2024ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತದ ಗೇಮ್ ಚೇಂಜರ್ ಹೆಸರಿಸಿದ ರೋಹಿತ್ ಶರ್ಮಾ!
Rohit sharma praised on Axar patel: ಕಳೆದ ವರ್ಷ ನಡೆದಿದ್ದ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು. ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸುವ ಮೂಲಕ ಭಾರತ ಎರಡನೇ ಟಿ20 ವಿಶ್ವಕಪ್ ಅನ್ನು ಗೆದ್ದಿತ್ತು. ಫೈನಲ್ ಪಂದ್ಯದಲ್ಲಿ ಭಾರತದ ಪರ ಗೇಮ್ ಚೇಂಜರ್ ಯಾರೆಂದು ರೋಹಿತ್ ಶರ್ಮಾ ರಿವೀಲ್ ಮಾಡಿದ್ದಾರೆ.

ಅಕ್ಷರ್ ಪಟೇಲ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರೋಹಿತ್ ಶರ್ಮಾ.

ನವದೆಹಲಿ: ಕಳೆದ ವರ್ಷ ನಡೆದಿದ್ದ 2024ರ ಐಸಿಸಿ ಟಿ20 ವಿಶ್ವಕಪ್ (T20 World Cup 2024) ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 5 ರನ್ಗಳಿಂದ ಮಣಿಸಿದ್ದ ರೋಹಿತ್ ಶರ್ಮಾ (Rohit Sharma) ಅವರ ನಾಯಕತ್ವದ ಭಾರತ ತಂಡ ಚಾಂಪಿಯನ್ ಆಗಿತ್ತು. ಆ ಮೂಲಕ ಬರೋಬ್ಬರಿ 11 ವರ್ಷಗಳ ಬಳಿಕ ಟೀಮ್ ಇಂಡಿಯಾ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಈ ಹಣಾಹಣಿಯಲ್ಲಿ ಭಾರತ ತಂಡದ ಗೇಮ್ ಚೇಂಜರ್ ಯಾರೆಂದು ಅಂದು ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ಇದೀಗ ರಿವೀಲ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ಅವರನ್ನು ಕಡೆಗಣಿಸಿ 31ರ ವಯಸ್ಸಿನ ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ (Axar Patel) ಅವರನ್ನು ಆಯ್ಕೆ ಮಾಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ ಪವರ್ಪ್ಲೇನಲ್ಲಿ ಪ್ರಮುಖ ಮೂರು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಈ ವೇಳೆ ವಿರಾಟ್ ಕೊಹ್ಲಿ ದೀರ್ಘಾವಧಿ ಬ್ಯಾಟ್ ಮಾಡಿ 59 ಎಸೆತಗಳಲ್ಲಿ 76 ರನ್ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಇವರೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ, ಐದನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದಿದ್ದ ಅಕ್ಷರ್ ಪಟೇಲ್, ಕೇವಲ 31 ಎಸೆತಗಳಲ್ಲಿ 47 ರನ್ಗಳನ್ನು ಬಾರಿಸಿದ್ದರು. ಅಲ್ಲದೆ ನಾಲ್ಕನೇ ವಿಕೆಟ್ಗೆ ವಿರಾಟ್ ಕೊಹ್ಲಿ ಜೊತೆಗೆ 72 ನಿರ್ಣಾಯಕ ರನ್ಗಳನ್ನು ಬಾರಿಸಿದ್ದರು. ಆ ಮೂಲಕ ಭಾರತ ತಂಡ ತನ್ನ ಪಾಲಿನ 20 ಓವರ್ಗಳಿಗೆ 7 ವಿಕೆಟ್ಗಳ ನಷ್ಟಕ್ಕೆ 176 ರನ್ಗಳನ್ನು ಕಲೆ ಹಾಕಲು ನೆರವು ನೀಡಿದ್ದರು.
2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕನಾಗುವುದು ಅನುಮಾನ!
