4 Day Tests: ನಾಲ್ಕು ದಿನಗಳ ಟೆಸ್ಟ್ ಪಂದ್ಯ ಆಯೋಜನೆಗೆ ಐಸಿಸಿ ಚಿಂತನೆ
27-29 WTC cycle: ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳಲ್ಲಿ ದಿನಕ್ಕೆ ಕನಿಷ್ಠ 98 ಓವರ್ಗಳನ್ನು ಆಡಲಾಗುತ್ತದೆ. ಮೊದಲು 90 ಓವರ್ಗಳನ್ನು ಮಾತ್ರ ಆಡಲಾಗುತ್ತಿತ್ತು. ಸಮಯದ ನಷ್ಟವನ್ನು ಸರಿದೂಗಿಸಲು ಓವರ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ವರದಿ ತಿಳಿಸಿದೆ.


ದುಬೈ: 2027-29ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್(27-29 WTC cycle) ಚಕ್ರದಲ್ಲಿ ಸಣ್ಣ ರಾಷ್ಟ್ರಗಳಿಗೂ ಅವಕಾಶ ಸಿಗುವ ನಿಟ್ಟಿನಲ್ಲಿ ನಾಲ್ಕು ದಿನಗಳ(4 Day Tests) ಟೆಸ್ಟ್ ಪಂದ್ಯಗಳನ್ನು ನಡೆಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮುಂದಾಗಿದೆ. ಆದರೆ ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಮಾತ್ರ ಸಾಂಪ್ರದಾಯಿಕ ಐದು ದಿನಗಳ ಪಂದ್ಯಗಳನ್ನು ಆಡಬಹುದು ಎಂದು ವರದಿಯೊಂದು ತಿಳಿಸಿದೆ.
ಪಂದ್ಯಗಳನ್ನು ಒಂದು ದಿನ ಕಡಿಮೆ ಮಾಡುವ ಕ್ರಮವು ಗಮನಾರ್ಹ ಬದಲಾವಣೆಯಾಗಲಿದೆ. ಮತ್ತು ಸಣ್ಣ ರಾಷ್ಟ್ರಗಳು ಹೆಚ್ಚು ಟೆಸ್ಟ್ ಮತ್ತು ದೀರ್ಘ ಸರಣಿಗಳನ್ನು ಆಡಲು ಸಹಾಯ ಮಾಡುತ್ತದೆ. ಕಳೆದ ವಾರ ಲಾರ್ಡ್ಸ್ನಲ್ಲಿ ನಡೆದ ಡಬ್ಲ್ಯೂಟಿಸಿ ಫೈನಲ್ ಬಳಿಕ ನಡೆದ ಚರ್ಚೆಯ ಸಮಯದಲ್ಲಿ, ಐಸಿಸಿ ಅಧ್ಯಕ್ಷ ಜಯ್ ಶಾ, 2027-29ರ ಡಬ್ಲ್ಯೂಟಿಸಿಯಲ್ಲಿ ನಾಲ್ಕು ದಿನಗಳ ಟೆಸ್ಟ್ಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. ಈ ಕುರಿತು "ದಿ ಗಾರ್ಡಿಯನ್" ಪತ್ರಿಕೆಯ ವರದಿ ಮಾಡಿದೆ.
ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವಣ ಸರಣಿಗಳು ಐದು ದಿನಗಳ ಟೆಸ್ಟ್ ಪಂದ್ಯಗಳನ್ನೇ ಆಡುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಣ್ಣ ರಾಷ್ಟ್ರಗಳು ಟೆಸ್ಟ್ ಪಂದ್ಯಗಳನ್ನು ಆಯೋಜಿಸಲು ಹಿಂದೇಟು ಹಾಕುತ್ತವೆ. ಏಕೆಂದರೆ ಅದಕ್ಕೆ ಹೆಚ್ಚು ಸಮಯ ಮತ್ತು ಹಣ ಬೇಕಾಗುತ್ತದೆ. ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳು ಮೂರು ವಾರಗಳಲ್ಲಿ ಮುಗಿಯುವುದರಿಂದ ಅನುಕೂಲವಾಗುತ್ತದೆ. ಐಸಿಸಿಯು 2017ರಲ್ಲಿ ದ್ವಿಪಕ್ಷೀಯ ಸರಣಿಗಳಿಗೆ ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳಿಗೆ ಅನುಮತಿ ನೀಡಿತ್ತು. ಇಂಗ್ಲೆಂಡ್ ತಂಡವು ಕಳೆದ ತಿಂಗಳು ಟ್ರೆಂಟ್ ಬ್ರಿಡ್ಜ್ನಲ್ಲಿ ಜಿಂಬಾಬ್ವೆ ವಿರುದ್ಧ ನಾಲ್ಕು ದಿನಗಳ ಟೆಸ್ಟ್ ಪಂದ್ಯವನ್ನು ಆಡಿದೆ. 2019 ಮತ್ತು 2023ರಲ್ಲಿ ಐರ್ಲೆಂಡ್ ವಿರುದ್ಧವೂ ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳನ್ನು ಆಡಿತ್ತು.
ದಕ್ಷಿಣ ಆಫ್ರಿಕಾ ತಂಡವು ಲಾರ್ಡ್ಸ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ವಿಶ್ವ ಚಾಂಪಿಯನ್ ಆದರೂ, ಕೂಡ ಇದಕ್ಕೆ 5 ದಿನಗಳ ಪಂದ್ಯ ಆಡಲು ಅವಕಾಶ ನೀಡಲಾಗಿಲ್ಲ ಎನ್ನಲಾಗಿದೆ. ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳಲ್ಲಿ ದಿನಕ್ಕೆ ಕನಿಷ್ಠ 98 ಓವರ್ಗಳನ್ನು ಆಡಲಾಗುತ್ತದೆ. ಮೊದಲು 90 ಓವರ್ಗಳನ್ನು ಮಾತ್ರ ಆಡಲಾಗುತ್ತಿತ್ತು. ಸಮಯದ ನಷ್ಟವನ್ನು ಸರಿದೂಗಿಸಲು ಓವರ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ WTC Final 2025: ಆಸೀಸ್ ಆಟಗಾರರ ಅಸಹ್ಯಕರ ಸ್ಲೆಡ್ಜಿಂಗ್; ಬುವುಮಾ ಗಂಭೀರ ಆರೋಪ
2025-27ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿ ಐದು ದಿನಗಳ ಪಂದ್ಯಗಳನ್ನೇ ಒಳಗೊಂಡಿರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. 2025-27ರ ಋತುವಿನಲ್ಲಿ ಒಟ್ಟು 27 ಟೆಸ್ಟ್ ಸರಣಿಗಳು ನಡೆಯಲಿವೆ. ಅದರಲ್ಲಿ 17 ಸರಣಿಗಳು ಕೇವಲ ಎರಡು ಪಂದ್ಯಗಳನ್ನು ಒಳಗೊಂಡಿರುತ್ತವೆ. ಆರು ಸರಣಿಗಳು ಮೂರು ಪಂದ್ಯಗಳನ್ನು ಒಳಗೊಂಡಿರುತ್ತವೆ. ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಪರಸ್ಪರ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡುತ್ತವೆ.