Wedding Cancelled: ಆರತಕ್ಷತೆಯಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ಜಗಳ; ನಿಂತೇ ಹೋಯ್ತು ಮದುವೆ!
Wedding Cancelled: ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಬಲಿಜ ಶ್ರೇಯಾ ಭವನದಲ್ಲಿ ನಡೆದಿದೆ. ಕುಡಿಯುವ ನೀರಿನ ವಿಚಾರಕ್ಕೆ ವಧು, ವರರ ಸಂಬಂಧಿಕರ ನಡುವೆ ಜಗಳ ನಡೆದಿದ್ದು, ಹಿರಿಯರು, ಸಂಬಂಧಿಕರು ಸಂಧಾನ ನಡೆಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ, ಹೀಗಾಗಿ ಮದುವೆ ಮುರಿದು ಬಿದ್ದಿದೆ.


ಚಿತ್ರದುರ್ಗ: ಮದುವೆ ಮಂಟಪದಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ನಡೆದ ಗಲಾಟೆಯಿಂದ ಮದುವೆಯೇ ಮುರಿದು ಬಿದ್ದ ಘಟನೆ (Wedding Cancelled) ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಬಲಿಜ ಶ್ರೇಯಾ ಭವನದಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆ ಜಗಲೂರಿನ ವರ ಎನ್. ಮನೋಜ್ ಕುಮಾರ್, ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿರತಹಳ್ಳಿಯ ವಧು ಸಿ.ಎ. ಅನಿತಾ ಅವರ ವಿವಾಹ ಅರತಕ್ಷತೆ ಸಮಾರಂಭ ಹಿರಿಯೂರಿನ ಬಲಿಜ ಶ್ರೇಯಾ ಭವನದಲ್ಲಿ ಶನಿವಾರ ರಾತ್ರಿ ನಡೆಯಿತು. ತಡವಾಗಿ ಬಂದ ಕೆಲವರು ಊಟಕ್ಕೆ ಕುಳಿತಿದ್ದ ವೇಳೆ ಕ್ಯಾಟರಿಂಗ್ ಸಿಬ್ಬಂದಿ ಸರಿಯಾಗಿ ಕುಡಿಯುವ ನೀರು ವಿತರಿಸಿಲ್ಲ ಎನ್ನುವ ಕಾರಣಕ್ಕೆ ವಧು, ವರರ ಕಡೆಯವರ ನಡುವೆ ಜಗಳವಾಗಿದೆ.
ಭಾನುವಾರ ಬೆಳಗ್ಗೆವರೆಗೂ ಜಗಳ ಮುಂದುವರಿದಿದ್ದು, ಹಿರಿಯರು ಎಷ್ಟೇ ಸಂಧಾನ ನಡೆಸಿದರೂ ಪ್ರಯತ್ನ ಫಲ ಕೊಟ್ಟಿಲ್ಲ. ಭಾನುವಾರ ಬೆಳಗ್ಗೆ 10.30 ಕ್ಕೆ ಮುಹೂರ್ತ ನಿಗದಿಯಾಗಿದ್ದು, ಹಿರಿಯರು, ಸಂಬಂಧಿಕರು ಸಂಧಾನ ನಡೆಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ, ಹೀಗಾಗಿ ಮದುವೆ ಮುರಿದು ಬಿದ್ದಿದೆ. ಎಂಜಿನಿಯರಿಂಗ್ ಪದವೀಧರರಾಗಿರುವ ವಧು, ವರರ ಜಗಳದ ಕಾರಣ ಮದುವೆ ನಿಂತು ಹೋಗಿದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ | Murder Case: ಹಳೇ ವೈಷಮ್ಯ; ದಲಿತ ಮುಖಂಡ ಸೇರಿ ಇಬ್ಬರ ಬರ್ಬರ ಕೊಲೆ
ಬೋಳು ತಲೆಯವ ಎಂದು ಹೆಂಡ್ತಿ ಅಪಹಾಸ್ಯ; ಮನನೊಂದು ಪತಿ ಆತ್ಮಹತ್ಯೆ

ಚಾಮರಾಜನಗರ: ಇತ್ತೀಚೆಗೆ ಪತ್ನಿಯರ ಕಿರುಕುಳಕ್ಕೆ ಗಂಡಂದಿರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ತಲೆಯಲ್ಲಿ ಕೂದಲಿಲ್ಲ, ಬೋಳು ತಲೆಯವ ಎಂದು ಪತ್ನಿ ಅಪಹಾಸ್ಯ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದು ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ಗುಡಿಗಾಲದಲ್ಲಿ ಘಟನೆ ನಡೆದಿದೆ. ಪರಶಿವಮೂರ್ತಿ (30) ಆತ್ಮಹತ್ಯೆ ಮಾಡಿಕೊಂಡವರು. ಹೊರಗೆ ಹೋದರೆ ನನಗೆ ನಾಚಿಕೆ ಆಗುತ್ತದೆ, ಎಲ್ಲರೂ ಅಪಹಾಸ್ಯ ಮಾಡುತ್ತಾರೆ, ನನ್ನ ಗಂಡ ಅಂತ ಹೇಳೋಕೆ ಮುಜುಗರ ಆಗುತ್ತದೆ ಎಂದು ಪತ್ನಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಎರಡು ವರ್ಷದ ಹಿಂದೆ ಕಳಕಿಪುರದ ಮಮತಾ ಜತೆಗೆ ಯುವಕನಿಗೆ ಮದುವೆ ಆಗಿತ್ತು. ವಿವಾಹದ ಬಳಿಕ ಪರಶಿವಮೂರ್ತಿಗೆ ತಲೆ ಕೂದಲು ಉದುರಿತ್ತು. ತಲೆಯಲ್ಲಿ ಕೂದಲಿಲ್ಲ, ಬೋಳು ತಲೆಯವ ಎಂದು ಪತ್ನಿ ಅಪಹಾಸ್ಯ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪರಶಿವಮೂರ್ತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೂ ಮೊದಲು ಪತ್ನಿ ಮಮತಾ, ಪತಿ ವಿರುದ್ಧ ವರದಕ್ಷಿಣೆ ಕಿರುಕುಳದ ಕೇಸ್ ಹಾಕಿದ್ದಳು. ಈ ಪ್ರಕರಣದಲ್ಲಿ ಪರಶಿವಮೂರ್ತಿ ಒಮ್ಮೆ ಜೈಲಿಗೆ ಹೋಗಿದ್ದ. ಸುಳ್ಳು ಕೇಸ್ ದಾಖಲಿಸಿ ಪತಿಯನ್ನು ಜೈಲಿಗೆ ಕಳಿಸಿದ್ದಲ್ಲದೇ ಈ ವಿಚಾರವನ್ನು ವಾಟ್ಸ್ ಸ್ಟೇಟಸ್ ಹಾಕುತ್ತಿದ್ದಳು. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಪದೇಪದೇ ಜಗಳ ಆಗುತ್ತಿತ್ತು ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ | Drug mafia: ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಬೇಟೆ; 75 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