾಂಧಿ ಅವರಿಗೆ ಪುನರ್ಜನ್ಮ ನೀಡಿದ್ದು ಚಿಕ್ಕಮಗಳೂರು ಜಿಲ್ಲೆ. ಐವತ್ತು ವರ್ಷಗಳ ಹಿಂದೆ ಅಂಗನವಾಡಿ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ. ಇದೇ ವರ್ಷದ ಅಕ್ಟೋಬರ್‌ನಲ್ಲಿ ಬೆಂಗಳೂರು ಅಥವಾ ಮೈಸೂರಿನಲ್ಲಿ ಅದ್ದೂರಿಯಾಗಿ ಸುವರ್ಣ ಮಹೋತ್ಸವ ಮಾಡಲಾಗುವುದು ಎಂದರು.
ಜನರ ಅಭಿವೃದ್ಧಿಗಾಗಿ ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಹಾಕಲಾಗುತ್ತಿದೆ. ನೇರವಾಗಿ ಎರಡು ಸಾವಿರ ರೂ. ಜನರಿಗೆ ತಲುಪುತ್ತಿದೆ. ಗ್ಯಾರಂಟಿ ಹೆಸರನ್ನು ಕೆಡಿಸಲು ವಿರೋಧ ಪಕ್ಷಗಳಿಂದ ಅಪಪ್ರಚಾರ ನಡೆಯಿತು. ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡುವ ಧೈರ್ಯ ಬಿಜೆಪಿಯವರಿಗಿಲ್ಲ, ಇದೇ ಬಿಜೆಪಿಯವರು ಮಹಾರಾಷ್ಟ್ರ, ದಿಲ್ಲಿ, ಉತ್ತರ ಪ್ರದೇಶದಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | CM Siddaramaiah: ಹಂತ ಹಂತವಾಗಿ ಹಿನಕಲ್‌ನ ಸಂಪೂರ್ಣ ಅಭಿವೃದ್ಧಿಗೆ ನಾನು ಸಿದ್ದ: ಸಿಎಂ
ಮಹಾರಾಷ್ಟ್ರದಲ್ಲಿ ಇದುವರೆಗೂ ಒಂದು ಕಂತಿನ ಲಾಡ್ಲಿ ಬೆಹನ್ ಯೋಜನೆಯ ಹಣ ಕೊಟ್ಟಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದರು.