Sunday, 30th June 2024

ಹಾಡಿ ಹಕ್ಕಲು ಹೊಲಗಳ ಸಾಂಗತ್ಯದಲ್ಲಿ

ಶಶಾಂಕಣ

shashidhara.halady@gmail.com

ನಮ್ಮೂರಿನ ಕನ್ನಡದಲ್ಲಿ ಒಂದು ಗಾದೆಯಿದೆ ‘ಕನ್ನಡ ಭಾಷೆಗೆ ಹನ್ನೆರಡು ಅರ್ಥ!’ ತಮ್ಮ ಭಾಷಾಪ್ರಭೇದವನ್ನು ಅವರವರೇ ತುಸು ಅಭಿಮಾನದಿಂದ, ಅದೇ ಕಾಲದಲ್ಲಿ ತುಸು ತಮಾಷೆಗೂ ಒಡ್ಡಿಕೊಳ್ಳುತ್ತಾ ಆಡುವ ಗಾದೆಯಿದು. ಕರಾವಳಿಯ ಒಂದೆರಡು ತಾಲೂಕುಗಳಲ್ಲಿ ಆಡುವ ಈ ಭಾಷಾ ಪ್ರಭೇದ ವನ್ನು ‘ಕುಂದ ಗನ್ನಡ’ ಎಂದು ಕರೆಯುವುದಿದೆ.

ವರ್ಷಕ್ಕೆ ನಾಲ್ಕು ತಿಂಗಳುಗಳ ಕಾಲ ಮಳೆ ಸುರಿಯುತ್ತಿದ್ದು, ಆ ದಿನಗಳಲ್ಲಿ ನದಿ, ತೋಡು, ಹಳ್ಳ, ಕೊಳ್ಳಗಳು ಹರಿಯುವ ನೀರಿನಿಂದ ತುಂಬಿದ್ದು, ಸುತ್ತಲಿನ ಪ್ರದೇಶದುದ್ದಕ್ಕೂ ಹಲವು ದ್ವೀಪ ಸದೃಶ ಭಾಗಗಳು ನಿರ್ಮಾಣಗೊಳ್ಳುತ್ತಿದ್ದ ಕಾಲದಲ್ಲಿ, ಕೆಲವೇ ಮೈಲು ದೂರ ಚಲಿಸಿದರೂ, ಭಾಷೆಯ ಬಳಕೆಯಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸುತ್ತಿದ್ದ ಕಾಲದಲ್ಲಿ, ಸುತ್ತಲಿನ ಮತ್ತು ಘಟ್ಟದ ಮೇಲಿನ ಕನ್ನಡದ ವೈವಿಧ್ಯತೆಯನ್ನು ಕಮಡು, ಜನರ ಬಾಯಲ್ಲಿ ಬಂದ ಗಾದೆ ಅದು. ಈಗಲೂ, ಅಂದರೆ, ಸ್ವಾತಂತ್ರ್ಯಾನಂತರದ ದಶಕಗಳಲ್ಲಿ ನದಿಗಳಿಗೆ, ತೋಡುಗಳಿಗೆ ಹಲವಾರು ಸೇತುವೆಗಳು ನಿರ್ಮಾಣಗೊಂಡ ನಂತರವೂ, ಈ ಗಾದೆಯು ತನ್ನ ಅರ್ಥವನ್ನು ಉಳಿಸಿಕೊಂಡಿದೆ.

