World Liver Day 2025: ಇಂದು ವಿಶ್ವ ಯಕೃತ್ ದಿನ: ಆಹಾರವನ್ನೇ ಔಷಧವಾಗಿಸೋಣ
ಹೆಪಟೈಟಿಸ್ ಎ, ಹೆಪಟೈಟಿಸ್ ಬಿ, ಲಿವರ್ ಸಿರೋಸಿಸ್, ಲಿವರ್ ಕ್ಯಾನ್ಸರ್, ಅಲ್ಕೋಹಾಲ್ ಮೂಲದಿಂದಲ್ಲದೆ ಫ್ಯಾಟಿ ಲಿವರ್ ಮುಂತಾದ ತೊಂದರೆಗಳು ಯಕೃತ್ತನ್ನು ಅತಿಯಾಗಿ ಕಾಡುತ್ತಿವೆ. ಹಾಗಾಗಿ ಪಿತ್ತಜನಕಾಂಗದ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಿ, ಈ ಬಗ್ಗೆ ಕಾಳಜಿ ತೆಗೆದುಕೊಳ್ಳುವಂತೆ ಜನರನ್ನು ಪ್ರಚೋದಿಸುವ ಉದ್ದೇಶದಿಂದ ಏ. 19 ಅನ್ನು ವಿಶ್ವ ಯಕೃತ್ ದಿನ ಎಂದು ಗುರುತಿಸಲಾಗಿದೆ.

World Liver Day 2025

ಬೆಂಗಳೂರು: ಆಹಾರ ಮತ್ತು ಜೀವನ ಶೈಲಿಯ ಬಗ್ಗೆ ವಿಪರೀತ ಎನ್ನುವಷ್ಟು ಅಡ್ಡದಾರಿಗಳಿರುವ ಇಂದಿನ ಜಗತ್ತಿನಲ್ಲಿ, ಮಾನವ ದೇಹದ ಒಂದೊಂದೇ ಅಂಗಾಂಗಗಳು ಜಖಂಗೊಳ್ಳುತ್ತಿರುವ ವರ್ತಮಾನಗಳು ಹೆಚ್ಚುತ್ತಿವೆ. ಅದರಲ್ಲೂ ನಾವು ತಿಂದಿದ್ದನ್ನೆಲ್ಲಾ ಚೂರ್ಣಿಸುವ ಹೊಣೆಯನ್ನು ಹೊತ್ತಿರುವ ಪಿತ್ತಜನಕಾಂಗ ಸದ್ದಿಲ್ಲದೆ ಅನಾರೋಗ್ಯದತ್ತ ಸಾಗುತ್ತಿದೆ. ಹೆಪಟೈಟಿಸ್ ಎ, ಹೆಪಟೈಟಿಸ್ ಬಿ, ಲಿವರ್ ಸಿರೋಸಿಸ್, ಲಿವರ್ ಕ್ಯಾನ್ಸರ್, ಅಲ್ಕೋಹಾಲ್ ಮೂಲದಿಂದಲ್ಲದೆ ಫ್ಯಾಟಿ ಲಿವರ್ ಮುಂತಾದ ತೊಂದರೆಗಳು ಯಕೃತ್ತನ್ನು ಅತಿಯಾಗಿ ಕಾಡುತ್ತಿವೆ. ಹಾಗಾಗಿ ಪಿತ್ತಜನಕಾಂಗದ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಿ, ಈ ಬಗ್ಗೆ ಕಾಳಜಿ ತೆಗೆದುಕೊಳ್ಳುವಂತೆ ಜನರನ್ನು ಪ್ರಚೋದಿಸುವ ಉದ್ದೇಶದಿಂದ ಏ. 19 ಅನ್ನು ವಿಶ್ವ ಯಕೃತ್ ದಿನ (World Liver Day) ಎಂದು ಗುರುತಿಸಲಾಗಿದೆ.