ಈ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ರೋಹಿತ್ ಶರ್ಮಾ, "ಮೂರು ವಿಕೆಟ್ ಕಳೆದುಕೊಂಡಿದ್ದಾಗ ನನಗೆ ಭಯವಾಗುತ್ತಿತ್ತು. ನನಗೆ ಸಮಾಧಾನವಾಗಲಿಲ್ಲ. ದಕ್ಷಿಣ ಆಫ್ರಿಕಾ ತಂಡಕ್ಕೆ ಪಂದ್ಯವನ್ನು ಬಿಟ್ಟುಕೊಡುತ್ತೇವೆಂದು ನಾನು ಭಾವಿಸಿದ್ದೆ. ಆದರೆ, ನಿಸ್ಸಂಶಯವಾಗಿ ನಮ್ಮ ಕೆಳ ಮಧ್ಯಮ ಕ್ರಮಾಂಕವು ಟೂರ್ನಿಯಲ್ಲಿ ಹೆಚ್ಚು ಬ್ಯಾಟಿಂಗ್ ಮಾಡದಿದ್ದರೂ, ಅವಕಾಶ ಸಿಕ್ಕಾಗಲೆಲ್ಲಾ ಪರಿಣಾಮ ಬೀರಿದೆ ಎಂದು ನಾನು ನನ್ನ ಮನಸ್ಸಿನ ಹಿಂಭಾಗದಲ್ಲಿ ಯಾವಾಗಲೂ ನಂಬಿದ್ದೆ," ಎಂದು ಹೇಳಿದ್ದಾರೆ.
"ಅಕ್ಷರ್ ಪಟೇಲ್ ಅವರ ಈ ಆಟದ ಬಗ್ಗೆ ಹೆಚ್ಚು ಜನರು ಮಾತನಾಡುತ್ತಿಲ್ಲ, ಆದರೆ ಅವರ ಇನಿಂಗ್ಸ್ ಪಂದ್ಯವನ್ನೇ ಬದಲಾಯಿಸಿತು. ಆ ಹಂತದಲ್ಲಿ 31 ಎಸೆತಗಳಲ್ಲಿ 47 ರನ್ ಗಳಿಸಿದ್ದು ಅತ್ಯಗತ್ಯವಾಗಿತ್ತು. ಇನಿಂಗ್ಸ್ನ ಉದ್ದಕ್ಕೂ ಬ್ಯಾಟ್ ಮಾಡಲು ನಮಗೆ ಒಬ್ಬ ಆಟಗಾರನ ಅಗತ್ಯವಿತ್ತು, ವಿರಾಟ್ ಅದನ್ನು ಅದ್ಭುತವಾಗಿ ಮಾಡಿದ್ದರು," ಎಂದು ರೋಹಿತ್ ಜಿಯೋಸ್ಟಾರ್ ಜೊತೆಗಿನ ಸಂವಾದದಲ್ಲಿ ತಿಳಿಸಿದ್ದಾರೆ.
ರೋಹಿತ್ ಶರ್ಮಾರ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆಗೆ 18 ವರ್ಷಗಳು!
ಈ ಪಂದ್ಯದಲ್ಲಿ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿಯೂ ತಂಡಕ್ಕೆ ನೆರವು ನೀಡಿದ್ದರು. ಅವರು ನಾಲ್ಕು ಓವರ್ಗಳಿಗೆ 49 ರನ್ಗಳನ್ನು ನೀಡಿದ್ದರೂ ಟ್ರಿಸ್ಟನ್ ಸ್ಟಬ್ಸ್ ಅವರ ವಿಕೆಟ್ ಅನ್ನು ಕಬಳಿಸಿದ್ದರು. ಈ ಟೂರ್ನಿಯುದ್ದಕ್ಕೂ ಅಕ್ಷರ್ ಪಟೇಲ್ ಅತ್ಯಂತ ಸ್ಥಿರ ಪ್ರದರ್ಶನವನ್ನು ತೋರಿದ್ದರು. ಅವರು ಎಂಟು ಇನಿಂಗ್ಸ್ಗಳಿಂದ 139.39ರ ಸ್ಟ್ರೈಕ್ರೇಟ್ನಿಂದ 92 ರನ್ಗಳಿಸಿದ್ದರು. ಇನ್ನು ಬೌಲಿಂಗ್ನಲ್ಲಿ 7.86ರ ಎಕಾನಮಿಯಲ್ಲಿ 9 ವಿಕೆಟ್ಗಳನ್ನು ಕಬಳಿಸಿದ್ದರು. ಈ ಟೂರ್ನಿಯಲ್ಲಿ 8 ಪಂದ್ಯಗಳಿಂದ 15 ವಿಕೆಟ್ಗಳನ್ನು ಕಬಳಿಸಿದ್ದರು ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.