ಇದಕ್ಕೆ ಪೂರಕವಾಗಿ ನಮ್ಮೂರಿನ ಕನ್ನಡದಲ್ಲಿರುವ ‘ಹಾಡಿ’ ಎಂಬ ಪದವನ್ನೇ ನೋಡೋಣ. ‘ನಮ್ಮ ಮನೆಯ ಸುತ್ತಲೂ ಹಾಡಿ’ ಎಂದು ನಮ್ಮೂರಿನ ಹಲವರು ಹೇಳುವುದು ಸಹಜ. ಹಾಡಿ, ಹಕ್ಕಲುಗಳ ನಡುವೆಯೇ ಸಣ್ಣ ಗಾತ್ರದ ಗದ್ದೆಬೈಲುಗಳನ್ನು ರೂಪಿಸಿ, ಅಲ್ಲೇ ಬತ್ತ ಬೆಳೆಯುತ್ತಾ, ಪ್ರಕೃತಿಯ ನಡುವೆ ದೂರ ದೂರದಲ್ಲಿ ಮನೆ ಕಟ್ಟಿಕೊಂಡು, ಬದುಕು ರೂಪಿಸಿಕೊಂಡವರು ನಮ್ಮ ಪ್ರದೇಶದವರು. ಕನ್ನಡನಾಡಿನ ಇತರ ಕೆಲವು ಭಾಗದವರಿಗೆ ‘ಹಾಡಿ’ ಎಂದರೆ ‘ಮನೆ!’. ಆದ್ದರಿಂದ, ‘ನಮ್ಮ ಮನೆಯ ಸುತ್ತಲೂ ಹಾಡಿ’ ಎಂಬ ಮಾತು ಅವರಿಗೆ ವಿಚಿತ್ರ ಅರ್ಥವನ್ನೂ ಕೊಡಬಹುದು!

ನಮ್ಮೂರಿನವರು ಆಡುವ ಭಾಷೆಯಲ್ಲಿ ಹಾಡಿ ಎಂದರೆ ಹದವಾದ ಕಾಡು ಎಂಬರ್ಥ. ಇಂತಹ ಭಾಷಾ ಪ್ರಯೋಗಗಳಿಂದಾಗಿಯೇ, ‘ಕನ್ನಡ ಭಾಷೆಗೆ ಹನ್ನೆರಡು ಅರ್ಥ’ ಎಂಬ ಗಾದೆ ಸೃಷ್ಟಿಯಾಗಿರಬಹುದು. ನಿಜ, ನಮ್ಮ ಹಿಂಭಾಗದಲ್ಲಿ ಹಾಡಿ ಇದೆ, ಎದುರಿನ ಗಡ್ಡೆ ಬೈಲು ದಾಟಿ ನಡೆದರೆ, ಅಲ್ಲೂ ಹಾಡಿಯಿದೆ. ಪಶ್ಚಿಮ ದಿಕ್ಕಿಗೆ ಸುಮಾರು ಎರಡು ಫರ್ಲಾಂಗ್ ನಡೆದರೆ, ಸೊಪ್ಪಿನಅಣೆಯ ದೊಡ್ಡ ಹಾಡಿ ಇದೆ. ದೊಡ್ಡ ದೊಡ್ಡ ಮರಗಳು ಬೆಳೆದಿರುವ, ನಾನಾ ಪ್ರಭೇದದ ಸಸ್ಯ ವರ್ಗ ತುಂಬಿರುವ ಪ್ರದೇಶವೇ ಹಾಡಿ. ನಮ್ಮ ಮನೆ ಮುಂಭಾಗದ ಹಾಡಿಯಲ್ಲಿ ಬೋಗಿ ಮರಗಳು ಜಾಸ್ತಿ; ಅದರಲ್ಲೂ ಎರಡು ವಿಧ – ಕಿರಿ ಎಲೆಯ ಕಿರಾಲು ಬೋಗಿ ಮತ್ತು ದೊಡ್ಡ ಎಲೆಯ ಹಿರಾಲು ಬೋಗಿ. ಇದರ ಜತೆ, ಅಂಡಾರು, ನೇರಳೆ, ಸಳ್ಳೆ, ಬಾಗಾಳು ಮತ್ತು ಇತರ ಹಲವು ಪ್ರಭೇದದ ಮರಗಳೂ ಇಲ್ಲಿವೆ (ಇದ್ದವು). ಹಾಡಿಯಲ್ಲಿ ಮರಗಳ ದಟ್ಟಣೆ ಜಾಸ್ತಿ; ಹಳೆಯ ಮರಗಳು ತುಂಬಿದ ಹಾಡಿಯ ನೆಲದ ಮೆಲೆ, ಸೂರ್ಯನ ಕಿರಣ ಬೀಳದೆಯೂ ಇರಬಹುದು. ಹಸಿರೆಲೆಗಳ ಚಪ್ಪರವನ್ನೇ ಹೊದ್ದಿರುವ ಈ ಹಾಡಿಯ ಕ್ಯಾನೊಪಿಯನ್ನು ಆಶ್ರಯಿಸಿ, ಮಂಗ, ಬುಕ್ಕ, ಹರ್ಗ, ಬರ್ಕ, ಮೊಲ, ಹಾವು ಮೊದಲಾದ ಪ್ರಾಣಿಗಳು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತವೆ.

ಕೆಲವು ಹಾಡಿಗಳಲ್ಲಿ ಹುಲಿ, ಜಿಂಕೆ, ಕುರ್ಕ, ನಾಯಿಕುರ್ಕಗಳೂ ಹಿಂದೆ ಇದ್ದವು. ಹಲವು ಹಕ್ಕಿಗಳ ಆಶ್ರಯತಾಣವಿದು. ಮೂರು ನಾಲ್ಕು ಪ್ರಭೇದದ ಗೂಬೆಗಳ ಮನೆಯೂ ಹೌದು. ನಮ್ಮ ಮನೆಯ ಹಿಂಭಾಗದ ಹಾಡಿಯಲ್ಲಿ, ಮೀನು ಗೂಬೆ, ದೊಡ್ಡ ಕೊಂಬಿನ ಗೂಬೆ, ಚಿಟ್ಟ ಗೂಬೆಯನ್ನು ನಾನು ಕಂಡಿದ್ದುಂಟು. ಹರನ ಗುಡ್ಡೆಯ ಹತ್ತಿರದಲ್ಲಿರುವ, ಇನ್ನಷ್ಟು ದಟ್ಟವಾದ ಹಾಡಿಯಲ್ಲಿ -ರೆಸ್ಟ್ ಈಗಲ್ ಔಲ್‌ನ ಇರವನ್ನು ಗುರುತಿಸಿದ್ದುಂಟು. ಮನೆ ಯಿಂದ ಕೆಲವೇ ಅಡಿಗಳಷ್ಟು ದೂರದಲ್ಲಿಯೂ ಇರಬಹುದಾದ ಹಾಡಿ ಯಲ್ಲಿ ವಾಸಿಸುತ್ತಿದ್ದ ಇಷ್ಟೊಂದು ಪ್ರಾಣಿ, ಪಕ್ಷಿಗಳ ನಡುವೆಯೇ ಬದುಕನ್ನು ಬ್ಯಾಲೆನ್ಸ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಹಳ್ಳಿಗರದ್ದು.

ಇಂತಹ ಹಾಡಿಯು ಹಲವು ಬಾರಿ, ಬತ್ತದ ಗದ್ದೆಗೆ ಲಗತ್ತಾಗಿರುತ್ತಿದ್ದ ಕುಮಕಿ ಪ್ರದೇಶವೂ ಹೌದು – ಆದ್ದರಿಂದ, ಕುಮ್ಕಿಯಲ್ಲಿ ಬೆಳೆದ ಮರಗಿಡಗಳ ಮೇಲೆ ಆ ಗದ್ದೆಯ ಮಾಲಿಕರ ಭಾಗಶಃ ಮಾಲಿಕತ್ವ – ತಮ್ಮ ಹಾಡಿಯ ಆಯ್ದ ಮರಗಳನ್ನು ಕಡಿದು ಮಾರುವ ಅವಕಾಶ ಅವರಿಗಿದೆ. ಅಂತಹ ಅನುಮತಿ ಪತ್ರದ ಮರೆಯಲ್ಲಿ, ‘ಹಾಡಿ ಕಡಿಯುವ’ ವ್ಯವಹಾರ ಬೆಳೆದು, ಹಳೆಯ ಮತ್ತು ಕೆಲವೇ ಮರಗಳನ್ನು ಅಽಕೃತವಾಗಿ ಕಡಿಯುವುದರ ಜತೆಯಲ್ಲೇ, ಇದ್ದ ಬದ್ದ ಎಲ್ಲಾ ಸಸ್ಯಸಂಕುಲವನ್ನು ಕಡಿದು ಸಾಗಿಸುವ ‘ಹಾಡಿ ಕಡಿಯುವ ಕಂತ್ರಾಟುದಾರರು’ ತಮ್ಮ ಕೆಲಸವನ್ನು ನಿರಾತಂಕವಾಗಿ ಮಾಡಿದ್ದರಿಂದ, ಹಳೆಯ ಮರಗಳಿಂದ ತುಂಬಿರುವ ಹಾಡಿಯೇ ಕಣ್ಮರೆಯಾಗುವ ಸ್ಥಿತಿ ಇಂದು ಹಲವೆಡೆ ಎದುರಾಗಿದೆ. ಈಚಿನ ದಶಕಗಳಲ್ಲಿ ಅಂತಹ ಅಪಾರ ವೈವಿಧ್ಯದ ಹಾಡಿ ಗಳು, ‘ಅಕೇಶಿಯಾ ಹಾಡಿ’ಯ ವೇಷ ಧರಿಸಿದ್ದ ರಿಂದ, ತೀವ್ರ ಎನಿಸುವ ಪರಿಸರ ಸಮಸ್ಯೆಯೂ ಉದ್ಭವವಾಗಿದ್ದು, ಅದರ ಕುರಿತಾದ ಚರ್ಚೆಯ ವ್ಯಾಪ್ತಿ ಯನ್ನು ಈ ಬರಹ ಹೊಂದಿಲ್ಲ.