ಶುಚಿಯಾದ ಮತ್ತು ಸತ್ವಭರಿತ ಆಹಾರವು ಬಹಳಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಬಲ್ಲದು. ಹಾಗೆಂದೇ ʻಆಹಾರವೇ ಔಷಧʼ ಎಂಬ ಘೋಷವಾಕ್ಯವನ್ನು ಈ ಸಾಲಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಆಹಾರದಷ್ಟು ಪ್ರಮಾಣದಲ್ಲಿ ಔಷಧಿ ತೆಗೆದುಕೊಳ್ಳುವ ಅವಸ್ಥೆಗೆ ಹೋಗದಿರಿ, ಆಹಾರವನ್ನು ಹಿತ-ಮಿತವಾಗಿ ಸೇವಿಸಿ ಎನ್ನುವುದನ್ನು ಸಾರುವಂತಿದೆ. ಮೆದುಳಿನ ನಂತರ, ದೇಹದ ಎರಡನೇ ದೊಡ್ಡ ಅಂಗವೆಂದರೆ ಯಕೃತ್ತು. ದೇಹದಲ್ಲಿ ಒಂದಿಷ್ಟು ಮಹತ್ವದ ಹೊಣೆಗಾರಿಕೆಯ ನಿರ್ವಹಣೆ ಪಿತ್ತಜನಕಾಂಗದ ಪಾಲಿಗಿದೆ. ದೇಹದ ಡಿಟಾಕ್ಸ್, ಅಂದರೆ ದೇಹವನ್ನುವಿಷಮುಕ್ತ ಮಾಡುವುದರಿಂದ ಹಿಡಿದು, ದೇಹದ ಚಯಾಪಚಯ ನಿಭಾಯಿಸಿ, ಪೋಷಕಾಂಶಗಳನ್ನು ದಾಸ್ತಾನು ಮಾಡಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಆಹಾರ ಪಚನ ಮಾಡುವ ಪಿತ್ತರಸ ಅಥವಾ ಬೈಲ್ ಜ್ಯೂಸ್ ಉತ್ಪಾದನೆಯವರೆಗೆ ದಿನವಿಡೀ ಕೆಲಸ ಮಾಡುತ್ತಿರುತ್ತದೆ ಯಕೃತ್ತು. ಇದನ್ನು ಕ್ಷೇಮವಾಗಿ ಇರಿಸಿಕೊಳ್ಳುವುದರಿಂದ ಬೊಜ್ಜು, ಕೊಲೆ ಸ್ಟ್ರಾಲ್, ಮಧುಮೇಹ ಮುಂತಾದ ಹಲವಾರು ಸಮಸ್ಯೆಗಳನ್ನು ದೂರ ಇರಿಸಲು ಸಾಧ್ಯ.
ತೊಂದರೆಗಳು ಹಲವು: ಕೆಲವು ರೀತಿಯ ವೈರಸ್ ಸೋಂಕುಗಳು ಯಕೃತ್ತಿಗೆ ಹಾನಿ ಮಾಡಬಲ್ಲವು. ಉದಾ, ಹೆಪಟೈಟಿಸ್ ಎ, ಬಿ, ಸಿಯಂಥ ರೋಗಾಣುಗಳು. ಇದಲ್ಲದೆ, ಅಲ್ಕೋಹಾಲ್ ನಿಂದಾಗುವ ಫ್ಯಾಟಿ ಲಿವರ್ (ಅಲ್ಕೋಹಾಲ್ ಜನ್ಯವಲ್ಲದ ಫ್ಯಾಟಿಲಿವರ್ ಸಮಸ್ಯೆಯೂ ಇತ್ತೀಚೆಗೆ ಸಿಕ್ಕಾಪಟ್ಟೆ ಹೆಚ್ಚಿದೆ), ಆಟೋಇಮ್ಯೂನ್ ಸಮಸ್ಯೆಯಿಂದಾಗಿ ಅಮರಿಕೊಳ್ಳುವ ಲಿವರ್ ತೊಂದರೆಗಳು- ಹೀಗೆ ಹಲವು ಸಮಸ್ಯೆಗಳು ಪಿತ್ತಜನಕಾಂಗವನ್ನು ಕಾಡಬಹುದು. ಕಣ್ಣು, ಚರ್ಮ ಹಳದಿಯಾಗುವುದು, ಕಣ್ಣಿನಲ್ಲಿ ಬಿಳಿಯ ಕಲೆಗಳು, ಅಕಾರಣವಾಗಿ ತೂಕ ಇಳಿಯುವುದು, ಅತೀತ ಸುಸ್ತು ಇಂಥ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರಲ್ಲಿ ಯಕೃತ್ ತಪಾಸಣೆ ಮಾಡಿಸುವುದು ಅಗತ್ಯ.
ಪಿತ್ತಜನಕಾಂಗದ ಆರೋಗ್ಯಕ್ಕೆ ಇವು ಬೇಕು
ಗ್ರೀನ್ ಟೀ: ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಈ ಪೇಯ, ದೇಹದಲ್ಲಿ ಉರಿಯೂತ ಶಮನ ಮಾಡಬಲ್ಲದು. ಇದರಿಂದ ಯಕೃತ್ತಿನ ಆರೋಗ್ಯವೂ ಸುಧಾರಿಸುತ್ತದೆ.
