Wednesday, 26th June 2024

ಗಗನದೂರು ಆಗಿರುವ ಬೆಂಗಳೂರು

-ಕೆ.ಎಸ್. ಸಚ್ಚಿದಾನಂದಮೂರ್ತಿ
ಇಸ್ರೋ ಮೇಲೂ ಕೆಲ ಷಡ್ಯಂತ್ರಗಳಿಂದಾಗಿ ಒಮ್ಮೊಮ್ಮೆ ಮೋಡ ಕವಿದಿ ದ್ದುಂಟು. ಮೊದಲನೆಯದು, ವಿಜ್ಞಾನಿ ನಂಬಿ ನಾರಾಯಣ್ ಅವರನ್ನು ಗೂಢಚರನೆಂದು ಹೊಸಕಿ ಹಾಕುವ ನಾಚಿಕೆಗೇಡು ಪ್ರಕರಣ. ಪೊಲೀಸರು ಹೂಡಿದ ಕುತಂತ್ರ ಅದಾಗಿತ್ತು. ನಂಬಿ ನಾರಾಯಾಣ್ ಅವರಿಗೆ ಪೂರ್ಣ ನ್ಯಾಯ ಸಿಗುವುದು ಇನ್ನೂ ಬಾಕಿಯಿದೆ. 

ಚಂದಿರನ ಅಂಗಳದ ಮೇಲೆ ವಿಕ್ರಂ ಲ್ಯಾಂಡರ್ ನಿಧಾನವಾಗಿ ಇಳಿದು ನೆಲ ಮುಟ್ಟುತ್ತಿದ್ದಂತೆ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-೩ ಯೋಜನೆ ಯಶಸ್ವಿಯಾಯಿತು ಎಂದು ಜಗತ್ತಿನಾದ್ಯಂತ ಸಂಭ್ರಮಾಚರಣೆ ಆರಂಭವಾಯಿತು. ಚೇರ್ಮನ್ ಎಸ್. ಸೋಮನಾಥ್ ನೇತೃತ್ವದ ಇಸ್ರೋ ತಂಡ ಈ ಅಂತಿಮ ‘ಟಚ್‌ಡೌನ್’ ಕ್ಷಣಗಳನ್ನು ಶ್ರೀಹರಿ ಕೋಟಾದ ಉಪಗ್ರಹ ಉಡಾವಣೆ ಕೇಂದ್ರದಿಂದ ಮೇಲ್ವಿಚಾರಣೆ ನಡೆಸುತ್ತಿತ್ತು. ಮರುದಿನ ಬೆಂಗಳೂರಿನ ಎಚ್‌ಎಎಲ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಇಸ್ರೋದ ಮುಖ್ಯ ಕಚೇರಿಯಲ್ಲಿ ದೊಡ್ಡ ಸಂಭ್ರಮಾಚರಣೆ ನಡೆಯಿತು. ಚಂದ್ರಯಾನ ಉಪಗ್ರಹವನ್ನು ನಿರ್ಮಾಣ ಮಾಡಿದ್ದು ಅದೇ ಕೇಂದ್ರದಲ್ಲಿ. ನೂರಾರು ವಿಜ್ಞಾನಿಗಳು ಹಾಗೂ ತಂತ್ರಜ್ಞಾನಿಗಳ ಅವಿರತ ಪರಿಶ್ರಮ ಹಾಗೂ ಐಡಿಯಾಗಳ ನೆರವಿನೊಂದಿಗೆ ಚಂದ್ರಯಾನ ನೌಕೆ ಅಲ್ಲಿ ವಿನ್ಯಾಸಗೊಂಡಿತ್ತು. ಆದರೆ ಬೆಂಗಳೂರು ಇಂದು ಭಾರತದ ಬಾಹ್ಯಾಕಾಶ ಯೋಜನೆಗಳ ಯಶಸ್ಸಿಗೆ ಈ ಮಟ್ಟಿಗಿನ ಸಂಭ್ರಮಾಚರಣೆ ನಡೆಸಲು ೧೯೭೧ರಲ್ಲಿ ಇಸ್ರೋದ ನಿರ್ದೇಶಕರಾಗಿದ್ದವರು ‘ನಾನು ದೇಶದ ಅಂತರಿಕ್ಷ ಯೋಜನೆಗಳನ್ನು ದೆಹಲಿಯಿಂದಲ್ಲ, ಬೆಂಗಳೂರಿನಿಂದಲೇ
ಮುನ್ನಡೆಸುತ್ತೇನೆ’ ಎಂದು ಹಟ ಹಿಡಿದು ಕುಳಿತಿದ್ದುದು ಕಾರಣ ಎಂಬುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ.

