GPS Based Toll: ಫಾಸ್ಟ್‌ಟ್ಯಾಗ್ ಬದಲಿಗೆ ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆ ಜಾರಿ ಯಾವಾಗ ?
ಫಾಸ್ಟ್‌ಟ್ಯಾಗ್ ಬದಲಿಗೆ ಉಪಗ್ರಹ ಆಧಾರಿತ ಅಥವಾ ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆ ಮೇ 1ರಿಂದ ಜಾರಿಗೆ ಬರಲಿದೆ ಎನ್ನುವ ಸುದ್ದಿ ದೇಶಾದ್ಯಂತ ಹಬ್ಬಿದೆ. ಈ ಕುರಿತು ಈಗ ಕೇಂದ್ರ ಸರ್ಕಾರ ಸ್ಪಷ್ಟನೆಯನ್ನು ನೀಡಿದೆ. ಹೊಸ ಹೈಬ್ರಿಡ್ ಟೋಲಿಂಗ್ ವ್ಯವಸ್ಥೆಯನ್ನು ಸದ್ಯ ಪರೀಕ್ಷಿಸಲಾಗುತ್ತಿದೆ. ಉಪಗ್ರಹ ಆಧಾರಿತ ಜಿಪಿಎಸ್ ಟೋಲಿಂಗ್ ಅನ್ನು ಅನುಷ್ಠಾನಗೊಳಿಸುವ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಥವಾ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸದ್ಯಕ್ಕೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಹೀಗಾಗಿ ಪ್ರಸ್ತುತ ಫಾಸ್ಟ್‌ಟ್ಯಾಗ್ ವ್ಯವಸ್ಥೆಯಡಿಯಲ್ಲೇ ಎಲ್ಲ ಟೋಲ್ ಪ್ಲಾಜಾಗಳು ಕಾರ್ಯನಿರ್ವಹಿಸಲಿದೆ ಎಂದಿದೆ.


ನವದೆಹಲಿ: ದೇಶಾದ್ಯಂತ ಮೇ 1ರಿಂದ ಫಾಸ್ಟ್‌ಟ್ಯಾಗ್ (FASTag) ಬದಲಿಗೆ ಉಪಗ್ರಹ ಆಧಾರಿತ ಟೋಲಿಂಗ್ (GPS Based Toll) ವ್ಯವಸ್ಥೆ ಜಾರಿಗೆ ಬರುತ್ತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಭಾರತದಾದ್ಯಂತ ಉಪಗ್ರಹ ಅಥವಾ ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆಯನ್ನು ಯಾವಾಗ ಜಾರಿಗೆ ತರಬೇಕು ಎನ್ನುವ ಕುರಿತು ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (Ministry of Road Transport and Highways ) ಶುಕ್ರವಾರ ಸ್ಪಷ್ಟಪಡಿಸಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಸದ್ಯ ಫಾಸ್ಟ್‌ಟ್ಯಾಗ್ ಅನ್ನೇ ಬಳಸಲಾಗುತ್ತದೆ. ಹೀಗಾಗಿ ಬಳಕೆದಾರರು ತಮ್ಮ ಫಾಸ್ಟ್‌ಟ್ಯಾಗ್ ವ್ಯಾಲೆಟ್‌ಗಳನ್ನು ಯುಪಿಐ ಅಥವಾ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಿ ತಡೆರಹಿತ ಟೋಲ್ ಪಾವತಿಗಳನ್ನು ನಡೆಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಉಪಗ್ರಹ ಆಧಾರಿತ ಟೋಲಿಂಗ್ ವ್ಯವಸ್ಥೆ ಮೇ 1ರಿಂದ ಪ್ರಾರಂಭಿಸಲಾಗುತ್ತದೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಇದು ಸುಳ್ಳು. ದೇಶಾದ್ಯಂತ ಉಪಗ್ರಹ ಆಧಾರಿತ ಟೋಲಿಂಗ್ ಅನ್ನು ಅನುಷ್ಠಾನಗೊಳಿಸುವ ಬಗ್ಗೆ ಇನ್ನೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಥವಾ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
ಹೆದ್ದಾರಿಗಳಲ್ಲಿನ ಒತ್ತಡ ಕಡಿಮೆ ಮಾಡಲು ANPR-FASTag ಆಧಾರಿತ ಹೊಸ ಹೈಬ್ರಿಡ್ ಟೋಲಿಂಗ್ ವ್ಯವಸ್ಥೆಯನ್ನು ನವದೆಹಲಿ- ಮುಂಬೈ ಕಾರಿಡಾರ್‌ನಂತಹ ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಇದನ್ನು ಕೂಡ ಇನ್ನೂ ರಾಷ್ಟ್ರವ್ಯಾಪಿ ಅನುಷ್ಠಾನಕ್ಕೆ ಯೋಜನೆ ಮಾಡಲಾಗಿಲ್ಲ. ಇದರ ಅನುಷ್ಠಾನವು ಯೋಜನೆಯ ಯಶಸ್ಸು ಮತ್ತು ಬಳಕೆದಾರರ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿದೆ.

