Mandya News: ಮಂಡ್ಯದಲ್ಲಿ ಅಮಾನವೀಯ ಘಟನೆ; ಮಾನಸಿಕ ಅಸ್ವಸ್ಥ ತಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋದ ಮಗ!
Mandya News: ಮಗ ಬಿಟ್ಟು ಹೋದ ಮೇಲೆ ರಸ್ತೆ ಬದಿಯೇ ಕುಳಿತಿದ್ದ ತಾಯಿ, ‘ನನ್ನ ಮಗ ಬಂದು ಕರೆದುಕೊಂಡು ಹೋಗುತ್ತಾನೆ’ ಎನ್ನುತ್ತಿದ್ದರು. ನಂತರ ಸ್ಥಳೀಯಿಂದ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ, ವೃದ್ಧೆಯನ್ನು ರಕ್ಷಿಸಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.


ಮಂಡ್ಯ: ಮಾನಸಿಕ ಅಸ್ವಸ್ಥ ತಾಯಿಯನ್ನು ಮಗನೊಬ್ಬ ರಸ್ತೆಯಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಮಂಡ್ಯ ಜಿಲ್ಲೆಯ (Mandya News) ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ. "ಬರುತ್ತೇನೆ, ಇಲ್ಲೇ ಇರು" ಎಂದು ಹೇಳಿ ರಸ್ತೆಯಲ್ಲಿ ತಾಯಿಯನ್ನು ಬಿಟ್ಟು ಮಗ ಹೋಗಿದ್ದಾನೆ ಎನ್ನಲಾಗಿದೆ. ಮಗನ ಬರುವಿಕೆಗಾಗಿ ಕಾಯುತ್ತಿದ್ದ ತಾಯಿಗೆ ಸ್ಥಳೀಯರು ಆಹಾರ ನೀಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಗ ಬಿಟ್ಟು ಹೋದ ಮೇಲೆ ರಸ್ತೆ ಬದಿಯೇ ಕುಳಿತಿದ್ದ ತಾಯಿ, ‘ನನ್ನ ಮಗ ಬಂದು ಕರೆದುಕೊಂಡು ಹೋಗುತ್ತಾನೆ’ ಎನ್ನುತ್ತಿದ್ದರು. ನಂತರ ಸ್ಥಳೀಯಿಂದ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ, ವೃದ್ಧೆಯನ್ನು ರಕ್ಷಿಸಿ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುಮಾರು 70-80 ವರ್ಷದ ವೃದ್ಧೆ ತೀವ್ರ ಮಾನಸಿಕ ಅಸ್ವಸ್ಥಳಾಗಿದ್ದು, 'ನನ್ನ ಮಗ ಬಂದು ಕರೆದುಕೊಂಡು ಹೋಗ್ತಾನೆ' ಎಂಬ ನಂಬಿಕೆಯಲ್ಲಿಯೇ ರಸ್ತೆಯ ಬದಿಯಲ್ಲಿ ಕುಳಿತಿದ್ದಳು. ಆದರೆ, ತಾಯಿಯನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಹೊಂದಿದ್ದ ಮಗ ಮಾತ್ರ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ವೃದ್ಧೆ ರಸ್ತೆ ಬದಿ ಇರುವುದನ್ನು ಕಂಡ ಕಿರುಗಾವಲು ಗ್ರಾಮಸ್ಥರು ಆ ವೃದ್ಧೆಗೆ ಆಹಾರ ನೀಡಿದ್ದಾರೆ. ವೃದ್ಧೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತವಾಗಿ, ವೃದ್ಧೆಯನ್ನು ರಕ್ಷಣೆ ಮಾಡಿದೆ. ಸದ್ಯ ವೃದ್ಧೆಯನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ | MLA Raju Kage: ಎರಡು ದಿನದಲ್ಲಿ ರಾಜೀನಾಮೆ! ಶಾಸಕ ರಾಜು ಕಾಗೆ ಸ್ಫೋಟಕ ಹೇಳಿಕೆ
ಮಗಳನ್ನು ಕಟ್ಟಿಕೊಂಡು ಕೃಷಿಹೊಂಡಕ್ಕೆ ಜಿಗಿದು ಮಹಿಳೆ ಸಾವು
ಬೆಂಗಳೂರು: ಮಹಿಳೆಯೊಬ್ಬರು ತಮ್ಮ ಎಂಟು ವರ್ಷದ ಮಗಳನ್ನು ಬೆನ್ನಿಗೆ ಕಟ್ಟಿಕೊಂಡು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ (Self harming) ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru news) ಹೊರವಲಯದಲ್ಲಿ, ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತಪಟ್ಟ ಗೃಹಿಣಿ ಮಾಲಾ (30) ಮತ್ತು ಅವರ ಕಿರಿಯ ಮಗಳು ಖಾಸಗಿ ಶಾಲೆಯಲ್ಲಿ 2ನೇ ತರಗತಿ ವಿದ್ಯಾರ್ಥಿನಿಯಾಗಿರುವ ಅನುಶ್ರೀ (8) ಎಂದು ಗುರುತಿಸಲಾಗಿದೆ. ಮಾಲಾ ಅವರ ಪತಿ ಮತ್ತು 10 ವರ್ಷದ ಮಗಳು ಬದುಕುಳಿದಿದ್ದಾರೆ.
ಮನೆಯಲ್ಲಿ ಆಸ್ತಿ ವಿವಾದದ ನಂತರ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಆಕೆಯ ಪತಿ ತನ್ನ ತಾಯಿ ಮತ್ತು ಸಹೋದರನೊಂದಿಗೆ ಚರ್ಚಿಸಿದ ನಂತರ 10 ಗುಂಟೆ ಭೂಮಿಯನ್ನು ಸಂಬಂಧಿಕರಿಗೆ ವರ್ಗಾಯಿಸಿದ್ದು. ಪತಿ ತನಗೆ ತಿಳಿಸದೆ ಆಸ್ತಿ ವರ್ಗಾವಣೆ ಮಾಡಿದ್ದರಿಂದ ಮಾಲಾ ಅಸಮಾಧಾನಗೊಂಡಿದ್ದರು. ಇದು ಜಗಳಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ, ಮಾಲಾ ಮತ್ತು ಅನುಶ್ರೀ ಇಬ್ಬರೂ ಕಾಣೆಯಾಗಿರುವುದನ್ನು ಗಮನಿಸಿದ ಕುಟುಂಬ ಸದಸ್ಯರು ಅವರನ್ನು ಹುಡುಕಲು ಪ್ರಾರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಕೃಷಿ ಹೊಂಡದಲ್ಲಿ ಅವರ ಶವಗಳು ತೇಲುತ್ತಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಮಹಿಳೆಯ ಕುಟುಂಬ ಸಲ್ಲಿಸಿದ ದೂರಿನ ಆಧಾರದ ಮೇಲೆ, ಆಕೆಯ ಪತಿಯ ವಿರುದ್ಧ ಬಿಎನ್ಎಸ್ನ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Self Harming: ಮೂವರು ಮಕ್ಕಳ ಜೊತೆ ಕೃಷಿ ಹೊಂಡಕ್ಕೆ ಜಿಗಿದು ತಾಯಿ ಆತ್ಮಹತ್ಯೆ