ಬೆಂಗಳೂರಿನ ಏರ್‌ಪೋರ್ಟ್ ರಸ್ತೆ ಅನೇಕ ಏರೋಸ್ಪೇಸ್ ಹಾಗೂ ಔಟರ್ ಸ್ಪೇಸ್ ಸಂಶೋಧನಾ ಕೇಂದ್ರಗಳಿಗೆ ತವರಾಗಿದೆ. ಅಲ್ಲಿರುವ ಎಚ್‌ಎಎಲ್ ನಲ್ಲಿ ಯುದ್ಧವಿಮಾನಗಳನ್ನು ತಯಾರಿಸಲಾಗುತ್ತದೆ. ಅಲ್ಲಿರುವ ವಿಮಾನ ನಿಲ್ದಾಣದಲ್ಲಿ ಅತ್ಯಂತ ಉದ್ದದ ರನ್‌ವೇ ಇದೆ. ನ್ಯಾಷನಲ್ ಏರೋನಾಟಿಕ್ಸ್ ಲ್ಯಾಬೋರೇಟರಿ ಇರುವುದು ಅಲ್ಲೇ. ಇನ್ ಸ್ಟಿಟ್ಯೂಟ್ ಆಫ್ ಏವಿಯೇಷನ್ ಮೆಡಿಸಿನ್ ಹಾಗೂ ಇನ್ನಿತರ ವಿಶಿಷ್ಟ ಸಂಶೋಧನಾ ಕೇಂದ್ರಗಳು ಅಲ್ಲೇ ನೆಲೆಗೊಂಡಿವೆ. ಅಲ್ಲಿಂದ ಉತ್ತರ ದಿಕ್ಕಿನಲ್ಲಿ ಇಸ್ರೋ ಮುಖ್ಯ ಕಚೇರಿಯಿದೆ. ಅಲ್ಲೇ ಪಕ್ಕದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ರಾಮನ್ ರೀಸರ್ಚ್ ಇನ್‌ಸ್ಟಿಟ್ಯೂಟ್, ಭಾರತ್ ಎಲೆಕ್ಟ್ರಾನಿಕ್ಸ್
ಗಳಿವೆ. ನಂತರ ಕೋರಮಂಗಲದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಇದೆ. ಸ್ವಾತಂತ್ರ್ಯ ಲಭಿಸಿದ ಬಳಿಕ ಪ್ರಧಾನಿ ಜವಾಹರಲಾಲ್ ನೆಹರು ಅವರು ದೇಶದಲ್ಲಿ ಅಣುಶಕ್ತಿ ಯೋಜನೆ ಆರಂಭಿಸಲು ಪ್ರತ್ಯೇಕ ಇಲಾಖೆ ಸ್ಥಾಪಿಸುವ ಹೊಣೆಯನ್ನು ವಿಜ್ಞಾನಿ ಡಾ.ಹೋಮಿ ಭಾಭಾ ಅವರಿಗೆ ನೀಡಿದ್ದರು. ಹೋಮಿ ಭಾಭಾ ಅವರು ಮುಂಬಯಿಯಲ್ಲಿರುವ ತನ್ನ ಮನೆಯನ್ನೇ ದಾನ ಮಾಡಿ ಅದರ ಮುಖ್ಯ ಕಚೇರಿ ಸ್ಥಾಪಿಸಿದ್ದರು.

