Viral Video: ಫಾದರ್ಸ್ ಡೇಯಂದು 1 ವರ್ಷದ ಮಗಳಿಗೆ ರೋಲ್ಸ್ ರಾಯ್ಸ್ ಕಾರು ಉಡುಗೊರೆ ನೀಡಿದ ಅಪ್ಪ; ನೆಟ್ಟಿಗರು ಹೇಳಿದ್ದೇನು?
ಭಾರತೀಯ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ANAX ಡೆವಲಪ್‌ಮೆಂಟ್ಸ್‌ನ ಸಂಸ್ಥಾಪಕ ಸತೀಶ್ ಸನ್ಪಾಲ್ ಫಾದರ್ಸ್ ಡೇಯಂದು ತಮ್ಮ ಒಂದು ವರ್ಷದ ಮಗಳಿಗೆ ಹೊಚ್ಚ ಹೊಸ ಕಸ್ಟಮ್ ಮೇಡ್ ಗುಲಾಬಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ದುಬೈ: ಮಕ್ಕಳ ಹುಟ್ಟುಹಬ್ಬದಂದು ಕೆಲವು ತಂದೆ-ತಾಯಂದಿರು ಗಿಫ್ಟ್ (Gift) ಕೊಡುತ್ತಾರೆ. ಮಕ್ಕಳಿಗಿಷ್ಟವಾದ ಪುಸ್ತಕ, ಆಟಿಕೆ, ಸಿಹಿತಿನಿಸು, ಬಟ್ಟೆ, ಚಿನ್ನದ ಒಡವೆ ಹೀಗೆ ಅವರವರ ಬಜೆಟ್‌ಗೆ ಅನುಗುಣವಾಗಿ ಕೊಡುತ್ತಾರೆ. ಆದರೆ ದುಬೈ ಮೂಲದ ಭಾರತೀಯ ಉದ್ಯಮಿಯೊಬ್ಬರು ತಮ್ಮ ಒಂದು ವರ್ಷದ ಮಗಳಿಗೆ ಹೊಚ್ಚ ಹೊಸ ಕಸ್ಟಮ್ ಮೇಡ್ ಪಿಂಕ್ ಕಲರ್‌ನ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ. ಫಾದರ್ಸ್ ಡೇಯಂದು ನೀಡಲಾದ ಈ ದುಬಾರಿ ಉಡುಗೊರೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ANAX ಡೆವಲಪ್‌ಮೆಂಟ್ಸ್‌ನ ಸಂಸ್ಥಾಪಕ ಸತೀಶ್ ಸನ್ಪಾಲ್ ಪತ್ನಿ ತಬಿಂದಾ ಜತೆ ತಮ್ಮ ಮಗಳು ಇಸಾಬೆಲ್ಲಾಗಾಗಿ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡುವ ವಿಡಿಯೊ ವೈರಲ್ ಆಗಿದೆ.
ವಿಡಿಯೊ ಇಲ್ಲಿದೆ ನೋಡಿ...
ವರದಿ ಪ್ರಕಾರ ಇಂಗ್ಲೆಂಡ್‌ನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ 5.85 ಕೋಟಿ ರೂ. ಮೌಲ್ಯದ ಪಿಂಕ್ ಕಲರ್‌ನ ರೋಲ್ಸ್ ರಾಯ್ಸ್ ಕಾರನ್ನು ಫಾದರ್ಸ್ ಡೇ ಉಡುಗೊರೆಯಾಗಿ ದುಬೈಗೆ ತರಲಾಯಿತು. ಈ ಕಾರಿನ ಪ್ರತಿ ಸೀಟಿನ ಮೇಲೆ ಇಸಾಬೆಲ್ಲಾ ಅವಳ ಹೆಸರಿನ ಮೊದಲಕ್ಷರಗಳನ್ನು ಪ್ರಿಂಟ್ ಮಾಡಲಾಗಿದೆ. ಕಾರಿನ ಬಾಗಿಲುಗಳ ಮೇಲೆ ಅವಳ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ. ನಂಬರ್ ಪ್ಲೇಟ್ ಅನ್ನು ಸಹ ಕಸ್ಟಮೈಸ್ ಮಾಡಲಾಗಿದೆ ಮತ್ತು "ಕಂಗ್ರಾಜುಲೆಷನ್ ಇಸಾಬೆಲ್ಲಾ" ಎಂದು ಬರೆಯಲಾಗಿದೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಈ ಅತಿರೇಕದ ಉಡುಗೊರೆಯ ವಿರುದ್ಧ ಕಿಡಿಕಾರಿದ್ದಾರೆ. "ಇದು ಸಂಪತ್ತಿನ ಅತಿರೇಕ ಹಾಗೂ ಆಕರ್ಷಕ ಪ್ರದರ್ಶನ" ಎಂದು ಒಬ್ಬರು ಬರೆದಿದ್ದಾರೆ. "ಇದು ವೇಸ್ಟ್, ನಾಚಿಕೆಯಿಲ್ಲದ ಪ್ರದರ್ಶನಗಳು" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: 54 ವರ್ಷದ ಪ್ರಿಯಕರನನ್ನು ಪರಿಚಯಿಸಿ ಟ್ರೋಲ್ ಆದ 27 ವರ್ಷದ ಕಂಟೆಂಟ್ ಕ್ರಿಯೇಟರ್; ನೆಟ್ಟಿಗರು ಹೇಳಿದ್ದೇನು?
ಸನ್ಪಾಲ್ ತನ್ನ ಮಗಳಿಗಾಗಿ ಈ ರೀತಿಯ ಸಪ್ರೈಸ್ ನೀಡಿ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಇಸಾಬೆಲ್ಲಾಗೆ ಒಂದು ವರ್ಷ ತುಂಬಿದಾಗ, ದುಬೈನ ಅತ್ಯಂತ ದುಬಾರಿ ಹೋಟೆಲ್‌ಗಳಲ್ಲಿ ಒಂದಾದ ಅಟ್ಲಾಂಟಿಸ್ ದಿ ರಾಯಲ್‌ನಲ್ಲಿ ಅದ್ಧೂರಿ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಿ ವೈರಲ್ ಆಗಿದ್ದರು.