Wednesday, 26th June 2024

ಬಚ್ಚೇಗೌಡರ ರಾಜಕೀಯ ವಾನಪ್ರಸ್ಥ

-ಎಂ.ಕೆ.ಭಾಸ್ಕರ ರಾವ್

ಜನತಾ ಪರಿವಾರದಿಂದ ರಾಜಕೀಯ ಆರಂಭಿಸಿ ಸದ್ಯ ಕಮಲ ಪಾಳಯದಲ್ಲಿರುವ, ಕೊಳದಲ್ಲಿದ್ದರೂ ಕಮಲದೊಂದಿಗೆ ಇಲ್ಲದಂತಿರುವ ಬಚ್ಚೇಗೌಡರು, ಮಗ ಶರತ್ ಬಚ್ಚೇಗೌಡರ ಉಜ್ವಲ ರಾಜಕೀಯ ಭವಿಷ್ಯಕ್ಕಾಗಿ ಸ್ವಂತ ರಾಜಕಾರಣಕ್ಕೆ ಎಳ್ಳುನೀರು ಬಿಡಲು ನಿರ್ಧರಿಸಿದ್ದಾರೆ ಎನ್ನುವುದು ಅವರ ಮತಕ್ಷೇತ್ರದ ಅನೇಕರ ಅಭಿಮತ.

ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು ಪ್ರಧಾನಿಯಾಗಿದ್ದ ೯೬-೯೭ರ ಸಮಯದಲ್ಲಿ ಸರಿದಾಡುತ್ತಿದ್ದ ಜೋಕುಗಳಲ್ಲಿ ಒಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸದಸ್ಯ ಬಿ.ಎನ್. ಬಚ್ಚೇಗೌಡರನ್ನು
ಕುರಿತಾದುದು. ಬೆಂಡಿಗಾನಹಳ್ಳಿ ನಾರಾಯಣ ಗೌಡ ಬಚ್ಚೇಗೌಡರು ಆಗ ಜನತಾದಳದಲ್ಲಿ ಬಹಳ ಸಕ್ರಿಯರಾಗಿದ್ದ ರಾಜಕಾರಣಿ. ದೇವೇಗೌಡರ ಆಪ್ತ ವಲಯದಲ್ಲಿ ಬಚ್ಚೇಗೌಡರಿಗೂ ಬಹು ಮುಖ್ಯಸ್ಥಾನ. ಗೌಡರು ಪ್ರಧಾನಿಯಾಗಿದ್ದ ಆ ಸಮಯದಲ್ಲಿ ಕರ್ನಾಟಕದಿಂದ ಅವರ ಪಕ್ಷದ ಮುಖಂಡರು, ಕಾರ್ಯಕರ್ತರಷ್ಟೇ ಅಲ್ಲದೆ ಜನಸಾಮಾನ್ಯರೂ ದೆಹಲಿಗೆ ತೆರಳಿ ಗೌಡರನ್ನು ನೋಡಿ ಬರುವುದಿತ್ತು. ಹಾಗೆ ಪದೇಪದೆ ದೆಹಲಿಗೆ
ಎಡತಾಕುತ್ತಿದ್ದವರಲ್ಲಿ ಬಚ್ಚೇಗೌಡರೂ ಒಬ್ಬರು ಎನ್ನುವುದು ‘ಜೋಕು’ಮಾರನ ವ್ಯಾಖ್ಯಾನ. ಕನ್ನಡಿಗರೊಬ್ಬರು ಅತ್ಯುನ್ನತ ಸ್ಥಾನದಲ್ಲಿ ಕುಳಿತಾಗ ಸಂಭ್ರಮಿಸದೇ ಇರುವ ಕನ್ನಡಿಗರು ಇಲ್ಲವೆಂದೇನೂ ಅಲ್ಲ, ಕರ್ನಾಟಕ ಅಂಥವರನ್ನೂ ಕಂಡಿದೆ. ಆದರೆ ಆ ಸಾಲಿನಲ್ಲಿ ಇರುವವರ ಸಂಖ್ಯೆ ವಿರಳಾತಿವಿರಳ. ಕನ್ನಡಿಗರು, ಕರ್ನಾಟಕದವರು ಎಂದ ಮಾತ್ರಕ್ಕೆ ಪ್ರಧಾನಿ ನಿವಾಸದ ಬಳಿಗೋ, ಕಚೇರಿ ಬಳಿಗೋ ಹೋದವರನ್ನೆಲ್ಲ ಭದ್ರತಾ ಪಡೆ ಹಿಂದೆ ಮುಂದೆ ನೋಡದೆ ಒಳಕ್ಕೆ ಬಿಡುತ್ತಿರಲಿಲ್ಲ. ಪ್ರಧಾನಿಗೆ ಭದ್ರ ಕಾವಲು ನೀಡಲೆಂದೇ ಇರುವ ಬ್ಲ್ಯಾಕ್ ಕ್ಯಾಟ್ ಕಮಾಂಡೋಗಳ ಹದ್ದುಗಣ್ಣಿನ ಕೂಲಂಕಷ ತಪಾಸಣೆ ಬಳಿಕವೇ ಪ್ರವೇಶ, ಇಲ್ಲವೇ ನಿರಾಕರಣೆ.

ಗೌಡರನ್ನು ನೋಡಲು ಅವರು ಇವರು ಹೋದಂತೆ ಅವರ ಮಕ್ಕಳೂ ಹೋಗುತ್ತಿದ್ದರು ಎಂಬಲ್ಲಿಂದ ಜೋಕು ಶುರುವಾಗುತ್ತಿತ್ತು. ತಮ್ಮ ಗುರುತನ್ನು ಹೇಳಿಕೊಂಡರೂ ಅವರಿಗೆ ಪ್ರವೇಶ ಸುಲಭದಲ್ಲಿರಲಿಲ್ಲ. ಅಂಥ ದಿನಗಳಲ್ಲಿ ಬಿ.ಎನ್. ಬಚ್ಚೇಗೌಡರು ಹೋದರೆ ಭದ್ರತಾ ಸಿಬ್ಬಂದಿ ಕ್ಷಣಮಾತ್ರವೂ ತಡಮಾಡದೆ ಸಲ್ಯೂಟ್ ಹೊಡೆದು ಒಳಕ್ಕೆ ಬಿಟ್ಟುಬಿಡುತ್ತಿದ್ದರು. ಗೌಡರ ದರ್ಶನಕ್ಕೆಂದು ತಾಸಿನಿಂದ ಕಾಯುತ್ತ ಕುಳಿತಿದ್ದವರಿಗೆ ಅಚ್ಚರಿಯೋ ಅಚ್ಚರಿ. ಬಚ್ಚೇಗೌಡರಿಗೆ ಮಾತ್ರ ಪ್ರಧಾನಿ ಕಾರ್ಯಾಲಯ ಪ್ರದಾನ ಮಾಡಿರುವ ವರವಾದರೂ ಏನು..? ಆ ರಹಸ್ಯವಾದರೂ ಏನು..? ಅಲ್ಲಿರುವವರೆಲ್ಲರಲ್ಲೂ ವರಿಯೋ ವರಿ. ಒಮ್ಮೆ ಯಾರೋ ಒಬ್ಬರು ಧೈರ್ಯ ಮಾಡಿ ಭದ್ರತಾ ಪಡೆಯನ್ನು ಪ್ರಶ್ನಿಸಿದಾಗ ಹೊರಬಿದ್ದ ಸತ್ಯವೇ ಜೋಕಿನ ಹೂರಣ. ‘ಏ ಹೈ ಗೌಡಾಕೆ ಬಚ್ಚೆ’ (ಅವರು ಗೌಡರ ಮಗ= ಬಚ್ಚೇಗೌಡ) ಎಂಬ ಕಾರಣಕ್ಕೆ ಅವರಿಗೆ ಯಾವ ನಿರ್ಬಂಧವೂ ಇಲ್ಲ ಎಂದರಂತೆ ಸಿಬ್ಬಂದಿ ಎನ್ನುವುದು (ಆಗ ಸಾಮಾಜಿಕ ಜಾಲತಾಣ ಇರಲಿಲ್ಲವಾದರೂ) ಬಹಳ ವೈರಲ್ ಆಗಿತ್ತು. ಜೋಕನ್ನು ಪಕ್ಕಕ್ಕೆ ಇಟ್ಟು ನೋಡಿದರೂ ಬಚ್ಚೇಗೌಡರು ದೇವೇಗೌಡರ ಪರಮಾಪ್ತರಲ್ಲಿ ಒಬ್ಬರೆನಿಸಿದ್ದರು
ಎನ್ನುವುದು ಸುಳ್ಳೇನೂ ಅಲ್ಲ. ಜನತಾದಳದಲ್ಲಿ ಗೌಡರ ಬಣ ಹೆಗಡೆ ಬಣ ಅಸ್ತಿತ್ವಕ್ಕೆ ಬಂದಾಗ ಗೌಡರ ಬಣದಲ್ಲಿ ಬಚ್ಚೇಗೌಡರು ಕಾಣಿಸಿಕೊಂಡರು. ೧೯೯೯ರಲ್ಲಿ ಜನತಾ ಪರಿವಾರದೊಳಕ್ಕೆ ಬಂದ ಬಚ್ಚೇಗೌಡರು ೧೯೭೮, ೮೫, ೯೪, ೯೯ ಹಾಗೂ ೨೦೦೮ರಲ್ಲಿ ವಿಧಾನಸಭೆಗೆ ಹೊಸಕೋಟೆ ಕ್ಷೇತ್ರದಿಂದ ಆಯ್ಕೆಯಾದವರು. ಜಯದ ಜತೆಗೆ ಸೋಲಿನ ರುಚಿಯನ್ನೂ ಅವರು ಅನುಭವಿಸಿದ್ದು ಅದೇ ಕ್ಷೇತ್ರದಲ್ಲಿ ನಡೆದ ೧೯೮೯, ೨೦೦೪ ಮತ್ತು ೨೦೧೩ರ ಚುನಾವಣೆಯಲ್ಲಿ. ೨೦೦೮-೧೩ರ ಅವಧಿಯ ಬಿಜೆಪಿ ಸರಕಾರದಲ್ಲಿ ಮೂವರು (ಬಿ.ಎಸ್ .ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ ಮತ್ತು ಜಗದೀಶ ಶೆಟ್ಟರ್) ಮುಖ್ಯಮಂತ್ರಿಗಳಾದರು. ಆ ಚುನಾವಣೆ
ಹೊತ್ತಿಗೆಲ್ಲ ಬಿಜೆಪಿ ಸೇರಿದ್ದ ಗೌಡರು, ಶೆಟ್ಟರ್  ಸಂಪುಟದಲ್ಲಿ ಸಚಿವರಾಗಿ ಸ್ಥಾನ ಪಡೆದರು. ೨೦೧೩ರ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಸೋತ ಗೌಡರನ್ನು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ೨೦೧೪ರಲ್ಲಿ ಲೋಕಸಭೆಗೆ ಕಳುಹಿಸುವ ತೀರ್ಮಾನಕ್ಕೆ ಭಾರತೀಯ ಜನತಾ ಪಾರ್ಟಿ ಬಂದ ತರುವಾಯದಲ್ಲಿ ಒಂದು ಬಗೆಯ ವಿಚಿತ್ರ ತಿರುವು ಪಡೆದುದು ಗೌಡರ ರಾಜಕೀಯ.