ನಂತರ ಭಾಭಾ ಅವರೇ ಆಗ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವ ಕಾಸ್ಮಿಕ್ ಸೈಂಟಿಸ್ಟ್ ವಿಕ್ರಂ ಸಾರಾಭಾಯಿ ಅವರಿಗೆ ದೇಶದಲ್ಲಿ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಆರಂಭಿಸುವ ಜವಾಬ್ದಾರಿ ನೀಡುವಂತೆ ಸರಕಾರಕ್ಕೆ ಶಿಫಾರಸು ಮಾಡಿದರು. ಶ್ರೀಮಂತ ಉದ್ಯಮಿಗಳ ಕುಟುಂಬದಿಂದ ಬಂದಿದ್ದ ಸಾರಾಭಾಯಿ ಅಹಮದಾಬಾದ್ ನಲ್ಲಿದ್ದ ತನ್ನ ಮನೆಯನ್ನೇ ಭೌತಶಾಸ ಸಂಶೋಧನೆಗೆ ದಾನ ಮಾಡಿದರು. ಹೊಸ ಹೊಸ ಐಡಿಯಾಗಳಿಂದ ತುಳುಕುತ್ತಿದ್ದ ಸಾರಾಭಾಯಿ ತಿರುವನಂತಪುರಂನ ಥುಂಬಾದಿಂದ ದೇಶದ ಮೊದಲ ಸಾಮಾನ್ಯ ಗಾತ್ರದ ರಾಕೆಟ್ ಉಡಾವಣೆ ಮಾಡುವ ದಿಸೆಯಲ್ಲಿ ಮುನ್ನಡೆದರು. ಅದರೊಂದಿಗೆ ಬಾಹ್ಯಾಕಾಶಕ್ಕೆ ಭಾರತ ಅಧಿಕೃತವಾಗಿ ಪ್ರವೇಶ ಪಡೆಯಿತು. ಸಾರಾ ಭಾಯಿ ಅವರ ನೋಟ್‌ಬುಕ್‌ಗಳು ಭಾರತದ ಉಪಗ್ರಹಗಳನ್ನು ಹಾಗೂ ರಾಕೆಟ್‌ಗಳನ್ನು ಮೊದಲಿಗೆ
ದೇಶದ ಹೊರಗೆ ತಯಾರಿಸುವ ಹಾಗೂ ನಂತರ ಭಾರತದಲ್ಲೇ ತಯಾರಿಸುವ ಕುರಿತಾದ ವಿವರಗಳಿಂದ ತುಂಬಿಹೋಗಿದ್ದವು. ಆದರೆ ಕೇವಲ ೫೨ನೇ ವರ್ಷಕ್ಕೆ ಅವರು ಹಠಾತ್ ತೀರಿಕೊಂಡರು. ಅದರೊಂದಿಗೆ ದೇಶದ ಅಣುಶಕ್ತಿ ಸಂಶೋಧನೆ ಹಾಗೂ ಬಾಹ್ಯಾಕಾಶ ಸಂಶೋಧನೆ ವಿಭಾಗಗಳೆರಡೂ ಯಜಮಾನನಿಲ್ಲದ ಮನೆಯಂತಾದವು.

