ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Road Accident: ಎರಡು ಅಪಘಾತ, ಯುಗಾದಿ ಹಬ್ಬಕ್ಕೆ ತೆರಳುತ್ತಿದ್ದ ಯುವಕರು ಸೇರಿ ನಾಲ್ವರ ದುರ್ಮರಣ

ಉಡುಪಿ ಹಾಗೂ ದಾವಣಗೆರೆಯಲ್ಲಿ ಎರಡು ಪ್ರತ್ಯೇಕ ಅಪಘಾತಗಳು ನಡೆದಿವೆ. ಯುಗಾದಿ ಹಬ್ಬಕ್ಕೆ ಊರಿಗೆ ತೆರಳುತ್ತಿದ್ದ ಇಬ್ಬರು ಯುವಕರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಚನ್ನಗಿರಿ ಬಳಿ ಹಿಟ್‌ ಆಂಡ್‌ ರನ್‌ ಮಾಡಿರುವ ಚಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ.

ಎರಡು ಅಪಘಾತ, ಯುಗಾದಿಗೆ ತೆರಳುತ್ತಿದ್ದ ಯುವಕರು ಸೇರಿ ನಾಲ್ವರ ದುರ್ಮರಣ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Mar 29, 2025 10:05 AM

ದಾವಣಗೆರೆ/ಉಡುಪಿ: ಎರಡು ಪ್ರತ್ಯೇಕ ಅಪಘಾತಗಳು ನಡೆದಿದ್ದು, ಯುಗಾದಿ ಹಬ್ಬಕ್ಕೆಂದು ಊರಿಗೆ ತೆರಳುತ್ತಿದ್ದ ಇಬ್ಬರು ಯುವಕರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿ ಹಾಗೂ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೀರೂರು ಹಾಗೂ ಸಮ್ಮಸಗಿ ರಾಜ್ಯ ಹೆದ್ದಾರಿಯ ಗುಳ್ಳೇಹಳ್ಳಿಯ ಕೂಗಳತೆಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ. ಅರ್ಜುನ್ ನಾಯ್ಕ (25), ಹರೀಶ್ ನಾಯ್ಕ (31) ಮೃತ ಯುವಕರು ಎಂದು ತಿಳಿದುಬಂದಿದೆ. ಯುಗಾದಿ ಹಬ್ಬ ಇರುವ ಕಾರಣ ತಮ್ಮ ದ್ವಿಚಕ್ರ ವಾಹನದಲ್ಲಿ ಯುವಕರು ಊರಿಗೆ ಮರಳುವ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಹೋಗಿದೆ.

ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಚನ್ನಗಿರಿ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪರಿಚಿತ ವಾಹನದ ಗುರುತನ್ನು ಪತ್ತೆ ಮಾಡಲು ಸ್ಥಳೀಯ ಸಿಸಿ ಟಿವಿ ಕ್ಯಾಮೆರಾಗಳನ್ನು ಜಾಲಾಡಲಾಗಿದೆ.

ಉಡುಪಿಯಲ್ಲಿ ಕಾರು ಹಾಗೂ ಬಸ್ರೂರು ಸಮೀಪದ ಬಿ.ಹೆಚ್.ನಿಂದ ಕಂಡ್ಲೂರಿನತ್ತ ತೆರಳುತ್ತಿದ್ದ ಸ್ಕೂಟಿ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಾಜೀವ ಶೆಟ್ಟಿ (55) ಹಾಗೂ ಸುಧೀರ ದೇವಾಡಿಗ (35) ಎನ್ನುವವರು ಸಾವನ್ನಪ್ಪಿದ್ದಾರೆ. ಅಪಘಾತದ ಕುರಿತಂತೆ ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮನಗರದಲ್ಲಿ ಭೀಕರ ಅಪಘಾತ, ಮೂವರ ಸಾವು

ಬೆಂಗಳೂರು: ರಾಮನಗರ (Ramanagara news) ಜಿಲ್ಲೆಯ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ (Road Accident) ಒಂದೇ ಕುಟುಂಬದ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಿಟ್ಟಮಾರನಹಳ್ಳಿ ಬೈ-ಪಾಸ್‌ನಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬೆಂಗಳೂರು- ಮೈಸೂರು ಹೆದ್ದಾರಿ (Bengaluru- mysuru expressway) ಪಕ್ಕದಲ್ಲಿ ಮೈಸೂರು ಕಡೆಗೆ ತೆರಳುವ ಪ್ರವೇಶ ನಿಯಂತ್ರಿತ ಜಾಗದಲ್ಲಿ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ.

ಮೃತರನ್ನು ಬೆಂಗಳೂರಿನ ಶಿವಪ್ರಕಾಶ್ (37) ಪುಟ್ಟಗೌರಮ್ಮ (72) ಮತ್ತು ಚನ್ನಪಟ್ಟಣದ ಮಂಗದಹಳ್ಳಿಯ ಶಿವರತ್ನ (50) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇನ್ನಿಬ್ಬರು ನಟರಾಜು (42) ಮತ್ತು ಸುಮಾ (36) ಗಾಯಗೊಂಡಿದ್ದಾರೆ. ಮೃತದೇಹಗಳನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ವ್ಯಾನ್ ಚಾಲಕ ನಾಗೇಶ್ ಕೂಡ ಗಾಯಗೊಂಡಿದ್ದಾರೆ.

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಇತ್ತೀಚೆಗೆ ವೇಗದ ಪ್ರಮಾಣವನ್ನು ಇಳಿಕೆ ಮಾಡಿದ ಬಳಿಕ ಅಪಘಾತಗಳ ಸಂಖ್ಯೆ ತಗ್ಗಿತ್ತು ಹಾಗೂ ಸಾವುಗಳ ಸಂಖ್ಯೆ ಇಳಿಮುಖವಾಗಿತ್ತು. ಇತ್ತೀಚೆಗೆ ಕೆಲವು ಕಡೆ ಎಕ್ಸ್‌ಪ್ರೆಸ್‌ವೇಗೆ ಸರ್ವಿಸ್‌ ರಸ್ತೆಗಳಿಂದ ಆಗಮನ ಹಾಗೂ ನಿರ್ಗಮನಗಳನ್ನು ಕೂಡ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: ಬಿಜೆಪಿ ನಗರ ಎಸ್ಟಿ ಮೋರ್ಚಾದ ಕಾರ್ಯದರ್ಶಿ ಅಪಘಾತದಲ್ಲಿ ಸಾವು