ಲೋಕಸಭೆಗೆ ಸ್ಪರ್ಧಿಸಿದಾಗ ಅವರು ಆ ಕ್ಷೇತ್ರದಲ್ಲಿ ಎರಡನೇ ಗೆಲುವನ್ನು ನಿರೀಕ್ಷಿಸಿದ್ದ ಕಾಂಗ್ರೆಸ್‌ನ ವೀರಪ್ಪ ಮೊಯಿಲಿಯವರನ್ನೂ, ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರನ್ನೂ ಮುಖ್ಯ ಎದುರಾಳಿಗಳಾಗಿ ಎದುರಿಸಬೇಕಾಯಿತು. ಕ್ಷೇತ್ರದಲ್ಲಿರುವ ಜಾತಿ, ಒಳಜಾತಿ, ಪಂಗಡಗಳ ಲೆಕ್ಕಾಚಾರ ತೆಗೆದುಕೊಂಡರೆ ಬಚ್ಚೇಗೌಡರು ಗೆಲ್ಲಬೇಕಿತ್ತು. ಆದರೆ ಜೆಡಿಎಸ್ ಕಣಕ್ಕೆ ಇಳಿದುದು ಬಚ್ಚೇಗೌಡರ ಮತ್ತು ಬಿಜೆಪಿಯ ಲೆಕ್ಕಾಚಾರವನ್ನು ತಲೆಕೆಳಗು ಮಾಡಿತು. ಮೊಯಿಲಿ ಗೆದ್ದುದು ಕೇವಲ ೯,೬೦೦ ಮತಗಳ ಅಂತರದಲ್ಲಿ. ಬಚ್ಚೇಗೌಡರ ಗೆಲುವಿಗೆ ಗ್ರಹಣವಾದುದು ಕುಮಾರಸ್ವಾಮಿಯವರ ಸ್ಪರ್ಧೆ. ಆ ಕಾಲದಲ್ಲಿ ಕೇಳಿಬಂದ ಇನ್ನೊಂದು ಕಥೆಯೂ ಸ್ವಾರಸ್ಯಕರವಾದುದೇ. ಮೊಯಿಲಿಯವರು ಲೋಕಸಭೆಗೆ ಪುನರಾಯ್ಕೆ ಆಗುವುದು ದೇಶದ ಒಬ್ಬ ಪ್ರಮುಖ ಉದ್ಯಮಿಗೆ ಬೇಕಾಗಿತ್ತೆಂಬಲ್ಲಿಂದ ಕಥೆ ಶುರುವಾಗುತ್ತದೆ. ಒಕ್ಕಲಿಗರ ವೋಟನ್ನು ಒಡೆಯುವ ಆ ಉದ್ಯಮಿಯ ಯೋಜನೆಯಂತೆ ಕಣಕ್ಕೆ ಧುಮುಕಿದವರು ಕುಮಾರ ಸ್ವಾಮಿ ಎಂಬ ಗಾಳಿಮಾತಿನ ಮಗ್ಗುಲೂ ಕಥೆಗೆ ಇದೆ. ಜನತಾ ಪರಿವಾರದಿಂದ ಹೊರಕ್ಕೆ ಬಂದ ಬಳಿಕ ಬಚ್ಚೇಗೌಡರು ಹೋದಲ್ಲಿ ಬಂದಲ್ಲಿ ಟೀಕಿಸುತ್ತಿದ್ದುದು ದೇವೇಗೌಡರ ರಾಜಕೀಯ ವೈಖರಿಯನ್ನು. ಚುನಾವಣೆಯಲ್ಲಿ ಸೋಲಿಸಿ ರಾಜಕೀಯ ಪ್ರತೀಕಾರ ತೀರಿಸಿಕೊಳ್ಳುವ ಇರಾದೆಯೂ ದೊಡ್ಡಗೌಡರ ಮನಸ್ಸಿನಲ್ಲಿ ಇತ್ತೋ ಏನೋ ಯಾರು ಬಲ್ಲರು..?