ಬಳಿಕ ಪ್ರಧಾನಿ ಇಂದಿರಾ ಗಾಂಧಿಯವರು ಹುಡುಕಿದಾಗ ಸತೀಶ್ ಧವನ್ ಸಿಕ್ಕರು. ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿರ್ದೇಶಕರಾಗಿದ್ದರು. ಏರೋನಾಟಿಕಲ್ ಎಂಜಿನಿ ಯರಿಂಗ್, ಮೆಕ್ಯಾನಿಕಲ್
ಎಂಜಿನಿಯರಿಂಗ್, ಗಣಿತ ಹಾಗೂ ಇಂಗ್ಲಿಷ್ ವಿಷಯದಲ್ಲಿ ಅವರು ಸ್ನಾತಕೋತ್ತರ ಪದವಿ ಪಡೆದ ಅಪ್ರತಿಮ ಬುದ್ಧಿ ವಂತ. ಅವರೇ ಈ ಹುದ್ದೆಗೆ ಸರಿಯಾದ ವ್ಯಕ್ತಿಯೆಂದು ನಿರ್ಧರಿಸಿದ ಇಂದಿರಾ ಗಾಂಧಿ, ಖುದ್ದಾಗಿ ತಾವೇ ಕರೆ ಮಾಡಿ ಇಸ್ರೋದ ಮುಖ್ಯಸ್ಥರಾಗುವಂತೆ ಆಹ್ವಾನಿಸಿದರು. ಸತೀಶ್ ಧವನ್ ಎರಡು ಷರತ್ತು ವಿಧಿಸಿದರು- ಒಂದು, ನಾನು ಇನ್ನುಮುಂದೆಯೂ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿರ್ದೇಶಕನಾಗಿ ಮುಂದುವರಿಯುತ್ತೇನೆ. ಎರಡು, ಬಾಹ್ಯಾಕಾಶ ಸಂಶೋಧನಾ ಕೇಂದ್ರ ಶಾಶ್ವತವಾಗಿ ಬೆಂಗಳೂರಿನಲ್ಲೇ ಇರಬೇಕು. ಇಂದಿರಾ ಗಾಂಧಿ ಒಲ್ಲದ ಮನಸ್ಸಿನಿಂದಲೇ ಎರಡನೇ ಷರತ್ತಿಗೆ ಒಪ್ಪಿಕೊಂಡರು. ಅವರ ಮನಸ್ಸಿ
ನಲ್ಲಿ ಈ ಕೇಂದ್ರ ದೆಹಲಿಯಲ್ಲಿದ್ದರೆ ಒಳ್ಳೆಯದು ಎಂದಿತ್ತು. ಆದರೂ ಹೇಗೋ ಇಸ್ರೋ ಕೇಂದ್ರವು ರಾಷ್ಟ್ರ ರಾಜಧಾನಿಯ ರಾಜಕೀಯ ಹಾಗೂ ಅಧಿಕಾರಶಾಹಿ ಕಿರಿಕಿರಿಗಳಿಂದ ಪಾರಾಯಿತು. ದೇಶದಲ್ಲಿ ಇಂದು ಅತಿ ಕಡಿಮೆ ಹಿಂದಿ ಮಾತನಾಡುವ ಕೇಂದ್ರ ಸರಕಾರದ ಯಾವುದಾದರೂ ವಿಭಾಗ ಇದ್ದರೆ ಅದು ಇಸ್ರೋ.