ಏಕೆಂದರೆ, ಹಾಡಿ-ಹೊಲ-ಹಕ್ಕಲು ಎಂಬ ಪದಗಳ ಅಂತರಂಗವನ್ನು ಇನ್ನಷ್ಟು ಬಗೆಯುವುದಿದೆ. ನಮ್ಮೂರಿನ ನುಡಿಗಟ್ಟು, ಮಾತುಗಳಲ್ಲಿ ‘ಹೊಲ’, ‘ಹೊಲಕ್ಕೆ ಹೋಗು’ ಎಂಬ ಪದಗಳಿಗೆ ತುಸು ಭಯಮಿಶ್ರಿತ ಪ್ರಭಾವಳಿ ಇದೆ. ಕನ್ನಡ ನಾಡಿನ ಬಯಲು ಸೀಮೆಯವರಿಗೆ ಹೊಲ ಎಂದರೆ, ರಾಗಿ, ಜೋಳ ಬೆಳೆಯುವ ಜಾಗ ಎನಿಸಿದರೆ, ನಮ್ಮೂರಿನ ಭಾಷೆಯಲ್ಲಿ ‘ಹೊಲ’ ಎಂದರೆ, ಭಾರೀ ದಟ್ಟವಾದ, ಸಣ್ಣಗೆ ಹೆದರಿಕೆ ಹುಟ್ಟಿಸುವ ಕಾಡು. ಹಾಡಿಗೂ, ಹೊಲಕ್ಕೂ ಸ್ಪಷ್ಟ ವ್ಯತ್ಯಾಸವಿದೆ. ದೊಡ್ಡ ಮರಗಳೂ ಇರಬಹುದಾದ ಹಾಡಿಯು ಸಾಮಾನ್ಯವಾಗಿ ಊರಿನ ಸರಹದ್ದಿನಲ್ಲಿರುತ್ತದೆ; ಆದರೆ, ಭಯಂಕರ ಕಾಡು ತುಂಬಿರುವ ಹೊಲವು ಊರಿಂದ ಬಹುದೂರದಲ್ಲಿರಬಹುದು.

