ವಿರಾಟ್ ಕೊಹ್ಲಿಯಿಂದ ಪಿವಿ ಸಿಂಧೂ: ಭಾರತೀಯ ಸೇನೆಗೆ ಬೆಂಬಲಿಸಿದ ಭಾರತದ ಸ್ಟಾರ್ ಕ್ರೀಡಾಪಟುಗಳು!
ಭಾರತ ಹಾಗೂ ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಭಾಗಗಳಲ್ಲಿ ಉದ್ವಿಗ್ನತೆಯ ಪರಿಸ್ಥಿತಿಗಳ ನಿಮಿತ್ತ ಭಾರತೀಯ ಸೇನೆಗೆ ನೀರಜ್ ಚೋಪ್ರಾ, ಪಿವಿ ಸಿಂಧೂ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ದೇಶದ ಪ್ರಮುಖ ಕ್ರೀಡಾಪಟುಗಳು ಬೆಂಬಲ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಇವರು ನಮ್ಮ ಸೇನೆಗೆ ಸಾಥ್ ನೀಡಿದ್ದಾರೆ.



ರೋಹಿತ್ ಶರ್ಮಾ
ಶುಕ್ರವಾರ ರೋಹಿತ್ ಶರ್ಮಾ ತಮ್ಮ ಟ್ವಿಟರ್ನಲ್ಲಿ "ಪ್ರತಿಯೊಂದು ಕ್ಷಣ, ಪ್ರತಿ ನಿರ್ಧಾರದೊಂದಿಗೆ, ನಮ್ಮ ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯ ಬಗ್ಗೆ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ. ನಮ್ಮ ಯೋಧರು ನಮ್ಮ ದೇಶದ ಹೆಮ್ಮೆಗಾಗಿ ನಿಲ್ಲುತ್ತಾರೆ. ಪ್ರತಿಯೊಬ್ಬ ಭಾರತೀಯನು ಜವಾಬ್ದಾರಿಯುತವಾಗಿರುವುದು ಮತ್ತು ಯಾವುದೇ ನಕಲಿ ಸುದ್ದಿಗಳನ್ನು ಹರಡುವುದನ್ನು ಅಥವಾ ನಂಬುವುದನ್ನು ತಪ್ಪಿಸುವುದು ಮುಖ್ಯ. ಎಲ್ಲರೂ ಸುರಕ್ಷಿತವಾಗಿರಿ. ಆಪರೇಷನ್ ಸಿಂಧೂರ್, ಜೈ ಹಿಂದ್" ಎಂದು ಬರೆದಿದ್ದಾರೆ.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ "ಈ ಕಷ್ಟದ ಸಮಯದಲ್ಲಿ ನಮ್ಮ ದೇಶವನ್ನು ರಕ್ಷಿಸಿದ್ದಕ್ಕಾಗಿ ನಾವು ನಮ್ಮ ಸಶಸ್ತ್ರ ಪಡೆಗಳೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಮತ್ತು ಅವರಿಗೆ ನಮಸ್ಕರಿಸುತ್ತೇವೆ. ನಮ್ಮ ವೀರರ ಅಚಲ ಧೈರ್ಯ ಮತ್ತು ಅವರು ಮತ್ತು ಅವರ ಕುಟುಂಬಗಳು ನಮ್ಮ ಮಹಾನ್ ರಾಷ್ಟ್ರಕ್ಕಾಗಿ ಮಾಡುವ ತ್ಯಾಗಗಳಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ,": ಎಂದು ಬರೆದಿದ್ದಾರೆ.