ಇದರ ಹೆಚ್ಚಿನ ಉದ್ಯೋಗಿಗಳು ದಕ್ಷಿಣದ ಐದು ರಾಜ್ಯಗಳಿಂದ ಬಂದವರಾಗಿದ್ದಾರೆ. ಕೇಂದ್ರ ಲೋಕಸೇವಾ ಆಯೋಗದ ಪಾತ್ರ ವಿಲ್ಲದೆ ಇಸ್ರೋಗೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ವಿಕ್ರಂ ಸಾರಾಭಾಯಿಯವರ ಸಂಪ್ರದಾಯವನ್ನೇ ಸತೀಶ್ ಧವನ್ ಕೂಡ ಮುಂದುವರಿಸಿದರು. ಇಸ್ರೋದ ನಿರ್ದೇಶಕರಿಗೆ ದಕ್ಷಿಣ ಭಾರತದ ಕಡಿಮೆ ‘ಶೋಕಿಯ’ ಕಾಲೇಜುಗಳಿಗೆ ಹೋಗಿ ವಿಜ್ಞಾನ ಮತ್ತು ಎಂಜಿನಿಯರಿಂಗ್
ಓದಿದ, ಪರಿಶುದ್ಧ ಸಂಶೋಧನೆ ಹಾಗೂ ಅದರ ಆನ್ವಯಿಕ ಒಳಸುಳಿಗಳನ್ನು ಬಲ್ಲವರು ಬೇಕಿದ್ದರು. ಅಷ್ಟಾಗಿಯೂ ದೆಹಲಿ ಮೇಲಿನ ಅವಲಂಬನೆ ಇದ್ದೇ ಇತ್ತು. ಆದರೂ ಕಳೆದ ೫೦ ವರ್ಷಗಳಲ್ಲಿ ಇಸ್ರೋ ಚೇರ್ಮನ್ ಹಾಗೂ ವಿಜ್ಞಾನಿಗಳು ದೆಹಲಿಗೆ ಕೇವಲ ಸಭೆಯಲ್ಲಿ ಪಾಲ್ಗೊಳ್ಳಲು ಮಾತ್ರ ಹೋಗಿ ಬೆಂಗಳೂರಿಗೇ ವಾಪಸ್ ಬರುತ್ತಿದ್ದಾರೆ. ಅಂತರಿಕ್ಷ ಸಂಸ್ಕೃತಿಯೆಂಬುದು ಈ ನಗರದ ನಾಡಿಗಳಲ್ಲಿ ಬೆರೆತುಹೋಗಿದೆ. ಏಕೆಂದರೆ ಇಲ್ಲಿ ಇಸ್ರೋದ ಮುಖ್ಯ ಕಚೇರಿ ಇರುವುದು ಮಾತ್ರವಲ್ಲ, ಬೃಹತ್ ಉಪಗ್ರಹ ನಿರ್ಮಾಣ ಕೇಂದ್ರವೂ ಇದೆ.

ಯಾವಾಗಲೂ ‘ಎತ್ತರದಲ್ಲೇ’ ಇರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಪ್ರೊಫೆಸರ್‌ಗಳಂತೆ ಇಸ್ರೋದ ವಿಜ್ಞಾನಿಗಳು ಇರುವುದಿಲ್ಲ. ಅವರು ಬೆಂಗಳೂರಿನ ಶಾಲೆ ಕಾಲೇಜುಗಳಿಗೆ ಹೋಗುತ್ತಾರೆ. ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ಸಂಶೋಧನೆಯ ಬಗ್ಗೆ ಆಸಕ್ತಿ ಕುದುರಿಸುತ್ತಾರೆ. ಆದರೆ ಕೇಂದ್ರ ಸರಕಾರ, ಇದು ಸರಕಾರಿ ಇಲಾಖೆಯೆಂದು ಗೋಚರಿಸಬೇಕೆಂಬ ಕಾರಣಕ್ಕೆ ಒತ್ತಾಯಪೂರ್ವಕವಾಗಿ ಒಬ್ಬರು ಐಎಎಸ್
ಅಧಿಕಾರಿಯನ್ನು ಇಸ್ರೋಗೆ ನೇಮಿಸಿತು. ಹಾಗೆ ಬಂದವರಲ್ಲಿ ಟಿ.ಎನ್.ಶೇಷನ್ ಕೂಡ ಒಬ್ಬರು. ಅವರ ಅವಧಿಯಲ್ಲಿ ಇಸ್ರೋದ ಕಾರ್ಯಾಚರಣೆಗಳು ಬಾಡಿಗೆ ಕಚೇರಿಗಳಲ್ಲಿ ಹಾಗೂ ಕಾರ್ಖಾನೆಯ ಶೆಡ್‌ಗಳಲ್ಲಿ ನಡೆಯುತ್ತಿದ್ದವು. ನಂತರ ಶಿಶಿರ್ ದಾಸ್ ಹಾಗೂ ಎಸ್.ವಿ.ರಂಗನಾಥ್ ಮುಂತಾದ ಕರ್ನಾಟಕ ಕೇಡರ್‌ನ ಕೆಲ ಅಧಿಕಾರಿಗಳು ಇಸ್ರೋಗೆ ಸಿಕ್ಕರು. ಅವರು ಸ್ಥಳೀಯ ಸಹಭಾಗಿತ್ವವನ್ನು ಹೆಚ್ಚಿಸಲು ಸಹಾಯ ಮಾಡಿದರು. ಪರಿಣಾಮ, ಕಾರ್ಖಾನೆಯಲ್ಲಿ ಕೆಲಸ ಮಾಡಿದಂತೆ ಕೆಲಸ ಮಾಡುತ್ತಿದ್ದ ಇಸ್ರೋದ ನೌಕರರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ತಮ್ಮದೇ ಆದ ಕಚೇರಿಗೆ ಜಾಗವೊಂದನ್ನು ಗಿಟ್ಟಿಸಿಕೊಂಡು ಖುಷಿಪಟ್ಟರು.