‘ಹೊಲ’ ಎಂದ ಕೂಡಲೇ ತುಸು ಭಯಮಿಶ್ರಿತ ಅನುಭವ; ದಟ್ಟ ಕಾಡು, ಮುಳ್ಳು ಗಿಡಗಳ ಪೊದೆಗಳು ತುಂಬಿರಬಹುದಾದ ಹೊಲದಲ್ಲಿ ಎಕರೆಗಟ್ಟಲೆ ಕಾಡು ಇರುತ್ತದೆ; ಎಷ್ಟೋ ಹೊಲಗಳ ಒಳಭಾಗಕ್ಕೆ ಸಾಗಲು ದಾರಿಯೂ ಇಲ್ಲದೇ ಇರಬಹುದು. ಹುಲಿ, ಚಿರತೆ, ಬರ್ಕ, ಜಿಂಕೆ, ಕಾಡುಕೋಣ, ಕಾನುಕುರಿ, ಕಾಡು ಹಂದಿ ಮೊದಲಾದ ಪ್ರಾಣಿಗಳ ಜತೆಯಲ್ಲೇ, ಜನರ ಕಲ್ಪನೆಯ ಕೂಸುಗಳೂ ಆಗಿರಬಹುದಾದ ಕೆಲವು ಪ್ರಾಣಿಗಳು ಮತ್ತು ದೆವ್ವ ಭೂತಗಳು ಇಲ್ಲಿ ವಾಸಿಸಿರುತ್ತವೆ. ಹೆಡೆಯಲ್ಲಿ ಕೂದಲು ಇರುವ ಕಾಳಿಂಗ ಸರ್ಪ, ಜನರನ್ನು ತನ್ನ ಕೊಂಬೆಗಳಿಂದ ಹಿಡಿದು ತಿನ್ನುವ ಬೋಳು ಮರ, ಅಕಸ್ಮಾತ್ ತಾಗಿದರೆ ತೀವ್ರ ಜ್ವರ ಬಂದು ಜೀವವನ್ನೇ ತೆಗೆಯಬಲ್ಲ ಬಳ್ಳಿ – ಇಂತಹ ಹಲವು ಕಾಲ್ಪನಿಕವೂ ಆಗಿರಬಹುದಾದ ವಿಸ್ಮಯಗಳ ಆಗರವೇ ಈ ಹೊಲ. ಹೊಲಗಳಲ್ಲಿ ನಾನಾ ರೀತಿಯ ದೆವ್ವಗಳು, ಭೂತಗಳು ಇವೆ ಎಂದು ನಮ್ಮ ಹಳ್ಳಿಯ ಜನರು ಳಿದಿದ್ದರು.

ಹಿಂದಿನ ಶತಮಾನಗಳಲ್ಲಿ ಹೊಲದಲ್ಲಿ ಏನೇ ಕುಕೃತ್ಯ ನಡೆದರೂ, ಹೊರಜಗತ್ತಿಗೆ ತಿಳಿಯದೇ ಇರಬಹುದಾದಂತಹ ಸ್ಥಿತಿ. ಉದಾಹರಣೆಗೆ, ನಮ್ಮ ಹಳ್ಳಿ
ಯಿಂದ ಸುಮಾರು ಹತ್ತು ಕಿ.ಮೀ. ದೂರದಲ್ಲಿರುವ ‘ಗುಮ್ಮೊಲ’ (ಗುಮ್ಮ ಹೊಲ) ಎಂಬ ಪ್ರದೇಶದಲ್ಲಿರುವ ಜಲಪಾತದ ಬಳಿ, ಹಿಂದೆ ಕೊಲೆಗಳು
ನಡೆಯುತ್ತಿದ್ದುದು ಸಾಮಾನ್ಯ ಎಂಬ ತಿಳಿವಳಿಕೆ ಇತ್ತು. ಹಳ್ಳಿಗಳಿಂದ ಬಹುದೂರದಲ್ಲಿರಬಹುದಾದ ಹೊಲಗಳಲ್ಲಿನ ಕಾಡಿನ ದಟ್ಟಣೆಯು ಜನಸಾಮಾನ್ಯರಿಗೂ ವಿಸ್ಮಯ ಮತ್ತು ಭಯಗಳನ್ನು ಹುಟ್ಟಿಸುವ ತಾಣ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಹಲವು ಹೊಲಗಳಿದ್ದವು; ಈಚಿನ ದಶಕಗಳಲ್ಲಿ ಹೊಲಗಳ ನಡುವೆ ರಸ್ತೆಗಳು ನಿರ್ಮಾಣಗೊಂಡದ್ದರ ಜತೆಜತೆ ಯಲ್ಲೇ, ಅಲ್ಲಿನ ಮರಗಳನ್ನು ಕೆಲವರು ಕಡಿದು ಸಾಗಿಸಿದ್ದರಿಂದ, ಹೊಲಗಳ ಮೇಲಿದ್ದ ಭಯ ಕಡಿಮೆಯಾಗಿದೆ. ಅಂತಹ ದಟ್ಟ ಕಾಡು ಬೆಳೆದಿರುವ ಜಾಗಗಳನ್ನು ಈಚಿನ ದಶಕಗಳಲ್ಲಿ ರಬ್ಬರು ತೋಟವನ್ನಾಗಿಯೂ ಪರಿವರ್ತಿಸಲಾಗಿದ್ದು, ಅದರಿಂದಾಗಿ ವಾಣಿಜ್ಯ ಚಟುವಟಿಕೆಗೆ ಅವಕಾಶವಾಗಿದೆ, ಉದ್ಯೋಗ ಸೃಷ್ಟಿಗೂ ಹೇತುವಾಗಿದೆ ಮತ್ತು ಅದೇ ಕಾಲದಲ್ಲಿ ಪರಿಸರ ನಾಶಕ್ಕೂ ದಾರಿ ಯಾಗಿದೆ. ಹೊಲಗಳನ್ನು ಕಾಪಾಡಿದರೆ, ನಮ್ಮ ಪರಿಸರದ ಆರೋಗ್ಯವನ್ನು ಕಾಪಾಡಿ ದಂತೆ, ಕಾಲದಿಂದ ಕಾಲಕ್ಕೆ ಮಳೆಯಾಗಲು ಹೊಲಗಳಲ್ಲಿರುವ ಲಕ್ಷಾಂತರ ಮರಗಳ ಸಹಕಾರ ಅಗತ್ಯ; ನಮ್ಮೂರಿಗೆ ಮಾತ್ರವಲ್ಲ, ಘಟ್ಟ ಮೇಲಿನ ಪ್ರದೇಶಗಳಿಗೆ ಮಳೆಯಾಗಲು, ಹೊಲಗಳು ಹೊರಬಿಡುವ ನೀರಾವಿಯು ತುಂಬಾ ಅಗತ್ಯ. ಈಚಿನ ದಶಕಗಳಲ್ಲಿ ನಮ್ಮ ಸೀಮೆಯ ಹೊಲಗಳ ನಿಧಾನ ನಾಶವು ಮತ್ತೊಂದೇ ಆಯಾಮದ ಚರ್ಚೆಗೆ ದಾರಿಮಾಡಿ ಕೊಡುತ್ತದೆ.

