Chandrashekhertanaya Column: ಪತ್ರಿಕೆಯ ಓದಿನ ಪುಳಕಕ್ಕೆ ನಾಂದಿ ಹಾಡಿದ ದಿನ
1843ರ ಜುಲೈ 1ರಂದು ರಾಜ್ಯದ ಮಂಗಳೂರಿನಲ್ಲಿ, ಬಾಸೆಲ್ ಮಿಷನ್‌ನವರ ಮುದ್ರಣಾಲಯದಲ್ಲಿ ಪ್ರಕಟಗೊಂಡ ಪತ್ರಿಕೆಯೇ ‘ಮಂಗಳೂರು ಸಮಾಚಾರ’. ಕನ್ನಡದ ಪ್ರಪ್ರಥಮ ಪತ್ರಿಕೆ ಎಂಬ ಹೆಗ್ಗಳಿಕೆಯ ‘ಮಂಗಳೂರು ಸಮಾಚಾರ’ದ ಸಂಪಾದಕರಾಗಿದ್ದವರು ರೆವರೆಂಡ್ ಹರ್ಮನ್ ಫ್ರೆಡರಿಕ್ ಮೋಗ್ಲಿಂಗ್. ಇವರ ಹೆಸರು ಕೇಳಿದಾಗ, ವಿದೇಶಿ ವ್ಯಕ್ತಿಯೊಬ್ಬರು ಕನ್ನಡದ ಪತ್ರಿಕೆ ಯೊಂದರ ಸಂಪಾದಕರಾಗಿದ್ದು ಹೇಗೆ? ಎಂಬ ಆಶ್ಚರ್ಯಭರಿತ ಪ್ರಶ್ನೆ ಮೂಡುವುದು ಸಹಜ


ಸುದ್ದಿಸುಗ್ಗಿ
ಚಂದ್ರಶೇಖರತನಯ
(ಇಂದು ಕನ್ನಡ ಪತ್ರಿಕಾ ದಿನಾಚರಣೆ)
ಪ್ರತಿ ವರ್ಷದ ಜುಲೈ 1 ಕರ್ನಾಟಕದ ಪತ್ರಿಕಾ ಪ್ರಪಂಚದವರ ಪಾಲಿಗೆ ಸಂಭ್ರಮದ ದಿನ. ಏಕೆಂದರೆ ಅದು ಕನ್ನಡದ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ‘ಮಂಗಳೂರು ಸಮಾಚಾರ’ ವು ಪ್ರಕಟಗೊಂಡ ದಿನ. ಇದರ ಸವಿನೆನಪಿಗಾಗಿ ಪ್ರತಿ ವರ್ಷದ ಜುಲೈ 1ರಂದು ಕರ್ನಾಟಕದಲ್ಲಿ ‘ಪತ್ರಿಕಾ ದಿನ’ವನ್ನು ಆಚರಿಸಲಾಗುತ್ತದೆ.
ಪತ್ರಿಕಾ ರಂಗದ ವಿವಿಧ ಆಯಾಮಗಳ ಪರಿಚಯ, ಅದರ ಹಿನ್ನೆಲೆ, ಕಾಲಾನುಕಾಲಕ್ಕೆ ಈ ರಂಗವು ತನ್ನನ್ನು ಬದಲಾವಣೆಗಳಿಗೆ ಒಡ್ಡಿಕೊಂಡು ಬಂದ ಪರಿ ಮುಂತಾದ ಸಂಗತಿಗಳನ್ನು ಶ್ರೀಸಾಮಾನ್ಯ ರಿಗೆ ಅರುಹುವ ಉದ್ದೇಶದಿಂದ ‘ಪತ್ರಿಕಾ ದಿನಾಚರಣೆ’ಯ ಪರಿಪಾಠವು ಕರ್ನಾಟಕದಲ್ಲಿ ಜಾರಿಗೆ ಬಂದಿದೆ ಎಂಬುದು ಗಮನಾರ್ಹ.