ಹಸಿರು ತರಕಾರಿಗಳು: ಎಲೆಕೋಸು, ಹೂಕೋಸು, ಬ್ರೊಕೊಲಿಯಂಥ ತರಕಾರಿಗಳು ಸಹ ಪಿತ್ತಜನಕಾಂಗದ ಆರೋಗ್ಯ ರಕ್ಷಣೆಗೆ ನೆರವಾಗಬಲ್ಲವು.
ಬೀಜಗಳು: ಆರೋಗ್ಯಕರ ಕೊಬ್ಬು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಬಾದಾಮಿ, ವಾಲ್‌ನಟ್ ಮುಂತಾದ ಬೀಜಗಳು ಲಿವರ್‌ನ ಕ್ಷಮತೆಯನ್ನು ಹೆಚ್ಚಿಸಬಲ್ಲವು
ಬೆಳ್ಳುಳ್ಳಿ: ಪಿತ್ತಜನಕಾಂಗದ ಉರಿಯೂತವನ್ನು ಕಡಿಮೆ ಮಾಡಿ, ಉತ್ಕರ್ಷಣ ನಿರೋಧಕವಾಗಿಯೂ ಬೆಳ್ಳುಳ್ಳಿ ಕೆಲಸ ಮಾಡಬಲ್ಲದು.
ಬೆರ್ರಿಗಳು: ಬ್ಲೂಬೆರ್ರಿ, ಸ್ಟ್ರಾಬೆರ್ರಿಯಂತ ಹಣ್ಣುಗಳು ದೇಹಕ್ಕೆ ಹೆಚ್ಚಿನ ನಾರಿನಂಶದೊಂದಿಗೆ ಪಿತ್ತಜನಕಾಂಗದ ರಕ್ಷಣೆಗೆ ಅಗತ್ಯ ಸತ್ವಗಳನ್ನು ನೀಡಬಲ್ಲವು.
ಇದನ್ನು ಓದಿ: Healthy Food: ಹಸಿ ತರಕಾರಿ ಅಥವಾ ಬೇಯಿಸಿದ ತರಕಾರಿ! ಯಾವುದು ಆರೋಗ್ಯಕ್ಕೆ ಉತ್ತಮ?
ಇವು ಬೇಡ
ಸಂಸ್ಕರಿತ ಆಹಾರಗಳು, ಕೊಬ್ಬಿನ ತಿನಿಸುಗಳು, ಸಕ್ಕರೆಭರಿತ ತಿಂಡಿಗಳು, ಅತಿಯಾದ ಉಪ್ಪು-ಖಾರ, ರಿಫೈನ್ ಮಾಡಿದಂಥ ಯಾವುದೇ ಆಹಾರಗಳು, ಆಲ್ಕೋಹಾಲ್ ಮುಂತಾದವು ಯಕೃತ್‌ಗೆ ನಿಶ್ಚಿತವಾಗಿ ಹಾನಿಯನ್ನು ಮಾಡುತ್ತವೆ. ಆಹಾರದಲ್ಲಿ ಕೆಲವು ಆರೋಗ್ಯಕರ ಮಾರ್ಪಾಡುಗಳನ್ನು ಮಾಡಿಕೊಳ್ಳುವುದರಿಂದ ಯಕೃತ್ತಿನ ಸ್ವಾಸ್ಥ್ಯ ಗಣನೀಯ ಪ್ರಮಾಣ ದಲ್ಲಿ ಸುಧಾರಿಸಬಲ್ಲದು. ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡಿ, ಅನಗತ್ಯ ಔಷಧಿಗಳನ್ನು ತಿನ್ನದೆ, ಸ್ವಯಂವೈದ್ಯ ಮಾಡಿಕೊಳ್ಳದೆ ಇರುವಂಥ ಸರಳ ಮತ್ತು ಧನಾತ್ಮಕ ಬದಲಾವಣೆ ಗಳಿಂದ ನಮ್ಮ ಯಕೃತ್ತನ್ನು ಕ್ಷೇಮವಾಗಿ ಕಾಪಾಡಿಕೊಂಡು, ರೋಗಮುಕ್ತರಾಗಿ ಬದುಕುವುದಕ್ಕೆ ಸಾಧ್ಯವಿದೆ.