ಇರಲಿ, ಈಗ ಈ ಬರಹದ ವ್ಯಾಪ್ತಿಗೊಳಪಡುವ ಹಕ್ಕಲಿನೊಳಗೆ ಕಣ್ಣು ಹಾಯಿಸೋಣ. ನಮ್ಮ ಮನೆಯ ಹಿಂದೆ ಹಾಡಿ ಇದೆ ಎಂದೆನಲ್ಲ, ಅದಕ್ಕೆ ಒತ್ತಿ ಕೊಂಡಂತೆ, ಅದಕ್ಕೂ ಮೊದಲೇ ಸಿಗುವುದು ಹಕ್ಕಲು. ಎಷ್ಟೋ ಬಾರಿ ಹಾಡಿ, ಹಕ್ಕಲುಗಳು ಒಂದಕ್ಕೊಂದು ಬೆರೆತು, ಹಾಲು-ಜೇನಿನಂ ತಿರುತ್ತವೆ ಎಂದು ಹೇಳಬಹುದಾದರೂ, ಅದು ತುಸು ಕ್ಲೀಷೆಯ ಮಾತಾದೀತು. ಸಣ್ಣ ಗಾತ್ರದ ಮರಗಳು, ಬಳ್ಳಿಗಳು, ಬಿಳಲುಗಳು ಇರುವ ಜಾಗ ಹಕ್ಕಲು; ಹಕ್ಕಲಿನಲ್ಲಿ ಪುಟ್ಟ ಪುಟ್ಟ ಸಮತಟ್ಟು ಜಾಗವೂ ಇರಬಹುದು- ಅಲ್ಲಿ ಮಳೆಬಿದ್ದಾಗ ಹಸಿರು ಹುಲ್ಲು ಹುಟ್ಟುವುದರಿಂದ, ದನಕರುಗಳ ಮೇಯುವ ಜಾಗವೂ ಆದೀತು.