೨೦೧೯ರ ಚುನಾವಣೆಯಲ್ಲಿ ಅದೇ ಕ್ಷೇತ್ರದಲ್ಲಿ ಪುನಃ ಕಮಲ ಪಕ್ಷದ ಸ್ಪರ್ಧಿಯಾದ ಬಚ್ಚೇಗೌಡರು, ಮೊಯಿಲಿಯವರನ್ನು ಸೋಲಿಸಿ ಕಳೆದುಕೊಂಡಿದ್ದನ್ನು ಕಳೆದುಕೊಂಡಲ್ಲಿಂದಲೇ ಪಡೆದರು. ಕನ್ನಡಿಗರಿಗೆ ತಿಳಿಹಾಸ್ಯವನ್ನು ಉಣಬಡಿಸುತ್ತಿದ್ದ ‘ಕೊರವಂಜಿ’ ನಿಯತಕಾಲಿಕವನ್ನು ನಿಲ್ಲಿಸುವ ಸಂದರ್ಭ ಪ್ರಕಾಶಕರಿಗೆ ಎದುರಾಯಿತು. ಕೊನೆ ಸಂಚಿಕೆಯ ಮುಖಪುಟದಲ್ಲಿ ಅದು ವ್ಯಂಗ್ಯಚಿತ್ರವೊಂದನ್ನು ಪ್ರಕಟಿಸಿತ್ತು.
ಕೊರವಂಜಿ ತಾನು ಕಾಡಿಗೆ ಹೋಗುತ್ತಿದ್ದೇನೆ ಎನ್ನುತ್ತಾಳೆ. ಅದನ್ನು ಕೇಳಿದ ಕನ್ನಡಿಗ, ‘ಹೌದಾ ನೀನು ಇರುವುದೇ ಗೊತ್ತಿರಲಿಲ್ಲ’ ಎನ್ನುತ್ತಾನೆ. ಬಚ್ಚೇಗೌಡರು ಲೋಕಸಭೆಗೆ ಆಯ್ಕೆಯಾಗಿ ಐದು ವರ್ಷ ಮುಗಿಯುತ್ತ ಬಂದಿದೆ. ಅವರು ಲೋಕಸಭೆಯಲ್ಲಿರುವುದೇ ಗೊತ್ತಾಗದಂತೆ ಇದ್ದಾರೆ. ಇಂಥ ಬಚ್ಚೇ ಗೌಡರು ವರ್ಷಗಳ ಬಳಿಕ ಈಗ ಸುದ್ದಿಯಲ್ಲಿದ್ದಾರೆ. ಎಂಭತ್ತು ವರ್ಷ (ಜನನ ೧೯೪೨) ದಾಟಿರುವ ಗೌಡರು ಸಕ್ರಿಯ ರಾಜಕಾರಣಕ್ಕೆ ಕೊನೆ ನಮಸ್ಕಾರ ಹೇಳಲಿದ್ದಾರೆ ಎನ್ನುವುದು ಅವರನ್ನು ಬೆಳಕಿಂಡಿಯತ್ತ ತಂದಿರುವ ಸದ್ಯದ ಸಮಾಚಾರ. ರಾಜ್ಯ ರಾಜಕೀಯದ ಹಳೆಹುಲಿಗಳಲ್ಲಿ ಬಚ್ಚೇಗೌಡರು ನಿಸ್ಸಂಶಯವಾಗಿ ಒಬ್ಬರು. ಜನತಾ ಪರಿವಾರದಿಂದ ರಾಜಕೀಯ ಆರಂಭಿಸಿ ಸದ್ಯ ಕಮಲ ಪಾಳಯದಲ್ಲಿರುವ, ಕೊಳದಲ್ಲಿದ್ದರೂ ಕಮಲದೊಂದಿಗೆ ಇಲ್ಲದಂತಿರುವ ಗೌಡರು, ಮಗ ಶರತ್ ಬಚ್ಚೇಗೌಡರ ರಾಜಕೀಯ ಭವಿಷ್ಯವನ್ನು ಉಜ್ವಲಗೊಳಿಸುವುದಕ್ಕಾಗಿ ಸ್ವಂತ ರಾಜಕಾರಣಕ್ಕೆ ಎಳ್ಳುನೀರು ಬಿಡಲು ನಿರ್ಧರಿಸಿದ್ದಾರೆ ಎನ್ನುವುದು ಅವರ ಕರ್ಮಭೂಮಿ ಚಿಕ್ಕಬಳ್ಳಾಪುರ/ ಹೊಸಕೋಟೆ ಮತಕ್ಷೇತ್ರದಲ್ಲಿ ಅವರೊಂದಿಗೆ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಅನೇಕರ ಅಭಿಮತ.