ANPR-FASTag ಟೋಲಿಂಗ್ ವ್ಯವಸ್ಥೆ ಎಂದರೇನು?
ಇದು ಹೆದ್ದಾರಿಯಲ್ಲಿ ತಡೆಯನ್ನು ಕಡಿಮೆ ಟೋಲಿಂಗ್ ವ್ಯವಸ್ಥೆಯ ಹೊಸ ಟೋಲ್ ಸಂಗ್ರಹ ತಂತ್ರಜ್ಞಾನವಾಗಿದೆ. ಇದು ಸ್ವಯಂಚಾಲಿತವಾಗಿ ನಂಬರ್ ಪ್ಲೇಟ್ ಅನ್ನು ಗುರುತಿಸುತ್ತದೆ. ಇದಕ್ಕಾಗಿ ಕ್ಯಾಮೆರಾಗಳನ್ನು ಅಸ್ತಿತ್ವದಲ್ಲಿರುವ ಫಾಸ್ಟ್‌ಟ್ಯಾಗ್ ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದೆ. ಈ ವ್ಯವಸ್ಥೆಯು ತಡೆರಹಿತ ಮತ್ತು ತಡೆ-ಮುಕ್ತ ಟೋಲಿಂಗ್‌ಗೆ ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ನಿಲ್ಲಬೇಕಾಗಿಲ್ಲ. ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಟೋಲ್ ಬೂತ್‌ಗಳಲ್ಲಿ ನಿರಂತರ ಸಂಚಾರಕ್ಕೆ ಅನುವು ಮಾಡಿಕೊಡುವುದು ಇದರ ಗುರಿಯಾಗಿದೆ. ಟೋಲ್ ಪಾವತಿಸದ ವಾಹನಗಳಿಗೆ ಇ-ನೋಟೀಸ್ ಕಳುಹಿಸಲಾಗುತ್ತದೆ. ಟೋಲ್ ಪಾವತಿಸಲು ವಿಫಲವಾದರೆ VAHAN ವ್ಯವಸ್ಥೆಯ ಅಡಿಯಲ್ಲಿ ಫಾಸ್ಟ್‌ಟ್ಯಾಗ್ ಅಮಾನತು ಮಾಡಬಹುದು ಮತ್ತು ದಂಡ ಕೂಡ ವಿಧಿಸಬಹುದು.
ಸದ್ಯಕ್ಕೆ ಆಯ್ದ ಸ್ಥಳಗಳಲ್ಲಿ ಈ ವ್ಯವಸ್ಥೆ ಸ್ಥಾಪನೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈಗಾಗಲೇ ಬಿಡ್‌ಗಳನ್ನು ಆಹ್ವಾನಿಸಿದೆ. ಆದರೆ ಇದು ಸೀಮಿತ ಪ್ರಯೋಗ. ದೇಶಾದ್ಯಂತ ಈ ವ್ಯವಸ್ಥೆ ಸ್ಥಾಪನೆಗೆ ಯಾವುದೇ ಯೋಜನೆ ಹಾಕಿಕೊಳ್ಳಲಾಗಿಲ್ಲ.
