Viral News: ಯುನಿಫಾರ್ಮ್‌ನಲ್ಲೇ ಸ್ವಾಮೀಜಿ ಕಾಲಿಗೆ ಬಿದ್ದ 6 ಪೊಲೀಸರಿಗೆ ಇಲಾಖೆಯಿಂದ ಟ್ರಾನ್ಸ್‌ಫರ್ ಆಶೀರ್ವಾದ!
ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ 6 ಜನ ಪೊಲೀಸರನ್ನು ವರ್ಗಾವಣೆ ಮಾಡಿ ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಬಾಗಲಕೋಟೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರು 6 ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಬಾದಾಮಿ ಪಟ್ಟಣದ ಪೊಲೀಸ್ ಠಾಣೆಯಿಂದ ಜಿಲ್ಲೆಯ ವಿವಿಧ ಗ್ರಾಮೀಣ ಠಾಣೆಗಳಿಗೆ ವರ್ಗಾವಣೆ ಮಾಡಿದ್ದಾರೆ.


ಬಾಗಲಕೋಟೆ: ಡ್ಯೂಟಿಯಲ್ಲಿರುವಾಗ ಹಾಗೂ ಖಾಕಿ ಯೂನಿಫಾರ್ಮ್‌ನಲ್ಲಿದ್ದುಕೊಂಡೇ ಸ್ವಾಮೀಜಿಯೊಬ್ಬರ ಕಾಲಿಗೆ ಬಿದ್ದು ಭಕ್ಷೀಸು ಪಡೆದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆಯು ಆರು ಜನ ಪೊಲೀಸರನ್ನು ವರ್ಗಾವಣೆ (police transfer) ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Viral news, viral video) ಆಗಿದ್ದಲ್ಲದೆ, ಪೊಲೀಸ್ ಇಲಾಖೆಗೆ ಮುಜುಗರ ತಂದಿತ್ತು. ಈ ಸ್ವಾಮೀಜಿ ಬಗ್ಗೆಯೂ ರಾಜ್ಯದ ಜನರಿಗೆ ಕುತೂಹಲ ಮೂಡಿದ್ದು, ಇವರು ಸಿದ್ದನಕೊಳ್ಳದ ಶಿವಕುಮಾರ್ ಸ್ವಾಮೀಜಿ ಎಂದು ಗೊತ್ತಾಗಿದೆ.
ವೈರಲ್ ಆಗಿದ್ದ ವಿಡಿಯೋದಲ್ಲಿ, ಸ್ವಾಮೀಜಿಯೊಬ್ಬರು ಕಾರಿನಲ್ಲಿ ಕುಳಿತಿದ್ದಾರೆ. ಒಬ್ಬರು ಟ್ರಾಫಿಕ್ ಪೊಲೀಸ್ ಹಾಗೂ ಇತರ ಐವರು ಪೊಲೀಸ್ ಪೇದೆಗಳು ಸಮವಸ್ತ್ರದಲ್ಲಿಯೇ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ. ಸ್ವಾಮೀಜಿ ಪೊಲೀಸರಿಗೆ ಆಶೀರ್ವಾದ ಮಾಡಿ ಹಣವನ್ನೂ ನೀಡಿದ್ದಾರೆ. ಇದನ್ನು ನೋಡಿ ಯಾರಪ್ಪಾ ಇಷ್ಟೊಂದು ಪವರ್‌ಫುಲ್ ಸ್ವಾಮೀಜಿ ಎಂದು ಜನ ಆಶ್ಚರ್ಯಪಟ್ಟಿದ್ದರು.
ಈ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ 6 ಜನ ಪೊಲೀಸರನ್ನು ವರ್ಗಾವಣೆ ಮಾಡಿ ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಬಾಗಲಕೋಟೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರು 6 ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಬಾದಾಮಿ ಪಟ್ಟಣದ ಪೊಲೀಸ್ ಠಾಣೆಯಿಂದ ಜಿಲ್ಲೆಯ ವಿವಿಧ ಗ್ರಾಮೀಣ ಠಾಣೆಗಳಿಗೆ 6 ಜನ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ.
ಎಎಸ್ಐ ಜಿ.ಬಿ. ದಳವಾಯಿ ಅವರನ್ನು ಹುನಗುಂದ ಠಾಣೆಗೆ, ಎಎಸ್ಐ ಡಿ.ಜೆ. ಶಿವಪುರ ಅವರನ್ನು ಬಾಗಲಕೋಟೆ ಗ್ರಾಮೀಣ ಠಾಣೆಗೆ, ನಾಗರಾಜ ಅಂಕೋಲೆಯನ್ನು ಬೀಳಗಿ ಪೊಲೀಸ್ ಠಾಣೆ, ಜಿ.ಬಿ. ಅಂಗಡಿ ಅವರನ್ನು ಇಳಕಲ್ ನಗರ ಠಾಣೆಗೆ, ರಮೇಶ್ ಈಳಗೇರ ಅವರನ್ನು ಬಾಗಲಕೋಟೆ ಗ್ರಾಮೀಣ ಠಾಣೆಗೆ ಹಾಗೂ ರಮೇಶ್ ಹುಲ್ಲೂರು ಅವರನ್ನು ಜಿಲ್ಲಾ ಪೊಲೀಸ್ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಸೇವೆಯಲ್ಲಿರುವ ಸಿಬ್ಬಂದಿ ಸಮವಸ್ತ್ರ ಧರಿಸಿಕೊಂಡು ಸೇವೆಯಲ್ಲಿರುವಾಗ ಶಿಸ್ತುಬದ್ಧವಾಗಿ ಇರುವಂತೆಯೂ ನೋಟಿಸ್ ಜಾರಿ ಮಾಡಲಾಗಿದೆ.
ಇವರೆಲ್ಲರೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ಠಾಣೆ ಪೊಲೀಸ್ ಸಿಬ್ಬಂದಿ. ಸ್ಥಳೀಯರಾದ ಸಿದ್ದನಕೊಳ್ಳದ ಶಿವಕುಮಾರ್ ಸ್ವಾಮೀಜಿ ಕಾಲಿಗೆ ನಮಸ್ಕರಿಸಿದ್ದರು. ಈ ವೇಳೆ ಪೊಲೀಸರಿಗೆ ಸ್ವಾಮೀಜಿ ಆಶೀರ್ವಾದದ ರೂಪದಲ್ಲಿ ಹಣವನ್ನು ಕೊಟ್ಟಿದ್ದಾರೆ. ಜೊತೆಗೆ, ಈ ಹಣವನ್ನು ಖರ್ಚು ಮಾಡದೇ ಅದನ್ನು ಸಂಗ್ರಹಿಸಿಟ್ಟು ಪೂಜೆ ಮಾಡುವಂತೆಯೂ ಸೂಚನೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: Viral Video: ಪಾರ್ಕಿಂಗ್ ವಿಚಾರಕ್ಕೆ ವಿಜ್ಞಾನಿಯನ್ನು ಹೊಡೆದು ಕೊಂದ ದುರುಳರು! ಶಾಕಿಂಗ್ ವಿಡಿಯೊ ವೈರಲ್