ನೀರಜ್ ಚೋಪ್ರಾ
"ಭಯೋತ್ಪಾದನೆಯ ವಿರುದ್ಧ ನಮ್ಮ ದೇಶಕ್ಕಾಗಿ ಹೋರಾಡುತ್ತಿರುವ ನಮ್ಮ ಕೆಚ್ಚೆದೆಯ ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಈ ಸಮಯದಲ್ಲಿ ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಪಾತ್ರವನ್ನು ನಿರ್ವಹಿಸೋಣ ಮತ್ತು ಮಾರ್ಗಸೂಚಿಗಳನ್ನು ಅನುಸರಿಸೋಣ," ಎಂದು ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಟ್ವೀಟ್ ಮಾಡಿದ್ದಾರೆ.

ಪಿವಿ ಸಿಂಧೂ
"ಭಾರತೀಯ ಸಶಸ್ತ್ರ ಪಡೆಗಳ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರಿಗೆ - ನಿಮ್ಮ ಧೈರ್ಯ, ಶಿಸ್ತು ಮತ್ತು ತ್ಯಾಗ ನಮ್ಮ ರಾಷ್ಟ್ರದ ಆತ್ಮ.' ಎಂದು ಪೋಸ್ಟ್ ಮಾಡಿದ್ದಾರೆ. ಆಪರೇಷನ್ ಸಿಂಧೂರ್ ನಂತಹ ಕ್ಷಣಗಳಲ್ಲಿ, ನಮ್ಮ ತ್ರಿವರ್ಣ ಧ್ವಜವನ್ನು ಎತ್ತರಕ್ಕೆ ಹಾರಿಸುತ್ತಿರುವ ಮೌನ ಶಕ್ತಿ ಮತ್ತು ನಿಸ್ವಾರ್ಥ ಸೇವೆಯನ್ನು ನಾವು ನೆನಪಿಸಿಕೊಳ್ಳುತ್ತೇವೆ. ಭಾರತ ನಿಮ್ಮೊಂದಿಗೆ ನಿಂತಿದೆ. ಜೈ ಹಿಂದ್," ಎಂದು ಪೋಸ್ಟ್ ಹಾಕಿದ್ದಾರೆ.

ವೀರೇಂದ್ರ ಸೆಹ್ವಾಗ್
"ಮೌನವಾಗಿ ಉಳಿಯುವ ಆಯ್ಕೆ ಇದ್ದಾಗಲೂ ಪಾಕಿಸ್ತಾನ ಯುದ್ಧವನ್ನು ಆರಿಸಿಕೊಂಡಿದೆ. ಅವರು ತಮ್ಮ ಭಯೋತ್ಪಾದಕ ಆಸ್ತಿಗಳನ್ನು ರಕ್ಷಿಸಲು ಮುಂದೆ ಬಂದಿದ್ದಾರೆ. ಅವರ ಬಗ್ಗೆ ತುಂಬಾ ಮಾತನಾಡುತ್ತಾರೆ. ನಮ್ಮ ಪಡೆಗಳು ಅತ್ಯಂತ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುತ್ತವೆ," ಎಂದು ಸೆಹ್ವಾಗ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶಿಖರ್ ಧವನ್
ಭಾರತ ತಂಡದ ಮಾಜಿ ಆರಂಭಿಕ ಶಿಖರ್ ಧವನ್ ಕೂಡ ಭಾರತೀಯ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ್ದಾರೆ. "ನಮ್ಮ ಗಡಿಗಳನ್ನು ಬಲವಾಗಿ ರಕ್ಷಿಸಿದ್ದಕ್ಕಾಗಿ ಮತ್ತು ಜಮ್ಮುವಿನ ಮೇಲೆ ಡ್ರೋನ್ ದಾಳಿಯನ್ನು ತಡೆಗಟ್ಟಿದ್ದಕ್ಕಾಗಿ ನಮ್ಮ ಧೈರ್ಯಶಾಲಿ ಹೃದಯಗಳಿಗೆ ಗೌರವಗಳು. ಭಾರತ ಬಲಿಷ್ಠವಾಗಿದೆ. ಜೈ ಹಿಂದ್," ಎಂದು ಅವರು ಟ್ವೀಟ್ ಮಾಡಿದ್ದಾರೆ.