ಶರತ್ ಬಚ್ಚೇಗೌಡರು ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಯಾಗಿ ತಮ್ಮ ಅಪ್ಪಾಜಿಯ ಒಂದು ಕಾಲದ ಕರ್ಮಭೂಮಿ ಹೊಸಕೋಟೆ ಕ್ಷೇತ್ರದಲ್ಲಿ ಕಣಕ್ಕೆ ಇಳಿದರು. ಮಗನನ್ನು ಎಂಎಲ್‌ಎ ಮಾಡುವ ಕನಸಿನಲ್ಲಿದ್ದ ಬಚ್ಚೇಗೌಡರು ಹರಸಾಹಸ ಮಾಡಿದರೂ ಫಲ ಸಿಗಲಿಲ್ಲ. ಕಾಂಗ್ರೆಸ್ ಹುರಿಯಾಳು ಎಂ.ಟಿ.ಬಿ. ನಾಗರಾಜ್ ಗೆದ್ದು ಬಚ್ಚೇಗೌಡರ ಕನಸಿಗೆ ಕೊಳ್ಳಿ ಇಟ್ಟರು. ಆದರೆ ನಾಗರಾಜ್, ಕಾಂಗ್ರೆಸ್
-ಜೆಡಿಎಸ್ ಸ್ಮುಶ್ರ ಸರಕಾರದ ಪತನಕ್ಕೆ ಕಾರಣರಾದ ಹದಿನೇಳು ಕಾಂಗ್ರೆಸ್-ಜೆಡಿಎಸ್ ಶಾಸಕ ಸಮೂಹದ ಭಾಗವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಮುಂದುವರಿದ ಅಧ್ಯಾಯದ ಭಾಗವಾಗಿ ಬಿಜೆಪಿ ಸೇರಿ
ಬಚ್ಚೇಗೌಡರ ಒಡಲಲ್ಲಿ ಕಿಚ್ಚು ಹೆಚ್ಚಿಸಿದರು. ಶಾಸಕ ಸ್ಥಾನ ತೆರವಾದ ಹೊಸಕೋಟೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಾಗ ಬಿಜೆಪಿ ಟಿಕೆಟ್ ನೀಡಿದ್ದು ನಾಗರಾಜ್‌ರಿಗೆ. ಶರತ್ ಬಚ್ಚೇಗೌಡರು ರಾಜ್ಯ ಬಿಜೆಪಿ ಯುವಮೋರ್ಚಾದ ಕಾರ್ಯದರ್ಶಿಯಾಗಿದ್ದರೂ ಕ್ಷೇತ್ರದಲ್ಲಿ ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು. ಮನವೊಲಿಸುವ ಬಿಜೆಪಿ ನಾಯಕರ ಮಾತನ್ನು ಶರತ್ ಕೇಳಲಿಲ್ಲ. ಅಪ್ಪ ಬಚ್ಚೇಗೌಡರು ಮಗನ ಮನವೊಲಿಸಿಯಾರೆಂಬ ಪಕ್ಷದ ನಿರೀಕ್ಷೆ ನಿಜವಾಗಲಿಲ್ಲ. ಪಕ್ಷದಿಂದ ಸಸ್ಪೆಂಡ್ ಆದರೂ ಶರತ್ ಮಣಿಯಲಿಲ್ಲ. ಚುನಾವಣೆಯಲ್ಲಿ ಗೆದ್ದು ಬಂಡಾಯದ ಬಾವುಟವನ್ನು ಮತ್ತಷ್ಟು ಮೇಲೆತ್ತಿ ಹಿಡಿದರು. ಬಚ್ಚೇಗೌಡರು ಪಕ್ಷ ವಿರೋಧಿ ಚಟುವಟಿಕೆ ಮಾಡಿ ತಮ್ಮನ್ನು ಸೋಲಿಸಿದರೆಂದು ನಾಗರಾಜ್ ಆರೋಪ ಮಾಡಿದರಾದರೂ ಬಿಜೆಪಿ ಶಿಸ್ತು ಸಮಿತಿ ಬಚ್ಚೇಗೌಡರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಶರತ್ ಕ್ರಮೇಣ ಕಾಂಗ್ರೆಸ್ ಶಾಸಕಾಂಗ ಪಕ್ಷದ ಭಾಗವಾದರು. ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಿಡಿದು ಹೊಸಕೋಟೆ ಕ್ಷೇತ್ರವನ್ನು ಎರಡನೇ ಬಾರಿಗೆ ಕೈವಶ ಮಾಡಿಕೊಂಡ ಶರತ್, ತಂದೆ ಬಚ್ಚೇಗೌಡರ ಸಾಮ್ರಾಜ್ಯದಲ್ಲಿ ಇದೀಗ ಯುವಸಾಮ್ರಾಟ.

ಬಚ್ಚೇಗೌಡರು ಕನಸಿದ್ದೂ ಇದನ್ನೇ, ಮತದಾರರು ಕೊಟ್ಟಿದ್ದೂ ಇದನ್ನೇ! ಮಗನ ಗೆಲುವಿಗಾಗಿ ಬಿಜೆಪಿ ವಿರುದ್ಧ ಕೆಲಸ ಮಾಡಿದರೆಂಬ ಗಂಭೀರ ಆರೋಪ ಹೊತ್ತಿರುವ ಬಚ್ಚೇಗೌಡರಿಗೆ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗುವುದು ಬಹಳ ಅನುಮಾನ. ಅದಕ್ಕೆ ಕಾರಣ ಎರಡು. ಮೊದಲನೆಯದು, ಪಕ್ಷ ವಿರೋಧಿ ಚಟುವಟಿಕೆ; ಇನ್ನೊಂದು, ವಯಸ್ಸು ೮೦ ದಾಟಿರುವುದು. ಮೊಯಿಲಿ ಇನ್ನೊಮ್ಮೆ ಚಿಕ್ಕಬಳ್ಳಾಪುರದಲ್ಲಿ ಅದೃಷ್ಟ ಪರೀಕ್ಷಿಸುವ ತಯಾರಿಯಲ್ಲಿದ್ದಾರೆ. ಮಗ ಪಕ್ಷದ ಶಾಸಕ ಎಂಬ ಕಾರಣಕ್ಕೆ ಕಾಂಗ್ರೆಸ್ಸು ಮೊಯಿಲಿಯವರ ಬದಲಿಗೆ ಬಚ್ಚೇಗೌಡರನ್ನು ಅಭ್ಯರ್ಥಿ ಸ್ಥಾನಕ್ಕೆ ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಲಾಗುತ್ತಿದೆ. ವಾಸ್ತವ ಹೀಗೆಲ್ಲ ಇರುವಾಗ ರಾಜಕೀಯ ವಾನಪ್ರಸ್ಥದ ಯೋಚನೆ ಬಚ್ಚೇಗೌಡರಲ್ಲಿ ಬಂದಿರಬಹುದು. ವಯಸ್ಸಾದವರು ಈ ರೀತಿಯ ಕಾರಣಕ್ಕಾದರೂ ಜಾಗ ತೆರವುಗೊಳಿಸಿ
ಯುವಕರಿಗೆ ಆದ್ಯತೆ ಕೊಡುತ್ತಿದ್ದೇವೆ ಎನ್ನಬಹುದು.
(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

error: Content is protected !!