Om Prakash Murder Case: ಬೆಂಗಳೂರಲ್ಲಿ ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಬರ್ಬರ ಹತ್ಯೆ; ಪತ್ನಿಯಿಂದಲೇ ಕೃತ್ಯ ಶಂಕೆ!
Om Prakash Murder Case: ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಘಟನೆ ನಡೆದಿದೆ. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಮೃತದೇಹ ಮನೆಯಲ್ಲೇ ಪತ್ತೆಯಾಗಿದ್ದರಿಂದ ಹೆಂಡತಿಯೇ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಅವರ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಬೆಂಗಳೂರು: ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರ ಬರ್ಬರ ಹತ್ಯೆಯಾಗಿದೆ. ನಗರದ ಎಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ (Om Prakash Murder Case) ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಮನೆಯಲ್ಲೇ ಮೃತದೇಹ ಪತ್ತೆಯಾಗಿದ್ದರಿಂದ ಹೆಂಡತಿಯೇ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಓಂ ಪ್ರಕಾಶ್ ಅವರ ಹೆಂಡತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರಿಗೆ 68 ವರ್ಷ ವಯಸ್ಸಾಗಿತ್ತು. 1981ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಅವರು ರಾಜ್ಯದ 38ನೇ ಡಿಜಿ ಮತ್ತು ಐಜಿಪಿಯಾಗಿದ್ದರು. 2015ರ ಅವಧಿಯಲ್ಲಿ ಡಿಜಿ ಮತ್ತು ಐಜಿಪಿಯಾಗಿದ್ದ ಓಂ ಪ್ರಕಾಶ್ ಅವರು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಿದ್ದರು. ಎಚ್ಎಸ್ಆರ್ ಲೇಔಟ್‌ನ ಮನೆಯಲ್ಲಿ ಓಂ ಪ್ರಕಾಶ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ.
ಓಂ ಪ್ರಕಾಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ಅವರು ತಮ್ಮ ಪತ್ನಿ ಪಲ್ಲವಿ ಜತೆ ವಾಸಿಸುತ್ತಿದ್ದರು. ಕೆಲವು ದಿನಗಳಿಂದ ಗಂಡ ಹೆಂಡತಿಯ ನಡುವೆ ಮನಸ್ತಾಪವಿತ್ತು ಎನ್ನಲಾಗಿದೆ. ವೈಯಕ್ತಿಕ ವಿಚಾರಗಳಲ್ಲಿ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಇದೇ ಕಾರಣಕ್ಕೆ ಚಾಕುವಿನಿಂದ ಇರಿದು ಪತ್ನಿಯೇ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಓಂ ಪ್ರಕಾಶ್ ಅವರ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ | Murder Case: ಬೆಳ್ಳಂಬೆಳಿಗ್ಗೆ ನಡುರಸ್ತೆಯಲ್ಲೇ ನಡೀತು ನಗರಸಭೆ ಮಾಜಿ ಸದಸ್ಯನ ಬರ್ಬರ ಹತ್ಯೆ
ಆಸ್ತಿ ವಿಚಾರಕ್ಕೆ ನಡೆಯಿತಾ ಕೊಲೆ?
ಓಂ ಪ್ರಕಾಶ್ ಕುಟುಂಬಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಡಿಜಿ ಮತ್ತು ಐಜಿಪಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಇದಕ್ಕೆ ಸಂಬಂಧಿಸಿ ಆಗಾಗ್ಗೆ ಮನೆಯಲ್ಲಿ ಜಗಳ ಕೂಡ ನಡೆಯುತ್ತಿತ್ತು. ಇದೇ ಜಗಳ ಕೊಲೆಗೆ ಕಾರಣವಾಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಮತ್ತೊಂದೆಡೆ, ಓಂ ಪ್ರಕಾಶ್ ಅವರು ಸಂಪಾದನೆ ಮಾಡಿದ್ದ ಆಸ್ತಿಯನ್ನು ಹೆಂಡತಿಗೆ ಕೊಡದೇ ನೇರವಾಗಿ ಮಗನ ಹೆಸರಿಗೆ ಬರೆದಿದ್ದರು. ಇದೇ ಕಾರಣಕ್ಕೆ ಹೆಂಡತಿ ಕೋಪಗೊಂಡು ಕೊಲೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ತನಿಖೆಯ ನಂತರವೇ ಸತ್ಯಾಂಶ ಹೊರಬರಬೇಕಿದೆ.
ಇನ್ನು ಓಂ ಪ್ರಕಾಶ್ ಬಿಹಾರ ಮೂಲದವರು. ಬಿಹಾರ ರಾಜ್ಯದ ಚಂಪಾರಣ್ ಜಿಲ್ಲೆಯ ಓಂ ಪ್ರಕಾಶ್ ಅವರು ಐಪಿಎಸ್ ಅಧಿಕಾರಿಯಾದ ನಂತರ ಮೊದಲ ಬಾರಿಗೆ ಅಂದಿನ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಎಎಸ್‌ಪಿ ಆಗಿ ರಾಜ್ಯದಲ್ಲಿ ವೃತ್ತಿ ಆರಂಭಿಸಿದ್ದರು. ಇದಾದ ನಂತರ ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ರಾಜ್ಯ ವಿಜಿಲೆನ್ಸ್ ಸೆಲ್‌ನ ಎಸ್‌ಪಿಯಾಗಿ, ಕರ್ನಾಟಕ ಲೋಕಾಯುಕ್ತದಲ್ಲಿ, ಅಗ್ನಿಶಾಮಕ ದಳದ ಡಿಐಜಿ, ಸಿಐಡಿ ಐಜಿಪಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು. 2015 ಮಾರ್ಚ್‌ನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕವಾಗಿದ್ದ ಓಂ ಪ್ರಕಾಶ್ ಅವರು 2017ರಲ್ಲಿ ನಿವೃತ್ತಿ ಹೊಂದಿದ್ದರು.