HD Kumaraswamy: ಒತ್ತುವರಿ ತೆರವಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ, ಎಚ್‌ಡಿ ಕುಮಾರಸ್ವಾಮಿಗೆ ಹಿನ್ನಡೆ
ಹೈಕೋರ್ಟ್ ಒತ್ತುವರಿ ತೆರವು ಮಾಡಲು ಸೂಚನೆ ನೀಡಿತ್ತು. ಆದರೆ ಹೆಚ್.ಡಿ. ಕುಮಾರಸ್ವಾಮಿ ಅವರು ತೆರವು ತಡೆ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಕೂಡ ತೆರವಿಗೆ ತಡೆ ನೀಡಲು ನಿರಾಕರಿಸುವ ಮೂಲಕ, ಎಚ್‌ಡಿಕೆ ಅವರಿಗೆ ಹಿನ್ನಡೆಯಾಗಿದೆ.

ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ರಾಮನಗರ (Ramangara news) ತಾಲೂಕಿನ ಬಿಡದಿ ಹೋಬಳಿ ವ್ಯಾಪ್ತಿಯ ಕೇತಗಾನಹಳ್ಳಿಯಲ್ಲಿ ಒತ್ತುವರಿ (encroachment) ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (supreme court) ನಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರಿಗೆ ಹಿನ್ನಡೆಯಾಗಿದೆ. ಕೇತಗಾನಹಳ್ಳಿ ಒತ್ತುವರಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಒತ್ತುವರಿ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ. ನ್ಯಾಯಮೂರ್ತಿ ಪಂಕಜ್ ಮಿತ್ತಲ್ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿದೆ.
2014ರಿಂದಲೇ ಕೇತಗಾನಹಳ್ಳಿಯಲ್ಲಿ ಎಂಟು ಸರ್ವೆ ನಂಬರ್‌ಗಳ ಒತ್ತುವರಿ ಆರೋಪ ಕೇಳಿಬಂದಿತ್ತು. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು 14 ಎಕರೆ ಭೂಮಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದ್ದಾರೆಂದು ಸಾಮಾಜಿಕ ಹೋರಾಟಗಾರರು ದೂರು ನೀಡಿದ್ದರು. ಇದರ ಬೆನ್ನಲ್ಲೇ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದ್ದರು. ವರದಿ ನೀಡಲು ವಿಳಂಬದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಆಯುಕ್ತರಿಗೆ ಶೀಘ್ರ ವರದಿ ನೀಡುವಂತೆ ಹೈಕೋರ್ಟ್ ತಾಕೀತು ಮಾಡಿತ್ತು. ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ಆರಂಭಿಸಿದ್ದಾರೆ. ಕುಮಾರಸ್ವಾಮಿ ಭೂ ಒತ್ತುವರಿ ಬಗ್ಗೆ ತನಿಖೆಗೆ ಸರ್ಕಾರ ಎಸ್ಐಟಿ ರಚನೆ ಮಾಡಿತ್ತು.
ತೆರವಿಗೆ ಲೋಕಾಯುಕ್ತ ಅಧಿಕಾರಿಗಳು ಸೂಚನೆ ನೀಡಿದ್ದರು. ಲೋಕಾಯುಕ್ತ ಸೂಚನೆ ಬಳಿಕವೂ ಅಧಿಕಾರಿಗಳು ತೆರವು ಮಾಡಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಒತ್ತುವರಿ ತೆರವು ಮಾಡಲು ಸೂಚನೆ ನೀಡಿತ್ತು. ಆದರೆ ಹೆಚ್.ಡಿ.ಕುಮಾರಸ್ವಾಮಿ ಅವರು ತೆರವು ತಡೆ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಕೂಡ ತೆರವಿಗೆ ತಡೆ ನೀಡಲು ನಿರಾಕರಿಸುವ ಮೂಲಕ, ಎಚ್‌ಡಿಕೆ ಅವರಿಗೆ ಹಿನ್ನಡೆಯಾಗಿದೆ.
ಇದನ್ನೂ ಓದಿ: HD Kumaraswamy: 135 ಸೀಟು ಕೊಟ್ಟಿರುವುದು ನಟ್ಟು ಬೋಲ್ಟ್ ರಿಪೇರಿ ಮಾಡೋಕೆ ಅಲ್ಲ; ಡಿಕೆಶಿಗೆ ಎಚ್‌ಡಿಕೆ ಟಾಂಗ್