ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Manoj K. Bharathiraja: ತಮಿಳು ಚಿತ್ರ ನಿರ್ದೇಶಕ, ನಟ ಮನೋಜ್‌ ಭಾರತಿರಾಜ ಇನ್ನಿಲ್ಲ

ತಮಿಳು ಚಿತ್ರ ನಿರ್ದೇಶಕ, ನಟ ಭಾರತಿರಾಜ ಅವರ ಪುತ್ರ ನಟ, ನಿರ್ದೇಶಕ ಮನೋಜ್‌ ಭಾರತಿರಾಜ ಮಂಗಳವಾರ (ಮಾ. 25) ನಿಧನರಾದರು. ಅವರಿಗೆ 48 ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಅವರು ಚೆನ್ನೈಯಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಮಿಳು ಚಿತ್ರ ನಿರ್ದೇಶಕ, ನಟ ಮನೋಜ್‌ ಭಾರತಿರಾಜ ನಿಧನ

ಮನೋಜ್‌ ಭಾರತಿರಾಜ.

Profile Ramesh B Mar 25, 2025 11:01 PM

ಚೆನ್ನೈ: ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ತಮಿಳು ಚಿತ್ರ ನಿರ್ದೇಶಕ, ನಟ ಭಾರತಿರಾಜ (Bharathiraja) ಅವರ ಪುತ್ರ ನಟ, ನಿರ್ದೇಶಕ ಮನೋಜ್‌ ಭಾರತಿರಾಜ (Manoj Bharathiraja) ಮಂಗಳವಾರ (ಮಾ. 25) ನಿಧನರಾದರು. ಅವರಿಗೆ 48 ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಅವರು ಚೆನ್ನೈಯಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 1976ರಲ್ಲಿ ಜನಿಸಿದ ಮನೋಜ್‌ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇತ್ತೀಚೆಗೆ ಬೈಪಾಸ್‌ ಸರ್ಜರಿಗೆ ಒಳಗಾಗಿದ್ದ ಮನೋಜ್‌ ಕೆಲವು ದಿನಗಳಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಮಂಗಳವಾರ ಹೃದಯಾಘಾತವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

"ಮನೋಜ್ ಇತ್ತೀಚೆಗೆ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಚೇತರಿಸಿಕೊಳ್ಳುತ್ತಿದ್ದರು. ಆದಾಗ್ಯೂ ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಅಂತ್ಯಕ್ರಿಯೆ ಬಗ್ಗೆ ಕುಟುಂಬಸ್ಥರು ನಿರ್ಧಾರ ಕೈಗೊಳ್ಳಲಿದ್ದಾರೆʼʼ ಎಂದು ಅವರ ಮ್ಯಾನೇಜರ್‌ ಮಾಹಿತಿ ನೀಡಿದ್ದಾರೆ.

ಖುಷ್ಬೂ ಸುಂದರ್ ಅವರ ಪೋಸ್ಟ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Shihan Hussaini: ಜಯಲಲಿತಾ ಅಧಿಕಾರಕ್ಕೆ ಬರಲೆಂದು 2015ರಲ್ಲಿ ಶಿಲುಬೆಗೇರಿ ಸುದ್ದಿಯಾಗಿದ್ದ ನಟ ಇನ್ನಿಲ್ಲ

ʼಸಮುಧಿರಮ್‌ʼ, ʼಅಲ್ಲಿ ಅರ್ಜುನ್‌ʼ, ʼಬೇಬಿʼ, ʼವಿರುಮನ್‌ʼ ಮುಂತಾದ ತಮಿಳು ಚಿತ್ರಗಳಲ್ಲಿ ಮನೋಜ್‌ ನಿರ್ವಹಿಸಿದ ಪಾತ್ರ ಜನಪ್ರಿಯವಾಗಿತ್ತು. 1999ರಲ್ಲಿ ತೆರೆಕಂಡ ʼತಾಜ್‌ ಮಹಲ್‌ʼ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ಮನೋಜ್‌ ಕಾಲಿವುಡ್‌ಗೆ ಕಾಲಿಟ್ಟಿದ್ದರು. ಇದನ್ನು ಅವರ ತಂದೆ ಭಾರತಿರಾಜ ನಿರ್ದೇಶಿಸಿದ್ದರು. ಎ.ಆರ್‌.ರೆಹಮಾನ್‌ ಸಂಗೀತ ನೀಡಿದ್ದ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಜತೆಗೆ ಮನೋಜ್‌ ಅಭಿನಯಕ್ಕೆ ಪ್ರಶಂಸೆಯೂ ವ್ಯಕ್ತವಾಗಿತ್ತು. ಅದಾದ ಬಳಿಕ ಅವರು ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