ಹಾಡಿ-ಹಕ್ಕಲುಗಳ ವ್ಯತ್ಯಾಸವನ್ನು ಗುರುತಿಸಲು ಅಲ್ಲೆಲ್ಲಾ ಓಡಾಡಿದ ಅನುಭವವೂ ಅಗತ್ಯ. ಒಂದಂತೂ ಸ್ಪಷ್ಟ – ಹಕ್ಕಲಿನಲ್ಲಿ ಬೃಹದಾಕಾರದ ಮರಗಳಿರುವುದು ಕಡಿಮೆ. ಮಧ್ಯಮ ಗಾತ್ರದ ಮರಗಳೇ ಜಾಸ್ತಿ; ಹಕ್ಕಲುಗಳು ಸಾಮಾನ್ಯವಾಗಿ ಮನೆಗೆ ಹತ್ತಿರವಾಗಿರುತ್ತವೆ. ಹಕ್ಕಲಿನ ಮರಗಿಡಗಳನ್ನು ಕಡಿಯದೇ, ಹಾಗೆಯೇ ಬಿಟ್ಟರೆ, ಒಂದೆರಡು ದಶಕಗಳಲ್ಲಿ ಅಲ್ಲಿ ಒಂದು ಹಾಡಿ ಇರುತ್ತದೆ. ಮಳೆ ಬಿದ್ದ ಒಂದೆರಡು ವಾರಗಳಲ್ಲಿ (ಸಾಮಾನ್ಯವಾಗಿ ಜೂನ್-ಜುಲೈ) ಸಿಗುವ ನೇರಳೆ ಹಣ್ಣು ಮತ್ತು ಸಳ್ಳೆ ಹಣ್ಣುಗಳನ್ನು ತಿನ್ನಲು ಹಕ್ಕಲು ಪ್ರಶಸ್ತವಾದ ತಾಣ; ಕೈಗೆಟಕುವ ಎತ್ತರದಲ್ಲಿ ಆ ಹಣ್ಣುಗಳು ಧಂಡಿಯಾಗಿ ಸಿಗುತ್ತವೆ. ಬೇಸಗೆಯಲ್ಲಿ ಮುರಿನ ಹಣ್ಣು, ಕಾಟು ಮಾವಿನ ಹಣ್ಣುಗಳು, ಹೆಬ್ಬಲಸಿನ ಹಣ್ಣು, ಜುಳ್ಕನ ಹಣ್ಣುಗಳು ಹಕ್ಕಲಿನಲ್ಲೇ ಸಿಗುವುದು ಜಾಸ್ತಿ. ಈ ರೀತಿಯ ಗಿಡಗಳು ಹಾಡಿಯಲ್ಲೂ ಇರಬಹುದಾದರೂ, ಅವು ಅಲ್ಲಿ ಎತ್ತರವಾಗಿರುವುದರಿಂದ, ಮಕ್ಕಳ ಕೈಗೆ ಸಿಗುವುದು ಕಷ್ಟ.

ಹಕ್ಕಲಿನ ಇನ್ನೊಂದು ವಿಶೇಷವೆಂದರೆ, ಮಧ್ಯಮ ಗಾತ್ರದ ಮರಗಳಿರುವುದರಿಂದ, ಪಕ್ಷಿವೀಕ್ಷಣೆ ಇಲ್ಲಿ ಸುಲಭ. ನಮ್ಮ ಮನೆಯ ಹಿಂಭಾಗದ ಹಕ್ಕಲಿನಲ್ಲಿನ ಒಂದು ಪುಟ್ಟ ಕಂಕುಳು ಮರವನ್ನು (ದಾಲ್ಚಿನಿ ಮರದ ಸಂಬಂಧಿ) ಏರಿ ಕುಳಿತು, ನಾನು ಡಿಗ್ರಿ ಪರೀಕ್ಷೆಗೆ ಓದುವ ನೆಪ ಮಾಡಿಕೊಂಡು ಬೆಳಗಿನಿಂದ ಮಧ್ಯಾಹ್ನದ ತನಕ ಅಲ್ಲಿದ್ದು, ಹಲವು ಪ್ರಭೇದದ ಹಕ್ಕಿಗಳನ್ನು ಗುರುತಿಸಿದ್ದುಂಟು. ಹಕ್ಕಲಿನಲ್ಲಿ ಬಿದ್ದ ಮರಗಿಡಗಳ ಕೊಂಬೆಗಳನ್ನು ಆರಿಸಿ, ಒಲೆ ಉರಿಸುವ ಪರಿಪಾಠ ಹಿಂದೆ ಇತ್ತು. ದನಕರುಗಳು ಹಕ್ಕಲಿನಲ್ಲಿ ಬೆಳೆದ ಹಸಿರು ಹುಲ್ಲನ್ನು ಮೇಯುವುದು ತೀರಾ ಸಾಮಾನ್ಯ ದೃಶ್ಯ; ಹುಲ್ಲಿನ ಜತೆಯಲ್ಲೇ, ಅಲ್ಲಿನ ಇತರ ಗಿಡಗಳ ಕುಡಿಗಳನ್ನೂ ಅವು ತಿಂದು ಬರುವುದರಿಂದಾಗಿ, ಅಲ್ಲಿ ಮೆಂದ ಹಸುವಿನ ಹಾಲು ಬಹಳ ರುಚಿ. ಮಲೆನಾಡು ಗಿಡ್ಡ ಪ್ರಭೇದದ ಆ ಹಸುಗಳು ಕೊಡುತ್ತಿದ್ದುದು ತೀರಾ ಕಡಿಮೆ ಹಾಲು – ಸರಾಸರಿ ಎರಡು ಸಿದ್ದೆ. (ಸುಮಾರು ಅರ್ಧ ಲೀಟರ್).