1843ರ ಜುಲೈ 1ರಂದು ರಾಜ್ಯದ ಮಂಗಳೂರಿನಲ್ಲಿ, ಬಾಸೆಲ್ ಮಿಷನ್‌ನವರ ಮುದ್ರಣಾಲಯದಲ್ಲಿ ಪ್ರಕಟಗೊಂಡ ಪತ್ರಿಕೆಯೇ ‘ಮಂಗಳೂರು ಸಮಾಚಾರ’. ಕನ್ನಡದ ಪ್ರಪ್ರಥಮ ಪತ್ರಿಕೆ ಎಂಬ ಹೆಗ್ಗಳಿಕೆಯ ‘ಮಂಗಳೂರು ಸಮಾಚಾರ’ದ ಸಂಪಾದಕರಾಗಿದ್ದವರು ರೆವರೆಂಡ್ ಹರ್ಮನ್ ಫ್ರೆಡರಿಕ್ ಮೋಗ್ಲಿಂಗ್. ಇವರ ಹೆಸರು ಕೇಳಿದಾಗ, ವಿದೇಶಿ ವ್ಯಕ್ತಿಯೊಬ್ಬರು ಕನ್ನಡದ ಪತ್ರಿಕೆ ಯೊಂದರ ಸಂಪಾದಕರಾಗಿದ್ದು ಹೇಗೆ? ಎಂಬ ಆಶ್ಚರ್ಯಭರಿತ ಪ್ರಶ್ನೆ ಮೂಡುವುದು ಸಹಜ, ಆದರೆ ಇದು ನಿಜ.
ಜರ್ಮನ್ ಮೂಲದ ಮತಪ್ರಚಾರಕರಾಗಿದ್ದವರು ಹರ್ಮನ್ ಫ್ರೆಡೆರಿಕ್ ಮೋಗ್ಲಿಂಗ್. ಕೈಯಲ್ಲೊಂದು ಬೈಬಲ್ ಇಟ್ಟುಕೊಂಡು, ‘ಸುವಾರ್ತೆ’ಯ ಸಂದೇಶವನ್ನು ಜನಸಮುದಾಯದಲ್ಲಿ ಪಸರಿಸುವುದು ಅವರ ಹೆಗಲೇರಿದ್ದ ಕಾರ್ಯಭಾರ. ಬಾಸೆಲ್ ಮಿಷನ್ ನಿಯೋಜಿಸಿದ್ದ ಈ ಕಾರ್ಯದ ನಿಮಿತ್ತವಾಗಿ ಇವರು 1836ರಲ್ಲಿ ಮಂಗಳೂರಿಗೆ ಆಗಮಿಸಿದರು.
ಮತಪ್ರಚಾರವು ಅವರ ಉದ್ದೇಶವಾಗಿತ್ತಾದರೂ, ಸ್ಥಳೀಯ ಸಾಹಿತ್ಯ ಹಾಗೂ ಶಿಕ್ಷಣ ವಲಯದಲ್ಲಿ ಅವರಿಗೆ ಅಪಾರವಾದ ಆಸಕ್ತಿಯಿತ್ತು. ಅದನ್ನು ಸಮರ್ಥವಾಗಿ ಗ್ರಹಿಸಬೇಕೆಂದರೆ ಸ್ಥಳೀಯ ಭಾಷೆಯ ಕಲಿಕೆಯೂ ಅಗತ್ಯ ಎಂಬ ಸೂಕ್ಷ್ಮವನ್ನು ಮನಗಂಡ ಹರ್ಮನ್ ಮೋಗ್ಲಿಂಗ್ ಅವರು ಕನ್ನಡ, ತುಳು, ಕೊಂಕಣಿ ಇತ್ಯಾದಿ ಭಾಷೆಗಳನ್ನು ತೀವ್ರಾಸಕ್ತಿಯೊಂದಿಗೆ ಕಲಿತರು ಎಂಬುದು ಗಮನಿಸಬೇಕಾದ ಸಂಗತಿ.