ಇಸ್ರೋದ ಕಾರ್ಯಚಟುವಟಿಕೆಗಳ ಕುರಿತು ದಾಸ್ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಶಾಲಾ ಮಕ್ಕಳಿಗಾಗಿ ಅವರು ಸರಣಿ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಅವು ಎಲ್ಲೆಡೆ ಹಂಚಿಕೆಯಾಗಿವೆ. ಇಸ್ರೋದ ಸಾಧನೆಗೆ ಮುಕುಟದಂತೆ ಶೋಭಿಸಿದ್ದು ಈ ದೇಶದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾಗೆ ನೀಡಿದ ತರಬೇತಿ. ಅವರು ಭಾರತೀಯ ವಾಯುಪಡೆಯ ಪೈಲಟ್ ಆಗಿದ್ದರು. ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಇಸ್ರೋ ತರಬೇತಿ ನೀಡಿತ್ತು. ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ತೆರಳಿದ ಏಕೈಕ ಭಾರತೀಯನೆಂಬ ಇತಿಹಾಸ ನಿರ್ಮಿಸಿದರು. ಸತೀಶ್ ಧವನ್‌ರ ಫೆವರಿಟ್ ಸಂಪರ್ಕ ಉಪಗ್ರಹಗಳು ಸೋವಿಯತ್ ಒಕ್ಕೂಟ, ಫ್ರಾನ್ಸ್ ಹಾಗೂ
ಅಮೆರಿಕದ ಬಾಹ್ಯಾಕಾಶ ಕೇಂದ್ರಗಳಿಂದ ಆಗಸಕ್ಕೆ ಚಿಮ್ಮಿದರೂ, ಇತ್ತ ಭಾರತದಲ್ಲಿ ಟೆಲಿಕಾಂ, ಟೆಲಿವಿಷನ್, ಶಿಕ್ಷಣ ಹಾಗೂ ನೇವಿಗೇಶನ್ ವಿಷಯಗಳಲ್ಲಿ ಕ್ರಾಂತಿಯನ್ನೇ ಮಾಡಿದವು. ಅವು ಭಾರತದ ಭವಿಷ್ಯವನ್ನು ಬದಲಿಸಿದವು. ಹಲವು ದೇಶಗಳನ್ನು ಹಿಂದಿಕ್ಕಿ ಭಾರತ ಮುನ್ನಡೆಯಲು ಇಸ್ರೋ ತೆರೆಮರೆಯಲ್ಲಿ ನಿಂತು ದೊಡ್ಡ ಸಹಕಾರ ನೀಡಿತು.

