Rajath And Vinay Gowda: ಕೈಯಲ್ಲಿ ಮಚ್ಚು ಹಿಡಿದು ಪೋಸ್ ಕೊಟ್ಟಿದ್ದ ರಜತ್, ವಿನಯ್ ಗೌಡ ಅರೆಸ್ಟ್
Rajath And Vinay Gowda: ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ರಜತ್ ಹಾಗೂ ವಿನಯ್ ಗೌಡ ಅವರನ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದೀಗ ಅವರನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು: ಕೈಯಲ್ಲಿ ಮಚ್ಚು ಹಿಡಿದು ಪೋಸ್ ಕೊಟ್ಟಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡಗೆ (Rajath And Vinay Gowda) ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಇಬ್ಬರನ್ನೂ ವಿಚಾರಣೆ ನಡೆಸಿದ ಬಳಿಕ ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ವಿನಯ್ ಗೌಡ ಹಾಗೂ ರಜತ್ ಕಿಶನ್ ಇಬ್ಬರು ಕೈಯಲ್ಲಿ ಮಚ್ಚು ಹಿಡಿದು ಪೋಸ್ ಕೊಟ್ಟಿದ್ದರು. ಈ ವಿಡಿಯೊ ವೈರಲ್ ಆಗಿದ್ದರಿಂದ ಇಬ್ಬರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪೋಲಿಸರು ಎಫ್ಐಆರ್ ದಾಖಲಿಸಿದ್ದರು. ಇದೀಗ ವಿಚಾರಣೆ ಬಳಿಕ ಇಬ್ಬರ ಬಂಧನವಾಗಿದೆ.
ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಎಫ್ಐಆರ್ ದಾಖಲಿಸಿದ್ದ ಪೊಲೀಸರು, ವಿನಯ್ ಗೌಡ ಹಾಗೂ ರಜತ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದರು. ಆರೋಪಿಗಳು ನೀಡಿದ ವಿವರಣೆಯ ಆಧಾರದ ಮೇಲೆ ಬಂಧನ ಮಾಡಲಾಗಿದೆ.
ಯಾರೇ ಆಗಲಿ ಸಾರ್ವಜನಿಕರ ಮಧ್ಯೆ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದರೆ ಸಂಕಷ್ಟ ಎದುರಿಸಬೇಕಾಗುತ್ತದೆ. ಭಯಪಡಿಸುವುದು, ಶಾಂತಿಗೆ ಭಂಗ ತರುವುದು ಕಾನೂನು ಬಾಹಿರ. ಇನ್ನು, ಪ್ರಕರಣ ದಾಖಲಾದ ಮೇಲೆ ಶಸ್ತ್ರಾಸ್ತ್ರ ತೆಗೆದುಕೊಂಡು ಹೋದ ಉದ್ದೇಶ ಏನು ಅನ್ನೋದು ಸಾಬೀತಾಗಬೇಕು. ಪೊಲೀಸರು ಆ ಜಾಗಕ್ಕೆ ಹೋಗಿ ಪರಿಶೀಲನೆ ಮಾಡುತ್ತಾರೆ. ಆದರೆ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ ಹಿನ್ನೆಲೆ ಸದ್ಯ ವಿನಯ್ ಗೌಡ, ರಜತ್ ಕಿಶನ್ ಇಬ್ಬರನ್ನೂ ಬಂಧಿಸಲಾಗಿದೆ.
ಈ ಸುದ್ದಿಯನ್ನೂ ಓದಿ | viral news: ಲಾಂಗ್ ಝಳಪಿಸುತ್ತಾ ರೀಲ್ಸ್; ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ, ರಜತ್ ಮೇಲೆ ಕೇಸ್
ರಜತ್ ಹಾಗೂ ವಿನಯ್ ಸುಮಾರು 18 ಸೆಕೆಂಡ್ ಗಳ ವಿಡಿಯೊ ಮಾಡಿದ್ದರು. ಬುಜ್ಜಿ ಅನ್ನೋ ರಜತ್ ಅವರ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಲಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಪ್ರದರ್ಶನ ಹಾಗೂ ಭಯಭೀತಿ ಸೃಷ್ಟಿಸಿದ ಹಿನ್ನೆಲೆ ಕೇಸ್ ದಾಖಲಾಗಿತ್ತು.
ಕೈಯಲ್ಲಿ ಲಾಂಗು, ಕಣ್ಣಿಗೆ ಕೂಲಿಂಗ್ ಹಾಕಿಕೊಂಡು ದರ್ಶನ್ ಅವರ ಅಭಿನಯದ ಮೆಜೆಸ್ಟಿಕ್ ಸಿನಿಮಾದ ಹಾಡಿಗೆ ರಜತ್-ವಿನಯ್ ಸ್ಲೋ ಮೋಷನ್ ವಾಕ್ ಮಾಡಿದ್ದರು. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು. ಇದಕ್ಕೆ ನಾನಾ ಬಗೆಯ ಕಮೆಂಟ್ಸ್ ಕೂಡ ಬಂದಿದ್ದವು. ರಜತ್, ಬಿಳ್ಳಿ ಬಣ್ಣದ ಶರ್ಟ್‌ನ ಮೇಲೆ ಡಿ ಬಾಸ್ ಎಂದು ದೊಡ್ಡದಾಗಿ ಬರೆದುಕೊಂಡಿದ್ದರು. ಹಾಕಿರುವ ಪ್ಯಾಂಟ್ ಮೇಲೂ ದರ್ಶನ್ ಹೆಸರು ಜೊತೆಗೆ ಅವರ ಸಿನಿಮಾದ ಹೆಸರನ್ನು ಬರೆಯಲಾಗಿದೆ. ಪ್ಯಾಂಟ್ ಮೇಲೆ ಮೆಜೆಸ್ಟಿಕ್, ಅಣ್ಣಾವ್ರು, ಲಂಕೇಶ್ ಪತ್ರಿಕೆ, ಪೊರ್ಕಿ, ನನ್ನ ಪ್ರೀತಿಯ ರಾಮು, ಕರಿಯ, ಕಲಾಸಿಪಾಳ್ಯ, ಸುಂಟರಗಾಳಿ, ಮಂಡ್ಯ, ಶಾಸ್ತ್ರಿ, ಅರ್ಜುನ್, ಗಜ, ಲಾಲಿಹಾಡು ಸೇರಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸಿರುವ ಎಲ್ಲ ಸಿನಿಮಾಗಳ ಹೆಸರನ್ನು ಬರೆಸಿಕೊಂಡಿದ್ದರು.