ತರುವಾಯದಲ್ಲಿ ಅಂದಿನ ಕಾಲಘಟ್ಟದ, ಸ್ಥಳೀಯ ಪತ್ರಿಕೋದ್ಯಮದ ಸಾಧ್ಯತೆಗಳನ್ನು ಗ್ರಹಿಸಿ ಕೊಂಡು ‘ಮಂಗಳೂರು ಸಮಾಚಾರ’ ಪತ್ರಿಕೆಯ ಪ್ರಕಟಣೆಗೆ ಮುಂದಾದರು ಹರ್ಮನ್ ಮೋಗ್ಲಿಂಗ್. ಅಷ್ಟು ಹೊತ್ತಿಗಾಗಲೇ ಅವರಿಗೆ ಐರೋಪ್ಯ ಒಕ್ಕೂಟದ ಪತ್ರಿಕಾ ವಲಯದ ತಲಸ್ಪರ್ಶಿ ಜ್ಞಾನವಿತ್ತು. ಸಾಲದೆಂಬಂತೆ, ಐರೋಪ್ಯ ಭಾಷೆಗಳ ಮೇಲೆ ಅಪಾರ ಹಿಡಿತವೂ ಇತ್ತು.
ಹೀಗಾಗಿ ಕನ್ನಡದ ‘ಮಂಗಳೂರು ಸಮಾಚಾರ’ ಪತ್ರಿಕೆಗೂ ಆ ಕೌಶಲವು ವರ್ಗಾವಣೆಯಾಗಿ, ಅದರ ನಿರ್ವಹಣೆಗೆ ವೃತ್ತಿಪರ ಸ್ಪರ್ಶವು ದಕ್ಕುವಂತಾಯಿತು ಎನ್ನಬಹುದು. ಎಂಟು ತಿಂಗಳ ಕಾಲ ‘ಪಾಕ್ಷಿಕ’ ಪತ್ರಿಕೆಯಾಗಿ (ಅಂದರೆ ಹದಿನೈದು ದಿನಕ್ಕೊಮ್ಮೆ ಪ್ರಕಟವಾಗುವ ಪತ್ರಿಕೆ) ಪ್ರಕಟಗೊಂಡ ‘ಮಂಗಳೂರು ಸಮಾಚಾರ’ದಲ್ಲಿ ರಾಜ್ಯ ಮತ್ತು ಅಂತಾರಾಜ್ಯಗಳ ವರ್ತಮಾನಗಳು, ಸ್ಥಳೀಯ ಸುದ್ದಿಗಳು/ಬೆಳವಣಿಗೆಗಳು, ಓದುಗರ ಪತ್ರ ವಿಭಾಗ, ಕಾನೂನು ಸಂಬಂಧಿತ ಮಾಹಿತಿ, ಸರಕಾರಿ ಅಽಸೂಚನೆಗಳು ಮತ್ತು ನಿರೂಪಗಳು (ಈಸ್ಟ್ ಇಂಡಿಯಾ ಕಂಪನಿ ಕುರಿತ ಮಾಹಿತಿ, ಅದರ ಕಾನೂನುಗಳು ಮತ್ತು ನಿಯಮಗಳು), ಕಥೆ- ಕವನಗಳು ನಿಯತವಾಗಿ ಪ್ರಕಟವಾಗುತ್ತಿದ್ದವು (ಅಫ್ಘಾನಿಸ್ತಾನದ ಬಗೆಗಿನ ಸುದ್ದಿಗಳನ್ನು ಕೂಡ ಪತ್ರಿಕೆ ಪ್ರಕಟಿಸಿದ್ದು ಉಂಟಂತೆ). ಜತೆಗೆ, ‘ಸುದ್ದಿ ಯನ್ನು ಯಾರು ಬೇಕಾದರೂ ಕಳುಹಿಸಬಹುದು; ಅದು ನಿಜವಾಗಿದ್ದರೆ ಅದನ್ನು ಪ್ರಕಟಿಸಲಾಗು ವುದು’ ಎಂಬ ಪ್ರಕಟಣೆಯನ್ನು ಪತ್ರಿಕೆ ಒಳಗೊಂಡಿರುತ್ತಿತ್ತು.