ಇದನ್ನೂ ಓದಿ: Om Prakash Murder Case: ಬೆಂಗಳೂರಲ್ಲಿ ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಬರ್ಬರ ಹತ್ಯೆ; ಪತ್ನಿಯಿಂದಲೇ ಕೃತ್ಯ ಶಂಕೆ!
ಹೇಗೆ ಕಾರ್ಯನಿರ್ವಹಿಸುತ್ತದೆ?
- ಸ್ವಯಂಚಾಲಿತವಾಗಿ ವಾಹನಗಳ ಸಂಖ್ಯೆಯನ್ನು ಗುರುತಿಸುತ್ತದೆ.
- ವಿಂಡ್‌ಶೀಲ್ಡ್‌ಗೆ ಅಂಟಿಸಲಾದ ಟ್ಯಾಗ್ ಅನ್ನು RFID ರೀಡರ್‌ಗಳು ಸ್ಕ್ಯಾನ್ ಮಾಡಿ ಬಳಕೆದಾರರ ಪ್ರಿಪೇಯ್ಡ್ ಖಾತೆಯಿಂದ ಟೋಲ್ ಶುಲ್ಕವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸುತ್ತದೆ.
- ಟೋಲ್ ಪ್ಲಾಜಾಗಳಲ್ಲಿರುವ ಅಡೆತಡೆಗಳನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತದೆ. ಮುಕ್ತ ಹರಿವಿಗೆ ಅನುವು ಮಾಡಿಕೊಡುತ್ತದೆ.
- ವಾಹನವು ಟೋಲ್ ವಲಯವನ್ನು ಸಮೀಪಿಸುತ್ತಿದ್ದಂತೆ ANPR ಕ್ಯಾಮೆರಾಗಳು ನಂಬರ್ ಪ್ಲೇಟ್ ಅನ್ನು ದಾಖಲಿಸಿಕೊಳ್ಳುತ್ತದೆ ಮತ್ತು RFID ರೀಡರ್‌ಗಳು ವಾಹನದ ಮೇಲಿನ ಫಾಸ್ಟ್‌ಟ್ಯಾಗ್ ಅನ್ನು ಪತ್ತೆ ಮಾಡುತ್ತದೆ.
- ಸಿಸ್ಟಮ್ ನಂಬರ್ ಪ್ಲೇಟ್ ಅನ್ನು ಫಾಸ್ಟ್‌ಟ್ಯಾಗ್ ಖಾತೆಯೊಂದಿಗೆ ಹೊಂದಿಸಿ ಧೃಡೀಕರಿಸುತ್ತದೆ.
- ಧೃಡೀಕರಣವಾದ ಬಳಿಕ ಲಿಂಕ್ ಮಾಡಲಾದ ಫಾಸ್ಟ್‌ಟ್ಯಾಗ್ ಖಾತೆಯಿಂದ ಟೋಲ್ ಅನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಇದಕ್ಕಾಗಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳನ್ನು ನಿಲ್ಲಿಸುವ ಅಥವಾ ನಿಧಾನಗೊಳಿಸುವ ಅಗತ್ಯವಿಲ್ಲ.
- ವಾಹನವು ಫಾಸ್ಟ್‌ಟ್ಯಾಗ್ ಹೊಂದಿಲ್ಲದಿದ್ದರೆ ಅಥವಾ ಸಾಕಷ್ಟು ಬ್ಯಾಲೆನ್ಸ್ ಹೊಂದಿಲ್ಲದಿದ್ದರೆ ANPR ವ್ಯವಸ್ಥೆಯು ನಂಬರ್ ಪ್ಲೇಟ್ ಅನ್ನು ಲಾಗ್ ಮಾಡುತ್ತದೆ. ಪೋಸ್ಟ್‌ಪೇಯ್ಡ್ ಬಿಲ್ಲಿಂಗ್ ಅಥವಾ ದಂಡದ ಜಾರಿ ಮೂಲಕ ಟೋಲ್ ಅನ್ನು ಪಾವತಿಸಬೇಕಾಗುತ್ತದೆ.