DK Suresh: ಐಶ್ವರ್ಯ ಗೌಡ ವಂಚನೆ: ಇಡಿ ತನಿಖೆಗೆ ಹಾಜರಾದ ಡಿಕೆ ಸುರೇಶ್, ʼಇಡಿ ನಡೆ ಪ್ರಜಾಪ್ರಭುತ್ವ ವಿರೋಧಿʼ
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ಗಳು ಇಡಿ ಎಲ್ಲೆ ಮೀರಿ ನಡೆಯುತ್ತಿದೆ ಎಂದು ಅನೇಕ ಬಾರಿ ಹೇಳಿವೆ. ಆದಾಗ್ಯೂ ಎಚ್ಚೆತ್ತುಕೊಂಡಿಲ್ಲ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ ಎಂದರ್ಥ. ಅವರ ವ್ಯಾಪ್ತಿಯನ್ನು ಮೀರಿ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳುವುದು ನೋಡಿದರೆ ಸರ್ಕಾರವೊಂದರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎನಿಸುತ್ತಿದೆ ಎಂದು ಡಿಕೆ ಸುರೇಶ್ (DK Suresh) ಹೇಳಿದ್ದಾರೆ.

ಡಿಕೆ ಸುರೇಶ್

ಬೆಂಗಳೂರು: ಜಾರಿ ನಿರ್ದೇಶನಾಲಯದವರು ವಿಚಾರಣೆಗೆ (ED enquiry) ಹಾಜರಾಗಿ ಎಂದು ತಿಳಿಸಿದ್ದಾರೆ. ನಾನು ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ. ಯಾವ ಮಾನದಂಡವಿಟ್ಟುಕೊಂಡು ನನ್ನನ್ನು ವಿಚಾರಣೆಗೆ ಕರೆದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವೆ ಎಂದು ಬಮೂಲ್ ಅಧ್ಯಕ್ಷ, ನಿಕಟಪೂರ್ವ ಸಂಸದರಾದ ಡಿಕೆ ಸುರೇಶ್ ಅವರು ಹೇಳಿದರು. ಐಶ್ವರ್ಯ ಗೌಡ ವಂಚನೆ (Aishwarya Gowda Fraud case) ಪ್ರಕರಣದಲ್ಲಿ ಇಡಿ ವಿಚಾರಣೆೆಗೆ ಹಾಜರಾಗುವ ಮುನ್ನ ಸದಾಶಿವನಗರ ನಿವಾಸದ ಬಳಿ ಸುರೇಶ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಇಡಿ ನೋಟಿಸ್ ರಾಜಕೀಯ ಷಡ್ಯಂತ್ರವೆಂದು ನಿಮಗೆ ಅನಿಸುತ್ತದೆಯೇ ಎಂದು ಕೇಳಿದಾಗ, 'ವಿಚಾರಣೆಗೆ ಹೋದಾಗ ಇದರ ಬಗ್ಗೆ ತಿಳಿಯುತ್ತದೆ. ಅವರ ಪ್ರಶ್ನೆಗಳು ಯಾವ ಹಾದಿಯಲ್ಲಿವೆ, ವಿಚಾರಣೆಗೂ ಪ್ರಕರಣಕ್ಕೂ ಸಂಬಂಧ ಇದೆಯೋ ಇಲ್ಲವೋ ಎಂದು ತಿಳಿಯುತ್ತದೆ. ಜೊತೆಯಲ್ಲಿ ವಕೀಲರು ಇರುತ್ತಾರೆ. ನಂತರ ಯಾವುದಕ್ಕೆ ಸಂಬಂಧವಿದೆ, ಅಸಂಬದ್ಧವಾಗಿದೆ ಎನ್ನುವುದರ ಬಗ್ಗೆ ಚರ್ಚೆ ನಡೆಸುತ್ತೇವೆ' ಎಂದರು.