ಬಳಿಕ ಈ ಪತ್ರಿಕೆಯ ಹೆಸರನ್ನು ಮೋಗ್ಲಿಂಗ್ ಅವರು ‘ಕನ್ನಡ ಸಮಾಚಾರ’ ಎಂಬುದಾಗಿ ಬದಲಿಸಿ ಬಳ್ಳಾರಿಯಿಂದ ಪ್ರಕಟಿಸಲು ಶುರುಮಾಡಿದರು. ಹೀಗೆ ಅನ್ಯದೇಶದವರಾಗಿದ್ದುಕೊಂಡು, ಮತ ಪ್ರಚಾರವನ್ನು ಮೂಲ ಉದ್ದೇಶವಾಗಿಟ್ಟುಕೊಂಡು ಬಂದಿದ್ದ ಹರ್ಮನ್ ಮೋಗ್ಲಿಂಗ್ ಅವರು ‘ಮಂಗಳೂರು ಸಮಾಚಾರ’ ಪತ್ರಿಕೆಯನ್ನು ಆರಂಭಿಸುವ ಮೂಲಕ ಈ ರಂಗಕ್ಕೊಂದು ಶುಭಚಾಲನೆ ನೀಡಿದ್ದರಿಂದ ಅವರನ್ನು ‘ಕನ್ನಡ ಪತ್ರಿಕೋದ್ಯಮದ ಆದ್ಯಪುರುಷ’, ‘ಕನ್ನಡ ಪತ್ರಿಕೋದ್ಯಮದ ಪಿತಾಮಹ’ ಎಂದೆಲ್ಲಾ ಬಣ್ಣಿಸಲಾಗುತ್ತದೆ.
ಅಸೀಮ ಶ್ರದ್ಧೆ ಮತ್ತು ಉತ್ಸಾಹದೊಂದಿಗೆ ಹಾಗೂ ವೈವಿಧ್ಯಮಯ ಹೂರಣದೊಂದಿಗೆ ಹೀಗೆ ಶುರುವಾದ ‘ಮಂಗಳೂರು ಸಮಾಚಾರ’ ಪತ್ರಿಕೆಯು ಓದುಗರನ್ನು ಇನ್ನಿಲ್ಲದಂತೆ ಸೆಳೆಯಿತು, ವಿವಿಧ ನೆಲೆಗಟ್ಟಿನಲ್ಲಿ ಅವರ ಮೇಲೆ ಪ್ರಭಾವ ಬೀರಿತು. ಸಂಪಾದಕ ಹರ್ಮನ್ ಮೋಗ್ಲಿಂಗ್ ಅವರೇ ಸುದ್ದಿಗಳನ್ನು ಹೆಕ್ಕಿ ಪ್ರಕಟಣೆಗೆ ಪರಿಗಣಿಸುತ್ತಿದ್ದರು.
ಈ ಪ್ರಕ್ರಿಯೆಯಲ್ಲಿ ವಿದೇಶಿ ಮತ್ತು ಇನ್ನಿತರ ಭಾರತೀಯ ಪತ್ರಿಕೆಗಳಲ್ಲಿ ಪ್ರಕಟವಾಗುವ ಮಾಹಿತಿ ಗಳನ್ನು ಸಂಗ್ರಹಿಸುವುದಕ್ಕೂ ಆದ್ಯತೆ ನೀಡಲಾಗುತ್ತಿತ್ತು. ಜತೆಗೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ಅಪರಾಧ ಕೃತ್ಯಗಳನ್ನು ಎಸಗಿದರೆ ಅದಕ್ಕೆ ಶಿಕ್ಷೆ ಕಟ್ಟಿಟ್ಟಬುತ್ತಿ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಹಾಗೂ ಕಾನೂನು-ಕಟ್ಟಳೆಗಳ ಕುರಿತಾಗಿ ಜನರನ್ನು ಮಾಹಿತಿವಂತರನ್ನಾಗಿಸಲು ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದ ಸುದ್ದಿ ಹಾಗೂ ಮಾಹಿತಿಗಳಿಗೆ ಪತ್ರಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಆದ್ಯತೆ ನೀಡಲಾಗುತ್ತಿತ್ತು.
ಹೀಗೆ ವಿವಿಧ ಮೂಲಗಳಿಂದ ವೈವಿಧ್ಯಮಯ ಮಾಹಿತಿಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ, ಒಪ್ಪ ಮಾಡಿಟ್ಟುಕೊಂಡ ನಂತರ ಕಲ್ಲಚ್ಚಿನಲ್ಲಿ ಪತ್ರಿಕೆಯನ್ನು ಮುದ್ರಿಸಲಾಗುತ್ತಿತ್ತು (ಆ ಕಾಲಘಟ್ಟದಲ್ಲಿ ಪತ್ರಿಕೆಯನ್ನು ಪ್ರಕಟಿಸುವುದು ತೀರಾ ದುಸ್ತರವಾಗಿತ್ತು. ಸುದ್ದಿ ಮತ್ತಿತರೆ ಮಾಹಿತಿಗಳನ್ನು ಜನಸಾಮಾನ್ಯರಿಗೆ ಅರುಹಲು ಸರಳ ಮಾರ್ಗಗಳಿರಲಿಲ್ಲ).