2022ರಲ್ಲಿ ತೆರೆಕಂಡ ಕಾರ್ತಿ ಅಭಿನಯದ 'ವಿರುಮನ್‌' ಮನೋಜ್‌ ಅಭಿನಯದ ಕೊನೆಯ ಸಿನಿಮಾ. ಇದರಲ್ಲಿ ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಅದಾದ ಬಳಿಕ ಕಳೆದ ವರ್ಷ ಅಮೇಜಾನ್‌ ಪ್ರೈಮ್‌ ವಿಡಿಯೊದಲ್ಲಿ ತೆರೆಕಂಡ ʼಸ್ನೇಕ್ಸ್‌ ಆ್ಯಂಡ್‌ ಲಾಡರ್ಸ್‌ʼ ಟಿವಿ ಸೀರಿಸ್‌ನಲ್ಲಿ ಅಭಿನಯಿಸಿದ್ದರು.

ಚಿತ್ರ ನಿರ್ದೇಶನ

ಮನೋಜ್‌ ತಮ್ಮ ತಂದೆ ಭಾರತಿರಾಜ ಅವರಂತೆ ಚಿತ್ರ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು. 2023ರಲ್ಲಿ ರಿಲೀಸ್‌ ಆದ ʼಮರ್ಗಾಝಿ ತಿಂಗಳ್‌ʼ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ವಿಶೇಷ ಎಂದರೆ ಇದರಲ್ಲಿ ಭಾರತಿರಾಜ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸುಸೀಂದರನ್‌, ಶ್ಯಾಮ್‌ ಸೆಲ್ವನ್‌, ಮಾಳವಿಕಾ ಇಂದುಚೂಡನ್‌ ಮತ್ತಿತರರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮಗನ ಚಿತ್ರವನ್ನು ತಂದೆ, ತಂದೆಯ ಚಿತ್ರವನ್ನು ಮಗ ನಿರ್ದೇಶಿಸಿದ ಅಪರೂಪದ ದಾಖಲೆಗೆ ಭಾರತಿರಾಜ ಮತ್ತು ಮನೋಜ್‌ ಪಾತ್ರರಾಗಿದ್ದಾರೆ. ಮತ್ತೊಂದು ವಿಶೇಷ ಎಂದರೆ ಮನೋಜ್‌ ಗಾಯಕರೂ ಹೌದು. ತಾವು ನಟಿಸಿದ ಮೊದಲ ಚಿತ್ರ ʼತಾಜ್‌ ಮಹಲ್‌ʼನ ಹಾಡೊಂದಕ್ಕೆ ಅವರು ಧ್ವನಿಯಾಗಿದ್ದರು.

ಮನೋಜ್‌ ನಿಧನಕ್ಕೆ ಚಿತ್ರರಂಗದ ಪ್ರಮುಖರು, ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ. ಹಿರಿಯ ನಟಿ ಖುಷ್ಬೂ ಸುಂದರ್ ಎಕ್ಸ್ (ಟ್ವಿಟರ್‌)ನಲ್ಲಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. "ಮನೋಜ್ ಈಗ ನಮ್ಮ ನಡುವೆ ಇಲ್ಲ ಎಂಬ ಸುದ್ದಿ ಕೇಳಿ ತುಂಬಾ ಆಘಾತವಾಗಿದೆ. ಅವರ ಅಕಾಲಿಕ ನಿಧನ ನೋವುಂಟು ಮಾಡಿದೆ. ಅವರಿಗೆ ಕೇವಲ 48 ವರ್ಷ ವಯಸ್ಸಾಗಿತ್ತು. ಮನೋಜ್ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆʼʼ ಎಂದು ಬರೆದುಕೊಂಡಿದ್ದಾರೆ.