ನಂತರ ಭಾರತ ತನ್ನ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವಂತೆ ಬೇರೆ ದೇಶಗಳ ಬಳಿ ಕೇಳುವುದನ್ನು ನಿಲ್ಲಿಸಿತು. ಈಗ ನಮ್ಮ ಶ್ರೀಹರಿ ಕೋಟಾದಿಂದ ಉಪಗ್ರಹಗಳು ಆಗಸಕ್ಕೆ ನೆಗೆಯುವುದು ಸರ್ವೇಸಾಮಾನ್ಯವಾಗಿದೆ. ಸತೀಶ್ ಧವನ್‌ರ ಉತ್ತರಾಧಿಕಾರಿಗಳಾದ ಯು. ಆರ್.ರಾವ್ ಹಾಗೂ ಕಸ್ತೂರಿರಂಗನ್ ಕೂಡ ಧವನ್ ರಷ್ಟೇ ದೊಡ್ಡ ದೊಡ್ಡ ಯೋಜನೆಗಳನ್ನು ಹಾಕಿಕೊಂಡರು. ತಿರುವನಂತಪುರಂನಲ್ಲಿ ಹಾಗೂ ಶ್ರೀಹರಿಕೋಟಾದ ಸ್ಪೇಸ್‌ಪೋರ್ಟ್‌ನಲ್ಲಿ ಮಣಭಾರದ ಪೇಲೋಡ್‌ಗಳನ್ನು ಹೊತ್ತೊಯ್ಯುವ ಸಾಮರ್ಥ್ಯದ ದೇಸಿ ರಾಕೆಟ್‌ಗಳು ಸಿದ್ಧವಾಗ ತೊಡಗಿದವು. ಇಸ್ರೋದ ಉಪಗ್ರಹಗಳು ದಣಿವರಿಯದ ಕೆಲಸದ ಕುದುರೆಗಳಷ್ಟೇ ಆಗಿರಲಿಲ್ಲ, ಅವು ಚಂದ್ರ, ಬೇರೆ ಬೇರೆ ಗ್ರಹ ಹಾಗೂ ಸೂರ್ಯನತ್ತ ಹಾರುವ ಕನಸನ್ನೂ ಕಂಡವು. ಮೇಡ್ ಇನ್ ಇಂಡಿಯಾ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಗಗನಯಾತ್ರಿಯನ್ನು ಕೂಡ ಕಳುಹಿಸುವುದಕ್ಕೆ ಇಸ್ರೋ ಈಗ ಕೆಲಸ ಮಾಡುತ್ತಿದೆ.

ಎಲ್ಲ ಸಂಸ್ಥೆಗಳಂತೆ ಇಸ್ರೋ ಮೇಲೂ ಕೆಲಷಡ್ಯಂತ್ರಗಳಿಂದಾಗಿ ಒಮ್ಮೊಮ್ಮೆ ಮೋಡ ಕವಿದಿದ್ದುಂಟು. ಮೊದಲನೆಯದು, ವಿಜ್ಞಾನಿ ನಂಬಿ ನಾರಾಯಣ್ ಅವರನ್ನು ಗೂಢಚರನೆಂದು ಹೊಸಕಿ ಹಾಕುವ ನಾಚಿಕೆಗೇಡು ಪ್ರಕರಣ. ಪೊಲೀಸರು ಹೂಡಿದ ಕುತಂತ್ರ ಅದಾಗಿತ್ತು. ನಂಬಿ ನಾರಾಯಾಣ್ ಅವರಿಗೆ ಪೂರ್ಣ ನ್ಯಾಯ ಸಿಗುವುದು ಇನ್ನೂ ಬಾಕಿಯಿದೆ. ಎರಡನೆಯದು, ಆಂಟ್ರಿಕ್ಸ್ ಕಾರ್ಪೊರೇಷನ್‌ಗೆ ಲಾಭ ಮಾಡಿ ಕೊಡಲು ಕೆಲ ಹಿರಿಯ ಅಧಿಕಾರಿಗಳೇ ಯತ್ನಿಸಿದ ಪ್ರಕರಣ. ಇಸ್ರೋದ ಒಳಗಿನವರು ಹಾಗೂ ಹೊರಗಿನವರಿಬ್ಬರೂ ಇದರಲ್ಲಿ ಭಾಗಿಯಾಗಿದ್ದರು. ಅವೆಲ್ಲ ಕಳೆದು ಈಗ ಇಸ್ರೋದ ಪ್ರಯೋ ಗಾಲಯ ಹಾಗೂ ಕಾಲೋನಿಗಳಲ್ಲಿ ಸಂತಸ ಹರಿಯುತ್ತಿದೆ. ಚಂದ್ರನ ಮೇಲಿನಿಂದ ವಿಕ್ರಂ ಲ್ಯಾಂಡರ್ ಕಳುಹಿಸಿದ ಫೋಟೋಗಳನ್ನು ನೋಡಿ ಜಗತ್ತಿನ ನಾನಾ ದೇಶಗಳು ಇಸ್ರೋದ ವಿಜ್ಞಾನಿಗಳಿಗೆ ಮತ್ತು ತಂತ್ರಜ್ಞರಿಗೆ ಶುಭಾಶಯ ಹೇಳುತ್ತಿವೆ.