ನಾಲ್ಕು ಪುಟಗಳನ್ನು ಒಳಗೊಂಡಿದ್ದ ಈ ಪತ್ರಿಕೆಗೆ ನಿಗದಿಯಾಗಿದ್ದ ಮಾರಾಟ ಬೆಲೆ ಎಷ್ಟು ಗೊತ್ತೇ? ಒಂದು ಪೈಸೆ..! ಅಷ್ಟು ಹೊತ್ತಿಗಾಗಲೇ, ವ್ಯಾಪಾರಕ್ಕೆಂದು ಬಂದಿದ್ದ ಬ್ರಿಟಿಷರು ಭಾರತದಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸಿದ್ದರು. ದೇಶದ ವಿವಿಧ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಬ್ರಿಟಿಷರು ಮಾಡುತ್ತಿದ್ದ ವೈವಿಧ್ಯಮಯ ಕಸರತ್ತುಗಳ ಕುರಿತು ‘ಮಂಗಳೂರು ಸಮಾಚಾರ’ ಪತ್ರಿಕೆಯಲ್ಲಿ ಸವಿವರವಾಗಿ ಪ್ರಕಟಿಸಿದ ಹೆಗ್ಗಳಿಕೆ ಹರ್ಮನ್ ಮೋಗ್ಲಿಂಗ್ ಅವರದ್ದು.
ಮೊದಲೇ ಉಲ್ಲೇಖಿಸಿದಂತೆ, ಮೂಲತಃ ಮತಪ್ರಚಾರಕರಾಗಿದ್ದರೂ ಸಾಹಿತ್ಯಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿಶೇಷ ಒಲವು ಹೊಂದಿದ್ದ ಹರ್ಮನ್ ಮೋಗ್ಲಿಂಗ್ ಅವರು ಕನ್ನಡ ಸಾಹಿತ್ಯ ಕ್ಷೇತ್ರ ಹಾಗೂ ಪತ್ರಿಕಾ ರಂಗಗಳಲ್ಲಿ ಸಲ್ಲಿಸಿದ ಸೇವೆ ಅನನ್ಯ ಮತ್ತು ಶ್ಲಾಘನೀಯ. ಈ ಮಹತ್ಕಾರ್ಯ ವನ್ನು ಗುರುತಿಸಿದ ಟ್ಯೂಬಿಂಗನ್‌ನ ಎಬರ್ಹಾರ್ಡ್ ಕ್ಯಾರಿಸ್ ವಿಶ್ವವಿದ್ಯಾಲಯವು 1858ರಲ್ಲಿ ಮೋಗ್ಲಿಂಗ್ ಅವರಿಗೆ ‘ಗೌರವ ಡಾಕ್ಟರೇಟ್’ ಅನ್ನು ಪ್ರದಾನ ಮಾಡಿತು.
ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದ ವಿಷಯದಲ್ಲಿ ಮಾಡಿದ ಅನುಪಮ ಕಾರ್ಯಕ್ಕಾಗಿ ಇಂಥ ಗೌರವವನ್ನು ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಹರ್ಮನ್ ಮೋಗ್ಲಿಂಗ್.