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ಗಳು ಇಡಿ ಎಲ್ಲೆ ಮೀರಿ ನಡೆಯುತ್ತಿದೆ ಎಂದು ಅನೇಕ ಬಾರಿ ಹೇಳಿವೆ. ಆದಾಗ್ಯೂ ಎಚ್ಚೆತ್ತುಕೊಂಡಿಲ್ಲ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ ಎಂದರ್ಥ. ಅವರ ವ್ಯಾಪ್ತಿಯನ್ನು ಮೀರಿ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳುವುದು ನೋಡಿದರೆ ಸರ್ಕಾರವೊಂದರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎನಿಸುತ್ತಿದೆ. ಏನು ಮಾಡುತ್ತಾರೆ ಎಂದು ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.
ಐಶ್ವರ್ಯ ಗೌಡ ನಿಮ್ಮ ಹೆಸರು ಹೇಳಿಕೊಂಡು ವಂಚನೆ ಮಾಡಿದ್ದಾರೆ. ನಿಮ್ಮ ಅವರ ನಡುವೆ ಹಣಕಾಸಿನ ವ್ಯವಹಾರ ನಡೆದಿದೆಯೇ ಎಂದಾಗ, ʼಆ ಮಹಿಳೆ ಹಾಗೂ ನಮ್ಮ ನಡುವೆ ಯಾವುದೇ ಹಣಕಾಸು ಹಾಗೂ ಇತರೇ ವಹಿವಾಟು ನಡೆದಿಲ್ಲ. ಅವರು ಮೂರ್ನಾಲ್ಕು ಬಾರಿ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಕೆಲವೊಂದು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ವಾಸ ಮಾಡುತ್ತಿದ್ದರು ಎನ್ನುವ ಕಾರಣಕ್ಕೆ ಅವರ ಆಯೋಜನೆಯ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಇದರ ಹೊರತಾಗಿ ಬೇರೇನೂ ಇಲ್ಲ. ಇದರ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡುತ್ತೇನೆʼ ಎಂದು ಸ್ಪಷ್ಟಪಡಿಸಿದರು.
ನಟರೊಬ್ಬರು ನಿಮ್ಮ ದನಿ ಅನುಕರಣೆ ಮಾಡಿ ವಂಚನೆ ಎಸಗಿರುವ ಬಗ್ಗೆ ಕೇಳಿದಾಗ, ʼಈ ಬಗ್ಗೆ ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ. ಈ ತನಿಖೆಯ ಬೆಳವಣಿಗೆ ಏನಾಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿಯಿಲ್ಲʼ ಎಂದು ಹೇಳಿದರು.
ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾಡಿ ಸಂಸದ ಡಿಕೆ ಸುರೇಶ್ ಅವರಿಗೆ ವಿಚಾರಣೆಗೆ ಹಾಜರಾಗಿ ಎಂದು ನೋಟಿಸ್ ನೀಡಿದ್ದರು. ಕಳೆದ ಜೂನ್ 19ರಂದೆ ಡಿಕೆ ಸುರೇಶ್ ವಿಚಾರಣೆಗೆ ಹಾಜರಾಗಬೇಕಿತ್ತು, ಆದರೆ ಕಾರಣಾಂತರಗಳಿಂದ ಹಾಜರಾಗಿಲ್ಲ. ಹಾಗಾಗಿ ಇಂದು ಇಡಿ ವಿಚಾರಣೆಗೆ ಅವರು ಹಾಜರಾಗಲಿದ್ದಾರೆ. ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ಇದನ್ನೂ ಓದಿ: Kiccha Sudeep: ಡಿಕೆ ಶಿವಕುಮಾರ್ ನಟ್ಟು-ಬೋಲ್ಟ್ ಹೇಳಿಕೆಗೆ ಖಡಕ್ ತಿರುಗೇಟು ಕೊಟ್ಟ ಕಿಚ್ಚ ಸುದೀಪ್