ಇಸ್ರೋದ ವಿಜ್ಞಾನಿಗಳು ಫ್ಯಾನ್ಸಿ ಐಐಟಿ ಪದವೀಧರರ ಜೊತೆ ಪೈಪೋಟಿ ನಡೆಸುವುದಿಲ್ಲ. ಹಾಗೆ ನೋಡಿದರೆ ಐಐಟಿಯನ್‌ಗಳನ್ನು ಇಸ್ರೋ ಸಾಮಾನ್ಯವಾಗಿ ನೇಮಕ ಮಾಡಿಕೊಳ್ಳುವುದೇ ಇಲ್ಲ. ಒಬ್ಬ ವ್ಯಕ್ತಿಯ ಬುದ್ಧಿಮತ್ತೆಯಿಂದ ಮೆರೆಯುವುದರ ಬದಲು ತಂಡಸೂರ್ತಿಯಿಂದ ಕೆಲಸ ಮಾಡುವುದನ್ನು ಇಸ್ರೋ ನೆಚ್ಚಿಕೊಳ್ಳುತ್ತದೆ. ಇನ್ನೊಂದು ಖುಷಿಯ ವಿಚಾರವೆಂದರೆ, ಪ್ರಾದೇಶಿಕ ಭಾಷೆಯಲ್ಲಿ ಶಾಲೆ, ಕಾಲೇಜು ಶಿಕ್ಷಣ ಪಡೆದ, ಪ್ರಾದೇಶಿಕ ಭಾಷೆಗಳಲ್ಲೇ ವಿಜ್ಞಾನ ಮತ್ತು ಗಣಿತವನ್ನು ಕಲಿತ ಎಷ್ಟೋ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಇಸ್ರೋದಲ್ಲಿ ವಿಜ್ಞಾನಿಗಳಾಗಿ ಅದ್ಭುತ ಸಾಧನೆಗಳನ್ನು ಮಾಡುತ್ತಿದ್ದಾರೆ. ಚಂದ್ರನನ್ನು ತಲುಪುವ ಸಾಧನೆಯ ಯಶಸ್ಸಿನ ಬಳಿಕ ಬೆಂಗಳೂರು ಈಗ ಗಗನಯಾನ ನೌಕೆಯ ಮೇಲೆ ಗಮನ ನೆಟ್ಟಿದೆ. ಆ ನೌಕೆಯೊಳಗೆ ಭಾರತೀಯ ಬಾಹ್ಯಾಕಾಶ ಯಾತ್ರಿಯನ್ನು ಕುಳ್ಳಿರಿಸಿ ಅಂತರಿಕ್ಷಕ್ಕೆ ಕರೆದೊಯ್ದು ಮರಳಿ ಕರೆತರುವ ಶಕ್ತಿಶಾಲಿ ರಾಕೆಟ್ ಅನ್ನು ತಿರುವನಂತಪುರಂನ ಇಸ್ರೋ ಕೇಂದ್ರ ನಿರ್ಮಿಸುತ್ತಿದೆ.
(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

error: Content is protected !!