ಅಂದು ಮಂಗಳೂರಿನಲ್ಲಿ ಹೀಗೆ ಪತ್ರಿಕಾ ಪ್ರಕಟಣೆಯ ಬೀಜಾಂಕುರವಾಗಿದ್ದು ಇಂದು ಊಹಿಸಲೂ ಅಸಾಧ್ಯವಾಗುವಷ್ಟರ ಮಟ್ಟಿಗೆ ಹೆಮ್ಮರವಾಗಿ ಬೆಳೆದಿದೆ. ಕಲ್ಲಚ್ಚಿನಲ್ಲಿ ಕಷ್ಟಪಟ್ಟು ಮುದ್ರಿಸಿ ಹೊರತರ ಬೇಕಾಗಿದ್ದ ಪತ್ರಿಕೆಯು ಕ್ರಮೇಣ ಅಚ್ಚುಮೊಳೆ, ಛಾಯಾಕ್ಷರ ಜೋಡಣೆ ಮುಂತಾದ ಆಧುನಿಕ ವ್ಯವಸ್ಥೆಗಳಿಗೆ ತನ್ನನ್ನು ಒಗ್ಗಿಸಿಕೊಂಡು ರೂಪಾಂತರ ಹೊಂದಿದೆ.
ಕಪ್ಪು-ಬಿಳುಪು ಪ್ರಸ್ತುತಿ ಮಾತ್ರವೇ ಕಾಣಬರುತ್ತಿದ್ದ ಪತ್ರಿಕಾ ಮಾಧ್ಯಮದಲ್ಲಿ ಈಗ ‘ವರ್ಣರಂಜಿತ’ ಕ್ರಾಂತಿಯಾಗಿದೆ, ಪುಟವಿನ್ಯಾಸಕ್ಕೊಂದು ವಿನೂತನ ವ್ಯಾಕರಣವೇ ದಕ್ಕಿಬಿಟ್ಟಿದೆ. ದಿನಗಳೆದಂತೆ ಅದು ಹೊಸ ರೆಕ್ಕೆಗಳನ್ನು ಮೂಡಿಸಿಕೊಂಡು ಓದುಗರನ್ನು ರಂಜಿಸುತ್ತಿದೆ. ದೃಶ್ಯಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು, ಆನ್ ಲೈನ್/ಡಿಜಿಟಲ್ ಪತ್ರಿಕೆಗಳು ಹೀಗೆ ಸುದ್ದಿ ಪ್ರಸ್ತುತಿಯ ವಿಧಾನ ದಲ್ಲಿ ಹಲವು ಬಗೆಯ ಕ್ರಾಂತಿಗಳಾಗಿದ್ದರೂ ಮತ್ತು “ಈಗಿನ ಜಮಾನದಲ್ಲಿ ಪತ್ರಿಕೆಯನ್ನು ಹೊರ ತರೋದು ಕಷ್ಟ ಕಣ್ರೀ" ಎಂಬ ಗೊಣಗಾಟಗಳು ಅಲ್ಲಲ್ಲಿ ಕೇಳಿಬರುತ್ತಿದ್ದರೂ, ಪತ್ರಿಕೆಗಳ ಪ್ರಕಟಣೆ-ಪ್ರಸರಣ ನಿಂತಿಲ್ಲ.
ಜತೆಗೆ, “ಟಿವಿಯಲ್ಲಿ, ಅಂತರ್ಜಾಲದಲ್ಲಿ, ಮೊಬೈಲ್‌ನಲ್ಲಿ ಅದೇನೇ ಮತ್ತು ಅದೆಷ್ಟೇ ಸುದ್ದಿಗಳನ್ನು ವೀಕ್ಷಿಸಿದರೂ, ಕೈಯಲ್ಲಿ ಪತ್ರಿಕೆಯನ್ನು ಹಿಡಿದು ಓದುವಾಗ ಸಿಗುವ ಸುಖ ಮತ್ತು ರೋಮಾಂಚನ ವೇ ವಿಭಿನ್ನ ಕಣ್ರೀ" ಎಂಬ ಪತ್ರಿಕೆಯ ಕಟ್ಟಾಭಿಮಾನಿಗಳ ಅಭಿಮಾನವೂ ಪತ್ರಿಕಾರಂಗದ ಜತೆಗಿದೆ ಎನ್ನಿ. ಪ್ರಾಯಶಃ ‘ಮಂಗಳೂರು ಸಮಾಚಾರ’ ಪತ್ರಿಕೆಯು ಸದುದ್ದೇಶದೊಂದಿಗೆ ಹಾಕಿದ ತಳಪಾಯವೇ ಇದಕ್ಕೆ ಕಾರಣವಾಗಿದ್ದಿರಬೇಕು....
(ಲೇಖಕರು ಹಿರಿಯ ಪತ್ರಕರ್ತರು)