ಆದರೆ, ಅದರ ರುಚಿ, ಅದರಿಂದ ತಯಾರಿಸಿದ ಮಜ್ಜಿಗೆಯ ರುಚಿ ಬೇರೆಲ್ಲೂ ಕಾಣೆ. ಪ್ರಕೃತಿಯಲ್ಲಿ ಸಹಜವಾಗಿ ಬೆಳೆದ ಹುಲ್ಲಿನಿಂದಲೇ, ಆ ಹಾಲಿಗೆ ಅಷ್ಟು ರುಚಿ ಎಂಬುದಕ್ಕೆ ಆಗಾಗ ನಮಗೆ ಪುರಾವೆಯೂ ದೊರಕುತ್ತಿತ್ತು. ಅಕಸ್ಮಾತ್ ಹಸು ಕಾಸಾನು ಕುಡಿ ತಿಂದು ಬಂದ ದಿನ, ಹಾಲು ಕುಡಿದರೆ ಕಹಿ ರುಚಿ! ಏಕೆಂದರೆ, ಕಾಸಾನು ಅಥವ ಕಾಸರ್ಕನ ಎಲೆಯು ತೀರಾ ಎಂದರೆ ತೀರಾ ಕಹಿ; ಬೇರೇನೋ ಎಲೆಯ ಕುಡಿ ತಿನ್ನುವಾಗ ಕಾಸಾನು ಕುಡಿಯನ್ನೂ ಸೇರಿಸಿ ಹಸು ತಿಂದಾಗ, ಅದು ನೀಡುವ ಹಾಲು ಸಹ ಕಹಿಯಾಗುತ್ತದೆ ಎಂಬುದು ಅಚ್ಚರಿಯೂ ಹೌದು!

ಇಂತಹ ವೈವಿಧ್ಯಮಯ ಹಕ್ಕಲಿನ ಬೆರಗುಗಳು ಹಲವು; ನಮ್ಮೂರಿನ ಹಾಡಿ, ಹಕ್ಕಲು, ಹೊಲಗಳ ನಡುವೆ ಓಡಾಡುವ ಅನುಭವವೇ ಅನನ್ಯ; ಹಸಿರಿನ ಸುವಾಸನೆಯನ್ನು ಹೀರುತ್ತಾ ಹಕ್ಕಲಿನ ನಡುವೆ ಬರಿಗಾಲಿನಲ್ಲಿ ನಡೆಯುವ ಅನುಭೂತಿ ಯು, ನನ್ನ ಮನದಲ್ಲಿ ಗಾಢವಾದ ಸಕಾರಾತ್ಮಕ ಹೆಜ್ಜೆಗುರುತು ಗಳನ್ನು ಉಳಿಸಿಬಿಟ್ಟಿದೆ.

Leave a Reply

Your email address will not be published. Required fields are marked *

error: Content is protected !!